Thursday, October 10, 2013

ಸೂಪರ್ ಸಿಇಒ ನರೇಂದ್ರ ಮೋದಿ


 
ಗುಜರಾತ್ ಮುಖ್ಯಮಂತ್ರಿ ಶ್ರೀಯುತ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆಯೇ ದೇಶಾದ್ಯಂತ ಅವರ ಪರ-ವಿರೋಧ ಚರ್ಚೆ ನಡೆಯಿತು. ಈಗ ಅದು ತಣ್ಣಗೂ ಆಗಿದೆ. ಮಾಧ್ಯಮಗಳು ಮತ್ತು ಒಂದು ಸುಶಿಕ್ಷಿತ(!) ವರ್ಗ ಮೋದಿ ಪರವಾಗಿ ಅಗತ್ಯಕ್ಕಿಂತ ಹೆಚ್ಚು ಬ್ಯಾಟಿಂಗ್ ಮಾಡಿತು. ಅದರ ಹಿಂದಿರುವ ಕಾರಣ ಎಲ್ಲರಿಗೂ ಗೊತ್ತಿರುವುದೇ. ಅದನ್ನು ಇನ್ನಷ್ಟು ಕೆದುಕುತ್ತಾ ಹೋದಾಗ ಸಿಕ್ಕ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 

ಶ್ರೀಯುತ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದರಿಂದ ಬಿಜೆಪಿ ಕಾರ್ಯಕರ್ತರಿಗಿಂತ ಹೆಚ್ಚು ಖುಷಿ ಪಟ್ಟವರೆಂದರೆ ದೇಶದ ಕಾಪೋರೇಟ್ ಮಹಾರಾಜರು! ಹೌದು, ಅವರಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗುತ್ತಾರೆಂಬ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಏಕೆಂದರೆ ಬಹಳ ಹಿಂದಿಯೇ ಅವರೆಲ್ಲಾ ಈ ಬಗ್ಗೆ 'ಕನಸು'ಕಾಣಲಾರಂಭಿಸಿದ್ದರು. ಟೆಲಿಕಾಂ ಉದ್ಯಮದ ದಿಗ್ಗಜ ಸುನಿಲ್ ಮಿತ್ತಲ್ 2009ರಲ್ಲಿಯೇ ತಮ್ಮ ಈ ಕನಸನ್ನು ಬಹಿರಂಗಪಡಿಸಿದ್ದರು. ಅವರು ಹೇಗೆ ರಾಜ್ಯವನ್ನು (ಗುಜರಾತ್ತನ್ನು) ಆಳುತ್ತಿದ್ದಾರೆಯೋ ಹಾಗೆಯೇ ದೇಶವನ್ನೂ ಆಳಬಲ್ಲರು ಎಂದು ಹೊಗಳಿದ್ದರು.
ಕಳೆದ ಜನರವರಿಯಲ್ಲಿ ಗುಜರಾತ್ ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಷದಲ್ಲಿ ಅನಿಲ್ ಅಂಬಾನಿ ಮೋದಿಯನ್ನು ಹೋಗಳಿದ್ದು, ಮಹಾತ್ಮಗಾಂಧೀಜಿಗೆ ಹೋಲಿಸಿದ್ದು ಎಲ್ಲರಿಗೂ ನೆನಪಿರಬೇಕು. ಮೋದಿ, ಜನನಾಯಕ, ನಾಯಕರುಗಳಿಗೆಲ್ಲಾ ನಾಯಕ, ರಾಜರಗಳಿಗೆಲ್ಲಾ ರಾಜಎಂದು ಅವರು ಬಹುಪಾರಕ್ ಹಾಕಿದ್ದರು. ಮತ್ತೋರ್ವ ಉದ್ಯಮಿ ಮಹೇಂದ್ರ ಆ್ಯಂಡ್ ಮಹೇಂದ್ರದ ಆನಂದ ಮಹೇಂದ್ರ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ‘ಮೋದಿ ಜಾರಿಗೆ ತಂದಿರುವ ಗುಜರಾತ್ ಮಾದರಿಯ ಅಭವೃದ್ಧಿಯ ಕುರಿತು ಚೀನಾದಲ್ಲಿ ಚರ್ಚೆ ನಡೆಯುವ ದಿನ ದೂರವಿಲ್ಲ' ಎಂದಿದ್ದರು. ಇಷ್ಟೆಲ್ಲಾ ಏಕೆ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಅವರನ್ನು ಭೇಟಿ ಮಾಡಿದ್ದ ಧೀರೂಭಾಯ್ ಅಂಬಾನಿ, ‘ಮೋದಿ ಬಹಳ ಎತ್ತರಕ್ಕೆ ಏರಲಿದ್ದಾರೆಎಂದು ಭವಿಷ್ಯ ನುಡಿದಿದ್ದರು. ಸಮಾಜಶಾಸ್ತ್ರಜ್ಞರು, ಜನಪರ ಆರ್ಥನೀತಿಯನ್ನು ಪ್ರತಿಪಾದಿಸುವವರು ಮೋದಿ ಆಡಳಿತವನ್ನು ವಿಮರ್ಶಿಸುತ್ತಾ, ಪರಿಶೀಲನೆಗೊಳಪಡಿಸುತ್ತಿರುವಾಗಲೇ ಇವರೆಲ್ಲಾ ಏಕೆ ಹೀಗೆ ಮೋದಿಯನ್ನು ಹಾಡಿ ಹೊಗಳಿದರು? ಕಾರಣ ಎಂತವರಿಗೂ ಅರ್ಥವಾಗುವಂತದ್ದೇ.
ಎಕನಾಮಿಕ್ ಟೈಮ್ಸ್ಗಾಗಿ ಇತ್ತೀಚೆಗೆ ನೀಲ್ಸನ್ ಎಂಬ ಸಂಸ್ಥೆ ದೇಶದ ವಿವಿಧ ಕಂಪನಿಗಳ ನೂರು ಮಂದಿ ಮುಖ್ಯಸ್ಥರನ್ನು  ಮಾತನಾಡಿಸಿತ್ತು. ಈ ಸಮೀಕ್ಷೆ ಪ್ರಕಾರ ಶೇಕಡಾ 80 ಮಂದಿ ನರೇಂದ್ರ ಮೋದಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದರೆ ದೇಶದ ಕಾರ್ಪೋರೇಟ್ ವಲಯ ಮೋದಿ ಬೆನ್ನಿಗೆ ಸ್ಪಷ್ಟವಾಗಿ ನಿಂತಿದೆಯೆಂದಾಯಿತು. ನಮ್ಮ ದೇಶದಲ್ಲಿ ಏರ್ ಕಂಡೀಷನ್ ರೂಮ್ಮಿನಲ್ಲಿ ಕುಳಿತವರು, ಬೋರ್ಡ್ಮೀಟಿಂಗ್ ಅಟೆಂಡ್ ಮಾಡುವವರು ಪ್ರಧಾನಿಯನ್ನು ಆಯ್ಕೆಯೇನೂ ಮಾಡುವುದಿಲ್ಲ. ಆದರೆ ಇವರ ಅಭಿಪ್ರಾಯ ಒಂದಿಷ್ಟು ಪರಿಣಾಮವನ್ನಂತೂ ಬೀರುತ್ತದೆ. (ಇದು ಚುನಾವಣೆಗೆ ಅತ್ಯಗತ್ಯವಾಗಿರುವ ಸಂಪನ್ಮೂಲ ಕ್ರೋಢೀಕರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ಗಮನಿಸಬೇಕು.) ಕಳೆದ ಜನವರಿಯಲ್ಲಿ ಕೇಂದ್ರ ವಾರ್ತಾ ಮತ್ತು ಮಾಹಿತಿ ಸಚಿವ ಮನೀಷ್ ತಿವಾರಿ ಆಡಿದ ಮಾತೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು; ‘1930ರಲ್ಲಿ ಜರ್ಮನಿಯಲ್ಲಿಯೂ ಹೀಗೇ ಆಗಿತ್ತು. ಅಲ್ಲಿ ನೀಚ ಕೆಲಸ ಮಾಡಿದ ಆ 'ಮಹಾನ್ ಆಡಳಿತಗರ'ನ ಬೆನ್ನಿಗೆ ಅಲ್ಲಿಯ ಉದ್ಯಮದ ಮಂದಿ ನಿಂತಿದ್ದರು’.
ಉದ್ಯಮದ ಮಂದಿಗೆ ತಮಗೆ ನಷ್ಟವನ್ನುಂಟುಮಾಡುವ ಗಲಭೆ, ಹಿಂಸಾಚಾರ, ಪ್ರತಿಭಟನೆ ಎಂದರೆ ಅಲರ್ಜಿಯೇ. ಹೀಗಾಗಿಯೇ 2002ರಲ್ಲಿ ಗುಜರಾತ್ತಲ್ಲಿ ಹಿಂಸಾಚಾರ ನಡೆದಾಗ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಉತ್ಪಾದನೆ ಕುಂಟಿತಗೊಳ್ಳುತ್ತದೆ ಎಂಬ ಆತಂಕ ಅಲ್ಲಿಯ ಉದ್ಯಮದವಲಯದ್ದಾಗಿತ್ತು. ಈಗ ಅಂದು ಏನೂ ನಡೆದಿಲ್ಲವೆಂಬಂತೆಮೋದಿ ಬೆನ್ನಿಗೆ ನಿಂತಿರುವ ಉದ್ಯಮಪತಿಗಳು ಆಗ ಇದನ್ನು ಖಂಡಿಸಿ ಹೇಳಿಕೆ ನೀಡಿದ್ದರು. ಅವರಲ್ಲಿ ನಮ್ಮ ಇನ್ಫೋಸಿಸ್ನ ನಾರಾಯಣ ಮೂರ್ತಿ, ವಿಪ್ರೋದ ಅಜೀಂ ಪ್ರೇಮ್ ಜಿ  ಸೇರಿದ್ದರು. ಉದ್ಯಮಿಗಳ ಸಂಘಟನೆ ಸಿಐಐ ಅಂತೂ ನೇರವಾಗಿಯೇ ಮೋದಿಗೆ ಚೀಮಾರಿ ಹಾಕಿತ್ತು. ಇದು ಮುಂದೆ ಸಂಘಟನೆಯ ಒಡಕಿಗೂ ಕಾರಣವಾಗಿತ್ತು. ಮುಖ್ಯವಾಗಿ ಗುಜರಾತ್ತಲ್ಲಿ ಉದ್ಯಮ ಹೊಂದಿರುವ, ನರೇಂದ್ರ ಮೋದಿಗೆ ಆಪ್ತರಾದ ಅದಾನಿ ಗ್ರೂಪ್ನ ಗೌತಮ್ ಅದಾನಿ, ನಿರ್ಮಾದ ಕರ್ಸನ್ ಪಟೇಲ್, ಬಕೇರಿ ಎಂಜಿನಿಯರ್ಸ್ನ  ಅನಿಲ್ ಬಕೇರಿ ಮತ್ತಿತರರು ಹೊಸ ಸಂಘಟನೆಯನ್ನೂ ಹುಟ್ಟುಹಾಕಿದ್ದರು. ಮಂದೆ ಸಿಐಐಯೇ ಮೋದಿಗೆ ಕರೆದು ವೇದಿಕೆ ಕಲ್ಪಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಲಾಭಗಳಿಸುವ ಏಕೈಕ ಉದ್ದೇಶ ಹೊಂದಿರುವ ಉದ್ಯಮಿಗಳಿಗೆ ಸಿದ್ಧಾಂತಕ್ಕಿಂತ ದುಡ್ಡೇ ದೊಡ್ಡದು ಅಲ್ಲವೇ?
ಟಾಟಾ, ಅಂಬಾನಿಯೊಂದಿಗೆ ಮೋದಿ
ಗುಜರಾತ್ತಲ್ಲಿ ಮಾತ್ರವಲ್ಲ, ದೇಶದ ಉದ್ಯಮ ವಲಯ ಮೋದಿಗೆ 'ಜೈ ಹೋ' ಎನ್ನಲು ಕಾರಣವಾಗಿದ್ದು, 2008ರ ಪಶ್ಚಿಮ ಬಂಗಾಳದ ಸಿಂಗೂರು ವಿವಾದ. ಸ್ಥಳೀಯರ ಪ್ರತಿಭಟನೆಗೆ ಹೆದರಿ ನ್ಯಾನೋ ಕಾರು ತಯಾರಿಕಾ ಘಟಕವನ್ನು ಸಿಂಗೂರಿನಿಂದ ಎತ್ತಂಗಡಿ ಮಾಡಲು ಟಾಟಾದ ಮುಖ್ಯಸ್ಥ ರತನ್ ಟಾಟಾ ನಿರ್ಧರಿಸಿದಾಗ ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರಿದವರು ನರೇಂದ್ರ ಮೋದಿ. ಗುಜರಾತ್ತಿನ  ಜತೆಗೆ ಉತ್ತರಖಂಡ, ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯ ಈ ಉದ್ಯಮವನ್ನು ಬರಮಾಡಿಕೊಳ್ಳಲು ಪೈಪೋಟಿಗೆ ಇಳಿದಿದ್ದವು. ಆದರೆ ಆಡಳಿತಶಾಹಿಯನ್ನು ಸಂಪೂರ್ಣ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಮೋದಿ ಈ ಪೈಪೋಟಿಯಲ್ಲಿ ಗೆದ್ದು ರತನ್ ಟಾಟಾರ ಮನಸ್ಸು ಕೂಡ ಗೆದ್ದರು. ಕೇವಲ 96ಗಂಟೆಗಳಲ್ಲಿ ಟಾಟಾಗೆ ಬೇಕಾಗಿದ್ದ ಜಾಗವನ್ನು ಒಪ್ಪಿಸಲಾಗಿತ್ತು. ಉದ್ಯಮವೊಂದಕ್ಕೆ ಯಾವುದೇ ಜಾಗ ಮತ್ತು ಇತರೆ ಅನುಮತಿ ನೀಡಲು ಸರ್ಕಾರ 100ರಿಂದ 180ದಿನ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಗುಜರಾತ್ ಸರ್ಕಾರ ಕೇವಲ ಮೂರು ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ ನಮ್ಮ ಮನಗೆದ್ದಿದೆಎಂದು ರತನ್ ಟಾಟಾ ಹೇಳಿದ್ದರು. ಇದಕ್ಕೆ ಕಾರಣರಾದ ಮೋದಿಯನ್ನು ಗುಡ್ ಎಂಎಂದೂ, ಸಿಂಗೂರು ಬಿಡಲು ಕಾರಣರಾದ ಮಮತಾ ಬ್ಯಾನರ್ಜಿಯವರನ್ನು ಬ್ಯಾಡ್ ಎಂಎಂದೂ ಬಣ್ಣಿಸಿದ್ದರು. ಗುಜರಾತ್ ಸರ್ಕಾರ ನ್ಯಾನೋ ತಯಾರಿಕಾ ಘಟಕವನ್ನು ಸ್ಥಾಪಿಸಲು ಏನೆಲ್ಲಾ  ರಿಯಾಯಿತಿ ನೀಡಿದೆ ಎಂದು ವಿವರಿಸುತ್ತಾ ಹೋದರೆ ಅದೇ ದೊಡ್ಡ ಲೇಖನವಾದೀತು, ಇರಲಿ.
ಮುಂದೆ ಬಹುರಾಷ್ಟ್ರೀಯ ಕಂಪನಿ ಫೋರ್ಡ್, ಮಾರುತಿ ಸುಜುಕಿ ಮತ್ತಿತರ ಕಂಪನಿಗಳು ಟಾಟಾದ ಹಾದಿಯನ್ನೇ ಹಿಡಿದವು. (ಮಾರುತಿಗೆ ನೀಡಿದ ಭೂಮಿಯ ದಾಖಲೆಗಳನ್ನು ಸರ್ಕಾರವೇ ಹೇಗೆ ತಿರುಚಿ ರೈತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಕೊನೆಯಲ್ಲಿ ನೀಡಿದ್ದೇನೆ ಓದಿ). ನ್ಯಾನೋದೊಂದಿಗೆ ಮೋದಿಯೊಂದಿಗಿನ ಟಾಟಾರ ಸಂಬಂಧವೂ ಬಲಗೊಂಡಿತು. ಮುಂದೆ ಮೋದಿ ನಡೆಸಿದ 'ವೈಬ್ರಂಟ್ ಗುಜರಾತ್' ಹೂಡಿಕೆ ಮೇಳದಲ್ಲಿ ರತನ್ ಟಾಟಾ ಕೂಡ ಭಾಗವಹಿಸಲಾರಂಭಿಸಿದರು. ಅಷ್ಟೇ ಅಲ್ಲ ಬಹಿರಂಗವಾಗಿ ಮೋದಿಯನ್ನು ಹೊಗಳಿದ್ದು, ಅಪ್ಪಿಕೊಂಡಿದ್ದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ನಿಮಗೆ ಗೊತ್ತಿರಬಹುದು ರತನ್ ಟಾಟಾ ನಿವೃತ್ತಿಯಾದ ಮೇಲೆ ಟಾಟಾ ಕಂಪನಿಯ ನೇತೃತ್ವ ವಹಿಸಿರುವವರು ಸೈರಸ್ ಮಿಸ್ತ್ರೀ. ಅವರು ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಯಾವಾಗ ಗೊತ್ತೇ, ಈ ವರ್ಷದ ಜನವರಿಯಲ್ಲಿ ನಡೆದ 'ವೈಬ್ರಂಟ್ ಗುಜರಾತ್' ವೇದಿಕೆಯಲ್ಲಿ. ಎಲ್ಲಿಗೂ ಬಾರದವರು, ಲಾಭವನ್ನೇ ಉಣಿಸುವ ಗುಜರಾತಿಗೆ ಮಿಸ್ ಮಾಡದೇ ಬರುತ್ತಾರೆ!
ಉದ್ಯಮಪತಿಗಳು ಹೀಗೆ ಮೋದಿಯನ್ನು ಅಪ್ಪಿಕೊಳ್ಳಲು ಇನ್ನೊಂದು ಕಾರಣವಿದೆ. ಅವರು ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತಾರೆಂಬ ಭಾವನೆ. ಮೋದಿ ಪ್ರಧಾನಿಯಾದರೆ ರೈಲ್ವೆಯಿಂದ ಹಿಡಿದು ಸೇನೆಯವರೆಗೆ ಎಲ್ಲ ಕ್ಷೇತ್ರದಲ್ಲಿಯೂ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ದೊರೆಯಲಿದೆ ಎಂದೇ ವರು ನಂಬಿದ್ದಾರೆ. ಮೋದಿ ಮಾರುಕಟ್ಟೆಯ, ಉದ್ಯಮದ ಪರವಾಗಿದ್ದಾರೆ ಮತ್ತು ಸುಧಾರಣೆಗಳನ್ನು ತರಲಿದ್ದಾರೆಎನ್ನುತ್ತಾರೆ ಹಿಂದೂಸ್ತಾನ್ ಕಂಸ್ಟ್ರಕ್ಷನ್ ಕಂಪನಿಯ ಅಜಿತ್ ಗುಲಾಬ್ ಚಂದ್. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದನ್ನು ಮೋದಿ ವಿರೋಧಿಸಿದ್ದು, ಕೇವಲ ರಾಜಕೀಯಕ್ಕಾಗಿ ಎಂದು ಬಿಂಬಿಸಲಾಗುತ್ತಿದೆ.
ಗುಜರಾತ್ತಲ್ಲಿ ಮಹಿಳೆಯರು-ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೂ ಹೆಚ್ಚೇನ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜ್ಯದಲ್ಲಿ ಉದ್ಯಮ ಸ್ಥಾಪಿಸಲು ಬಂದವರಿಗೆ ಉಗುರಿನಷ್ಟು ತೊಂದರೆಯಾದರೂ ಸಹಿಸಿಕೊಳ್ಳುವುದಿಲ್ಲ. ಮೋದಿ ಕಚೇರಿಯಿಂದ ಒಪ್ಪಿಗೆ ಪಡೆದ ಉದ್ಯಮ ಸ್ಥಾಪನೆಗೆ ಅಧಿಕಾರಿಗಳಾಗಲೀ, ಸ್ಥಳೀಯ ರಾಜಕಾರಣಿಗಳಾಗಲೀ ಅಡ್ಡಗಾಲು ಹಾಕುವಂತೆಯೇ ಇಲ್ಲ. ಯಾವುದಾದರೂ ಯೋಜನೆ ಅರ್ಧದಲ್ಲಿಯೇ ನಿಂತಿದೆ ಎಂದಿಟ್ಟುಕೊಳ್ಳಿ, ಸ್ವತಃ ಮೋದಿಯೇ ಪೋನ್ ಮಾಡಿ, ಏಕೆ-ಏನು ಎಂದು ವಿಚಾರಿಸಿಕೊಳ್ಳುತ್ತಾರೆ. ಮಾತ್ರವಲ್ಲ ಕ್ಷಣಮಾತ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತಾರೆ.
ಅಪಲೋ ಟೈಯರ್ಸ್ನ  ಮಾಲೀಕ ಓಂಕಾರ್ ಕನ್ವರ್ ಗುಜರಾತ್ತಲ್ಲಿ ಫ್ಯಾಕ್ಟರಿ ತೆಗೆಯುವ ಕುರಿತು ಚರ್ಚಿಸಲು ಮೋದಿಯನ್ನು ಭೇಟಿಯಾಗಿದ್ದರು. ಮೋದಿ ಖುಷಿಯಿಂದ ಅನುಮತಿ ನೀಡಿದ್ದಲ್ಲದೆ, ಗಿರಿಜನರಿಂದ ರಬ್ಬರ್ ಗಿಡ ಬೆಳೆಸಿ, ರಬ್ಬರ್ ಉತ್ಪಾದಿಸಿ ಕೊಡುವುದಾಗಿಯೂ ತಿಳಿಸಿದ್ದರಂತೆ! ಉದ್ಯಮಿಗಳ ಮೇಲೆ ಎಂತಹ ಪ್ರೀತಿ ನೋಡಿ. ಯಾರಾದರೂ ಉದ್ಯಮಿಗಳು ಮೋದಿ ಫೋನ್ ಮಾಡಿದರೆ 24 ಗಂಟೆಯ ಒಳಗೆ ಅವರೇ ತಿರುಗಿ ಫೋನ್ ಮಾಡುತ್ತಾರೆ. ಏನಾದರೂ ಅರ್ಜೆಂಟ್ ಇತ್ತು ಎಂದಾದರೆ ಮೂರು ಗಂಟೆಯ ಒಳಗೇ ಮೋದಿ ಕರೆ ಮಾಡಿರುತ್ತಾರಂತೆ. ಯಾವುದೇ ಸಮಸ್ಯೆ ಇರಲಿ, ಸ್ಪಷ್ಟ ಉತ್ತರವಂತೂ ಮೋದಿಯಿಂದ ನಮಗೆ ಸಿಕ್ಕೇ ಸಿಗುತ್ತದೆ ಎನ್ನುತ್ತಾರೆ ಉದ್ಯಮಿಗಳು. ಮೋದಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳ ಪಾಟಲಂನ ಅನುಮತಿ ಬೇಕಾಗಿಲ್ಲ. ನೇರವಾಗಿ ಅವರೇ ಮಾತನಾಡಿ ಆಗುತ್ತದೆಅಥವಾ ಇಲ್ಲಎಂಬ ಉತ್ತರ ನೀಡುತ್ತಾರೆ. ಇನ್ನು ಅವರು 'ಆಗುವುದಿಲ್ಲ' ಎಂದ ಕೆಲಸವನ್ನು ಯಾರಿಂದಲೂ ಮಾಡಿಸಲು ಸಾಧ್ಯವಿಲ್ಲ. ಬಿಜೆಪಿಯ ಹಿರಿಯ ನಾಯಕರು ಅಥವಾ ಆರ್ ಎಸ್ಎಸ್  ಮುಖಂಡರು ಹೇಳಿದರೂ ಏನೂ ಪ್ರಯೋಜನವಿಲ್ಲವಂತೆ. ಕಾಂಗ್ರೆಸ್ ನ ರಾಜ್ಯ ಸರಕಾರವಿದ್ದಲ್ಲಿ ಈ ರೀತಿಯ ತೀರ್ಮಾನ ಸಾಧ್ಯವೇ ಇಲ್ಲ. ಅದು ಯಾವುದೇ ತೀರ್ಮಾನ ತೆಗೆದುಕೊಂಡಿದ್ದರೂ ದಿಲ್ಲಿಯ 10, ರಜಪತ್ ಗೆ ಹೋಗಿ ಬದಲಾಯಿಸಿಕೊಂಡು ಬರಬಹುದು ಎನ್ನುತ್ತಾರೆ ಉದ್ಯಮಿಗಳು.
ಎಂಥಹ ಪ್ರೀತಿ!
'ವೈಬ್ರಂಟ್ ಗುಜರಾತ್' ಸಮ್ಮೇಳನದ ಸಂದರ್ಭದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳೂ ಸಮ್ಮೇಳನಕ್ಕೆ ಬಂದ ಉದ್ಯಮಿಗಳ ಸೇವಕರಂತೆ ಕೆಲಸಮಾಡಬೇಕು. ತಪ್ಪಿದಲ್ಲಿ ಮೋದಿಯ ಕೆಂಗಣ್ಣಿಗೆ ಕಾರಣವಾಗುತ್ತಾರೆ. ಅಲ್ಲದೆ ಮೋದಿಯೇ ಯಾರು ಏನು ಮಾತನಾಡಬೇಕು ಎಂದು ಭಾಷಣಕಾರರಿಗೂ ಸೂಚನೆ ನೀಡಿರುತ್ತಾರಂತೆ. ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಇದನ್ನು ವೇದಿಕೆಯಾಗಿ ಮಾಡಿಕೊಳ್ಳುತ್ತಾರೆ ಎಂದು ಅಧಿಕಾರಿಗಳ ವರ್ಗ ದೂರುತ್ತಿದೆ. ಆದರೆ ಮೋದಿ ತಲೆಕೆಡಿಸಿಕೊಳ್ಳುತ್ತಿಲ್ಲ. 2003ರಿಂದ 2011ರವರೆಗೆ ಈ ಹೂಡಿಕೆ ಸಮ್ಮೇಳನದಲ್ಲಿ 900 ಬಿಲಿಯನ್ ಡಾಲರ್ ಅಂದರೆ 56 ಲಕ್ಷ ಕೋಟಿ ಮೊತ್ತದ ಹೂಡಿಕೆಯ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಆದರೆ ಇಷ್ಟು ಹಣ ಹರಿದುಬಂದಿಲ್ಲ, ಅದು ಬೇರೆ ಮಾತು. ಬಂಡವಾಳ ಹೂಡಿಕೆ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಮೋದಿಗೆ ಪಡಿತರ ಸಾಮಗ್ರಿಯನ್ನು ಮಾತ್ರ ಸರಿಯಾಗಿ ವಿತರಿಸಿ, ಬಡವರ ಹೊಟ್ಟೆ ತುಂಬಲು ಸಾಧ್ಯವಾಗುತ್ತಿಲ್ಲ. ನ್ಯಾಷನಲ್ ಸ್ಯಾಂಪಲ್  ಸಮೀಕ್ಷೆಯ ಪ್ರಕಾರ ಪಡಿತರ ಸಾಮಗ್ರಿ ಸೋರಿಕೆಯಲ್ಲಿಯೂ ಗುಜರಾತ್ ಅಗ್ರಸ್ಥಾನ ಪಡೆದಿದೆ!.
ಮೋದಿ ಪ್ರಧಾನಿಯಾಗಲೇ ಬೇಕೆಂದು ಏನಿಲ್ಲವೆಂದರೂ ಹಾತ್ತಾರು ಉದ್ಯಮಪತಿಗಳು ಕುಣಿಯುತ್ತಿದ್ದಾರೆ. ಅವರಲ್ಲಿ ಅದಾನಿ ಗ್ರೂಪ್ನ ಗೌತಮ್ ಅದಾನಿ ಕೂಡ ಒಬ್ಬರು. ಇದಕ್ಕೂ ಕಾರಣವಿದೆ. ಮೋದಿ ಅಧಿಕಾರಕ್ಕೆ ಬಂದಾಗ ಎಂದರೆ 2000ರಲ್ಲಿ ಅದಾನಿ ಗ್ರೂಪ್ ಒಟ್ಟಾರೆ ಟರ್ನ್ಓವರ್ 3,300 ಕೋಟಿ ಇತ್ತು. ಈಗ ಎಷ್ಟಾಗಿದೆ ಗೊತ್ತೇ, 47,000 ಕೋಟಿ. ಮೋದಿ ಪ್ರಧಾನಿಯಾದರೆ ಈ ಕಂಪನಿಯ ಟರ್ನ್ಓವರ್ ಇನ್ನೆಷ್ಟಾಗುತ್ತದೆಯೋ…? ಇರಲಿ, ಅದಾನಿ ಕುಟುಂಬವಂತೂ ಮೋದಿಗೆ ಬಹಳ ಅಚ್ಚುಮೆಚ್ಚಿನ ಕುಟುಂಬ. ಎಷ್ಟೇ ಕೆಲಸವಿರಲಿ, ಅದಾನಿ ಕುಟುಂಬದ ಮದುವೆ-ಮುಂಜಿಯಲ್ಲೆಲ್ಲಾ ಮೋದಿ ಭಾಗವಹಿಸುತ್ತಲೇ ಬಂದಿದ್ದಾರೆ. ಅಮೆರಿಕದ ವಾರ್ಟಂನ್ ಇಂಡಿಯಾ ಎಕನಾಮಿಕ್ ಫೋರಂ ಮೋದಿಗೆ ಭಾಷಣ ಮಾಡಲು ಅವಕಾಶ ನೀಡದೇ ಇದ್ದಾಗ ಅದಾನಿ ಕೂಡ ಬಹಿಷ್ಕಾರ ಹಾಕಿದ್ದು ನಿಮಗೆ ನೆನಪಿರಬೇಕು. ಗುಜರಾತ್ತಲ್ಲಿ ಅದಾನಿ ಹೇಳಿದ್ದೇ ಕಾನೂನು ಎಂಬುವಂತಾಗಿದೆ. ಉದಾಹರಣೆಗೆ ಪರಿಸರದ ನಿಯಮಗಳನ್ನೆಲ್ಲಾ ಉಲ್ಲಂಘಿಸಿ ಅದಾನಿ ಗ್ರೂಪ್ ಬಂದರು ನಿರ್ಮಿಸಿದೆ! ಆದರೆ ರಾಜ್ಯ ಆಡಳಿತ ವ್ಯವಸ್ಥೆ ಕೈ ಕಟ್ಟಿ ಕುಳಿತಿದೆ.
 ಅದಾನಿ ಮಾತ್ರವಲ್ಲ ಅಂಬಾನಿ ಕುಟುಂಬದ ಜತೆಗೂ ಮೋದಿಗೆ ಇಂತಹದ್ದೇ ಸಂಬಂಧವಿದೆ. ಕೃಷ್ಣ-ಗೋದಾವರಿ ಕಣಿವೆಯಲ್ಲಿ ಅನಿಲ ತೆಗೆಯುತ್ತಿರುವ ರಿಲಯೆನ್ಸ್ ಕಂಪನಿಯ ಬೆಲೆ ಹೆಚ್ಚಳ ವಿವಾದದ ಕುರಿತು ಮೋದಿ ಮಾತನಾಡದೇ ಇರುವುದೇ ಇದಕ್ಕೆ ಸಾಕ್ಷಿ. ಇನ್ನು ಎಸ್ಸಾರ್ ಕಂಪನಿಯ ಬೆಳವಣಿಗೆ ಕೂಡ ಶುರುವಾಗುವುದು ಮೋದಿಯ ಅಧಿಕಾರದ ಜತೆಯಲ್ಲಿಯೇ. ಎಸ್ಸಾರ್ ಆಯಿಲ್ ಕಂಪನಿಯ ತೆರೆಗೆ ಗೋಲ್ಮಾಲ್ ನಲ್ಲಿ, ಕಂಪನಿ ಪರವಾಗಿ ತೀರ್ಮಾನ ತೆಗೆದುಕೊಂಡಿದ್ದ ಮೋದಿ, ಕೊನೆಗೆ ಎಕ್ಸ್ ಪೋಸ್  ಆಗಿದ್ದು ದೊಡ್ಡ ಕತೆ. ಹೀಗೆ ಮೋದಿ ಉದ್ಯಮಿಗಳ ಏಳಿಗೆಗಾಗಿಯೇ ತಾವು ಹುಟ್ಟಿಬಂದಂತೆ ವರ್ತಿಸುತ್ತಲೇ ಬಂದಿದ್ದಾರೆ. ಆದರೆ ಭ್ರಷ್ಟಾಚಾರ ನಡೆಸಿಲ್ಲ. ಅದಕ್ಕೇ ಉದ್ಯಮಿಗಳಿಗೂ ಅವರೆಂದರೆ ಅಚ್ಚುಮೆಚ್ಚು.
ಉದ್ಯಮಪತಿಗಳು ಮೆಚ್ಚುವಂತೆ ಆಡಳಿತ ನಡೆಸುವುದು, ಅವರಿಗಾಗಿಯೇ ಮೂಲಸೌಕರ್ಯ ಒದಗಿಸುವುದನ್ನೇ ಅಭಿವೃದ್ಧಿ ಎಂದೂ, ಅತ್ಯುತ್ತಮ ಆಡಳಿತ ಎಂದೂ ಬಿಂಬಿಸಲಾಗುತ್ತಿದೆ. ಈ ಉದ್ಯಮಗಳಲ್ಲಿನ ಉದ್ಯೋಗಿಗಳು, ಬಹುರಾಷ್ಟ್ರೀಯ ಕಂಪನಿಗಳಿಂದ ಮಾತ್ರ ನಮ್ಮ ದೇಶದ ಉದ್ದಾರ ಸಾದ್ಯ ಎಂದು ನಂಬಿದವರು ಮೋದಿಪರ 'ಬ್ರಿಗೇಡ್'  ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಉದ್ಯಮೆದಾರರು ನೀಡುವ ಜಾಹೀರಾತನ್ನು ನಂಬಿಕೊಂಡೇ ಇರುವ ಮಾಧ್ಯಮಗಳೂ ಬೆನ್ನಿಗೆ ನಿಂತಿವೆ. ಹೀಗಾಗಿ ದೇಶಾದ್ಯಂತ ಮೋದಿ ಮೇನಿಯಾ ಹರಡಿದೆ.

ತೆರಿಗೆ ಸಂಗ್ರಹಣೆಯಲ್ಲಿ ಹಿಂದೆ
ಯಾವುದೇ ಸರಕಾರಕ್ಕೆ ಆದಾಯ ಬರುವುದು ಮುಖ್ಯವಾಗಿ ತೆರಿಗೆ ಸಂಗ್ರಹದಿಂದ. ನಮಗೆಲ್ಲಾ ಗೊತ್ತಿರುವಂತೆ ಪ್ರತಿ ವರ್ಷ ಸರಕಾರಗಳು ತೆರಿಗೆಯನ್ನು ಹೆಚ್ಚಿಸುತ್ತಲೇ ಇರುತ್ತದೆ. ಆದರೆ ಗುಜರಾತ್ತಿನಲ್ಲಿ ಮಾತ್ರ ಇದು ಉಲ್ಟಾ. ತೆರಿಗೆ ವಿಧಿಸಿದರೆ ಉದ್ಯಮಿಗಳಿಗೆ ಬೇಜಾರಾಗುತ್ತದೆಯಲ್ಲಾ, ಅದಕ್ಕೆ ಮಾನ್ಯ ನರೇಂದ್ರ ಮೋದಿಯವರು ರಿಯಾಯಿತಿ ಕೊಡುತ್ತಾ ಬಂದಿದ್ದಾರೆ. ಬಿಸ್ನೆಸ್ ಸ್ಟ್ಯಾಂಡರ್ಡ್ನ ವರದಿ ಪ್ರಕಾರ ಗುಜರಾತ್ತಿನ  ಜಿಡಿಪಿಯಲ್ಲಿ ಅಂದರೆ ಒಟ್ಟಾರೆ ಆಂತರಿ ಆದಾಯ ಸಂಗ್ರಹಣೆಯಲ್ಲಿ ತೆರಿಗೆಯ ಪಾಲು ಕಡಿಮೆಯಾಗುತ್ತಿದೆ. 1990-99ರಲ್ಲಿ ಈ ಪಾಲು ಶೇಕಡಾ 7.84 ಇದ್ದಿದ್ದು, 2006-2011ರಲ್ಲಿ ಶೇ.6.65ಕ್ಕೆ ಇಳಿದಿದೆ. ಈ ರೀತಿ ಆದಾಯ ಸಂಗ್ರಹಣೆ ಮಾಡುವುದರಲ್ಲಿ  ನಮ್ಮ ರಾಜ್ಯ ಕರ್ನಾಟಕ ಸದಾ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಗುಜರಾತ್ತಿನಲ್ಲಿ ಇತರ ವಲಯದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ನೇತೃತ್ವದ ಸಮಿತಿ ಗುಜರಾತ್ ಕೂಡ ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಸಾರಿದೆ. ಮೋದಿ ಎಂದರೇ ಅಭಿವೃದ್ಧಿ ಎಂದು ಹುಯಿಲೆಬ್ಬಿಸುತ್ತಿರುವವರಿಗೆ ಇದೆಲ್ಲಾ ಕಾಣುತ್ತಲೇ ಇಲ್ಲ.

ಉದ್ಯಮಪತಿಗಳು ಕಾಂಗ್ರೆಸ್ ಕೈಬಿಟ್ಟಿದ್ದೇಕೆ?
ಒಂದು ದಶಕದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮುಕ್ತ ಆರ್ಥಿಕತೆಯ ಪ್ರತಿಪಾದಕ ಡಾ. ಮನಮೋಹನ್ ಸಿಂಗ್ ಎಂದರೆ ಉದ್ಯಮಿಗಳಿಗೆ ಅಚ್ಚುಮೆಚ್ಚು. ಆಗ ಜಾಗತೀಕರಣವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದ ಬಿಜೆಪಿ ಎಂದರೆ ಅನುಮಾನ. ಈ ಅನುಮಾನ ದೂರಮಾಡಲು ಪಕ್ಷದ ನಾಯಕ ಪ್ರಮೋದ್ ಮಹಾಜನ್ ಬಹಳಷ್ಟು ಕಸರತ್ತು ಮಾಡಬೇಕಾಗಿ ಬಂದಿತ್ತು. ಆದರೆ ಈಗ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಎಂದರೆ ನಮ್ಮದೇಶದ ಬಿಸ್ನೆಸ್ ಮಹಾರಾಜರು ಚೇಳುಕಡಿದವರಂತೆ ಆಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಯುಪಿಎ ಸರಕಾರ ಜಾರಿಗೆ ತಂದಿರುವ ಕೆಲ ಯೋಜನೆಗಳು. ಯುಪಿಎ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆ ಮತ್ತು ಕನಿಷ್ಠ ಕೂಲಿ ನಿಗದಿ ಪರೋಕ್ಷವಾಗಿ ಉದ್ಯಮಪತಿಗಳಿಗೆ ಹೊಡೆತ ನೀಡಿತ್ತು. ಉದ್ಯೋಗವಿಲ್ಲದ ಗ್ರಾಮೀಣರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಅವಕಾಶವನ್ನು ಇದು ಕಸಿದುಕೊಂಡಿತು. ನಂತರ ಜಾರಿಗೆ ಬಂದ ಆರ್ ಟಿಐ ಅಂದರೆ ಮಾಹಿತಿ ಹಕ್ಕು, ಉದ್ಯಮಪತಿಗಳ ಮತ್ತು ಆಡಳಿತಶಾಯಿಯ ಅಪವಿತ್ರ ಮೈತ್ರಿಗೆ ಹೊಡೆತ ನೀಡುವ ಅಸ್ತ್ರವಾಯಿತು. ಇದೆಲ್ಲಕ್ಕಿಂತ ನೇರವಾಗಿ ಉದ್ಯಮಪತಿಗಳಿಗೆ ಹೊಡೆತ ನೀಡಿದ ಮತ್ತೊಂದು ಕಾನೂನೆಂದರೆ ನೂತನ ಭೂಸ್ವಾಧೀನ ಕಾನೂನು. ಸರಕಾರದ ಮೂಲಕ ಕಡಿಮೆ ಬೆಲೆಗೆ ಭೂಮಿ ಪಡೆದು, ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದ ಉದ್ಯಮಿಗಳಿಗೆ ಈ ಕಾನೂನಿನ ಹೊಡೆತ ತಾಳಿಕೊಳ್ಳಲಾಗುತ್ತಿಲ್ಲ.
 ಇದರ ಜತೆಗೆ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅರಣ್ಯ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸುವಂತಿಲ್ಲವಾಗಿದೆ. ಅಲ್ಲದೆ ಹೊಸ ಗಣಿ ನೀತಿಯಲ್ಲಿ ರಾಜಧನ ನಿಗದಿಯಾಗಿರುವುದು ದೊಡ್ಡ ಹೊಡೆತ ನೀಡಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೇರಿರು ನಿರ್ಬಂಧದಿಂದಾಗಿ ತಟ್ಟೆಯಲ್ಲಿರುವ ಕೇಕನ್ನು ತಿನ್ನಲಾಗದ ಸ್ಥಿತಿ ಈ ಉದ್ಯಮಪತಿಗಳದ್ದು, ಹೀಗೆ ಇತ್ತೀಚಿನ ಕೇಂದ್ರ ಸರಕಾರದ ಒಂದೊಂದು ಹೊಸ ಕಾನೂನೂ, ನೀತಿಯೂ ನಮ್ಮ ದೇಶದ ಉದ್ಯಮಿಗಳಿಗೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರಿ ಹೊಡೆತವನ್ನೇ ನೀಡುತ್ತಿದೆ. ಕೈಗಾರಿಕೆಗಳಿಗೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿನಾಯಿತಿ ನೀಡಿ, ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಜಿಡಿಪಿಯನ್ನು ಹೆಚ್ಚಿಸುವ ಆರ್ಥಿಕತೆಗೆ ಬದಲಾಗಿ, ಜನಪರವಾಗಿರುವ, ಅವರ ಅಗತ್ಯತೆಯನ್ನು ಪೂರೈಸುವ (ಆಹಾರ ಹಕ್ಕು, ಶಿಕ್ಷಣ ಹಕ್ಕು ಮಸೂದೆ ಜಾರಿಯಂತಹ) ಯೋಜನೆಗಳನ್ನು ಜಾರಿಗೆ ತರುತ್ತಿರುವ ಯುಪಿಎ ಎಂದರೆ ಅವರಿಗೆ ಸಿಟ್ಟು ಬರುತ್ತಿದೆ. ಹೇಗಾದರೂ ಮಾಡಿ ಯುಪಿಎ ಸರಕಾರವನ್ನು ಕಿತ್ತೊಗೆಯಲೇಬೇಕೆಂದು ಮೋದಿಗೆ ಬೆಂಬಲ ನೀಡುತ್ತಿದ್ದಾರೆ ಅಷ್ಟೇ.

ಮಾರುತಿಗಾಗಿ ರೈತರ ದಾಖಲೆ ಬದಲಾಯಿತು
ಹಿಂದೆ ಹೇಳಿದ ಹಾಗೆ ನರೇಂದ್ರ ಮೋದಿ ಉದ್ಯಮಪತಿಳಗಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ಆಸಕ್ತಿವಹಿಸಿ ಗುಜರಾತ್ತಿನ ಮಂಡಲ್-ಬಹುಚಾರ್ಜರಿಯಲ್ಲಿ ವಿಶೇಷ ಕೈಗಾರಿಕಾ ವಲಯ (ಎಂಬಿ-ಎಸ್ಐಆರ್) ಸ್ಥಾಪಿಸಿದ್ದಾರೆ. ಇಲ್ಲಿ ಮಾರುತಿ-ಸುಜುಕಿಯ ಸಣ್ಣ ಕಾರು ತಯಾರಿಕಾ ಘಟಕ ತೆರೆಯಲಾಗಿದೆ. ರೈತರನ್ನು ಒಕ್ಕಲೆಬ್ಬಿಸಿ ಈ ವಲಯ ಸ್ಥಾಪಿಸಲಾಗಿದ್ದು, ಸ್ಥಳೀಯರಿಗೆ ಕಾರ್ಖಾನೆಯಲ್ಲಿ ಕ್ಲೀನರ್, ಸೆಕ್ಯುರಿಟಿ ಗಾರ್ಡ್ ಕೆಲಸ ನೀಡಲಾಗಿದೆ. ಸರಕಾರದ ಈ ತೀರ್ಮಾನದ ವಿರುದ್ಧ ಸಿಟ್ಟಿಗೆದ್ದ ರೈತರು ಹೋರಾಟ ನಡೆಸುತ್ತಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಹಂತದಲ್ಲಿ ಬೆಳಕಿಗೆ ಬಂದ ಸತ್ಯವೇನೆಂದರೆ ಮಾರುತಿ ಕಂಪನಿಯ ಕಾರ್ಖಾನೆ ತೆರೆಯಲು ಮೋದಿ ನೇತೃತ್ವದ ಆಡಳಿತ ವ್ಯವಸ್ಥೆ ದಾಖಲೆಗಳನ್ನೇ ಬದಲಾಯಿಸಿರುವುದು. ರೈತರ ಉಪಯೋಗಕ್ಕೆ ಇದ್ದ ಗೋಮಾಳವನ್ನೆಲ್ಲಾ ಬಂಜರು ಭೂಮಿ ಎಂದು ದಾಖಲಿಸಿಕೊಂಡಿರುವ ಸರಕಾರ ಅದನ್ನು ಮಾರುತಿಗೆ ಒಪ್ಪಿಸಿ, ರೈತರಿಗೆ ತಾನು ಅನ್ಯಾಯ ಮಾಡಿಯೇ ಇಲ್ಲ ಎಂದು ವಾದಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯಲಾರಂಭಿಸಿದರೆ ಕಾಯುವವರು ಯಾರು ಹೇಳಿ. ಕೋರ್ಟ್ ಏನು ತೀರ್ಪು ಕೊಡುತ್ತದೆಯೋ ಕಾದು ನೋಡಬೇಕು.