Saturday, July 1, 2017

ಬೇಕಿದೆ ನಮಗೆ ಹಸಿರು ರಾಜಕಾರಣ

'ಈ ಭೂಮಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದು, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳನ್ನಲ್ಲ'

-    ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 

ಗಾಂಧೀಜಿಯ ಈ ಮಾತು ಈಗ ಪ್ರತಿದಿನ ನಮ್ಮೆಲ್ಲರ ಅರಿವಿಗೆ ಬರತೊಡಗಿದೆ. ಹವಮಾನ ವೈಪರಿತ್ಯ ಭೂಮಿ ಮೇಲಿನ ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿದೆ. ಮುಂಗಾರು ಆಗಮನದಲ್ಲಿ ಏರು-ಪೇರು, ಉಷ್ಣಾಂಶದಲ್ಲಿ ಏರಿಕೆ ಹೀಗೆ, ಇದ್ದಕ್ಕಿದ್ದಹಾಗೆ ಭಾರಿ ಮಳೆ ಹೀಗೆ... ಇಷ್ಟಾದರೂ ನಮ್ಮ ಅರಿವಿನ ಕಣ್ಣು ಪೂರ್ಣವಾಗಿ ತೆರೆಯುತ್ತಿಲ್ಲ.
 ಇಂದು ಭೂತಾಪಮಾನ ಏರಿಕೆ ಜಗತ್ತಿನ ಮುಂದಿರುವ ಬಹುದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ 'ದೊಡ್ಡಣ್ಣ' ಹಿಂದೆ ಸರಿದಿದ್ದಾಗಿದೆ. ಮುಂದೇನು?, ಅಮೆರಿಕದ ಈ ನಿರ್ಧಾರಕ್ಕೆ ಕಾರಣಗಳೇನು? ಎಂದು ಹುಡುಕುತ್ತಾ ಹೊರಟರೆ, ನಾವು ಗಾಂಧೀಜಿ ಹೇಳಿದಂತೆ ದುರಾಸೆಯ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ನಾಳೆಯ ಚಿಂತೆಯಿಲ್ಲದ ನಿರ್ಧಾರಗಳನ್ನು ಅಮೆರಿಕದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ ತೆಗೆದುಕೊಳ್ಳಲಾಗುತ್ತಿದೆ.
ಯಾಕೆ ಹೀಗೆ, ಹೆಜ್ಜೆಯ ದಿಕ್ಕು ತಪ್ಪುತ್ತಿರುವ ಬಗ್ಗೆ ನಮಗೆ ಎಚ್ಚರವಿಲ್ಲವೇ ಕೇಳಿದರೆ, ಇಲ್ಲ ಎಂದೇನೂ ಹೇಳಲಾಗದು. ಎಚ್ಚೆತ್ತ ಜನಸಮುದಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಆದರೆ ಸಾಮಾನ್ಯ ಜನರ ಈ ಅರಿವು, ತಿಳುವಳಿಕೆ ಯಾವ ಮಹತ್ವದ ಬದಲಾವಣೆಗೂ ಕಾರಣವಾಗುತ್ತಿಲ್ಲ ಎಂಬುದು ಜಾಗತಿಕ ವಿದ್ಯಮಾನ.
 ಇದಕ್ಕೆ ಮುಖ್ಯ ಕಾರಣ ಈ  ಅರಿವಿನ ಬೆಳಕು ರಾಜಕೀಯ ಬದಲಾವಣೆಗಳಿಗೆ 'ಶಕ್ತಿ'ಯಾಗಿ ರೂಪಗೊಳ್ಳದಿರುವುದು. ನೇರವಾಗಿ ಹೇಳಬೇಕೆಂದರೆ, ಪರಿಸರದ ವಿಷಯಗಳಿಗೆ ರಾಜಕೀಯ ಮಹತ್ವ ದೊರೆತು, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಪರಿಸರದ ದೃಷ್ಟಿಯಿಂದಲೂ ನೋಡಿ, ತೀರ್ಮಾನಿಸುವ ವಿವೇಚನೆ ಎಲ್ಲಿಯೂ ಇಲ್ಲವಾಗಿರುವುದು. ಜಾಗತಿಕ ರಾಜಕಾರಣದಲ್ಲಿಯಂತೂ 'ಹಸಿರು ರಾಜಕಾರಣ' ನಿಶ್ಯಕ್ತಗೊಂಡಿದೆ.
ಹವಮಾನ ವೈಪರಿತ್ಯ ಮತ್ತು ಸ್ಥಳೀಯ ಪರಿಸರ ಸಮಸ್ಯೆಗಳು ಬೆಳೆಯುತ್ತಿರುವ ಪರಿ ಜಗತ್ತಿನಾದ್ಯಂತ 'ಹಸಿರು ರಾಜಕಾರಣ' ಮುನ್ನೆಲೆಗೆ ಬರಬೇಕಾದ ಅಗತ್ಯತೆಯನ್ನು ಎತ್ತಿತೋರಿಸುತ್ತಿದೆ. ಆದರೆ ಪರಿಸರದ ವಿಷಯಗಳ ಕುರಿತು ಅಮೆರಿಕದ ಅಧ್ಯಕ್ಷ ಟ್ರಂಪ್ ರಂತೆ ಮೂರ್ಖತನದಿಂದ ಮಾತನಾಡುವ ರಾಜಕಾರಣಿಗಳು ನಮಗೆ ಎಲ್ಲೆಲ್ಲಿಯೂ ಸಿಗುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿಯೇ, ರಾಜ್ಯದ ಅಮೂಲ್ಯ ಸಂಪತ್ತಾದ ಪಶ್ಚಿಮ ಘಟ್ಟ ಉಳಿಸುವ (ಕಸ್ತೂರಿ ರಂಗನ್ ವರದಿ ಜಾರಿ ಇತ್ಯಾದಿ) ವಿಷಯವಿರಲಿ, ಬೆಳ್ಳಂದೂರು ಕೆರೆಯ ನೊರೆಯ ವಿಷಯವಿರಲಿ, ಅದೂ ಬೇಡ ಬೆಂಗಳೂರಿನ ಕಸದ ವಿಷಯವಾದರೂ ಆದೀತು ನಮ್ಮ ರಾಜಕಾರಣಿಗಳು ಆಗಾಗ ನೀಡುವ ಹೇಳಿಕೆ ನೋಡಿದರೆ ಸಾಕು, ಅವರಿಗಿರುವ ಪರಿಸರ ಕಾಳಜಿ ಗೊತ್ತಾಗುತ್ತದೆ. ಬೇರೇನೂ ಬೇಡ, ಕೇಂದ್ರ ಪರಿಸರ ಖಾತೆ ಸಚಿವರ ಹೆಸರೇ ರಾಜ್ಯದ ಅರಣ್ಯ ಸಚಿವ ರಮಾನಾಥ ರೈಗೆ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ ಎಂಬುದು ಇತ್ತೀಚೆಗೆ ಅವರು ನೀಡಿದ ಹೇಳಿಕೆಗಳು ಎತ್ತಿತೋರಿಸುತ್ತಿವೆ!
  ಇದಕ್ಕೆ ಬರೀ ರಾಜಕಾರಣಿಗಳನ್ನು ದೂಷಿಸಿದರೆ ಪ್ರಯೋಜನವಿಲ್ಲ. ಪರಿಸರದ ವಿಷಯಗಳ ಕುರಿತು ಅವರಲ್ಲಿ, ಸ್ಪಷ್ಟತೆ, ಕನಿಷ್ಠ ಜ್ಞಾನ ಇರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವುದರಲ್ಲಿ ನಾವೆಲ್ಲರೂ ಸೋತಿದ್ದೇವೆ. ಉದಾಹರಣೆಗೆ, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಘಟ್ಟದ ತಪ್ಪಲಿನಲ್ಲಿ ಪ್ರತಿಭಟನೆಗಳು ನಡೆದವು. ಸರಕಾರವೂ ಈ ವರದಿ ಜಾರಿ ವಿರೋಧಿಸುವ ಒಂದು ಸಾಲಿನ  ತೀರ್ಮಾನ ತೆಗೆದುಕೊಂಡಿತು. ಇಲ್ಲಿ ವಿರೋಧಕ್ಕೆ ಕಾರಣವಾಗುವ ವಿಷಯಗಳು, ಅದಕ್ಕಿರುವ ಪರಿಹಾರ, ಪರ್ಯಾಗಳ ಕುರಿತು ರಾಜಕೀಯ ಚರ್ಚೆಯೇ ನಡೆಯಲಿಲ್ಲ. ವಿಧಾನಸಭೆಯಲ್ಲಿ ನಡೆದಿದ್ದೂ ಏಕಮುಖ ಅಭಿಪ್ರಾಯ ಮಂಡನೆ. ಪ್ರಪಂಚದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವಿನ ಬಗೆಗೆ ನಮಗಿರುವ ನಿರ್ಲಕ್ಷ್ಯ, ಅಮೆರಿಕದ ಅಧ್ಯಕ್ಷರ ಪರಿಸರ ಜ್ಞಾನದಂತೆಯೇ ಇದೆ!
ಇದಕ್ಕೆ ಪರಿಹಾರವೆಂದರೆ, ಪರಿಸರ ಕುರಿತ ಅರಿವು ರಾಜಕೀಯ ಶಕ್ತಿಯಾಗಿ ಬೆಳೆಯಬೇಕಷ್ಟೇ. ಇದೇನು ಹೊಸ ವಿಷಯವೇನೂ ಅಲ್ಲ. ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರು ಹಿಂದೆ ಈ ಪ್ರಯತ್ನಪಟ್ಟಿದ್ದರು. ಕೈಗಾ ಅಣುಸ್ಥಾವರದ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಗೂ ಸ್ಪರ್ಧಸಿದ್ದರು. ಆದರೆ ಅವರ ಈ ರಾಜಕೀಯವನ್ನು ಮತದಾರರು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. (ಈಗ ಅಲ್ಲಿ ಮತ್ತೆ ಹೋರಾಟ ಆರಂಭವಾಗಿದೆ, ಆದರೆ ನಮ್ಮ ರಾಜಕಾರಣಿಗಳು ಅದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ದೂರ ಉಳಿದಿದ್ದಾರೆ.)
ಜಾಗತಿಕ ಮಟ್ಟದಲ್ಲಿ 1980ರಿಂದಲೇ ಈ ಪ್ರಯತ್ನಗಳು ಆರಂಭವಾಗಿವೆ. ಜರ್ಮನಿ, ಬ್ರಿಟನ್, ಇಟಲಿ, ಫ್ರಾನ್ಸ್ ಸೇರಿದಂತೆ 13ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆದ ಪರಿಸರ ಚಳವಳಿಗಳ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಗ್ರೀನ್ ಪಾರ್ಟಿಗಳು ಒಂದಿಷ್ಟು ಯಶಸ್ಸು ಸಾಧಿಸಿ ಜಗತ್ತಿನ ಗಮನ ಸೆಳೆದಿದ್ದೂ ಇದೆ. ಸುಮಾರು 72ದೇಶದಲ್ಲಿ ಇಂದು ಹಸಿರು ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. 1986ರಲ್ಲಿ ಆಸ್ಟ್ರೀಯಾದಲ್ಲಿ 21, 1983ರಲ್ಲಿ ಜರ್ಮನಿಯಲ್ಲಿ 51, 1988ರಲ್ಲಿ ಸ್ವೀಡನ್ನಲ್ಲಿ 18 ಸಂಸದರು ಹಸಿರು ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಜರ್ಮನಿ ಮತ್ತಿತರ ದೇಶಗಳಲ್ಲಿ ಹಸಿರು ಪಕ್ಷಗಳು ಪಡೆಯುತ್ತಿರುವ ಮತ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇದೆ. ಆದರೆ ಸರಕಾರ ರಚಿಸುವಲ್ಲಿಯಾಗಲೀ, ನಿರ್ಧಾರತೆಗೆದುಕೊಳ್ಳುವಾಗ ಪ್ರಮುಖ ಪಾತ್ರವಹಿಸುವಲ್ಲಿಯಾಗಲೀ ಈ ಪಕ್ಷಗಳು ವಿಫಲವಾಗಿವೆ. ಜನ ಜಾಗೃತಿ ಹೆಚ್ಚಾದಾಗ ಹಸಿರು ರಾಜಕಾರಣಕ್ಕೆ ಬೆಲೆ ಬಂದೇ ಬರುತ್ತದೆ ಎಂದು ಆ ಪಕ್ಷಗಳ ಮುಖಂಡರು ಈಗಲೂ ನಂಬಿದ್ದಾರೆ.
ನಮ್ಮ ದೇಶದಲ್ಲಿ ಪರಿಸರ ಚಳವಳಿಗಳಿಗೇನೂ ಕೊರತೆಯಿಲ್ಲ. ಈ ಹೋರಾಟಗಳು ರಾಜಕೀಯ ಶಕ್ತಿಯಾಗಿ ರೂಪಗೊಳ್ಳದಿರುವುದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದೆಂದರೆ ಈ ವಿಷಯವನ್ನು ಹೇಗೆ ನಿರ್ವಹಿಸಿ, ಹೋರಾಟದ ಶಕ್ತಿಯನ್ನು ಕುಂದಿಸಬಹುದೆಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ! ಕಸ್ತೂರಿ ರಂಗನ್ ವರದಿಯ ವಿಷಯವನ್ನೇ ತೆಗೆದುಕೊಳ್ಳಿ. ಅದರ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಹಸಿರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿಯಾಗಿದೆ. ಆದರೂ ವರದಿ ಜಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಏಕದನಿಯಲ್ಲಿ ಘೋಷಿಸುತ್ತಾ ಓಡಾಡಿಕೊಂಡಿದ್ದಾರೆ.
 1999ರಲ್ಲಿ ಭಾರತ ಮೊತ್ತ ಮೊದಲ ಹಸಿರು ಪಕ್ಷ 'ದಿ ಇಂಡಿಯನ್ ನ್ಯಾಷನಲ್ ಗ್ರೀನ್ ಪಾರ್ಟಿ' ಹೆಸರು ನೊಂದಾಯಿಸಿಕೊಂಡು ಚುನಾವಣಾ ಕಣಕ್ಕಿಳಿದಿತ್ತು. ಆ ನಂತರ 2011ರಲ್ಲಿ ರಾಜಸ್ಥಾನದಿಂದ 'ದಿ ಇಂಡಿಯನ್ ಪೀಪಲ್ಸ್ ಗ್ರೀನ್ ಪಾರ್ಟಿ' ರಾಜಕೀಯ ಪ್ರವೇಶಿಸಿತ್ತು. ಪ.ಬಂಗಾಳದ 'ಗ್ರೀನ್ ಪಾರ್ಟಿ ಆಫ್ ಇಂಡಿಯಾ' ಎಂಬ ಪಕ್ಷ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತಾದರೂ, ರಾಜಕೀಯದಲ್ಲಿ ತೆರೆಗೆ ಬಂದಹಾಗೇ ಮರೆಯಾಗಿತ್ತು.
2012ರ ನಂತರ ವಿವಿಧ ಪರಿಸರ ಚಳವಳಿಗಳಲ್ಲಿ ಭಾಗವಹಿಸಿದ್ದವರು 'ಆಮ್ ಆದ್ಮಿ ಪಕ್ಷ' (ಎಎಪಿ)ಯೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದರು. ನರ್ಮದಾ ಬಚಾವೋ ಆಂದೋಲನದ ಮೇಧಾಪಾಟ್ಕರ್ ಇವರಲ್ಲಿ ಪ್ರಮುಖರು. ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಆದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಯಿತು. ಎಎಪಿ ಎಂದೂ ತಾನು 'ಗ್ರೀನ್ ಪಾರ್ಟಿ' ಎಂದು ಘೋಷಿಸಿಕೊಂಡಿರಲಿಲ್ಲ. ಆದರೆ ಪರಿಸರದ ವಿಷಯಗಳ ಕುರಿತ ಅದರ ನಿಲುವು, ಜನತೆಯಲ್ಲಿ ಹೊಸ ಭರವಸೆ ಮೂಡಿಸಿತ್ತಷ್ಟೇ.
ಪಾಶ್ಚ್ಯಾತ್ಯ ದೇಶಗಳ 'ಗ್ರೀನ್ ಪಾರ್ಟಿ'ಗಳು ಮುಖ್ಯವಾಗಿ, ಸಾಮಾಜಿಕ ನ್ಯಾಯ, ತಳಮಟ್ಟದಲ್ಲಿ ಪ್ರಜಾತಂತ್ರ ಜಾರಿ, ಅಹಿಂಸೆ, ವೈವಿಧ್ಯತೆಯನ್ನು ಗೌರವಿಸುವುದು, ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಜ್ಞಾನದಂತ ವಿಷಯಗಳನ್ನು ಮುಂದಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿವೆ. ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಸಾಮಾಜಿಕ ನ್ಯಾಯ, ಪ್ರಜಾತಂತ್ರ, ಸಮಾನತೆಗಳಲ್ಲಾ ನಮ್ಮ ಸಂವಿಧಾನದಿಂದಾಗಿ ಮೂಲ ಅಜೆಂಡಾಗಳೇ ಆಗಿವೆ. ಕೊರತೆಯೇನೆಂದರೆ ಪರಿಸರದ ಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಸ್ಪಷ್ಟತೆ ಇಲ್ಲದಿರುವುದು. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಪ್ರಕಟಿಸಿದ ಪ್ರಣಾಳಿಕೆಯ ಅಧ್ಯಯನ ನಡೆಸಿದ ತಜ್ಞರು ಕೂಡ ಇದೇ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ನಮ್ಮಲ್ಲಿರುವ ಪರಿಸರದ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಒಂದೋ ಹಸಿರು ರಾಜಕಾರಣ ಆರಂಭವಾಗಬೇಕು. ಇಲ್ಲವೇ ಈಗ ರಾಜಕಾರಣಮಾಡುತ್ತಿರುವ ಪಕ್ಷಗಳು ಹಸಿರನ್ನೇ ಉಸಿರಾಗಿಸಿಕೊಳ್ಳಬೇಕು. ಇದನ್ನು ಬಿಟ್ಟು ಬೇರೆ ದಾರಿಯಿಲ್ಲ.
ಭಾರತದಂತಹ ಭೌಗೋಳಿಕ ವೈವಿಧ್ಯತೆ ಹೊಂದಿರುವ ದೇಶದಲ್ಲಿ ಹಸಿರು ನೀತಿಗಳು ಕೂಡ ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಹೀಗಾಗಿ ನೀತಿ ರೂಪಿಸುವುದೇ ದೊಡ್ಡ ಸವಾಲು. ಅದರ ಜತೆಗೆ ಅಭಿವೃದ್ಧಿಯ ರಥ ಬೇರೆ ಸಾಗಬೇಕಿದೆ. ಜನಸಂಖ್ಯಾ ಒತ್ತಡ ಪರಿಸರದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಕಡಿಮೆ ಮಾಡಲು ಹೊಸ ಹೊಸ ಮಾರ್ಗೋಪಾಯಗಳನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಗಳಿವೆ. ಇಲ್ಲಿಯ ಪ್ರಾಕೃತಿಕ ಸಂಪತ್ತು, ಜೀವವೈವಿಧ್ಯತೆಯನ್ನು ಜೋಪಾನ ಮಾಡುವುದು ಕೂಡ ದೊಡ್ಡ ಸವಾಲು ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಹೀಗೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲಾ ಒಳಗೊಂಡು, ಜೀರ್ಣಿಸಿಕೊಳ್ಳುವ ಶಕ್ತಿಯನ್ನು ನಮ್ಮ ರಾಜಕೀಯ ಪಕ್ಷಗಳು ಪಡೆದುಕೊಳ್ಳಬೇಕಿದೆ. 
ಪರಿಸರ ರಾಜಕಾರಣ ಕೇವಲ ಪಶ್ಚಿಮಘಟ್ಟದ ಪ್ರದೇಶದಲ್ಲಿಯೋ, ಕರಾವಳಿ ತೀರದಲ್ಲಿಯೋ ಅಥವಾ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ನಗರಗಳಲ್ಲಿಯೋ ನಡೆದರೆ ಸಾಲದು. ಅದು, ಪ್ರತಿ ಹಳ್ಳಿಯಿಂದ ದಿಲ್ಲಿಯವರೆಗೆ ಮಾತ್ರವಲ್ಲ, ಈಗ ಪ್ಯಾರೀಸ್ನವರೆಗೂ ವಿಸ್ತಾರಗೊಳ್ಳಬೇಕಿದೆ. ಈಗಿನ ಜಾಗತಿಕ ರಾಜಕಾರಣಕ್ಕೆ ಪರ್ಯಾಯವಾಗಿ ನಿಂತುಕೊಳ್ಳಬೇಕಿದೆ.
                                                                             (ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Sunday, February 23, 2014

ಮಂಗನ ಕಾಯಿಲೆ - ಒಂದು ಬಯಲಾಜಿಕಲ್ ವೆಪನ್ !


ಮಂಗನ ಕಾಯಿಲೆ ಮತ್ತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಕನ್ನಂಗಿ ಸುತ್ತಮುತ್ತಲ ಗ್ರಾಮಗಳಲ್ಲಿ  ಕೆಲವರಿಗೆ ಈ ಕಾಯಿಲೆ ಬಂದಿದ್ದು, ಒಬ್ಬರು ಮೃತಪಟ್ಟಿರುವುದಾಗಿಯೂ ವರದಿಯಾಗಿದೆ. ಪ್ರತಿ ಬೇಸಿಗೆಯಲ್ಲಿಯೂ ಮಲೆನಾಡಿನ ಒಂದಲ್ಲಾ ಒಂದು ಕಡೆ ಕಾಣಿಸಿಕೊಂಡು ಕನಿಷ್ಠ ಒಂದಿಬ್ಬರ ಬಲಿ ತೆಗೆದುಕೊಳ್ಳುತ್ತಿರುವ ಈ ಕಾಯಿಲೆ ಆರು ದಶಕಗಳ ಹಿಂದೆ ಮುಂದುವರೆದ ದೇಶಗಳು ನಡೆಸಿದ ‘ಜೈವಿಕ ಅಸ್ತ್ರ’ಗಳ ಪ್ರಯೋಗದ ಫಲ. ಇದರ ಪರಿಣಾಮ ಮಲೆನಾಡಿಗರು ಈಗಲೂ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ.
  `ಕ್ಯಾಸನೂರು ಕಾಡಿನ ಕಾಯಿಲೆ' ಎಂದೇ ಹೆಸರು ಮಾಡಿರುವ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಜೈವಿಕ ಅಸ್ತ್ರವಾಗಿ (biological weapon) ಬಳಸಲಾಗುತ್ತಿದೆ ಎಂಬ ಎಚ್ಚರಿಕೆ ನೀಡಿದ್ದರೂ, ಸರಕಾರಗಳ ಬಳಿ ಈ ಬಗ್ಗೆ ಮಾಹಿತಿಯೇ ಇಲ್ಲ.ಈ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದರಿಂದಲೇನೋ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರೋಗ ಬಾರದಂತೆ ತಡೆಯುವ ಲಸಿಕೆ ತಯಾರಿಸಲು ಶಿವಮೊಗ್ಗದಲ್ಲಿದ್ದ ಪ್ರಯೋಗಾಲಯ ದಶಕಗಳ ಹಿಂದೆಯೇ ಬಾಗಿಲು ಮುಚ್ಚಿಕೊಂಡಿದೆ.
  ಇತ್ತೀಚೆಗೆ ಇದ್ದಕ್ಕಿದ್ದ ಹಾಗೇ ಉಲ್ಭಣಗೊಳ್ಳುವ ಈ ರೋಗಾಣು ಬಗ್ಗೆ ಹೆದರಿರುವ ಪಾಶ್ಚಿಮಾತ್ಯರಾಷ್ಟ್ರಗಳು ಇದು ತಮ್ಮ ದೇಶಗಳಿಗೆ ಪ್ರವೇಶಿಸದಂತೆ ಎಚ್ಚರಿಕೆ ಕ್ರಮ ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯ  ಡ್ರಗ್ಸ್ ಮತ್ತು ಕ್ರೈಂ ವಿಭಾಗ ಈ ರೋಗಾಣುವನ್ನು ಜೈವಿಕ ಅಸ್ತ್ರವಾಗಿ ಬಳಸಲ್ಪಡುವ ಏಜೆಂಡ್ (Biological Warfare Agent) ಎಂದು ಹೆಸರಿಸಿ ಅಲರ್ಟ್ ಘೋಷಿಸಿದೆ. ವಿಶ್ವಸಂಸ್ಥೆ 2009ರಲ್ಲಿ ಬಿಡುಗಡೆ ಮಾಡಿರುವ ಸಾಗಾಣಿಕೆ ಕೈಪಿಡಿಯಲ್ಲಿಯೂ ಇದರ ಬಗ್ಗೆ ಎಚ್ಚರಿಕೆಯ ಸೂಚನೆಗಳಿವೆ. ಅಮೆರಿಕ ತನ್ನ ಬಯೊಸೇಫ್ಟಿ ಲೆವೆಲ್4 (ಬಿಎಸ್ಎಲ್-4)ರ ಅಡಿಯಲ್ಲಿ ಈ ರೋಗಾಣುವನ್ನು ಗುರುತಿಸಿದೆ.
ಆದರೆ ನಮ್ಮ ರಾಜ್ಯದಲ್ಲಿ ಈ ರೋಗಾಣು ಹರಡದಂತೆ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೋಗ ಪ್ರತಿ ವರ್ಷ ಮರುಕಳಿಸುತ್ತಲೇ ಇದೆ.  2005ರ ಮಾರ್ಚ್ ನಲ್ಲಿ  ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.ನಾನು ಈ ಬಗ್ಗೆ ಬರೆದಿದ್ದ ವರದಿಯನ್ನು ಉಲ್ಲೇಖಿಸಿ ಆಗ ತೀರ್ಥಹಳ್ಳಿಯ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಈ ಕುರಿತು ಗಮನ ಸೆಳೆದಿದ್ದರು. ಈ ರೋಗಾಣು ಜೈವಿಕ ಅಸ್ತ್ರವಾಗಿ ಬಳಸಲ್ಪಟ್ಟಿತ್ತೇ ಎಂಬುದರ ಕುರಿತು ತನಿಖೆ ನಡೆಸುವುದಾಗಿ ಸರಕಾರ ಭರವಸೆ ಕೂಡ ನೀಡಿತ್ತು. ನಂತರ `ಈ ಬಗ್ಗೆ ಮಾಹಿತಿ ಇಲ್ಲ' ಎಂದು ಷರಾ ಬರೆದು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಈ ರೋಗ ಮಾತ್ರ ಪ್ರತಿವರ್ಷ ಮಲೆನಾಡಿನ ಜನರನ್ನು ಕಾಡುತ್ತಲೇ ಇದೆ.

 ಕಾಯಿಲೆ ಬಂದಿದ್ದು ಹೇಗೆ?

ಮಂಗನ ಕಾಯಿಲೆ ಎಂದೇ ಕರೆಯಲ್ಪಡುತ್ತಿರುವ ಈ ಕಾಯಿಲೆಯನ್ನು `ಅಂಥ್ರ್ಯಕ್ಸ್' ನಂತೆ ಜೈವಿಕ ಅಸ್ತ್ರವಾಗಿ ಬಳಸಲಾಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ. ಶೀತಲ ಸಮರದ ಸಂದರ್ಭದಲ್ಲಿ ವೈರಿ ದೇಶಗಳನ್ನು ಮಣಿಸಲು ಜೈವಿಕ ಅಸ್ತ್ರಗಳನ್ನು ಸಿದ್ಧಪಡಿಸಿದ ಅಮೆರಿಕ ಅವುಗಳ ಪ್ರಯೋಗವನ್ನು ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ನಡೆಸಿತ್ತು. ವಲಸೆ ಹೋಗುವ ಹಕ್ಕಿಗಳ ಮೂಲಕ ವಿಷಾಣುಗಳನ್ನು ಶತ್ರುದೇಶಗಳಿಗೆ ತಲುಪಿಸುವ ತಂತ್ರ ರೂಪಿಸಿತ್ತು. ಇದಕ್ಕಾಗಿ ಹಕ್ಕಿಗಳ ಸಮೀಕ್ಷೆ ಕೂಡ ನಡೆಸಲಾಗಿತ್ತು.
ಕ್ಯಾಸನೂರಿನ ಹಳೆಯ ಚಿತ್ರ
  ಈ ರೋಗ 1957ರಲ್ಲಿ ಮೊದಲು ಕಾಣಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ. ಇಲ್ಲಿಯೇ ಇರುವ ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುತ್ತವೆ. ಈ ಹಕ್ಕಿಗಳ ಮೂಲಕ ಕ್ಯಾಸನೂರು ಕಾಡಿನ ಕಾಯಿಲೆಗೆ ಕಾರಣವಾಗುವ ವಿಷಾಣುಗಳನ್ನು ಕಳುಹಿಸಲಾಗಿತ್ತು. ಇದು ಪುಣೆಯ ವಿಷಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ನ್ಯೂಯಾರ್ಕ್ನ ರಾಕ್ಫೆಲರ್ ಸಂಶೋಧನಾಲಯದ ನೆರವಿನಿಂದ  ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.
  ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುವುದನ್ನು ತಿಳಿದೇ ಈ ಪ್ರಯೋಗ ನಡೆಸಲಾಗಿತ್ತು. (ಯಾವಾಗಲೂ ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ಕಡಿಮೆ ಜನಸಂಖ್ಯೆ ಯಿರುವ ಮಲೆನಾಡಿನಂತಹ ಪ್ರದೇಶವನ್ನೇ ಆಯ್ಕೆಮಾಡಿಕೊಳ್ಳಲಾಗುತ್ತದೆ) ವಲಸೆ ಹಕ್ಕಿಗಳಿಂದ ಮಂಗಗಳಿಗೆ ಮಂಗನಿಂದ ಉಣ್ಣೆಗಳ ಮೂಲಕ ಮನುಷ್ಯನಿಗೆ ಈ ರೋಗಾಣು ಹರಡಿ ಮನುಷ್ಯನ ಬಲಿ ಪಡೆದಿದ್ದವು. ಅಂದಿನಿಂದಲೂ ಸಾಯದ ಈ ವೈರಾಣುಗಳು ಈಗ ಮಲೆನಾಡಿನಾದ್ಯಂತ ಹರಡಿವೆ. ಈ ರೀತಿ ನಮ್ಮ ಮಲೆನಾಡಿಗೆ ವೈರಾಣು ಕಳಿಸಿದವರು ನಂತರ ಪುಣೆಯ ವಿಜ್ಞಾನಿಗಳನ್ನೂ ಇಲ್ಲಿಗೆ ಕಳುಹಿಸಿ, ಇದು ಹೇಗೆ ಕೆಲಸಮಾಡಿದೆ ಎಂಬುದರ ಬಗ್ಗೆ ವರದಿಯನ್ನೂ ತರಸಿಕೊಂಡರು. ವಿಜ್ಞಾನಿಗಳ ತಂಡದಲ್ಲಿದ್ದ ಸದಸ್ಯರ ಭಿನ್ನಾಭಿಪ್ರಾಯದಿಂದಾಗಿ ಈ ವಿಷಯ ಬಹಿರಂಗಗೊಂಡಿತ್ತು. ಇದ್ಯಾವುದರ ಬಗ್ಗೆಯೂ ಅರಿವಿರದ ನಾವು, ವಿಜ್ಞಾನಿಗಳು ನಮ್ಮ ನೆರವಿಗೆ ಬಂದಿದ್ದರು, ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲಿದ್ದಾರೆ ಎಂದೇ ನಂಬಿಕೊಂಡು ಬಂದಿದ್ದೆವು.
ಕಾಯಿಲೆಗೆ ಕಾರಣವಾಗುವ ಮಂಗಗಳಲ್ಲಿ ಇದ್ದ ವಿಷಾಣುಗಳು ರಷ್ಯಾದ ‘ವಸಂತ ಗ್ರೀಷ್ಮ ಮಸ್ತಿಷ್ಕ ರೋಗ’ (Russian Spring Summer Encephalitis) ವಿಷಾಣುವಿಗೆ ಅತಿ ಸಮೀಪದ ವಿಶಿಷ್ಟ ವಿಷಾಣುವೆಂದು ಗುರುತಿಸಲ್ಪಟ್ಟು, ‘ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್’ ಎಂದು ಹೆಸರಿಸಲ್ಪಟ್ಟಿತ್ತು. ಮೊದಲ ಕೆಲ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ರೋಗ ಮುಂದೆ ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೂ ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು. ಈಗಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.


70ರ ದಶಕದಲ್ಲಿ ಅಮೆರಿಕ ಈ ಪ್ರಯೋಗ ನಡೆಸಿದ್ದನ್ನು  ಮಾಧ್ಯಮಗಳು ಬೆಳಕಿಗೆ ತಂದಾಗ (ಮುಖ್ಯವಾಗಿ ಅಮೆರಿಕದನ್ ಬಿಸಿ ಟಿವಿ) ಅಮೆರಿಕ ಸೇನೆಯ ಪರವಾಗಿ ಕೆಲಸಮಾಡುವ ಸ್ಮಿತ್ ಸೊನಿಯನ್ ಸಂಸ್ಥೆಯ ಸಹ ಕಾರ್ಯದರ್ಶಿಯೊಬ್ಬರು ಹಕ್ಕಿಗಳ ಮೂಲಕ ವಿಷಾಣುಗಳನ್ನು ಕಳುಹಿಸುವುದರಿಂದ ಶೇ. 97ರಷ್ಟು  ಖಚಿತವಾಗಿ ಗುರಿ ತಲುಪಬಹುದು ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದರು.
  ಮಲೆನಾಡಿನಲ್ಲಿ ಮಂಗನ ಕಾಯಿಲೆ ತೀವ್ರಗೊಂಡು ಜನ ಸಾಯುತ್ತಿದ್ದಂತೆಯೇ ಕೂಡಲೇ ಎಚ್ಚೆತ್ತ ಬ್ರಿಟನ್ ಸೇನೆ ಈ ರೋಗಾಣುವನ್ನು `ಜೈವಿಕ ಅಸ್ತ್ರ' ಎಂದು ಮೊದಲು ಘೋಷಿಸಿತು. ಪಿಟ್ಸ್ ಬರ್ಗ್ ವಿಶ್ವ ವಿದ್ಯಾಲಯದ ವೈದ್ಯಕೀಯ ವಿಭಾಗ, ವಾಷಿಂಗ್ಟನ್  ಸ್ಟೇಟ್ ವಿವಿಯ ಮೈಕ್ರೋಬಯಲಾಜಿ, ಅಮೆರಿಕ ಮೆಡಿಕಲ್ ಅಸೋಸಿಯೇಷನ್, ವಿಜ್ಞಾನಿಗಳ ಒಕ್ಕೂಟ ಈ ಬಗ್ಗೆ ಅಧ್ಯಯನ ನಡೆಸಿ, ಇದೊಂದು ಜೈವಿಕ ಅಸ್ತ್ರ ಎಂದು ಸಾರಿವೆ. ಈಗಲೂ ಈ ಕಾಯಿಲೆ ಬಗ್ಗೆ ಮಾಹಿತಿ ತರಿಸಿಕೊಂಡು, ಪರಿಣಾಮಗಳನ್ನು ವಿಶ್ಲೇಷಿಸುತ್ತಿವೆ. ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ತನ್ನ ಜರ್ನಲ್ ನಲ್ಲಿ ನಮ್ಮ ಮಂಗನ ಕಾಯಿಲೆ ಬಗ್ಗೆ ವಿವವರವಾದ ಲೇಖನ ಬರೆದಿದೆ!
  ಭಾರತ ಸಕಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಗಾಗ ಬರುವ ಸಾಮಾನ್ಯ ಕಾಯಿಲೆಯಂತೆ ಮಂಗನ ಕಾಯಿಲೆಯನ್ನೂ ಪರಿಗಣಿಸಿರುವ  ಆರೋಗ್ಯ ಇಲಾಖೆ ಈ ರೋಗ ಬಾರದಂತೆ ತಡೆಯಲು ಇರುವ ಲಸಿಕೆಯನ್ನು ನೀಡುವುದೇ ತನ್ನ ಜವಾಬ್ದಾರಿ ಎಂದು ಕೊಂಡಿದೆ. ಯಾವುದೋ ದೇಶ ಕಳುಹಿಸಿದ ರೋಗಾಣುಗಳಿಗೆ ಮಲೆನಾಡಿಗರು ಬಲಿಯಾಗುತ್ತಲೇ ಇದ್ದಾರೆ.

Saturday, December 28, 2013

ಅಡಿಕೆಯ ಸಂಕಷ್ಟಕ್ಕೆ ಸಿಗರೇಟು ಲಾಬಿ ಕಾರಣವೇ?


ಮ್ಮ ರಾಜಕಾರಣಿಗಳು, ಅಡಿಕೆ ಬೆಳೆಗಾರರ ಪರವಾದ ಸಂಘಟನೆಗಳ ಪ್ರತಿನಿಧಿಗಳು ಹೇಳುತ್ತಿರುವಂತೆ ಅಡಿಕೆ ಇಂದು ಎದುರಿಸುತ್ತಿರುವ ಸಂಕಷ್ಟಕ್ಕೆ ಸಿಗರೇಟು ಲಾಬಿ ಕಾರಣವೇ?

ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಈ ಹಿಂದೆ (ಅಂದರೆ ಆಹಾರ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ -2011 ಜಾರಿಗೆ ಬರುವ ಮೊದಲು) ಗುಟ್ಕಾ ನಿಷೇಧಗೊಂಡಾಗೆಲ್ಲಾ ಇದರ ಹಿಂದೆ ಸಿಗರೇಟು ಕಂಪನಿಗಳ ಲಾಬಿ ಇದೆ ಎಂದೇ ಹೇಳಲಾಗುತ್ತಿತ್ತು. ಇದರಲ್ಲಿ ಸತ್ಯಕೂಡಾ ಇತ್ತು. ಕಾನೂನು ಬದ್ಧವಾಗಿ ಗುಟ್ಕಾ ನಿಷೇಧಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಕೆಲ ರಾಜ್ಯ ಸರಕಾರಗಳು ಇದ್ದಕ್ಕಿದ್ದಂತೆ ಗುಟ್ಕಾ ನಿಷೇಧಿಸುತ್ತಿದ್ದವು. ಇದಕ್ಕೆ ಸಿಗರೇಟು ಕಂಪನಿಗಳೇ ಕಾರಣವಾಗಿರುತ್ತಿದ್ದವು. ಕೊನೆಗೆ ಸುಪ್ರೀಂ ಕೋರ್ಟ್ ಗೆ ಹೋಗಿ ಈ ನಿಷೇಧವನ್ನು ತೆರವುಗೊಳಿಸಬೇಕಾಗುತ್ತಿತ್ತು.
ಒಂದಿಷ್ಟು ಹಿಂದಕ್ಕೆ ಹೋಗೋಣ, ಎಂಬತ್ತರ ದಶಕದಲ್ಲಿ ಅಡಿಕೆಯಿಂದ ತಯಾರಿಸಿದ ಗುಟ್ಕಾ ಮಾರುಕಟ್ಟೆ ಪ್ರವೇಶಿಸಿ, ತಂಬಾಕು ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿತ್ತು. ಭಾರತ ಮತ್ತು ನೆರೆಯ ದೇಶಗಳಲ್ಲಿ ಸಿಗರೇಟಿಗೆ (ಧೂಮಪಾನಕ್ಕೆ) ಸೆಡ್ಡೆಹೊಡೆದು ದಿನದಿಂದ ದಿನಕ್ಕೆ ಜನಪ್ರಿಯವಾಗಿತ್ತು. ಇದರಿಂದ ಸಿಗರೇಟು ಕಂಪನಿಗಳ ಬಿಸ್ನೆಸ್ ಗೆ ಹಿನ್ನಡೆಯಾಗಿತ್ತು. ಜಾಹೀರಾತಿಗೆ ಎಷ್ಟೇ ದುಡ್ಡು ಸುರಿದರೂ ಯುವಕರು ಮಾತ್ರ ಗುಟ್ಕಾ ಹಾಕಿ ಉಗಳಲು ಆರಂಭಿಸಿದ್ದರೆ ಹೊರತೂ ಧಂ ಹೊಡೆಯುತ್ತಿರಲಿಲ್ಲ. ಭಾರತದಲ್ಲಿ 1984ರಲ್ಲಿ 90 ಶತಕೋಟಿಯಷ್ಟಿದ್ದ ಸಿಗರೇಟು ಮಾರಟ 1992ರಲ್ಲಿ 85 ಶತಕೋಟಿಗೆ ಇಳಿದಿತ್ತು!
ಏರಿಕೆಯಾಗಬೇಕಾಗಿದ್ದ ಮಾರಟ ಹೀಗೆ ಇಳಿಕೆಯಾಗುತ್ತಿರುವುದನ್ನು ಕಂಡ ಸಿಗರೇಟು ಕಂಪನಿಗಳು ಗುಟ್ಕಾ ವಿರುದ್ಧ ಯುದ್ಧ ಆರಂಭಿಸಿದ್ದವು. ಏನೇ ಮಾಡಿದರೂ ಗುಟ್ಕಾದ ಮುಂದೆ ಸಿಗರೇಟು ಕಂಪನಿಗಳ ಆಟ ನಡೆದಿರಲಿಲ್ಲ. 90ರ ದಶಕದಲ್ಲಿ ಇವೆರಡರ ನಡುವೆ ತೀವ್ರ ಪೈಪೋಟಿ ನಡೆದರೂ ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಗುಟ್ಕಾ ಕಂಪನಿಗಳೇ. (ಹೀಗಾಗಿಯೇ ಅಡಿಕೆ ಬೆಲೆ ಎದ್ವಾತದ್ವಾ ಏರಿದ್ದು ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ)
1998ರ ಹೊತ್ತಿಗೆ ಸಿಗರೇಟು ಮಾರಾಟ ಕಡಿಮೆಯಾಗಲಾರಂಭಿಸಿತು. ಎಷ್ಟೆಂದರೆ 2001-2002ನೇ ಸಾಲಿನಲ್ಲಿ ಐಟಿಸಿಯ ಸಿಗರೇಟು ಮಾರಾಟದಲ್ಲಿ ಶೇ.8.44ರಷ್ಟು ಕುಸಿತ ಉಂಟಾಗಿತ್ತು. 2000-2001ನೇ ಸಾಲಿನಲ್ಲಿ 66, 478 ಮಿಲಿಯನ್ ಸಿಗರೇಟು ಮಾರಿದ್ದ ಕಂಪನಿಗೆ 2001-2002ನೇ ಸಾಲಿನಲ್ಲಿ 60.865 ಮಿಲಿಯನ್ ಸಿಗರೇಟು ಮಾರಲು ಮಾತ್ರ ಸಾಧ್ಯವಾಗಿತ್ತು. ಕೇವಲ ಐಟಿಸಿ ಕಂಪನಿಗೆ ಮಾತ್ರ ಈ ಹಿನ್ನಡೆಯಾಗಿದ್ದಲ್ಲ, ಭಾರತದ ಸಿಗರೇಟು ಮಾರುಕಟ್ಟೆಯಲ್ಲಿ ಆಗ ಎರಡನೇ ಸ್ಥಾನದಲ್ಲಿದ್ದ ಗಾಡ್ ಫ್ರೆ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ (ಜಿಪಿಐ) ಕೂಡ 2000ರಲ್ಲಿ ಸಿಗರೇಟು ಮಾರಾಟದಲ್ಲಿ ಶೇ. 5.3ರಷ್ಟು ಹಿನ್ನಡೆ ಅನುಭವಿಸಿತ್ತು. ಈ ಸಂದರ್ಭದಲ್ಲಿ ಒಟ್ಟಾರೆಯಾಗಿ ಸಿಗರೇಟು ಮಾರಾಟದಲ್ಲಿ ಶೇ.4 ರಷ್ಟು ಕಡಿಮೆಯಾಗಿತ್ತು ಎಂದು ಆಗ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದರು.
ಈ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾಗಿದ್ದ  ಸಿಗರೇಟು ತಯಾರಿಕಾ ಕಂಪನಿಗಳು ಗುಟ್ಕಾ ನಿಷೇಧಕ್ಕೆ ಕಾರಣವಾಗಿದ್ದವು. (ಇದಕ್ಕೆ ನ್ಯಾಯಾಲಯಗಳನ್ನು ಬಳಸಿಕೊಳ್ಳಲಾಗಿತ್ತೆಂಬ ಅಭಿಪ್ರಾಯವಿದೆ). 2002ರಲ್ಲಿ ಬಿಹಾರ ಸೇರಿದಂತೆ ಹದಿನಾಲ್ಕು ರಾಜ್ಯಗಳು ಗುಟ್ಕಾ ನಿಷೇಧಿಸಿದ್ದನ್ನು, ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಗಲೇ ಬೆಳೆದು ನಿಂತಿದ್ದ ಗುಟ್ಕಾ ತಯಾರಿಕ ಕಂಪನಿಗಳು  ಸಿಗರೇಟು ಕಂಪನಿಗಳ ಈ ಲಾಬಿಗೆ ಹೊಡೆತ ನೀಡಲು ತೊಡೆ ತಟ್ಟಿದವು. ಸಿಗರೇಟು, ತಂಬಾಕಿನ ಬೇರೆ ಉತ್ಪನ್ನಗಳನ್ನು ಹಾಗೂ ಆರೋಗ್ಯಕ್ಕೆ ಹಾನಿಕರವಾಗಿರುವ ಇತರ ಉತ್ಪನ್ನಗಳನ್ನು ನಿಷೇಧಿಸದೇ ಗುಟ್ಕಾವನ್ನೇ ಮೊದಲು ನಿಷೇಧಿಸುತ್ತಿರುವುದೇಕೆ ಎಂದು ಪ್ರಶ್ನಿಸಲಾರಂಭಿಸಿದವು. 'ಗುಟ್ಕಾ ನಿಷೇಧ್ ಹುವಾ... ಸಿಗರೇಟ್ ಕ್ಯೂ ನಹೀ' ಎಂಬ ಜಾಹೀರಾತುಗಳು ಟೀವಿ ಪರದೆಗಳ ಮೇಲೆ, ಪತ್ರಿಕೆಗಳಲ್ಲಿ ರಾರಾಜಿಸತೊಡಗಿದವು. ಗುಟ್ಕಾದಿಂದ ಆಗಲೇ ಅಡಿಕೆಗೆ ಬಂಗಾರದ ಬೆಲೆ ಕಂಡಿದ್ದ ಬೆಳೆಗಾರ, ಗುಟ್ಕಾದೊಂದಿಗೆ ಅಡಿಕೆಯ ಮಾನ ಹೋಗುತ್ತಿದ್ದರೂ ತಲೆಕೆಡಿಸಿಕೊಳ್ಳದೆ, ಗುಟ್ಕಾ ಕಂಪನಿಗಳ ಈ ಪ್ರತಿದಾಳಿಯಲ್ಲಿ, ತಾವೂ ಮಾನಸಿಕವಾಗಿ ಭಾಗಿಗಳಾಗಿದ್ದರು. ಕೆಲವರು ಪ್ರತಿಭಟನೆ, ಬಹಿರಂಗ ಸಭೆಗಳನ್ನು ನಡೆಸಿ ಗುಟ್ಕಾ ಕಂಪನಿಗಳಿಗೆ ಬೇಷರತ್ ಬೆಂಬಲ ನೀಡಿದ್ದೂ ನಡೆಯಿತು.

ಆಗ ಗುಟ್ಕಾ ನಿಷೇಧಕ್ಕೆ ರಾಜ್ಯ ಸರಕಾರಗಳಿಗೆ ಅಧಿಕಾರವಿರಲಿಲ್ಲ. ಕೇಂದ್ರ ಸರಕಾರಕ್ಕೂ ಹಲ್ಲಿರಲಿಲ್ಲ. ಕಾನೂನಿನ ಈ ತೊಡಕನ್ನು ಮುಂದಿಟ್ಟುಕೊಂಡೇ ಗುಟ್ಕಾ ಕಂಪನಿಗಳು ನಿಷೇಧವನ್ನು ತೆರವುಗೊಳಿಸಿಕೊಳ್ಳುತ್ತಾ, ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಾ ಬಂದಿದ್ದವು. ಈ ಲೋಪವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಕಾನೂನು ರೀತಿಯಲ್ಲಿಯೇ ಗುಟ್ಕಾ ನಿಷೇಧಗೊಳ್ಳುವಂತೆ ಮಾಡಿದವು. (ಈ ಹೋರಟ ಬಹಳ ಇಂಟರೆಸ್ಟಿಂಗ್ ಆಗಿದೆ. ಮುಂದೊಮ್ಮೆ ಬರೆಯುತ್ತೇನೆ)
ಹಿಂದೆ ಸರಿದ ಸಿಗರೇಟು ಕಂಪನಿಗಳು
ಈ ನಡುವೆ ಸಂಭವಿಸಿದ ಅಂತಾರಾಷ್ಟ್ರೀಯ ವಿದ್ಯಮಾನವೊಂದು ಸಿಗರೇಟು ಕಂಪನಿಗಳಿಗೆ ಸರಿಯಾಗಿ ಹೊಡೆತ ನೀಡಿತು. ಹೀಗಾಗಿ ಗುಟ್ಕಾ ವಿರುದ್ಧ ಅವುಗಳ 'ಲಾಬಿ' ಕೂಡ ಕಡಿಮೆಯಾಯಿತು.
ಅದೇನೆಂದರೆ, 2003ರ ಮೇ 21ರಂದು ನಡೆದ ವಿಶ್ವ ಆರೋಗ್ಯ ಸಂಸ್ಥೆಯ 56ನೇ ಸಭೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ತೆಗೆದುಕೊಂಡು, 'ರಡ್  ಹೆಲ್ತ್ ಆರ್ಗನಿಸೆಷನ್ ಫ್ರೆಮ್ ವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೊ ಕಂಟ್ರೋಲ್' (ಡಬ್ಲ್ಯುಟಿಒ ಎಫ್ ಸಿಟಿಸಿ) ಎಂಬ ಒಪ್ಪಂದ (ಒಡಂಬಡಿಕೆ) ರೂಪಿಸಲಾಯಿತು. ಈ ಒಪ್ಪಂದ 2005ರ ಫೆಬ್ರವರಿ 27ರಂದು ಜಾರಿಗೆ ಕೂಡ ಬಂದಿತು. ವಿಶ್ವಸಂಸ್ಥೆಯ ಇತಿಹಾಸದಲ್ಲಿಯೇ ಅಂತಾರಾಷ್ಟ್ರೀಯ ಒಪ್ಪಂದವೊಂದು ಇಷ್ಟೊಂದು ಬೇಗ ಜಾರಿಗೆ ಬಂದಿದ್ದು ಇದೇ ಮೊದಲು. (ಅಮೆರಿಕ ಮೊದಲಿಗೆ ಈ ಒಪ್ಪಂದದ ಬಗ್ಗೆ ತರ್ಲೆ ತೆಗೆದು, ಕೊನೆಗೆ ತನ್ನ ಮೂಗಿನ ನೇರಕ್ಕೇ ಒಪ್ಪಂದವಿರುವಂತೆ ನೋಡಿಕೊಂಡಿದ್ದು ಬೇರೆ ವಿಷಯ)
ತಂಬಾಕು ಬಳಕೆ ನಿಯಂತ್ರಣವನ್ನೇ ಗುರಿಯಾಗಿಟ್ಟುಕೊಂಡಿರುವ ಈ ಒಪ್ಪಂದವು, ನಿಯಂತ್ರಣಕ್ಕೆ ಲಾಬಿ ಮಾಡುವುದು, ನಿರ್ಬಂಧ ಹೇರುವಂತೆ ಸರಕಾರಗಳನ್ನು ಒತ್ತಾಯಿಸುವುದು, ಎಲ್ಲೆಲ್ಲಿ ಧೂಮಪಾನ ಮಾಡಿದರೆ ಅನಾಹುತ ಹೆಚ್ಚು ಎಂಬುದರ ಅಧ್ಯಯನ ನಡೆಸಿ ಅಲ್ಲೆಲ್ಲಾ ನಿಷೇಧಕ್ಕೆ ಕ್ರಮತೆಗೆದುಕೊಳ್ಳುವುದು, ತೆರಿಗೆ ಹೆಚ್ಚಳ ಮತ್ತಿತರಗಳ ಮೂಲಕ ಸಿಗರೇಟು ದೊರೆಯದಂತೆ  ನೋಡಿಕೊಳ್ಳುವುದು, ಜಾಹೀರಾತುಗಳನ್ನು ನಿಷೇಧಿಸುವುದು, ಅಪ್ರಾಪ್ತರು ಈ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು, ಸಿಗರೇಟು ಪ್ಯಾಕೇಟುಗಳ ಮೇಲೆ ಅಪಾಯ ಮನದಟ್ಟು ಮಾಡಿಸುವ ಚಿತ್ರ ಪ್ರಕಟಿಸುವುದು, ತಂಬಾಕು ಸೇವನೆಯ ಪರಿಣಾಮಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸುವುದು ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಿದೆ.

  ಈ ಒಪ್ಪಂದ ಜಾರಿಯ ಕುರಿತು ಪ್ರತಿ ವರ್ಷ ಪ್ರತಿಯೊಂದು ದೇಶದಿಂದಲೂ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯವಾದಾಗ ಸಲಹೆ-ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಈ ಒಪ್ಪಂದ ಒಳಗೊಂಡಿದೆ. ಹೀಗಾಗಿಯೇ ಭಾರತ ಕೂಡ ಬಜೆಟ್ ನಲ್ಲಿ ಪ್ರತಿ ವರ್ಷ ಸಿಗರೇಟಿನ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಾ ಬಂದಿರುವುದು. ಇದರ ಆಧಾರದ ಮೇಲೆಯೇ ಸುಪ್ರೀಂ ಕೋರ್ಟ್  ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ನಿಷೇಧಿಸಿರುವುದು.
ವಿಶ್ವಸಂಸ್ಥೆಯ ಈ ತಂಬಾಕು ನಿಯಂತ್ರಣ ಒಪ್ಪಂದ ಜಾರಿಯಿಂದ ತಂಬಾಕು ಬೆಳೆಗಾರರಿಗೆ ಮಾತ್ರ ಆರ್ಥಿಕ ನಷ್ಟವಾಗಬಹುದು, ಆದರೆ ಬೇರೆ ಯಾವ ರೀತಿಯಲ್ಲೂ ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಬ್ಯಾಂಕ್ 'ಗ್ರೀನ್ ಸಿಗ್ನಲ್' ನೀಡಿದೆ.  ಹೀಗಾಗಿ ಯಾವುದೇ ಅಡ್ಡಿ-ಆತಂಕಗಳಿಲ್ಲದೆ 2020ಕ್ಕೆ ತಂಬಾಕು ಉತ್ಪಾದನೆಯನ್ನು ನಿಯಂತ್ರಿಸುವ ಗುರಿಹಾಕಿಕೊಂಡು ಈ ಒಪ್ಪಂದವನ್ನು ಭಾರತ ಸೇರಿದಂತೆ ಎಲ್ಲ ದೇಶಗಳೂ ಜಾರಿಗೆ ತರುತ್ತಿವೆ.
ಇದರಿಂದ ಸಿಗರೇಟು ಕಂಪನಿಗಳು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಯಾಗಿವೆ. ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದಿರಲಿ, ಇರುವ ಮಾರಕಟ್ಟೆಯನ್ನು ಉಳಿಸಿಕೊಳ್ಳುವುದೇ ಅವುಗಳಿಗೆ ಕಷ್ಟವಾಗಿದೆ. ಉದಾಹರಣೆಗೆ ಹೇಳುವುದಾದರೆ 2009-2010ನೇ ಸಾಲಿನಲ್ಲಿ ನಮ್ಮ ದೇಶದಲ್ಲಿ ಮಾರಾಟವಾದ ಸಿಗರೇಟಿನ ಸಂಖ್ಯೆಗೆ ಹೋಲಿಸಿದಲ್ಲಿ 2010-2011ನೇ ಸಾಲಿನಲ್ಲಿ ಶೇ. 0.33ರಷ್ಟು ಕಡಿಮೆ (1,11,487 ದಶಲಕ್ಷ ಸಿಗರೇಟುಗಳು) ಸಿಗರೇಟು ಮಾರಾಟವಾಗಿದೆ. ಹೀಗಾಗಿ ಗುಟ್ಕಾಗಳ ವಿರುದ್ಧ ಲಾಬಿ ನಡೆಸುವ ಅವುಗಳ ಹುಮ್ಮಸ್ಸು ಕೂಡ ಬತ್ತಿದೆ.
ಗುಟ್ಕಾ ನಿಷೇಧದ ನಂತರ...
ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳ ಕಾನೂನು ಹೋರಾಟದ ಫಲವಾಗಿ ಗುಟ್ಕಾ ಈಗ 26ರಾಜ್ಯಗಳಿಲ್ಲಿ, ಏಳು ಕೇಂದ್ರಾಡಳಿತ ಪ್ರದೇಶದಲ್ಲಿ ನಿಷೇಧಗೊಂಡಿದೆ. ಇದರ ಲಾಭ ಸಹಜವಾಗಿಯೇ ಸಿಗರೇಟು ಕಂಪನಿಗಳಿಗಾಗಿದೆ. ಕಳೆದ ಮಾರ್ಚ್ನಲ್ಲಿ ಸಂಸತ್ತಿಗೆ ಲಿಖಿತ ಹೇಳಿಕೆ ನೀಡಿರುವ ವಾಣಿಜ್ಯ ಖಾತೆಯ ರಾಜ್ಯ ಸಚಿವರಾದ ಪುರಂದರೇಶ್ವರಿಯವರು 2011-2012ರಲ್ಲಿ ಸಿಗರೇಟು ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡಾ 4.19ರಷ್ಟು (1,16,166 ದಶಲಕ್ಷ ಸಿಗರೇಟುಗಳು) ಹೆಚ್ಚಾಗಿದೆ ಎಂದಿದ್ದಾರೆ.
ಮಾರುಕಟ್ಟೆ ಅಧ್ಯಯನ ಮತ್ತು ಹೂಡಿಕೆದಾರರ ಸಲಹಾ ಸಂಸ್ಥೆ 'ಡಲ್ ವೈಸ್' (Edelweiss) ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಗುಟ್ಕಾ ನಿಷೇಧದ ನಂತರ ಶೇಕಡಾ 38ರಷ್ಟು ಗುಟ್ಕಾ ಚಟ ಹೊಂದಿದವರು ಸಿಗರೇಟಿಗೆ ವಲಸೆ ಹೋಗಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಬೇರೆ ಚಟಗಳನ್ನು ಅಂಟಿಸಿಕೊಂಡಿದ್ದರೆ, ಕೆಲವರು ಮಾತ್ರ ತಂಬಾಕು ಸೇವನೆಯನ್ನೇ ಬಿಟ್ಟಿದ್ದಾರೆ ಎಂದು ಕಳೆದ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಈ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
35ಸಾವಿರ ಕೋಟಿಗಳ ಸಿಗರೇಟು ಉದ್ಯಮ ಈ ಬೆಳವಣಿಗೆಯಿಂದ ಖುಷಿಯಾದಂತೆ ಕಾಣುತ್ತಿಲ್ಲ. ಗುಟ್ಕಾ ನಿಷೇಧದಿಂದ ಸಹಜವಾಗಿಯೇ ಲಾಭವಾಗುತ್ತಿದ್ದರೂ, ತಂಬಾಕು ನಿಯಂತ್ರಣದ ಕ್ರಮದಿಂದ ಹೈರಾಣವಾಗಿರುವ ಈ ಉದ್ಯಮಕ್ಕೆ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಆರು ತಿಂಗಳಿನಲ್ಲಿ ಸಿಗರೇಟಿನ ಬೆಲೆಯನ್ನು ತೆರಿಗೆ ಹೆಚ್ಚಳದ ಕಾರಣಕ್ಕಾಗಿ ಶೇಕಡಾ 30ರಷ್ಟು ಹೆಚ್ಚಿಸಬೇಕಾಗಿ ಬಂದಿದೆ. ಇದು ಮಾರಾಟದ ಮೇಲೆ ನೇವಾಗಿಯೇ ಪರಿಣಾಮ ಬೀರಿದ್ದು, ಕಳೆದ ಆರು ತಿಂಗಳಿನಲ್ಲಿ ಸಿಗರೇಟು ವಾಲ್ಯುಮ್ ಶೇಕಡಾ 3 ರಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಮಾರಾಟವಾಗುವ ಐದು ಸಿಗರೇಟುಗಳಲ್ಲಿ ನಾಲ್ಕು ಸಿಗರೇಟುಗಳು ಐಟಿಸಿ ಕಂಪನಿಗೆ ಸೇರಿದ್ದಾಗಿರುತ್ತವೆ. (ಐಟಿಸಿ ಎಂದರೆ ಇಂಡಿಯನ್ ಟೊಬ್ಯಾಕೋ ಕಂಪನಿ. ಭಾರತದ ಹೆಸರನ್ನು ಹೊಂದಿರುವ ಈ ಕಂಪನಿ ಈಗ ಭಾರತೀಯ ಕಂಪನಿಯಾಗಿ ಉಳಿದಿಲ್ಲ. ಇದರ ಬಂಡವಾಳದಲ್ಲಿ ಶೇ. 30.54 ಪಾಲನ್ನು ಬ್ರಿಟಿಷ್ ಅಮೆರಿಕನ್ ಟೊಬ್ಯಾಕೋ ಕಂಪನಿ ಹೊಂದಿದೆ. ಇನ್ನು ವಿದೇಶಿ ಸಂಸ್ಥಿಕ ಹೂಡಿಕೆಯ ಪಾಲು ಶೇ. 19.68) ಈ ಕಂಪನಿ ಸಣ್ಣ ಸಿಗರೇಟುಗಳನ್ನು ಮಾರುಕಟ್ಟೆಗೆ ಬಿಟ್ಟು ಲಾಭ ಪಡೆಯುವ ತಂತ್ರ ಹೂಡಿದ್ದರೂ ಹೇಳಿಕೊಳ್ಳುವ ಪ್ರಯೋಜನವಾಗುತ್ತಿಲ್ಲ. ಇದರ ಸೇಲ್ಸ್ ಶೇಕಡ 10ರಷ್ಟು ಹೆಚ್ಚಾಗಿದ್ದರೂ, ವಾಲ್ಯುಮ್ ಕಡಿಮೆಯಾಗುತ್ತಲೇ ಇದೆ. ಧೂಮಪಾನದ ಅಪಾಯದ ಬಗ್ಗೆ ಜಾಗೃತಗೊಂಡವರು ಇದರಿಂದ ದೂರವಾಗುತ್ತಿದ್ದಾರೆ ಅಥವಾ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಉರುಳು ಕೂಡ ಬಿಗಿಗೊಳ್ಳುತ್ತಿದ್ದು, ಈ ಉದ್ಯಮದ ಭವಿಷ್ಯದ ಬಗ್ಗೆಯೇ ಆತಂಕಗಳಿವೆ.
ಈಗ ಹೇಳಿ ಇಂತಹ ಪರಿಸ್ಥಿತಿಯಲ್ಲಿ ಅಡಿಕೆಯನ್ನು ನಿಷೇಧಿಸುವಂತೆ ಈ ಸಿಗರೇಟು ಕಂಪನಿಗಳು ಕೋಟಿ ಕೋಟಿ ಸುರಿದು ಲಾಬಿ ನಡೆಸಿಯಾವೆಯೇ?
ಬದಲಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ, ರಾಜಕಾರಣಿಗಳು, ಅಡಿಕೆ ಬೆಳೆಗಾರರ ಸಂಟನೆಗಳ ಪ್ರತಿನಿಧಿಗಳು 'ಅಡಿಕೆ ಸಂಕಷ್ಟಕ್ಕೆ ಸಿಗರೇಟು ಲಾಬಿ' ಕಾರಣ ಎಂದು ದೂಷಿಸಿಕೊಂಡು ಓಡಾಡುತ್ತಿದ್ದಾರೆ. ಇವರ ಮಾತನ್ನು ನಂಬ ಬೇಕಾದರೆ ಈ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿ:
  • 1993ರಲ್ಲಿ ಅಡಿಕೆಯನ್ನು ಆರೋಗ್ಯಕ್ಕೆ ಹಾನಿಯುಂಟುಮಾಡುವ ವಸ್ತುಗಳ ಪಟ್ಟಿಗೆ ಸೇರಿಸಿದಾಗ, ಇದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಡದೇ ಇರಲು ಸಿಗರೇಟು ಕಂಪನಿಗಳು ಯಾರಿಗೆ ದುಡ್ಡು ಕೊಟ್ಟಿದ್ದವು?
  • 2007ರಲ್ಲಿ ರಾಜ್ಯ ಹೈಕೋರ್ಟ್ 'ಅಡಿಕೆ ತಿನ್ನುವುದು ಹಾನಿಕರವಲ್ಲ' ಎಂದು ತೀರ್ಪು ನೀಡಿದಾಗ, ಅದನ್ನು ಕೇಂದ್ರದ ಗಮನಕ್ಕೆ ತಂದು ಅಡಿಕೆಯ ಮಾನ ಕಾಪಡಾದಂತೆ ಸಿಗರೇಟು ಕಂಪನಿಗಳು ಯಾರಿಗೆಲ್ಲಾ, ಎಷ್ಟು ಕೋಟಿ ನೀಡಿದ್ದವು?
  • ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದ ಸಂದರ್ಭದಲ್ಲಿ ಅಡಿಕೆಯ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ  ಹೇಳಿಕೆಗಳು ಸಲ್ಲಿಸಲ್ಪಟ್ಟಾಗ, ಅಡಿಕೆಯ ಔಷಧೀಯ ಗುಣಗಳನ್ನೂ ಪರಿಗಣಿಸಿ ಎಂದು ವಾದ ಮಂಡಿಸದಂತೆ ಯಾವ ಸಿಗರೇಟು ಕಂಪನಿ ಯಾರ್ಯಾರ ಕುತ್ತಿಗೆಗಳನ್ನು ಒತ್ತಿ ಹಿಡಿದಿದ್ದವು?
  • 2003ರಲ್ಲಿ ಐಎಆರ್ ಸಿಯು ಅಡಿಕೆ ಕುರಿತು ಮೊನೊಗ್ರಾಫ್ ಬಿಡುಗಡೆ ಮಾಡಿದಾಗ, ಅದರಲ್ಲಿ ಏನಿದೆ, ಇದರ ಪರಿಣಾಮವೇನಾಗಬಹುದೆಂದು ಅಧ್ಯಯನ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗದಂತೆ ನಮ್ಮೆಲ್ಲಾ ಜನಪ್ರತಿನಿಧಿಗಳಿಗೆ ಸಿಗರೇಟು ಕಂಪನಿಗಳು ಒಟ್ಟು ಎಷ್ಟು ಕೋಟಿ ಕೊಟ್ಟಿವೆ?
  • ಶಿವಮೊಗ್ಗದ ಅಡಿಕೆ ವರ್ತಕರ ಸಂಘವು ಗುಟ್ಕಾ ದೊರೆ ಮಾಣಿಕ್ ಚಂದ್ರನ್ನು ಕರೆಸಿ ಸನ್ಮಾನ ಮಾಡಿದಾಗ, ಮ್ಯಾಗ್ಸಸೆ ಪುರಸ್ಕೃತ ರಂಗಕರ್ಮಿ, ಅಡಿಕೆ ಬೆಳೆಗಾರರಾಗಿದ್ದ ದಿವಂಗತ ಕೆ.ವಿ.ಸುಬ್ಬಣ್ಣ ಗುಟ್ಕಾದೊಂದಿಗೆ ಅಡಿಕೆಯನ್ನು ಸೇರಿಸಿ ಇದರ ಮಾನ ಕಳೆಯಬೇಡಿ ಎಂದು ಬೇಡಿಕೊಂಡರೂ ಕೇಳಿಸಿಕೊಳ್ಳದಿರುವಂತೆ ಕಿವಿಗೆ ಹತ್ತಿ ಇಟ್ಟುಕೊಳ್ಳಲು ಯಾವ ಸಿಗರೇಟು ಕಂಪನಿ ಹತ್ತಿ ಒದಗಿಸಿತ್ತು?
ತಮ್ಮ ಬೇಜವಾಬ್ದಾರಿತನವನ್ನು ಮುಚ್ಚಿಕೊಳ್ಳಲು ರಾಜಕಾರಣಿಗಳು ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳು ಸಿಗರೇಟು ಲಾಬಿ ಇದೆಯೆಂದು ಹುಯಿಲೆಬ್ಬಿಸುತ್ತಿದ್ದಾರೆ. ಇವರ ಮಾತನ್ನು ನಾವೂ ಕುರುಡಾಗಿ ನಂಬಬೇಕೆ? ಪ್ರಜ್ಞಾವಂತ ಅಡಿಕೆ ಬೆಳೆಗಾರರೇ ಈ ಬಗ್ಗೆ ತೀರ್ಮಾನಿಸಬೇಕು.