Saturday, July 1, 2017

ಬೇಕಿದೆ ನಮಗೆ ಹಸಿರು ರಾಜಕಾರಣ

'ಈ ಭೂಮಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದು, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳನ್ನಲ್ಲ'

-    ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 

ಗಾಂಧೀಜಿಯ ಈ ಮಾತು ಈಗ ಪ್ರತಿದಿನ ನಮ್ಮೆಲ್ಲರ ಅರಿವಿಗೆ ಬರತೊಡಗಿದೆ. ಹವಮಾನ ವೈಪರಿತ್ಯ ಭೂಮಿ ಮೇಲಿನ ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿದೆ. ಮುಂಗಾರು ಆಗಮನದಲ್ಲಿ ಏರು-ಪೇರು, ಉಷ್ಣಾಂಶದಲ್ಲಿ ಏರಿಕೆ ಹೀಗೆ, ಇದ್ದಕ್ಕಿದ್ದಹಾಗೆ ಭಾರಿ ಮಳೆ ಹೀಗೆ... ಇಷ್ಟಾದರೂ ನಮ್ಮ ಅರಿವಿನ ಕಣ್ಣು ಪೂರ್ಣವಾಗಿ ತೆರೆಯುತ್ತಿಲ್ಲ.
 ಇಂದು ಭೂತಾಪಮಾನ ಏರಿಕೆ ಜಗತ್ತಿನ ಮುಂದಿರುವ ಬಹುದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ 'ದೊಡ್ಡಣ್ಣ' ಹಿಂದೆ ಸರಿದಿದ್ದಾಗಿದೆ. ಮುಂದೇನು?, ಅಮೆರಿಕದ ಈ ನಿರ್ಧಾರಕ್ಕೆ ಕಾರಣಗಳೇನು? ಎಂದು ಹುಡುಕುತ್ತಾ ಹೊರಟರೆ, ನಾವು ಗಾಂಧೀಜಿ ಹೇಳಿದಂತೆ ದುರಾಸೆಯ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ನಾಳೆಯ ಚಿಂತೆಯಿಲ್ಲದ ನಿರ್ಧಾರಗಳನ್ನು ಅಮೆರಿಕದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ ತೆಗೆದುಕೊಳ್ಳಲಾಗುತ್ತಿದೆ.
ಯಾಕೆ ಹೀಗೆ, ಹೆಜ್ಜೆಯ ದಿಕ್ಕು ತಪ್ಪುತ್ತಿರುವ ಬಗ್ಗೆ ನಮಗೆ ಎಚ್ಚರವಿಲ್ಲವೇ ಕೇಳಿದರೆ, ಇಲ್ಲ ಎಂದೇನೂ ಹೇಳಲಾಗದು. ಎಚ್ಚೆತ್ತ ಜನಸಮುದಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಆದರೆ ಸಾಮಾನ್ಯ ಜನರ ಈ ಅರಿವು, ತಿಳುವಳಿಕೆ ಯಾವ ಮಹತ್ವದ ಬದಲಾವಣೆಗೂ ಕಾರಣವಾಗುತ್ತಿಲ್ಲ ಎಂಬುದು ಜಾಗತಿಕ ವಿದ್ಯಮಾನ.
 ಇದಕ್ಕೆ ಮುಖ್ಯ ಕಾರಣ ಈ  ಅರಿವಿನ ಬೆಳಕು ರಾಜಕೀಯ ಬದಲಾವಣೆಗಳಿಗೆ 'ಶಕ್ತಿ'ಯಾಗಿ ರೂಪಗೊಳ್ಳದಿರುವುದು. ನೇರವಾಗಿ ಹೇಳಬೇಕೆಂದರೆ, ಪರಿಸರದ ವಿಷಯಗಳಿಗೆ ರಾಜಕೀಯ ಮಹತ್ವ ದೊರೆತು, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಪರಿಸರದ ದೃಷ್ಟಿಯಿಂದಲೂ ನೋಡಿ, ತೀರ್ಮಾನಿಸುವ ವಿವೇಚನೆ ಎಲ್ಲಿಯೂ ಇಲ್ಲವಾಗಿರುವುದು. ಜಾಗತಿಕ ರಾಜಕಾರಣದಲ್ಲಿಯಂತೂ 'ಹಸಿರು ರಾಜಕಾರಣ' ನಿಶ್ಯಕ್ತಗೊಂಡಿದೆ.
ಹವಮಾನ ವೈಪರಿತ್ಯ ಮತ್ತು ಸ್ಥಳೀಯ ಪರಿಸರ ಸಮಸ್ಯೆಗಳು ಬೆಳೆಯುತ್ತಿರುವ ಪರಿ ಜಗತ್ತಿನಾದ್ಯಂತ 'ಹಸಿರು ರಾಜಕಾರಣ' ಮುನ್ನೆಲೆಗೆ ಬರಬೇಕಾದ ಅಗತ್ಯತೆಯನ್ನು ಎತ್ತಿತೋರಿಸುತ್ತಿದೆ. ಆದರೆ ಪರಿಸರದ ವಿಷಯಗಳ ಕುರಿತು ಅಮೆರಿಕದ ಅಧ್ಯಕ್ಷ ಟ್ರಂಪ್ ರಂತೆ ಮೂರ್ಖತನದಿಂದ ಮಾತನಾಡುವ ರಾಜಕಾರಣಿಗಳು ನಮಗೆ ಎಲ್ಲೆಲ್ಲಿಯೂ ಸಿಗುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿಯೇ, ರಾಜ್ಯದ ಅಮೂಲ್ಯ ಸಂಪತ್ತಾದ ಪಶ್ಚಿಮ ಘಟ್ಟ ಉಳಿಸುವ (ಕಸ್ತೂರಿ ರಂಗನ್ ವರದಿ ಜಾರಿ ಇತ್ಯಾದಿ) ವಿಷಯವಿರಲಿ, ಬೆಳ್ಳಂದೂರು ಕೆರೆಯ ನೊರೆಯ ವಿಷಯವಿರಲಿ, ಅದೂ ಬೇಡ ಬೆಂಗಳೂರಿನ ಕಸದ ವಿಷಯವಾದರೂ ಆದೀತು ನಮ್ಮ ರಾಜಕಾರಣಿಗಳು ಆಗಾಗ ನೀಡುವ ಹೇಳಿಕೆ ನೋಡಿದರೆ ಸಾಕು, ಅವರಿಗಿರುವ ಪರಿಸರ ಕಾಳಜಿ ಗೊತ್ತಾಗುತ್ತದೆ. ಬೇರೇನೂ ಬೇಡ, ಕೇಂದ್ರ ಪರಿಸರ ಖಾತೆ ಸಚಿವರ ಹೆಸರೇ ರಾಜ್ಯದ ಅರಣ್ಯ ಸಚಿವ ರಮಾನಾಥ ರೈಗೆ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ ಎಂಬುದು ಇತ್ತೀಚೆಗೆ ಅವರು ನೀಡಿದ ಹೇಳಿಕೆಗಳು ಎತ್ತಿತೋರಿಸುತ್ತಿವೆ!
  ಇದಕ್ಕೆ ಬರೀ ರಾಜಕಾರಣಿಗಳನ್ನು ದೂಷಿಸಿದರೆ ಪ್ರಯೋಜನವಿಲ್ಲ. ಪರಿಸರದ ವಿಷಯಗಳ ಕುರಿತು ಅವರಲ್ಲಿ, ಸ್ಪಷ್ಟತೆ, ಕನಿಷ್ಠ ಜ್ಞಾನ ಇರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವುದರಲ್ಲಿ ನಾವೆಲ್ಲರೂ ಸೋತಿದ್ದೇವೆ. ಉದಾಹರಣೆಗೆ, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಘಟ್ಟದ ತಪ್ಪಲಿನಲ್ಲಿ ಪ್ರತಿಭಟನೆಗಳು ನಡೆದವು. ಸರಕಾರವೂ ಈ ವರದಿ ಜಾರಿ ವಿರೋಧಿಸುವ ಒಂದು ಸಾಲಿನ  ತೀರ್ಮಾನ ತೆಗೆದುಕೊಂಡಿತು. ಇಲ್ಲಿ ವಿರೋಧಕ್ಕೆ ಕಾರಣವಾಗುವ ವಿಷಯಗಳು, ಅದಕ್ಕಿರುವ ಪರಿಹಾರ, ಪರ್ಯಾಗಳ ಕುರಿತು ರಾಜಕೀಯ ಚರ್ಚೆಯೇ ನಡೆಯಲಿಲ್ಲ. ವಿಧಾನಸಭೆಯಲ್ಲಿ ನಡೆದಿದ್ದೂ ಏಕಮುಖ ಅಭಿಪ್ರಾಯ ಮಂಡನೆ. ಪ್ರಪಂಚದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವಿನ ಬಗೆಗೆ ನಮಗಿರುವ ನಿರ್ಲಕ್ಷ್ಯ, ಅಮೆರಿಕದ ಅಧ್ಯಕ್ಷರ ಪರಿಸರ ಜ್ಞಾನದಂತೆಯೇ ಇದೆ!
ಇದಕ್ಕೆ ಪರಿಹಾರವೆಂದರೆ, ಪರಿಸರ ಕುರಿತ ಅರಿವು ರಾಜಕೀಯ ಶಕ್ತಿಯಾಗಿ ಬೆಳೆಯಬೇಕಷ್ಟೇ. ಇದೇನು ಹೊಸ ವಿಷಯವೇನೂ ಅಲ್ಲ. ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರು ಹಿಂದೆ ಈ ಪ್ರಯತ್ನಪಟ್ಟಿದ್ದರು. ಕೈಗಾ ಅಣುಸ್ಥಾವರದ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಗೂ ಸ್ಪರ್ಧಸಿದ್ದರು. ಆದರೆ ಅವರ ಈ ರಾಜಕೀಯವನ್ನು ಮತದಾರರು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. (ಈಗ ಅಲ್ಲಿ ಮತ್ತೆ ಹೋರಾಟ ಆರಂಭವಾಗಿದೆ, ಆದರೆ ನಮ್ಮ ರಾಜಕಾರಣಿಗಳು ಅದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ದೂರ ಉಳಿದಿದ್ದಾರೆ.)
ಜಾಗತಿಕ ಮಟ್ಟದಲ್ಲಿ 1980ರಿಂದಲೇ ಈ ಪ್ರಯತ್ನಗಳು ಆರಂಭವಾಗಿವೆ. ಜರ್ಮನಿ, ಬ್ರಿಟನ್, ಇಟಲಿ, ಫ್ರಾನ್ಸ್ ಸೇರಿದಂತೆ 13ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆದ ಪರಿಸರ ಚಳವಳಿಗಳ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಗ್ರೀನ್ ಪಾರ್ಟಿಗಳು ಒಂದಿಷ್ಟು ಯಶಸ್ಸು ಸಾಧಿಸಿ ಜಗತ್ತಿನ ಗಮನ ಸೆಳೆದಿದ್ದೂ ಇದೆ. ಸುಮಾರು 72ದೇಶದಲ್ಲಿ ಇಂದು ಹಸಿರು ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. 1986ರಲ್ಲಿ ಆಸ್ಟ್ರೀಯಾದಲ್ಲಿ 21, 1983ರಲ್ಲಿ ಜರ್ಮನಿಯಲ್ಲಿ 51, 1988ರಲ್ಲಿ ಸ್ವೀಡನ್ನಲ್ಲಿ 18 ಸಂಸದರು ಹಸಿರು ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಜರ್ಮನಿ ಮತ್ತಿತರ ದೇಶಗಳಲ್ಲಿ ಹಸಿರು ಪಕ್ಷಗಳು ಪಡೆಯುತ್ತಿರುವ ಮತ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇದೆ. ಆದರೆ ಸರಕಾರ ರಚಿಸುವಲ್ಲಿಯಾಗಲೀ, ನಿರ್ಧಾರತೆಗೆದುಕೊಳ್ಳುವಾಗ ಪ್ರಮುಖ ಪಾತ್ರವಹಿಸುವಲ್ಲಿಯಾಗಲೀ ಈ ಪಕ್ಷಗಳು ವಿಫಲವಾಗಿವೆ. ಜನ ಜಾಗೃತಿ ಹೆಚ್ಚಾದಾಗ ಹಸಿರು ರಾಜಕಾರಣಕ್ಕೆ ಬೆಲೆ ಬಂದೇ ಬರುತ್ತದೆ ಎಂದು ಆ ಪಕ್ಷಗಳ ಮುಖಂಡರು ಈಗಲೂ ನಂಬಿದ್ದಾರೆ.
ನಮ್ಮ ದೇಶದಲ್ಲಿ ಪರಿಸರ ಚಳವಳಿಗಳಿಗೇನೂ ಕೊರತೆಯಿಲ್ಲ. ಈ ಹೋರಾಟಗಳು ರಾಜಕೀಯ ಶಕ್ತಿಯಾಗಿ ರೂಪಗೊಳ್ಳದಿರುವುದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದೆಂದರೆ ಈ ವಿಷಯವನ್ನು ಹೇಗೆ ನಿರ್ವಹಿಸಿ, ಹೋರಾಟದ ಶಕ್ತಿಯನ್ನು ಕುಂದಿಸಬಹುದೆಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ! ಕಸ್ತೂರಿ ರಂಗನ್ ವರದಿಯ ವಿಷಯವನ್ನೇ ತೆಗೆದುಕೊಳ್ಳಿ. ಅದರ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಹಸಿರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿಯಾಗಿದೆ. ಆದರೂ ವರದಿ ಜಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಏಕದನಿಯಲ್ಲಿ ಘೋಷಿಸುತ್ತಾ ಓಡಾಡಿಕೊಂಡಿದ್ದಾರೆ.
 1999ರಲ್ಲಿ ಭಾರತ ಮೊತ್ತ ಮೊದಲ ಹಸಿರು ಪಕ್ಷ 'ದಿ ಇಂಡಿಯನ್ ನ್ಯಾಷನಲ್ ಗ್ರೀನ್ ಪಾರ್ಟಿ' ಹೆಸರು ನೊಂದಾಯಿಸಿಕೊಂಡು ಚುನಾವಣಾ ಕಣಕ್ಕಿಳಿದಿತ್ತು. ಆ ನಂತರ 2011ರಲ್ಲಿ ರಾಜಸ್ಥಾನದಿಂದ 'ದಿ ಇಂಡಿಯನ್ ಪೀಪಲ್ಸ್ ಗ್ರೀನ್ ಪಾರ್ಟಿ' ರಾಜಕೀಯ ಪ್ರವೇಶಿಸಿತ್ತು. ಪ.ಬಂಗಾಳದ 'ಗ್ರೀನ್ ಪಾರ್ಟಿ ಆಫ್ ಇಂಡಿಯಾ' ಎಂಬ ಪಕ್ಷ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತಾದರೂ, ರಾಜಕೀಯದಲ್ಲಿ ತೆರೆಗೆ ಬಂದಹಾಗೇ ಮರೆಯಾಗಿತ್ತು.
2012ರ ನಂತರ ವಿವಿಧ ಪರಿಸರ ಚಳವಳಿಗಳಲ್ಲಿ ಭಾಗವಹಿಸಿದ್ದವರು 'ಆಮ್ ಆದ್ಮಿ ಪಕ್ಷ' (ಎಎಪಿ)ಯೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದರು. ನರ್ಮದಾ ಬಚಾವೋ ಆಂದೋಲನದ ಮೇಧಾಪಾಟ್ಕರ್ ಇವರಲ್ಲಿ ಪ್ರಮುಖರು. ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಆದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಯಿತು. ಎಎಪಿ ಎಂದೂ ತಾನು 'ಗ್ರೀನ್ ಪಾರ್ಟಿ' ಎಂದು ಘೋಷಿಸಿಕೊಂಡಿರಲಿಲ್ಲ. ಆದರೆ ಪರಿಸರದ ವಿಷಯಗಳ ಕುರಿತ ಅದರ ನಿಲುವು, ಜನತೆಯಲ್ಲಿ ಹೊಸ ಭರವಸೆ ಮೂಡಿಸಿತ್ತಷ್ಟೇ.
ಪಾಶ್ಚ್ಯಾತ್ಯ ದೇಶಗಳ 'ಗ್ರೀನ್ ಪಾರ್ಟಿ'ಗಳು ಮುಖ್ಯವಾಗಿ, ಸಾಮಾಜಿಕ ನ್ಯಾಯ, ತಳಮಟ್ಟದಲ್ಲಿ ಪ್ರಜಾತಂತ್ರ ಜಾರಿ, ಅಹಿಂಸೆ, ವೈವಿಧ್ಯತೆಯನ್ನು ಗೌರವಿಸುವುದು, ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಜ್ಞಾನದಂತ ವಿಷಯಗಳನ್ನು ಮುಂದಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿವೆ. ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಸಾಮಾಜಿಕ ನ್ಯಾಯ, ಪ್ರಜಾತಂತ್ರ, ಸಮಾನತೆಗಳಲ್ಲಾ ನಮ್ಮ ಸಂವಿಧಾನದಿಂದಾಗಿ ಮೂಲ ಅಜೆಂಡಾಗಳೇ ಆಗಿವೆ. ಕೊರತೆಯೇನೆಂದರೆ ಪರಿಸರದ ಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಸ್ಪಷ್ಟತೆ ಇಲ್ಲದಿರುವುದು. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಪ್ರಕಟಿಸಿದ ಪ್ರಣಾಳಿಕೆಯ ಅಧ್ಯಯನ ನಡೆಸಿದ ತಜ್ಞರು ಕೂಡ ಇದೇ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ನಮ್ಮಲ್ಲಿರುವ ಪರಿಸರದ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಒಂದೋ ಹಸಿರು ರಾಜಕಾರಣ ಆರಂಭವಾಗಬೇಕು. ಇಲ್ಲವೇ ಈಗ ರಾಜಕಾರಣಮಾಡುತ್ತಿರುವ ಪಕ್ಷಗಳು ಹಸಿರನ್ನೇ ಉಸಿರಾಗಿಸಿಕೊಳ್ಳಬೇಕು. ಇದನ್ನು ಬಿಟ್ಟು ಬೇರೆ ದಾರಿಯಿಲ್ಲ.
ಭಾರತದಂತಹ ಭೌಗೋಳಿಕ ವೈವಿಧ್ಯತೆ ಹೊಂದಿರುವ ದೇಶದಲ್ಲಿ ಹಸಿರು ನೀತಿಗಳು ಕೂಡ ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಹೀಗಾಗಿ ನೀತಿ ರೂಪಿಸುವುದೇ ದೊಡ್ಡ ಸವಾಲು. ಅದರ ಜತೆಗೆ ಅಭಿವೃದ್ಧಿಯ ರಥ ಬೇರೆ ಸಾಗಬೇಕಿದೆ. ಜನಸಂಖ್ಯಾ ಒತ್ತಡ ಪರಿಸರದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಕಡಿಮೆ ಮಾಡಲು ಹೊಸ ಹೊಸ ಮಾರ್ಗೋಪಾಯಗಳನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಗಳಿವೆ. ಇಲ್ಲಿಯ ಪ್ರಾಕೃತಿಕ ಸಂಪತ್ತು, ಜೀವವೈವಿಧ್ಯತೆಯನ್ನು ಜೋಪಾನ ಮಾಡುವುದು ಕೂಡ ದೊಡ್ಡ ಸವಾಲು ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಹೀಗೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲಾ ಒಳಗೊಂಡು, ಜೀರ್ಣಿಸಿಕೊಳ್ಳುವ ಶಕ್ತಿಯನ್ನು ನಮ್ಮ ರಾಜಕೀಯ ಪಕ್ಷಗಳು ಪಡೆದುಕೊಳ್ಳಬೇಕಿದೆ. 
ಪರಿಸರ ರಾಜಕಾರಣ ಕೇವಲ ಪಶ್ಚಿಮಘಟ್ಟದ ಪ್ರದೇಶದಲ್ಲಿಯೋ, ಕರಾವಳಿ ತೀರದಲ್ಲಿಯೋ ಅಥವಾ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ನಗರಗಳಲ್ಲಿಯೋ ನಡೆದರೆ ಸಾಲದು. ಅದು, ಪ್ರತಿ ಹಳ್ಳಿಯಿಂದ ದಿಲ್ಲಿಯವರೆಗೆ ಮಾತ್ರವಲ್ಲ, ಈಗ ಪ್ಯಾರೀಸ್ನವರೆಗೂ ವಿಸ್ತಾರಗೊಳ್ಳಬೇಕಿದೆ. ಈಗಿನ ಜಾಗತಿಕ ರಾಜಕಾರಣಕ್ಕೆ ಪರ್ಯಾಯವಾಗಿ ನಿಂತುಕೊಳ್ಳಬೇಕಿದೆ.
                                                                             (ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

No comments:

Post a Comment