Thursday, December 19, 2013

ಅಡಿಕೆಯೂ ಹಾನಿಕಾರಕವೇ?

ಈ ದಾಖಲೆ ಸಾಕಲ್ಲವೇ...?
ಕಾಂಗ್ರೆಸ್ ನಾಯಕರು ಏನೇ ಹೇಳಲಿ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಂತೂ ಅಡಿಕೆಯು ಆರೋಗ್ಯಕ್ಕೆ ಹಾನಿಕರ' ಎಂದು ಪರಿಗಣಿಸಿತ್ತು ಮತ್ತು ಅದರ ಬಳಕೆ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತ್ತು. ಇದಕ್ಕೆ ಈಗಾಗಲೇ ಬಹಿರಂಗಗೊಂಡಿರುವ ಇಲಾಖೆಯ ಅಧಿಕಾರಿಗಳ ಪತ್ರವ್ಯವಹಾರಗಳೇ ಸಾಕ್ಷಿ.
ಈ ರೀತಿಯ ಕ್ರಮ ಆರೋಗ್ಯ ಇಲಾಖೆಗೆ ಅನಿವಾರ್ಯವಾಗಿತ್ತು ಕೂಡ. ಏಕೆಂದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ಗುಟ್ಕಾದ ಜತೆಗೆ ಅಡಿಕೆಯೂ 'ಆರೋಗ್ಯಕ್ಕೆ ಹಾನಿಕರ' ಎಂದು ವ್ಯವಸ್ಥಿತವಾಗಿ ಬಿಂಬಿಸಿಕೊಂಡೇ ಬಂದಿದ್ದರು. ಅಡಿಕೆಯೊಂದನ್ನೇ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಅದರಲ್ಲಿ ಕ್ಯಾನ್ಸರ್ ಗೆ ಕಾರಣವಾಗು ರಾಸಾಯನಿಕ(ಆಲ್ಕಲಾಯಿಡ್- ಶೇಕಡ 0.15ರಷ್ಟಿದೆ) ಇರುವುದು ಕಂಡು ಬರುತ್ತದೆ. ಇದನ್ನೇ ಮುಂದಿಟ್ಟುಕೊಂಡು ಅಡಿಕೆಯನ್ನು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 'ಅಡಿಕೆ ತಿನ್ನುವುದು ಆರೋಗ್ಯಕ್ಕೆ ಹಾನಿಕರ' ಎಂದು ಶಾಸನ ವಿಧಿಸಿದ ಎಚ್ಚರಿಕೆ ಹಾಕುವುದನ್ನು ಕಡ್ಡಾಯಗೊಳಿಸುವುದರಲ್ಲಿ ಯಶಸ್ವಿಯಾಗಿದ್ದರು.
ಇದಾದ ಮೇಲೆ ನಿಷೇಧ ಜಾರಿಗೆತರುವತ್ತ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದರು. ಇದರ ಪರಿಣಾಮವೇ ಆರೋಗ್ಯ ಇಲಾಖೆಯ ತೀರ್ಮಾನ. ಇಷ್ಟೆಲ್ಲಾ ನಡೆಯುವಾಗ ಮಲಗಿ ನಿದ್ರಿಸುತ್ತಿದ್ದ ಅಡಿಕೆ ಬೆಳೆಗಾರರು, ಪರವಾದ ಸಂಘಟನೆಗಳು ಮತ್ತು ರಾಜಕಾರಣಿಗಳು ಈಗ ಎಚ್ಚೆತ್ತು ಅಡಿಕೆ ನಿಷೇಧಿಸಬೇಡಿ ಎಂದು ಕೂಗಾಡುತ್ತಿದ್ದಾರೆ.
ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತಿರುವವರ ದೃಷ್ಟಿಯಲ್ಲಿ 'ವಿಲನ್' ಆಗಿರುವ ಅಡಿಕೆ ನಿಜವಾಗಿಯೂ ಹಾನಿಕರವೇ? ಇಲ್ಲ ಎಂದರೆ ತಪ್ಪಾಗುತ್ತದೆ, ಅಡಿಕೆಯೊಂದನ್ನೇ ಜಗಿಯುವುದರಿಂದ ಅಡ್ಡ ಪರಿಣಾಮಗಳಾಗುವುದು ಅಡಿಕೆ ಬೆಳೆಗಾರರಿಗೂ ಗೊತ್ತಿರುವ ಸಂಗತಿಯೇ. ಆದರೆ ಅಡಿಕೆಯೊಂದನ್ನೇ ಬಳಸಿ ಎಂದು ಯಾರೂ ಎಲ್ಲಿಯೂ ಹೇಳಿಲ್ಲ. ಅಡಿಕೆಯಲ್ಲಿನ ಔಷಧಿ ಗುಣಗಳನ್ನು ಪರಿಗಣಿಸಬೇಕು ಮತ್ತು ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ತಿನ್ನುವ 'ತಾಂಬೂಲ' ಪದ್ಧತಿಯನ್ನು ಪರಿಗಣಿಸಬೇಕು ಎಂದು ಹಿಂದಿನಿಂದಲೂ ಹೇಳುತ್ತಿದ್ದಾರೆ. ಕೇಳಿಸಿಕೊಳ್ಳಬೇಕಾದ ಸರಕಾರಕ್ಕೆ, ನ್ಯಾಯಾಲಯಗಳಿಗೆ 'ಕಿವಿ' ಇದ್ದಂತೆ ಕಾಣಿಸುತ್ತಿಲ್ಲ.
ಅಡಿಕೆ ಎಂಬ ಔಷಧಿ
ಋಗ್ವೇದದ ಹತ್ತನೇ ಮಂಡಲದ 145ನೇ ಸೂಕ್ತದ 6 ಋಕೆಗಳಲ್ಲಿನ ಕೆಲ ಶ್ಲೋಕಗಳು 'ಎಲೈ ಅಡಿಕೆ ಎಂಬ ಔಷಧಿಯೇ...' ಎಂದೇ ಆರಂಭಗೊಳ್ಳುತ್ತವೆ. ಇದು ಅಡಿಕೆಗಿರುವ ಔಷಧಿ ಗುಣವನ್ನು ವಿವರಿಸುವ ಮೊತ್ತ ಮೊದಲ ದಾಖಲೆಯಾಗಿದೆ. ಆಯುರ್ವೇದ ಗ್ರಂಥವಾದ ಚರಕ ಸಂಹಿತೆಯಿಂದ ಹಿಡಿದು, 18ನೇ ಶತಮಾನದಲ್ಲಿ ರಚಿಸಲ್ಪಟ್ಟ 'ತಾಂಬೂಲ ಮಂಜರಿ'ಯ ವರೆಗೆ ಅಡಿಕೆಯ ಔಷಧಿ ಗುಣಗಳನ್ನು ದಾಖಲಿಸುವ ನೂರಾರು ಶ್ಲೋಕಗಳು, ಸೂತ್ರಗಳು ಕಾಣಸಿಗುತ್ತವೆ.
ಅಡಿಕೆಯ ಔಷಧೀಯ ಗುಣಗಳ ಬಗ್ಗೆ ನಳಪಾಕದಲ್ಲಿ, ಅಂತೆಯೇ ಆಯುರ್ವೇದ ವೈದ್ಯ ನಿಘಂಟುಗಳಲ್ಲಿಯೇ ಅತೀ ಪುರಾತನವಾದ ಧನ್ವಂತರಿ ನಿಘಂಟಿನಲ್ಲಿ ಉಲ್ಲೇಖವಿದೆ. ಧನ್ವಂತರಿ ನಿಘಂಟಿನಲ್ಲಿಯಂತೂ ನಮ್ಮ ಅಡಿಕೆಯನ್ನು 'ಪೂಗಫಲಂ' ಅಂದು ರೆಯಲಾಗಿದೆ. ರಾಜನಿಘಂಟಿನಲ್ಲಿ ಅಡಿಕೆಯನ್ನು ಚಂದನಾಧಿ ವರ್ಗದಲ್ಲಿ ಸೇರಿಸಲಾಗಿದೆ. ಭಾವ ಮಿಶ್ರನು ತನ್ನ 'ಭಾವ ಪ್ರಕಾಶ' ವೆಂಬ ಗ್ರಂಥದಲ್ಲಿ ಅಡಿಕೆಯನ್ನು ಫಲವರ್ಗದಲ್ಲಿ ಸೇರಿಸಿದ್ದಾನೆ. ಆಯುರ್ವೇದದ ಮತ್ತೊಂದು ಅಮೂಲ್ಯ ಗ್ರಂಥವಾದ 'ಹಾರೀತ ಸಂಹಿತೆ'ಯ ಅಧ್ಯಾಯ 21ರಲ್ಲಿ 'ವಾತವ್ಯಾಧಿ'ಯ ಬಗ್ಗೆ ಹೇಳುತ್ತಾ ಅಡಿಕೆಯನ್ನು ಸೇವಿಸುವ ಮೂಲಕ ಹೇಗೆ ವಾತವ್ಯಾಧಿಗಳನ್ನು ನಿವಾರಿಸಿಕೊಳ್ಳಬಹುದು ಎಂದು ವಿವರಿಸಲಾಗಿದೆ. ಚರಕ ಸಂಹಿತೆಯ ಚಿಕಿತ್ಸಾಸ್ಥಾನ ಅಧ್ಯಾಯ 4 ಶ್ಲೋಕ 32, 73, 74ರಲ್ಲಿ ಅಡಿಕೆಯನ್ನು ಬೇರೆ, ಬೇರೆ ಕೆಲವು ದ್ರವ್ಯಗಳೊಂದಿಗೆ ಸೇವಿಸಿ ಯಾವ ಯಾವ ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿಸಲಾಗಿದೆ.
 ಯೋಗ ರತ್ನಾಕರದಲ್ಲಿ ಅಡಿಕೆಯಿಂದ ತಯಾರಿಸುವ 'ಷೂಗಪಾಕ' ಲೇಹದ ಕುರಿತು, 'ಷೂಗಾದಿಲೇಪ' ಎಂಬ ಒಂದು ಮಾತ್ರೆಯ ಕುರಿತು ವಿವರಣೆಯಿದೆ. ರತ್ನಮಾಲದ ಒಂದು ಶ್ಲೋಕ ಅಡಿಕೆಯು ಸುಗಂಧಪೂರಿತವಾದದು, ಶ್ಲೇಷ್ಮಹರ, ದೀಪನ, ಪಾಚನ, ಬಲಪುಷ್ಟಿಕಾರಕ, ಮಧುರವಾದದು ಎಂದು ವರ್ಣಿಸಲಾಗಿದೆ. ಹೀಗೆ ವಿವರಿಸುತ್ತಾ ಹೋದರೆ ಅಡಿಕೆಯ ಔಷಧಿ ಗುಣಗಳನ್ನು ಹೇಳುವ ನೂರಾರು ಉಲ್ಲೇಖಗಳು ಸಿಗುತ್ತವೆ.
ಇತ್ತೀಚೆಗೆ ಮೈಸೂರಿನಲ್ಲಿರುವ  ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಇದರ ಔಷಧೀಯ ಗುಣಗಳನ್ನು ಪಟ್ಟಿ ಮಾಡಿದೆ. ಚೀನಾದ ಮೆಡಿಕಲ್ ಜರ್ನಲ್, ಕರೆಂಟ್ ಸೈನ್ಸ್ ಪತ್ರಿಕೆ ಅಡಿಕೆಯ ಔಷಧಿ ಗುಣಗಳನ್ನು ವಿವರಿಸುವ ಲೇಖನಗಳನ್ನು ಪ್ರಕಟಿಸಿವೆ.
ನಮ್ಮ ಸರ್ವಜ್ಞ
 'ಉಂಡು ವೀಳ್ಯವ ಮೆಂದು, ಅಂಡು ಮೇಲಾಗಿ
 ಮಲಗಿದವನು ವೈದ್ಯಂಗು ಮೇಲು ಕೇಳು ಸರ್ವಜ್ಞ
 ಎಂದು ಅಡಿಕೆಯ ಉಪಯುಕ್ತತೆಯನ್ನು ಸರಳವಾಗಿ, ಅಷ್ಟೇ ಪ್ರಬಲವಾಗಿ ಹೇಳಿದ್ದಾನೆ. ಆದರೆ ಅಡಿಕೆ ಸೇವನೆಗೂ ಕ್ರಮವಿದೆ. ಅದೊಂದನ್ನೇ ತಿನ್ನುವುದು ಆರೋಗ್ಯಕ್ಕೆ ಹಾನಿಕರವೇ. ಇದನ್ನು ಈಗಿನ ವೈಜ್ಞಾನಿಕ ವರದಿಗಳು ಹೇಳುತ್ತಿವೆ. ನಮ್ಮ ಆಯುರ್ವೇದ ಗ್ರಂಥಗಳೂ ಹೇಳಿವೆ. ರಾಜನಿಘಂಟಿನಲ್ಲಿಯೇ
'ಅನಿಧಾಯಮುಖೇಪರ್ಣಂ ಪೂಗಂ ಖಾದತಿ ಯೋ  ನರಃ
ಮತಿಭ್ರಂಶೋ  ದರಿದ್ರೀ  ಸ್ಯಾದಂತೇ  ಸ್ಮರತಿನೋ ಹರಿಮ್'
ಎಂದು ಹೇಳಲಾಗಿದೆ. ಹೀಗೆಂದರೆ ವೀಳ್ಯದೆಲೆಯನ್ನು ಬಾಯಲಿಟ್ಟುಕೊಳ್ಳದೇ ಅಡಿಕೆ ಮೆಲ್ಲುವಾತನು ಮತಿಭ್ರಾಂತನೂ ದರಿದ್ರನೂ ಅಂತ್ಯಕಾಲದಲ್ಲಿ ಹರಿಸ್ಮರನೆಯನ್ನು ಮಾಡಲಾರನು ಎಂದು.
ಇನ್ನು ಚರಕ ಸಂಹಿತೆಯ 5ನೇ ಅಧ್ಯಾಯದಲ್ಲಿ ಬೆಳಿಗ್ಗೆ ಹಲ್ಲುಜ್ಜಿದ ಕೂಡಲೇ ತಾಂಬೂಲ ಸೇವನೆ ಮಾಡುವಂತೆಯೂ, ತಾಂಬೂಲ ತಿಂದ ಕೂಡಲೇ ಮೊದಲು ಬರುವ ರಸವನ್ನು ಉಗಿಯಬೇಕೆಂದೂ, ಏಕೆಂದರೆ ಅದು ಪಿತ್ತಕರವಾಗಿರುತ್ತದೆ ಎಂದೂ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ, ಬ್ರಹ್ಮಚಾರಿಗಳು, ವಿಧವೆಯರು, ರೋಗಿಗಳು ಅಡಿಕೆ ತಿನ್ನಲೇಬಾರದೆಂಬ ವಿಧಿ ನಿಷೇಧವಿದೆ.
ಈ ಹಿಂದೆ ಹೇಳಿದಂತೆ ಅಡಿಕೆಯ ಸೊಕ್ಕಿನ ಗುಣವನ್ನು ಹೇಗೆ ದೇಹದ ಜಡತೆ ತೊಡೆದು ಹಾಕಲು, ಕಾಮೋತ್ತೇಜನಗೊಳಿಸಲು, ವಿವಿಧ ರೋಗಗಳನ್ನು ನಿವಾರಿಸಿಕೊಳ್ಳಲು ಬಳಸಿಕೊಳ್ಳಬಹುದು ಎಂದು
ಆಯುರ್ವೇದ ಗ್ರಂಥಗಳು ವಿವರಿಸಿವೆ. ಅಲ್ಲದೆ ಅದರ ಸುಗಂಧ ಗುಣವನ್ನು ಸೌಂದರ್ಯ ವೃದ್ಧಿಗೂ ಬಳಸಿಕೊಳ್ಳುವ ಬಗೆ ವಿವರಿಸಲಾಗಿದೆ. ಆದರೆ ಎಲ್ಲೂ ಅಡಿಕೆಯೊಂದನ್ನೇ ತಿನ್ನಿ ಎಂದು ಹೇಳಿಲ್ಲ. ಬದಲಾಗಿ ವೀಳ್ಯದೆಲೆಯೊಂದಿಗೆ ಅಡಿಕೆ ತಿನ್ನುವ 'ತಾಂಬೂಲ' ಪದ್ಧತಿಯ ಬಗ್ಗೆಯೇ ಹೆಚ್ಚು ಉಲ್ಲೇಖವಿದೆ.
ಅಡಿಕೆ ವೀಳ್ಯದೆಲೆಯ ಸಂಬಂಧ ಗಂಡ-ಹೆಂಡಿರ ಸಂಬಂಧದಂತೆ, ಒಂದಕ್ಕೊಂದು ಪೂರಕ ಗುಣಗಳು ಇವೆರಡರಲ್ಲೂ ಇದೆ. ಅಡಿಕೆ ಉದ್ವೇಗ, ಮದ, ಸೊಕ್ಕು, ಅಕ್ರಮಣಕಾರೀ ಗುಣಗಳನ್ನು ಹೊಂದಿದ್ದರೆ, ವೀಳ್ಯದೆಲೆ ಶುದ್ಧೀಕರಣ, ಸಂಮೋಹನಕಾರಿ, ಶಾಂತಿಕಾರಕ, ಉಷ್ಣಜನಕತ್ವ ಗುಣಗಳನ್ನು ಹೊಂದಿದೆ. ಇದರಿಂದಾಗಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಯಾವ ಅಪಾಯವೂ ಇಲ್ಲ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತಿವೆ. ಆದರೆ ಅಡಿಕೆ ಬಳಕೆಯ ಈ ಹಿನ್ನಲೆ, ಕ್ರಮಗಳನ್ನೆಲ್ಲಾ ಬದಿಗಿಟ್ಟು, ಈಗ ಅಡಿಕೆಯೊಂದನ್ನೇ ವಿಶ್ಲೇಷಣೆಗೊಳಪಡಿಸಿ ನಿಷೇಧದ ಮಾತು ಆಡಲಾಗುತ್ತಿದೆ. ಇದು ಎಷ್ಟು ಸರಿ?

No comments:

Post a Comment