Sunday, March 20, 2011

ಇಂಡಿಯಾದ ಮಿಲಟರಿ ಸಾಧನೆ!


ನಾವ್ಯಾರೂ ಚರ್ಚೆ ಮಾಡದ ಬೆಳವಣಿಗೆಯೊಂದು ನನ್ನಲ್ಲಿ ಆತಂಕ ಸೃಷ್ಟಿಸುತ್ತಿದೆ. ಸಾರ್ವಜನಿಕವಾಗಿ ಈ ವಿಷಯವೆತ್ತಿದರೆ ದೇಶದ್ರೋಹಿಗಳಾಗಬೇಕಾಗುತ್ತದೆ ಎಂದು ಬಹುತೇಕರು ಸುಮ್ಮನಿರಬಹುದು. ವಿಷಯವೆಂದರೆ ನಮ್ಮ ದೇಶದ ಮಿಲಟರಿ ಬಜೆಟ್ ಹೆಚ್ಚಳ. ಬೇರೆ ಯಾವ ಯೋಜನೆಯ ಬಜೆಟ್ಟೂ ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಈ ವರ್ಷ ಕೂಡ ಕಳೆದ ಬಜೆಟ್ ಗಿಂತ ಶೇ.11 ರಷ್ಟು ಹೆಚ್ಚು ಮಾಡಿ, ಮಿಲಟರಿ ಬಜೆಟ್ ನ ಮೊತ್ತವನ್ನು 1,64,415 ಕೋಟಿ ರೂ.ಗೆ ತಲುಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಬಜೆಟ್ ನ್ನು ಶೇ. 40 ರಷ್ಟು ಹೆಚ್ಚಿಸಲಾಗಿದೆ. ಏಕೆ, ನಮ್ಮ ದೇಶಕ್ಕೆ ಯುದ್ಧ ಭೀತಿ ಇದೆಯೇ… ನನಗಂತೂ ಅಂತಹ ಪರಿಸ್ಥಿತಿ ಕಾಣಿಸುತ್ತಿಲ್ಲ.

ಈ ಬಜೆಟ್ ಹೆಚ್ಚಳದಿಂದಾಗಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶ ಎಂಬ ಖ್ಯಾತಿಗೆ ಇಂಡಿಯಾ ಪಾತ್ರವಾಗಿದೆ. ನೆರೆಯ ಚೀನಾವನ್ನು ಹಿಂದಿಕ್ಕಿ ಇಂಡಿಯಾ ಈ `ಸಾಧನೆ' ಮಾಡಿದೆ. 2006ರಿಂದ 2010ರ ನಡುವೆ ಯಾವ ದೇಶ ಎಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ ಎಂದು ಲೆಕ್ಕಹಾಕಿದ ಸ್ವೀಡನ್‌ನ ಚಿಂತಕರ ಚಾವಡಿ ಇಂಡಿಯಾಕ್ಕೆ ಈ ಪಟ್ಟ ನೀಡಿದ್ದು, ಈ ಅವಧಿಯಲ್ಲಿ ಒಟ್ಟಾರೆ ಜಾಗತಿಕವಾಗಿ ಆಮದಾದ ಶಸ್ತ್ರಾಸ್ತ್ರಗಳಲ್ಲಿ ಇಂಡಿಯಾ ಪಡೆದುಕೊಂಡಿದ್ದು ಶೇ.9ರಷ್ಟು ಎಂದಿದೆ. ಚೀನಾ ಶೇ.6 ಆಮದು ಮಾಡಿಕೊಂಡು ಸೆಕೆಂಡ್‌ ಪ್ಲೇಸ್‌ ಪಡೆದಿದೆ.

ಕಾರ್ಗಿಲ್‌ ಯುದ್ಧದ ನಂತರ ನಮ್ಮ ಸರ್ಕಾರ ಹಿಂದೆ-ಮುಂದೆ ನೋಡದೆ ಶಸ್ತ್ರಾಸ್ತ್ರ ಕೊಳ್ಳಲು ಹಣ ಸುರಿಯುತ್ತಿದೆ. 50 ಶತಕೋಟಿ ಡಾಲರ್‌ ಗಳ ಅಂದರೆ 2,25000 ಕೋಟಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಮಾಡಿಕೊಂಡಿದೆ. ಅಲ್ಲದೆ, 10.4 ಶತಕೋಟಿ ಡಾಲರ್‌ ನೀಡಿ 126 ಬಹು ಉಪಯೋಗಿ ಯುದ್ಧ ವಿಮಾನ ಖರೀದಿಸಲು ಮತ್ತು 35 ಶತಕೋಟಿ ವಿನಿಯೋಗಿಸಿ, ರಷ್ಯಾ ಜೊತೆ ಸೇರಿಕೊಂಡು ಸುಖೋಯಿ ಟಿ-50 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮುಖ್ಯವಾಗಿ ರಷ್ಯಾ, ಇಸ್ರೇಲ್‌, ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಸಲಾಗತ್ತಿದೆ. ಇತ್ತೀಚೆಗಂತೂ ಅಮೆರಿಕದೊಂದಿಗಿನ ವ್ಯವಹಾರ ಹೆಚ್ಚುತ್ತಲೇ ಇದೆ.

ಇದೆಲ್ಲಾ ಹೋಗಲಿ, ಮಿಲಟರಿಗೆ ಇಷ್ಟೊಂದು ದುಡ್ಡು ಎತ್ತಿಡುತ್ತಿರುವ ಸರ್ಕಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣ ಸುರಿಯುವುದಕ್ಕೆ ಬದಲಾಗಿ ನಮ್ಮ ದೇಶದಲ್ಲಿಯೇ ಇವುಗಳನ್ನು ತಯಾರಿಸಬಾರದೇ ಎಂದು ನೀವು ಯೋಚಿಸುತ್ತಿರಬಹುದು. ಹೌದು, ಈ ಕೆಲಸ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದೆ. ಇದಕ್ಕೆ ಸಹಕಾರ ನೀಡಲು ಎಂಟು ಸಾರ್ವಜನಿಕ ಉದ್ದಿಮೆಗಳಿವೆ. 39 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳಿವೆ. ಆದರೆ ಇವೆಲ್ಲಾ ಇದ್ದೂ ಇಲ್ಲದಂತಾಗಿದೆ. ನಿಮಗೆ ಗೊತ್ತೇ, ನಮ್ಮ ಸೇನೆ ಬಳಸುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಶೇ. 70 ರಷ್ಟು ವಿದೇಶದಿಂದ ಆಮದು ಮಾಡಿಕೊಂಡವು.

ಈ ವಿಷಯದಲ್ಲಿ ಚೀನಾ ಎಚ್ಚೆತ್ತಿದ್ದು, ಕಳೆದ ಎರಡು ದಶಕಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇಟ್ಟಿದೆ. ಹೀಗಾಗಿ ಆ ದೇಶದ ಆಮದು ಪ್ರಮಾಣ ಕಡಿಮೆಯಾಗಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ನಡೆಸಿಲ್ಲ, ನಡೆಸಲು ಮುಂದಾದರೂ ಮುಂದುವರೆದ ದೇಶಗಳು ಬಿಡುತ್ತಿಲ್ಲ!

ಹಿಂದೆ ಇಂಡಿಯಾ ಹೆಚ್ಚಾಗಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿತ್ತು. ಈಗ ಅಮೆರಿಕಕ್ಕೆ ಹೆದರಿ ಅದು, ಹೇಳಿದಂತೆ ಕೇಳುತ್ತಿದೆ. ಹೀಗಾಗಿಯೇ ಶಸ್ತ್ರಾಸ್ತ್ರ ರಫ್ತಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ನಿಂತಿದೆ. ಮೊತ್ತೊಂದು ವಿಷಯವೆಂದರೆ ಅಮೆರಿಕದಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವಲ್ಲಿ ಏಷ್ಯಾ ರಾಷ್ಟ್ರಗಳದ್ದೇ ಮೇಲುಗೈ!

ನೆರೆಯ ಚೀನಾ ಕೂಡ ಇಂಡಿಯಾದಂತೆ ಮಿಲಟರಿ ಬಜೆಟ್ ಹೆಚ್ಚಿಸುತ್ತಲೇ ಇದೆ. ಈ ವರ್ಷ ಅದು ಶೇ.12.7 ಹೆಚ್ಚು ಹಣ ತೆಗೆದಿರಿಸಿದೆ. ಚೀನಾದ ಮಿಲಟರಿ ಬಜೆಟ್ ಮೊತ್ತ ಅಧಿಕೃತವಾಗಿ ಅದು ಪ್ರಕಟಿಸಿದಂತೆ 91.5 ಶತಕೋಟಿ ಡಾಲರ್. ಇಂಡಿಯಾಕ್ಕಿಂತ ಮೂರು ಪಟ್ಟು ಹೆಚ್ಚು! ಹೀಗಾಗಿ ಇಂಡಿಯಾ ಮಾಡುತ್ತಿರುವುದೇ ಸರಿ ಎಂದು ವಾದ ಮಂಡಿಸುವವರೂ ಇದ್ದಾರೆ. ಇಂಡಿಯಾದ ರಕ್ಷಣಾ ವೆಚ್ಚ ಜಿಡಿಪಿಯ ಶೇ. 1.83 ರಷ್ಟು. ಚೀನಾ ಮಾಡುತ್ತಿರುವ ರಕ್ಷಣಾ ವೆಚ್ಚ ಅಲ್ಲಿಯ ಜಿಡಿಪಿಯ ಶೇ. 1.4 ರಷ್ಟು. ಜಿಡಿಪಿಯ ಆಧಾರದ ಮೇಲೆ ಹೇಳುವುದಾದರೆ ಇಂಡಿಯಾ ಚೀನಾಕ್ಕಿಂತ ಹೆಚ್ಚೇ ಹಣವನ್ನು ಮಿಲಟರಿಗೆ ಸುರಿಯುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಸುವ ಕೆಲಸ ಹೀಗೇ ಸಾಗುತ್ತಲೇ ಇದೆ, ನಾವೆಲ್ಲರೂ ಸುಮ್ಮನಿರಲೇ ಬೇಕಿದೆ. ಏಕೆಂದರೆ ದೇಶಪ್ರೇಮಿಗಳಲ್ಲವೇ…?

Friday, March 18, 2011

ನಿತೀಶ್ ರಾಜ್

ಪಾಸ್‌ಪೋರ್ಟ್‌ ನೀಡುವಾಗ ನಡೆಸುವ ಪೊಲೀಸ್‌ ವೆರಿಫಿಕೇಷನ್‌ಗೆ ಏಳು ದಿನ, ಪೋಸ್ಟ್‌ಮಾರ್ಟಂ ರಿಪೋರ್ಟ್‌ಗೆ ಮೂರು ದಿನ, ಜಾತಿ ಪ್ರಮಾಣ ಪತ್ರ ನೀಡಲು ಹದಿನೈದು ದಿನ, ಮನೆಯ ವಿದ್ಯುತ್‌ ಸಂಪರ್ಕದಲ್ಲಿ ತೊಂದರೆ ಕಾಣಿಸಿಕೊಂಡರೆ ಕೇವಲ ನಾಲ್ಕು ಗಂಟೆಯೊಳಗೆ ರಿಪೇರಿ... ಅರರೆ, ಇದೆಲ್ಲಾ ಯಾವ ದೇಶದಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಎಂದು ಯೋಚಿಸುತ್ತಿದ್ದೀರಾ, ಇದು ನಮ್ಮ ದೇಶದಲ್ಲಿಯೇ, ಹಿಂದೆ `ಜಂಗಲ್‌ ರಾಜ್‌' ಎಂದು ಕರೆಸಿಕೊಳ್ಳುತ್ತಿದ್ದ ಬಿಹಾರದಲ್ಲಿ ಜಾರಿಯಾಗುತ್ತಿರುವ ಕ್ರಮ. ಆಶ್ಚರ್ ಪಡಬೇಡಿ, ಬಿಹಾರದಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗೂ ಸಮಯದ ಮಿತಿ ನಿಗದಿಪಡಿಸುವ `ಸರ್ಕಾರಿ ಸೇವಾ ಕಾಯ್ದೆ' ಈಗ ಅನುಮೋದನೆಗೊಂಡಿದ್ದು, ಇದೇ ಏಪ್ರಿಲ್‌ ಒಂದರಿಂದ ಜಾರಿಗೆ ಬರುತ್ತಿದೆ.

ಇನ್ನು ಮುಂದೆ ಅಲ್ಲಿಯ ಸರ್ಕಾರಿ ನೌಕರರು ನಿಗದಿತ ಸಮಯದಲ್ಲಿಯೇ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಿದಲ್ಲಿ ದಿನಕ್ಕೆ ಇಂತಿಷ್ಟು ಎಂದು ಫೈನ್‌ ಕಟ್ಟಬೇಕಾಗುತ್ತದೆ. ಈಗಾಗಲೇ ಕೆಲಸ ಮಾಡಿಕೊಡದ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಲು `ಕಿಯೋಸ್ಕ್‌' ವ್ಯವಸ್ಥೆ ಜಾರಿಗೆ ತಂದು ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತೊಂದು ಹೆಜ್ಜೆ ಮುಂದಿಟ್ಟು ಈ ಕ್ರಮ ತೆಗೆದುಕೊಂಡಿದ್ದಾರೆ. ಇದರಿಂದ ಭ್ರಷ್ಟಾಚಾರವನ್ನು ಬೇರು

ಮಟ್ಟದಿಂದ ದೂರ ಮಾಡಿ, ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಸಾಧ್ಯ ಎಂಬುದು ಅವರ ಚಿಂತನೆ.

ಒಟ್ಟು 30 ಸರ್ಕಾರಿ ಸೇವೆಗಳು ಈ ಕಾಯ್ದೆಯಡಿ ಬರಲಿವೆ. ಟೈಮಿಗೆ ಕೆಲಸ ಮಾಡಿಕೊಡದ ಅಧಿಕಾರಿಗಳು 250ರಿಂದ 5 ಸಾವಿರದವರೆಗೆ ಫೈನ್‌ ಕಟ್ಟಬೇಕಾಗುತ್ತದೆ.

ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕ ಸೇವಾ ಜಾರಿ ಆಯೋಗ ರಚಿಸುವುದಾಗಿಯೂ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಒಂದಲ್ಲಾ ಒಂದು ಕ್ರಮ ತೆಗೆದುಕೊಳ್ಳುತ್ತಲೇ ಬಂದಿರುವ ಅವರು, ಸರ್ಕಾರಿ ಅಧಿಕಾರಿಗಳೆಲ್ಲರೂ ತಾವೇ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳುವಂತೆ ಮಾಡಿದ್ದರು. ಬಾಲಕಿಯರಿಗೆ ಸೈಕಲ್‌ ನೀಡುವಾಗ,

ಸೀಮೇ ಎಣ್ಣೆ ಕೂಪನ್‌ ವಿತರಿಸುವಾಗ ನೇರವಾಗಿ ಫಲಾನುಭವಿಗಳಿಗೇ ಹಣ ದೊರಕುವಂತೆ ಮಾಡಿ, ದುರುಪಯೋಗಕ್ಕೆ ಬ್ರೇಕ್‌ ಹಾಕಿದ್ದಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಒಮ್ಮೆ ಹೀಗೆ ಸೈಕಲ್‌ ಹಣವನ್ನು ನೇರವಾಗಿ ವಿದ್ಯಾರ್ಥಿಗಳಿಗೇ ನೀಡುವ

ಮಾತನಾಡಿದ್ದರು. ಆಮೇಲೆ ಏನಾಯಿತೋ ಏನೋ, ಪ್ಲೇಟ್‌ ಚೇಂಜ್‌ ಮಾಡಿ,

ಹಳೇ ಕ್ರಮಕ್ಕೆ ಓಕೆ ಎಂದರು. ಮುಖ್ಯಮಂತ್ರಿಗಳು ಆಗಾಗ ನಮ್ಮದು ಗುಜರಾತ್‌ ಮಾದರಿ ಆಡಳಿತ ಎನ್ನುತ್ತಿರುತ್ತಾರೆ, ಒಂದಿಷ್ಟು ಬಿಹಾರದ ಕಡೆಯು ನೋಡಿ ಎನ್ನೋಣವೆಂದರೆ ಮಕ್ಕಳ ಕಡೆ ನೋಡುತ್ತಿರುವ ಅವರಿಗೆ ಪುರಸೊತ್ತೇ ಇಲ್ಲ!

ಕೋಡ್ ವರ್ಡ್ ಸಮಾಚಾರ


ರ್ನಾಟಕ ಬಿಜೆಪಿಯ ನಾಯಕರ್ಯಾರಾದರೂ `ಯೂನಿಯನ್‌ ಟೆರಿಟರಿ ಭೇಟಿ ಮಾಡಿ ನಂತರ ಸೌತ್‌ ಎಂಡ್‌ಗೆ ಹೋಗುತ್ತೇನೆ, ನೀವು ಅಲ್ಲಿಗೇ ಬನ್ನಿ' ಎಂದು ಫೋನ್‌ನಲ್ಲಿ ಮಾತನಾಡುತ್ತಿದ್ದರೆ ನೀವು ಬಾಯಿ ಬಿಟ್ಟುಕೊಂಡು ಕೇಳುತ್ತಾ, ಇದೇನಿದು ಅರ್ಥವೇ ಆಗುತ್ತಿಲ್ಲವಲ್ಲ ಎಂದು ತಲೆಕೆರೆದುಕೊಳ್ಳಬೇಡಿ. ಇದು ನಿಮಗೆ ಅರ್ಥವಾಗದೇ ಇರುವ ಭಾಷೆ ! ಇಲ್ಲಿ `ಯೂನಿಯನ್‌ ಟೆರಟರಿ', `ಸೌತ್‌ ಎಂಡ್‌' ಎನ್ನುವುದು ಕೋಡ್‌ ವರ್ಡ್‌ (ಸಂಕೇತ ಭಾಷೆ). ಹೌದು, ರಾಜ್ಯ ಬಿಜೆಪಿ ನಾಯಕರು ಈಗ ಈ ರೀತಿ ಕೋಡ್‌ ವರ್ಡ್‌ ಬಳಸಿ ಮಾತನಾಡಲು ಆರಂಭಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಬಿಜೆಪಿಯಲ್ಲಿ ಒಂದು ರೀತಿಯಲ್ಲಿ ಪ್ರಭಾವಶಾಲಿಗಳಾದ ರೆಡ್ಡಿ ಬ್ರದರ್ಸ್‌ಗೆ `ಯೂನಿಯನ್‌ ಟೆರಿಟರಿ' ಎಂದು, ಸಾರಿಗೆ ಸಚಿವ ಅಶೋಕ್‌ಗೆ `ಬಸ್‌ ಸ್ಟ್ಯಾಂಡ್‌' ಎಂದು, ಸಂಸದ ಅನಂತ್‌ ಕುಮಾ ಬೆಂಗಳೂರಿನ ಸೌತ್‌ನಲ್ಲಿರುವ ಬಸವನಗುಡಿಯ ನಿವಾಸಿಯಾಗಿರುವುದರಿಂದ `ಸೌತ್‌ ಎಂಡ್‌' ಎಂದು, ಮುಖ್ಯಮಂತ್ರಿ ಯಡಿಯೂರಪ್ಪರ ಮನೆ ತಾಜ್‌ ವೆಸ್ಟ್‌ ಎಂಡ್‌ ಸಮೀಪ ಇರುವುದರಿಂದ ಅವರನ್ನು `ವೆಸ್ಟ್‌ ಎಂಡ್‌' ಎಂದು ಕರೆಯಲಾಗುತ್ತಿದೆಯಂತೆ. ಇನ್ನು `ಆಪರೇಷನ್‌ ಕಮಲ'ಕ್ಕೆ ಬಲಿಯಾಗಿ ಪಕ್ಷ ಸೇರಿದವರನ್ನು `ಕಾಮೆಡ್‌-ಕೆ' ಎಂದು ಗುರುತಿಸಲಾಗುತ್ತಿದೆ. ಬಿಜೆಪಿ ವರಿಷ್ಠರು ಏನೇ ಹೇಳಿಕೊಂಡರೂ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಎರಡು-ಮೂರು ಬಣಗಳಿವೆ. ಯಾರು ಯಾರನ್ನು ಭೇಟಿಯಾಗುತ್ತಿದ್ದಾರೆ, ಎಲ್ಲಿ ಸಭೆ ಸೇರುತ್ತಿದ್ದಾರೆ ಎಂದು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಲೇ ಇದ್ದಾರೆ. ಹೀಗಾಗಿ ಈ ಕೋಡ್‌ ವರ್ಡ್‌ ಬಳಕೆ ಅನಿವಾರ್ಯವಾಗಿದೆ ಎಂದು ಶಾಸಕರೇ ಹೇಳಿಕೊಂಡಿದ್ದಾರೆ. ನ ವಿರೋಧಿ ಪ್ರಭುತ್ವ, ಸರ್ವಾಧಿಕಾರಿಗಳ ವಿರುದ್ಧ ಹೋರಾಟ ನಡೆಸುವವರು ಹೀಗೆ ಕೋಡ್‌ ವರ್ಡ್‌ಗಳನ್ನು ಬಳಸುವುದು ಸಾಮಾನ್ಯ. ಬಿಜೆಪಿಯಲ್ಲಿನ ಈ ಬೆಳವಣಿಗೆ ನೋಡಿದರೆ ಪಕ್ಷದಲ್ಲಿಯೂ ಸರ್ವಾಧಿಕಾರಿ ಹಿಡಿತವಿದ್ದಂತೆ ಕಾಣುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹಿಂದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ರಚಿಸಿದ ಸರ್ಕಾರವಿತ್ತು. ನಂತರ ನಮಗಾಗಿ ನಾವೇ ರಚಿಸಿಕೊಂಡ ಸರ್ಕಾರವಾಯಿತು. ಈಗ ನನ್ನಿಂದ ನನಗಾಗಿ

ನನ್ನ ಸರ್ಕಾರ ರಚನೆಗೊಳ್ಳಬೇಕು ಎಂದು ಹಠ ಹಿಡಿಯುವವರ ಕಾಲ ಬಂದಿದೆ ಎಂದಿದ್ದರು. ಅವರ ಮಾತಿಗೂ, ಬಿಜೆಪಿಯಲ್ಲಿನ ಬೆಳವಣಿಗೆಗೋ ಏನೋ ಸಂಬಂಧವಿದೆ ಅಲ್ಲವೇ?