Saturday, June 18, 2011

ಪಾರಂಪರಿಕ ಪಟ್ಟಿ: ಪರಿಸರವಾದಿಗಳ ವ್ಯರ್ಥಾಲಾಪ


ಶ್ಚಿಮ ಘಟ್ಟದ ಹತ್ತು ತಾಣಗಳಿಗೆ ಯುನೆಸ್ಕೊ `ವಿಶ್ವ ನೈಸರ್ಗಿಕ ಪಾರಂಪರಿಕ ತಾಣ'ವೆಂಬ ಟ್ಯಾಗ್‌ ಹಾಕುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿರುವುದು ಈಗ ವಿವಾದಿತ ವಿಷಯ. ಮುಖ್ಯವಾಗಿ ಪಶ್ಚಿಮಘಟ್ಟದ ಭಾಗದ ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಿದೇಶಿ ಹಣದ ಅಮಲಿನಲ್ಲಿ ಪರಿಸರಕ್ಕಾಗಿ ದುಡಿಯುತ್ತಿರುವವರು, ಪರಿಸರ ಉಳಿಸುವುದು ಎಂದರೆ ಒಂದಿಷ್ಟು ಭೂಭಾಗವನ್ನು ಮಾತ್ರ (ಶೋಕೇಸ್‌ನಲ್ಲಿಡುವ ಅಲಂಕಾರಿಕ ವಸ್ತುಗಳಂತೆ) ಕಾಪಾಡುವುದು ಎಂದೇ ನಂಬಿರುವ ಪರಿಸರ ಮೂಲಭೂತವಾದಿಗಳು ಸರ್ಕಾರದ ಈ ನಿಲುವುನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತಿದ್ದಾರೆ. ಯುನೆಸ್ಕೊ ಪಟ್ಟಿಯಿಂದ ಪಶ್ಚಿಮಘಟ್ಟ ಹೊರಗುಳಿದರೆ, ಪ್ರಕೃತಿ ಸಂಪತ್ತು ಸಂಪೂರ್ಣ ನಾಶವಾಗಿ, ಪ್ರಳಯವಾದೀತು ಎಂಬ ಭಯವನ್ನೂ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಪಶ್ಚಿಮಘಟ್ಟ ಸೇರ್ಪಡೆಯಾದಲ್ಲಿ ಸರ್ಕಾರ ಅದನ್ನು `ಉಳಿಸುವ' ಅನಿವಾರ್ಯತೆಗೆ ಒಳಗಾಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ `ಉಳಿಸುವುದು'ಎಂದರೆ ಹೇಗೆ, ಯುನೆಸ್ಕೊದ ಸೂಚನೆಗಳೇನು ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಆದರೆ ಜನಪ್ರತಿನಿಧಿಗಳ ಮಾತು ಈ ಸೂಚನೆಗಳು ಕಟ್ಟು-ನಿಟ್ಟಿನಿಂದ ಕೂಡಿವೆ ಎಂಬುದನ್ನಂತೂ ಪ್ರತಿಧ್ವನಿಸುತ್ತಿವೆ .(ಹಂಪಿಯಿಂದ ಪಾಠವನ್ನು ಕಲಿತಿರಲೂಬಹುದು) ಮೇಲ್ನೋಟಕ್ಕೇ ಸ್ಥಳೀಯರ ಹಿತಕ್ಕೆ ಮಾರಕವಾಗಲ್ಲ ಈ ಕ್ರಮವನ್ನು ವಿರೋಧಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿರಬಹುದು. ಸ್ಥಳೀಯರು ಎದುರಿಸಬೇಕಾಗುವ ಸಮಸ್ಯೆಗಳೇನು ಎಂಬುದರ ಬಗ್ಗೆ ಜಾಣ ಪರಿಸರವಾದಿಗಳು ಗಮನವನ್ನೇ ನೀಡದೆ, ಇದನ್ನು ವಿರೋಧಿಸುತ್ತಿರುವ ಸರ್ಕಾರ ಟಿಂಬರ್‌, ರೆಸಾರ್ಟ್‌ ಮತ್ತಿತರ ಮಾಫಿಯಾಕ್ಕೆ ಬಲಿಯಾಗುತ್ತಿದೆ ಎಂದು ಆರೋಪಿಸಿ ಚರ್ಚೆಯ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಂತೂ ಆಗಿದ್ದಾರೆ. ಯುನೆಸ್ಕೊ ಸೂಚನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರುವ ಕೊಡಗಿನ ಜನತೆ ಸ್ಥಳಕ್ಕೆ ಭೇಟಿ ನೀಡಿದ ಯುನೆಸ್ಕೊ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸುದ್ದಿಯನ್ನು ಎಲ್ಲರೂ ಮರೆಮಾಚುತ್ತಿರುವುದೇ ಇದಕ್ಕೆ ಉದಾಹರಣೆ.

ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದರೆ ಕೋಟಿ ಕೋಟಿ ಡಾಲರ್‌ ಹಣ ಹರಿದು ಬರುತ್ತದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದೆಲ್ಲಾ ಹೇಳಲಾಗುತ್ತಿದೆ. ಯುನೆಸ್ಕೊ ಎಂದರೇ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ. ಅಭಿವೃದ್ಧಿಗೆ ಹಣ ಒದಗಿಸುವ ಆರ್ಥಿಕ ಸಂಸ್ಥೆಯಲ್ಲ. ಆದರೂ ಪ್ರತಿ ವರ್ಷ ಪಟ್ಟಿಯಲ್ಲಿರುವ ಸ್ಥಳಗಳಿಗೆ 4 ಮಿಲಿಯನ್‌ ಎಂದರೆ 40ಲಕ್ಷ ಡಾಲರ್‌ ಒದಗಿಸುತ್ತದೆ. (ಹೆಚ್ಚು ಕಡಿಮೆ 20 ಕೋಟಿ ರೂಪಾಯಿ. ಪಶ್ವಿಮ ಘಟ್ಟದ 10 ಸ್ಥಳಗಳಿಗೆ ಹಂಚಿದರೆ ತಲಾ 2 ಕೋಟಿ ಸಿಗುತ್ತದೆ) ಈ ಫಂಡ್‌ ಬಿಡುಗಡೆಯಾಗಬೇಕಾದರೆ ಸ್ಥಳೀಯ ಸರ್ಕಾರ, ಖಾಸಗಿ ಧಾನಿಗಳು ಕೂಡ ಪಾಲು ಕೊಡಬೇಕು, ಇಲ್ಲದಿದ್ದರೆ ಇಲ್ಲ. ಅದೂ ಯುನೆಸ್ಕೊ ಸೂಚನೆಯಂತೆಯೇ ಎಲ್ಲ `ಅಭಿವೃದ್ಧಿ' ಕೆಸಲಗಳೂ ನಡೆಯಬೇಕು. ಸರ್ಕಾರದ್ದೇನಿದ್ದರೂ ಹೇಳಿದ್ದನ್ನು ಜಾರಿಗೆ ತರುವ ಏಜೆನ್ಸಿಯ ಕೆಲಸ!

ಈ ಪಟ್ಟಿ ಸೇರ್ಪಡೆಯಿಂದ ಪಶ್ಚಿಮ ಘಟ್ಟ ವಿಶ್ವದ ಗಮನ ಸೆಳೆಯುತ್ತದೆ. ಪ್ರವಾಸಿಗರು ದಂಡೆತ್ತಿ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಪ್ರಪಂಚದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದೆಂದು ಗುರುತಿಸಲ್ಪಟ್ಟಿರುವ ಆಗುಂಬೆಯಲ್ಲಿ ರೆಸಾರ್ಟ್‌ ನಿರ್ಮಿಸುವುದನ್ನು ವಿರೋಧಿಸಿದ್ದ, ಮ್ಯಾಗ್ಸಸ್ಸೆ ಪುರಸ್ಕೃತ ದಿ. ಕೆ.ವಿ. ಸುಬ್ಬಣ್ಣ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ. `ಪ್ರವಾಸಿ ಸಂಸ್ಕೃತಿ ವಿಲಾಸಿ ಸಂಸ್ಕೃತಿಯನ್ನು ಸೃಷ್ಟಿಸುತ್ತದೆ, ವಿಲಾಸಿ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತದೆ' ಎಂದು ಸುಬ್ಬಣ್ಣ ಹೇಳಿದ್ದರು. ಇದನ್ನು ಅರ್ಥಮಾಡಿಕೊಂಡವರ್ಯಾರೂ ಪ್ರವಾಸೋದ್ಯಮದ ಅಭಿವೃದ್ಧಿಯ ಹುಚ್ಚಿನಿಂದ ಮಾತನಾಡುವುದಿಲ್ಲ. ನಗರದ ಪರಿಸರವಾದಿಗಳು ಪ್ರವಾಸಿಗರನ್ನು ಆಕರ್ಷಿಸಿ, ಅದು ಹೇಗೆ ಪರಿಸರವನ್ನು ಕಾಪಾಡುತ್ತಾರೋ ನಿಮ್ಮ ಊಹೆಗೇ ಬಿಟ್ಟಿದ್ದು.

ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರುತ್ತಿರುವ ಭಾರತದ ಮೊದಲ ಪ್ರದೇಶವೇನಲ್ಲ. ಈಗಾಗಲೇ ನಾಲ್ಕೈದು ಉದ್ಯಾನವನಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಇದ್ದಕ್ಕಿದ್ದ ಹಾಗೆ ಈಗ ಪಶ್ಚಿಮಘಟ್ಟದ ನೆನಪಾಗಿದ್ದಾದರೂ ಏಕೆ ಎಂಬುದಕ್ಕೆ ಬದಲಾದ ಜಾಗತಿಕ ವಿದ್ಯಮಾನಗಳನ್ನು ಗಮನಿಸುವುದು ಒಳಿತೆನಿಸುತ್ತದೆ.

1980ಕ್ಕಿಂತ ಮುಂಚೆ ಜೀವ ವೈವಿಧ್ಯತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಾವಿರಾರು ಜಾತಿಯ ಗಿಡಗಳಿದ್ದರೆ ಏನು ಲಾಭ ಎಂದು ಯೋಚಿಸುತ್ತಿದ್ದರು. ಜೈವಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಜೀವ ವೈವಿಧ್ಯತೆಯ ಬೆಲೆಯೂ ಹೆಚ್ಚಿತು. ಹೀಗಾಗಿ ಮುಂದುವರೆದ ದೇಶಗಳಿಗೆ ಪಶ್ಚಿಮ ಘಟ್ಟದಂತಹ ಜೀವ ವೈವಿಧ್ಯದ ತಾಣಗಳೆಲ್ಲಾ ಸಂಪನ್ಮೂಲ ಕೇಂದ್ರಗಳಾಗಿ ಗೋಚರಿಸತೊಡಗಿದವು. ಅವುಗಳ ಮೇಲೆ ಹಕ್ಕು ಸಾಧಿಸಲು ಪೇಟೆಂಟ್‌ ಎಂಬ ಕಾನೂನು ರೂಪಿಸಿಕೊಂಡು ಲೂಟಿಗೆ ಹೊಸ ತಂತ್ರಗಳನ್ನು ಅನುಸರಿಸಲಾರಂಭಿಸಿದವು.

ಈ ರೀತಿಯ ಲೂಟಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆ ಎಂದರೆ ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳು ಇತ್ತೀಚೆಗೆ ಪೈಪೋಟಿ ಮೇಲೆ ಪ್ಲಾಂಟ್‌ ಪೇಟೆಂಟ್‌ ಪಡೆಯುತ್ತಿರುವುದು. 1996ಕ್ಕೂ ಮುಂಚೆ ಅಮೆರಿಕ ಕೇವಲ 5,399 ಗಿಡಗಳ ಮೇಲೆ ಪೇಟೆಂಟ್‌ ಪಡೆದಿತ್ತು. ಈಗ ಈ ಸಂಖ್ಯೆ 16,572ಕ್ಕೆ ಏರಿದೆ. 2009ರಲ್ಲಿಯೇ 1,009 ಪ್ಲಾಂಟ್‌ ಪೇಟೆಂಟ್‌ ಪಡೆದಿದೆ. ಅಂದ ಹಾಗೆ ಇದುವರೆಗೆ ಅಮೆರಿಕ ಪೇಟೆಂಟ್‌ ಪಡೆದಿರುವ ಗಿಡಗಳ ಪೈಕಿ 8,538 ಗಿಡಗಳು ವಿದೇಶಿ ಮೂಲದವು. ಇವುಗಳಲ್ಲಿ ಅಮೆರಿಕದ ದಾಖಲೆ ಪ್ರಕಾರವೇ 46ಗಿಡಗಳು ಭಾರತ ಮೂಲದವು.

1990ರಲ್ಲಿ ಭಾರತವನ್ನು `ಮೆಘಾ ಡೈವರ್ಸಿಟಿ' ದೇಶ ಎಂದರೆ ಅತ್ಯಂತ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ದೇಶ ಎಂದು ಗುರುತಿಸಲಾಗಿದೆ. ಪ್ರಪಂಚದಲ್ಲಿರುವ ಸಸ್ಯಗಳಲ್ಲಿ ಶೇ. 11ರಷ್ಟು ಅಂದರೆ ಸುಮಾರು 45,500 ವಿವಿಧ ಜಾತಿಯ ಸಸ್ಯಗಳು ಇಲ್ಲಿವೆ. ಇದರ ಮೇಲೆ ಈಗ ಎಲ್ಲರ ಕಣ್ಣು, ತಡೆಯಲು ಇರುವ ಜೀವ ವೈವಿಧ್ಯತಾ ಮಂಡಳಿಗೆ ಹಲ್ಲೇ ಇಲ್ಲ!

ಯುನೆಸ್ಕೊದ ಮೇಲೆ ಅಮೆರಿಕದ ಅಥವಾ ಇನ್ನಿತರ ಮುಂದುವರೆದ ದೇಶಗಳ ಪ್ರಭಾವವನ್ನು ಬಿಡಿಸಿ ಹೇಳಬೇಕಾಗಿಯೇನೂ ಇಲ್ಲ. ಸಂಶೋಧನೆ, ಆಧ್ಯಯನದ ಹೆಸರಿನಲ್ಲಿ ಇಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಯುನೆಸ್ಕೊ ಪಶ್ಚಿಮಘಟ್ಟವನ್ನು ಪರಿಗಣಿಸುತ್ತಿದೆ ಎಂದರೆ ಅನುಮಾನದಿಂದಲೇ ನಾವು ನೋಡಬೇಕಾಗುತ್ತದೆ. ಅದಂತೂ ವಿದೇಶಿ ಹಣದಿಂದಲೇ ಜೀವನ ಸಾಗಿಸುತ್ತಿರುವ ಪರಿಸರವಾದಿಗಳಿಂದ ಸಾಧ್ಯವೇ ಇಲ್ಲ.

ಹಾಗೆಂದ ಮಾತ್ರಕ್ಕೆ ಪಶ್ಚಿಮ ಘಟ್ಟ ಮತ್ತು ಅಲ್ಲಿರುವ ಸಂಪನ್ಮೂಲವನ್ನು ನಾವೇ ಭೋಗಿಸಬೇಕೆಂದೇನೂ ಅಲ್ಲ. ನಮ್ಮ ಈ ಜೀವ ವೈವಿಧ್ಯತೆಯ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು. ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸಿ, ಜನಪರವಾದ ಪರಿಸರ ಯೋಜನೆಗಳನ್ನು ಜಾರಿಗೆ ತಂದು ಈ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿ (ಈ ಕೆಲಸ ಮಾಡುತ್ತಾರೆಂಬ ನಂಬಿಕೆಯೇನೂ ಇಲ್ಲ ಬಿಡಿ)ಹೊರಬೇಕು. ಇಲ್ಲದಿದ್ದಲ್ಲಿ ಅದಿರಾದಂತೆ, ಜೀವ ವೈವಿಧ್ಯತೆ ಲೂಟಿಯಾದ ಮೇಲೆ ದಿಡ್ಡಿ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ!

Thursday, June 16, 2011

ಚೀಪ್ ಟ್ರಿಕ್ಸ್

ರ್ಕಾರದ ಇಮೇಜ್ ಹೆಚ್ಚಿಸಿಕೊಳ್ಳುವ ಗುಂಗಿನಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನೆಲ್ಲಾ ಚೀಪ್ ಟ್ರಿಕ್ಸ್ ಮಾಡುತ್ತಾರೋ ಗೊತ್ತಿಲ್ಲ, ಆದರೆ ಅವರು ಏನೇ ಮಾಡಿದರೂ ಬೊಕ್ಕಸಕ್ಕಂತೂ ತೂತು ಗ್ಯಾರಂಟಿ. ಇತ್ತೀಚೆಗೆ ತಾಲೂಕು ಕೇಂದ್ರಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಗೋಪ್ಯವಾಗಿ ನಡೆಯುವ ಈ ಸಭೆಯನ್ನು ಎಲ್ಲಿ ನಡೆಸಿದರೂ ಒಂದೇ, ನಿರ್ಧಾರ ಜನಪರವಾಗಿದ್ದರೆ ಜನ ಮೆಚ್ಚಿಯೇ ಮೆಚ್ಚುತ್ತಾರೆ. ಇದೇನು ಅವರಿಗೆ ಗೊತ್ತಿರದ ಸಂಗತಿಯೇನೂ ಅಲ್ಲ, ಆದರೆ ಆಡಳಿತವನ್ನು ತಾಲೂಕು ಕೇಂದ್ರಕ್ಕೆ ತೆಗೆದುಕೊಂಡು ಹೋದೆವು ಎಂದು ಮುಂದೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬೇಕಲ್ಲ, ಅದಕ್ಕಾಗಿ ಈ `ಜನಪರ ನಿರ್ಧಾರ’ ಕೈಗೊಂಡಿದ್ದಾರೆ.

ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗು ಗಟ್ಟಿಯಾದಾಗ ಗುಲ್ಬರ್ಗಾದಲ್ಲಿ 2008ರ ಸೆಪ್ಟೆಂಬರ್ ಮತ್ತು 2009ರ ಅಕ್ಟೋಬರ್ನಲ್ಲಿ ಇದೇ ರೀತಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಪ್ರಯೋಜನವೇನಾಯಿತೋ ಗೊತ್ತಿಲ್ಲ, ಆದರೆ ಇದಕ್ಕಾಗಿ ಖರ್ಚಾಗಿದ್ದು ಎಷ್ಟು ಗೊತ್ತೇ, 15 ಕೋಟಿಗೂ ಹೆಚ್ಚು.

ಸಚಿವ ಸಂಪುಟ ಸಭೆಯೆಂದರೆ ಸಮಾನ್ಯ ಸಭೆಯೇನಲ್ಲ. ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಸಭೆ ನಡೆಯಬೇಕೆಂದರೆ ಮುಖ್ಯಮಂತ್ರಿ ಕಾರ್ಯಾಲಯದ 30 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ, ಒಟ್ಟು 29 ಇಲಾಖೆಗಳ ಸಿಬ್ಬಂದಿ (ಹೆಚ್ಚು ಕಡಿಮೆ ತಲಾ 10 ಮಂದಿ ಎಂದಿಟ್ಟುಕೊಳ್ಳಿ) ಸ್ಥಳದಲ್ಲಿರಬೇಕಾಗುತ್ತದೆ. ಇವರುಗಳ ಮತ್ತು ಸಚಿವರುಗಳ ಖರ್ಚು- ವೆಚ್ಚ ಎಷ್ಟಾಗಬಹುದು ನೀವೇ ಅಂದಾಜಿಸಿ. ಹೋಗಲಿ, ಈ ರೀತಿ ಸಭೆಯಲ್ಲಿ ಭಾಗವಹಿಸುವಾಗ ಅಧಿಕಾರಿಗಳು, ಸಚಿವರು ಸರಳತೆಗೆ ಒತ್ತು ಕೊಡುತ್ತಾರೋ, ಅದೂ ಇಲ್ಲ. ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ನಡೆದಾಗ ಎಲ್ಲ ಸಚಿವರೂ, ಒಂದೇ ಬಸ್ಸಿನಲ್ಲಿ ಅಲ್ಲಿಗೆ ತೆರಳಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಲಾಗಿತ್ತು. ಆದರೆ ಯಾರೂ ಈ ಸೂಚನೆ ಪಾಲಿಸಿಲ್ಲ. ಹೀಗಾಗಿ ಪ್ರಯಾಣ ಭತ್ಯೆಗೆಂದೇ ಲಕ್ಷಾಂತರ ರೂಪಾಯಿ ಖರ್ಚಾಗುವುದು ಗ್ಯಾರಂಟಿ. ಸಚಿವ ಸಂಪುಟ ಸಭೆಯನ್ನೂ `ಜನಪ್ರಿಯ ಕಾರ್ಯಕ್ರಮ'ವಾಗಿಸಿ, ಅದರ ಮಹತ್ವವನ್ನು ಕಡಿಮೆ ಮಾಡುವ, ಅದಕ್ಕಾಗಿ ದುಂದುವೆಚ್ಚ ಮಾಡುವ ಮುಖ್ಯಮಂತ್ರಿಗಳ ಈ ತೀರ್ಮಾನ ಸರಿಯೇ, ತಪ್ಪೇ ನೀವೇ ಹೇಳಬೇಕು.

Wednesday, June 15, 2011

ಸೋತ ಕಾಂಗ್ರೆಸ್


`ರಾಜ್ಯ ಕಾಂಗ್ರೆಸ್ ಸತ್ತು ಮಲಗಿದ್ದರೆ ಮರುಜೀವ ಕೊಡುವ ಕೆಲಸ ಮಾಡಬಹುದಿತ್ತು. ಆದರೆ ಸತ್ತಂತೆ ಮಲಗಿದೆ. ಹೀಗಾಗಿ ಎಚ್ಚರಿಸುವುದು ಕಷ್ಟ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಖಾಸಗಿಯಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಸಾಂಸ್ಥಿಕ ಚುನಾವಣೆ ಹಳ್ಳ ಹಿಡಿದಿರುವುದನ್ನು ನೋಡಿದರೆ ಇದು ನಿಜವೆನಿಸುತ್ತಿದೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರೇ ಆಸಕ್ತಿ ವಹಿಸಿ, ಪ್ರಚಾರಕ್ಕೆ ಬಂದು ಅಭಿಯಾನಕ್ಕೆ ಚಾಲನೆ ನೀಡಿದ್ದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಪಕ್ಷದ ಹಿರಿಯ ನಾಯಕರಿಗೆ ಬಿಸಿರಕ್ತದವರು ಪಕ್ಷಕ್ಕೆ ಬರುವುದು ಬೇಡ. ಹೀಗಾಗಿ ಅಭಿಯಾನ ನಡೆಯುವಾಗ ಮನೆ ಬಿಟ್ಟು ಹೊರಬರಲಿಲ್ಲ. ಪರಿಣಾಮ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡವರ ಸಂಖ್ಯೆ 6.25 ಲಕ್ಷ ಮಾತ್ರ. ಗುರಿ ಇದ್ದಿದ್ದು ಎಷ್ಟು ಗೊತ್ತೇ, 37ಲಕ್ಷ !

18ರಿಂದ 35ವರ್ಷದೊಳಗಿನ ಯುವಜನರನ್ನು ಭಾರಿ ಪ್ರಮಾಣದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು,ಹೊಸ ಶಕ್ತಿ ತುಂಬುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿತ್ತು. ನಟಿ ರಮ್ಯಾ ಮತ್ತಿತರ ಸೇರ್ಪಡೆ ಕಾಂಗ್ರೆಸ್ ಬೆಂಬಲಿಗರಲ್ಲಿ ಹುರುಪು ಮೂಡಿಸಿತ್ತು. ಎಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ ಯುವಜನತೆಯ ಪಕ್ಷವಾಗಲಿದೆಯೇ ಎಂದು ರಾಜಕೀಯ ಆಸಕ್ತರೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಕಾಂಗ್ರೆಸ್ ಚಿಗುರುವ ಲಕ್ಷಣವನ್ನೇನೂ ತೋರಲಿಲ್ಲ.

ರಾಜ್ಯದಲ್ಲಿ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸದಸ್ಯತ್ವ ಅಭಿಯಾನ ನಡೆದಿದೆ. ನೆಲೆಯನ್ನೇ ಹೊಂದಿರದ ತಮಿಳುನಾಡಿನಲ್ಲಿಯೇ 17 ಲಕ್ಷ ಯುವಜನರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 16 ಲಕ್ಷ , ಬಲವಾದ ಕಾರ್ಯಕರ್ತರ ಪಡೆ ಇದ್ದರೂ ಚಿಕ್ಕ ರಾಜ್ಯದ ಕೇರಳದಲ್ಲಿ ಕೂಡ ಐದು ಲಕ್ಷ ಯುವಜನತೆ ಪಕ್ಷದತ್ತ ಕೈ ಚಾಚಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಹೀಗೇಕಾಯಿತು? ನಾಯಕರನ್ನು ಕೇಳಿದರೆ ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ 47 ಸಾವಿರ ಬೂತ್ ಗಳಲ್ಲಿ ಶೇ. 70 ಬೂತ್ ಗಳಲ್ಲಿಯಾದರೂ ಯುವ ಕಾಂಗ್ರೆಸ್ ಘಟಕ ತೆರೆಯುವ ಉದ್ದೇಶವನ್ನು ಪಕ್ಷ ಹೊಂದಿತ್ತು. ಎಷ್ಟು ಕಡೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆ ನಡೆಯುತ್ತದೆಯೋ ಕಾದು ನೋಡಬೇಕು. ರಾಜಕೀಯ ಪಕ್ಷದ ಕತೆ ಇರಲಿ, ರಾಜ್ಯದ ಯುವ ಜನತೆ ರಾಜಕೀಯದಿಂದ ದೂರವಾಗುತ್ತಿರುವುದರ ಸೂಚನೆಯನ್ನು ಇದು ನೀಡುತ್ತಿದೆಯೇ?