Friday, April 13, 2012

ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಗುಟ್ಕಾ ಗುಮ್ಮ


ಗುಟ್ಕಾ ನಿಷೇಧದ ಗುಮ್ಮ ಮತ್ತೆ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಅಡಿಕೆಗೆ `ಬಂಗಾರದ' ಬೆಲೆ ಬಂದಾಗಲೆಲ್ಲಾ ಈ ಗುಮ್ಮ ಜನ್ಮ ತಾಳಿ, ಬೆಳೆಗಾರರು ಆತಂಕದಿಂದಲೇ ದಿನ ದೂಡುವಂತೆ ಮಾಡುವುದು ಹೊಸ ವಿದ್ಯಮಾನವೇನೂ ಅಲ್ಲ. ಆಗಾಗ ಉತ್ತರ ಭಾರತದ ರಾಜ್ಯಗಳು ಹೀಗೆ ಗುಟ್ಕಾವನ್ನು ನಿಷೇಧಿಸಿ ತಮ್ಮ `ಸಾಮಾಜಿಕ ಕಳಕಳಿ'ಯನ್ನು ತೋರಿಸುತ್ತಿರುತ್ತವೆ. ಇದನ್ನೇ ಮುಂದಿಟ್ಟುಕೊಂಡು ವರ್ತಕರು ಬೆಳೆಗಾರರನ್ನು ಹಣ್ಣುಗಾಯಿ-ನೀರುಗಾಯಿ ಮಾಡುತ್ತಲೇ ಬಂದಿದ್ದಾರೆ.
ಈ ಬಾರಿ ಗುಟ್ಕಾ ನಿಷೇಧಿಸಿರುವುದು ಮಧ್ಯಪ್ರದೇಶ ಸರ್ಕಾರ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಜಾರಿಗೆ ತಂದಿರುವ `ಆಹಾರ ಮತ್ತು ಗುಣಮಟ್ಟ (ಮಾರಾಟದ ಮೇಲೆ ನಿಷೇಧ ಮತ್ತು ನಿರ್ಬಂಧ) ನಿಯಂತ್ರಣ 2011'ಕಾಯ್ದೆ ಅಡಿಯಲ್ಲಿ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಇದು ನಿಜವಾಗಿಯೂ ಅಡಿಕೆ ಬೆಳೆಗಾರರನ್ನು ಆತಂಕಕ್ಕೀಡು ಮಾಡಿರುವ ಸುದ್ದಿ. ಏಕೆಂದರೆ ಇದೊಂದು ಹೊಸ ಕಾನೂನು. ಕಳೆದ ವರ್ಷದವರೆಗೂ ಯಾವುದೇ ರಾಜ್ಯ ಸರ್ಕಾರಕ್ಕೆ ಗುಟ್ಕಾವನ್ನು ನಿಷೇಧಿಸುವ ಅಧಿಕಾರವಿರಲಿಲ್ಲ. ಆದರೂ ಏನಾದರೂ ಒಂದು ಗುಪ್ತ ಉದ್ದೇಶವನ್ನಿಟ್ಟುಕೊಂಡು ಗುಟ್ಕಾದ ಮೇಲೆ ನಿಷೇಧ ಹೇರುತ್ತಲೇ ಬಂದಿದ್ದವು. ಕೊನೆಗೆ ಇದನ್ನು ಗುಟ್ಕಾ ಕಂಪನಿಗಳ ಸಂಘಟನೆಯೋ, ಅಡಿಕೆ ಬೆಳೆಗಾರರ ಒಕ್ಕೂಟವೋ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ನಿಷೇಧವನ್ನು ತೆರವುಗೊಳಿಸಬೇಕಾಗಿತ್ತು. ಹೆಚ್ಚು ಕಡಿಮೆ ಕಳೆದ ಎರಡು ದಶಕಗಳಿಂದ ಈ ಕಣ್ಣಾ ಮುಚ್ಚಾಲೆ ಆಟ ನಡೆದುಕೊಂಡೇ ಬಂದಿತ್ತು.
ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಹಲ್ಲಿಲ್ಲದ ಹಾವಿನಂತಾಗಿದ್ದ ರಾಜ್ಯ ಸರ್ಕಾರಗಳ ಕೈಗೆ 2011ರ ಆಗಸ್ಟ್‌ 5ರಿಂದ ಜಾರಿಗೆ ಬಂದಿರುವ ಈ ಹೊಸ ಕಾಯ್ದೆ ಬ್ರಹ್ಮಾಸ್ತ್ರವನ್ನೇ ನೀಡಿದೆ. ಈ ಕಾಯ್ದೆಯ ನಿಷೇಧ ಮತ್ತು ನಿರ್ಬಂಧಕ್ಕೆ ಸಂಬಂಧಿಸಿದ ಪರಿಚ್ಛೆದದಲ್ಲಿ `ಯಾವುದೇ ಆಹಾರ ಪದಾರ್ಥದಲ್ಲಿ ತಂಬಾಕು ಮತ್ತು ನಿಕೋಟಿನ್‌ ಬಳಸುವಂತಿಲ್ಲ' ಎಂದು ಸ್ಪಷ್ಟ ಪಡಿಸಲಾಗಿದೆ. ಈಗ ಮಧ್ಯಪ್ರದೇಶ ಸರ್ಕಾರ ಗುಟ್ಕಾವನ್ನು ನಿಷೇಧಿಸಿರುವುದು ಈ ಕಾನೂನಿನಡಿಯಲ್ಲಿಯೇ. ನಿಷೇಧವನ್ನು ಉಲ್ಲಂಘಿಸಿ ಗುಟ್ಕಾ ಮಾರಾಟ ಮಾಡಿದಲ್ಲಿ, 25ಸಾವಿರ ದಂಡ ವಿಧಿಸುವುದಾಗಿಯೂ ಹೇಳಿದೆ.
ಗುಟ್ಕಾ ಆಹಾರ ಉತ್ಪನ್ನವಲ್ಲ, ಅದನ್ನು ಆಹಾರ ಕಾಯ್ದೆಯಡಿ ನಿಷೇಧಿಸುವುದು ಎಷ್ಟು ಸರಿ ಎಂಬ ಅಡಿಕೆ ಬೆಳೆಗಾರರ ಪ್ರಶ್ನೆಗೆ ಈಗಾಗಲೇ ಸುಪ್ರೀಂಕೋರ್ಟ್‌ ಉತ್ತರ ನೀಡಿಯಾಗಿದೆ. ಗೋದ್ವತ್‌ ಪಾನ್‌ ಮಸಾಲ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ` ಗುಟ್ಕಾ, ಪಾನ್‌ ಮಸಾಲ ಅಥವಾ ಅಡಿಕೆಯನ್ನು ರುಚಿಗಾಗಿ ಮತ್ತು ಆಹಾರವಾಗಿ ತಿನ್ನಲಾಗುತ್ತದೆ. ಹೀಗಾಗಿ ಇವೆಲ್ಲವೂ ಕಾಯ್ದೆಯ ಸೆಕ್ಷನ್‌2(ವಿ) ಅಡಿಯಲ್ಲಿ ಆಹಾರವೆಂದೇ ಪರಿಗಣಿಸಲ್ಪಡುತ್ತವೆ' ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.
ಲೈಸೆನ್ಸೂ ರದ್ದು
ಮಧ್ಯಪ್ರದೇಶ ಸರ್ಕಾರ ಈ ಬಾರಿ ಕೇವಲ ಗುಟ್ಕಾವನ್ನು ಮಾತ್ರ ನಿಷೇಧಿಸಿಲ್ಲ. ಗುಟ್ಕಾವನ್ನು ತಯಾರಿಸುತ್ತಿದ್ದ ಏಳು ಕಂಪನಿಗಳ ಪರವಾನಿಗೆಯನ್ನೂ ರದ್ದು ಪಡಿಸಿದೆ. ಇದಕ್ಕೆ ಕಾರಣ, ತಿನ್ನುವ ಗುಟ್ಕಾವನ್ನು ತಯಾರಿಸುವಾಗ ತಂಬಾಕು ಮತ್ತು ನಿಕೋಟಿನ್‌ ಬಳಸಲಾಗುತ್ತದೆ ಎಂಬುದು.
`ಕೇವಲ ಗುಟ್ಕಾ ಮಾರಾಟವನ್ನು ತಡೆದರೆ ಸಾಲದು, ಅದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದರೆ ಉತ್ಪಾದನೆಗೂ ಅವಕಾಶ ನೀಡಬಾರದು. ಈ ಕಾರಣದಿಂದಾಗಿ ಈ ವರ್ಷ ಏಳು ಗುಟ್ಕಾ ಕಂಪನಿಗಳಿಗೆ ನೀಡಲಾಗಿದ್ದ ಪರವಾನಿಗೆಯನ್ನು ನವೀಕರಿಸಿಲ್ಲ ಎಂದು ಆಹಾರ ಮತ್ತು ಔಷಧ ಇಲಾಖೆಯ ಕಂಟ್ರೋಲರ್‌ ಅಶ್ವಿನಿ ರಾಯ್‌ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಗುಟ್ಕಾ ತಯಾರಿಸುವಾಗ ಎಲ್ಲಿಯವರೆಗೆ, ತಂಬಾಕು, ನಿಕೋಟಿನ್‌ ಹಾಗೂ ಹಾನಿಕಾರಕ ರಾಸಾಯನಿಕಗಳಾದ ಮ್ಯಾಗ್ನೇಷಿಯಂ ಮತ್ತು ಕಾರ್ಬೊನೆಟ್‌ಗಳನ್ನು ಸೇರಿಸಲಾಗುತ್ತದೆಯೋ ಅಲ್ಲಿಯವರೆಗೂ ಈ ನಿಷೇಧ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಕಾನೂನಿನಡಿಯಲ್ಲಿಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಯಾವ ಒತ್ತಡವೂ ಇಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೂಡ ಇದೇ ಕಾಯ್ದೆಯಡಿ ಗುಟ್ಕಾದ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಅಲ್ಲಿಯ ಎಫ್‌ಡಿ ಅಧಿಕಾರಿಗಳು ಗುಟ್ಕಾ ಮಾರಾಟವನ್ನು ಸಂಪೂರ್ಣ ನಿಲ್ಲಿಸುವ ನಿಟ್ಟಿನಲ್ಲಿ ಸರಣಿ ದಾಳಿ ನಡೆಸುತ್ತಿದ್ದಾರೆ. ಗುಟ್ಕಾವನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ . ಆದರೆ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳನ್ನು ಒಳಗೊಂಡ ಯಾವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ನಡುವೆ ಎಫ್‌ಎಸ್‌ಎಸ್‌ಎಐ ಜಾರಿಗೆ ತಂದಿರುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಗುಟ್ಕಾ ಮಾರಾಟವನ್ನು ನಿಯಂತ್ರಿಸಿ ಎಂದು ಗುಟ್ಕಾ ವಿರುದ್ಧ ಹೋರಾಟ ನಡೆಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿವೆ. ಇದರ ಪರಿಣಾಮ ಬೇರೆ ರಾಜ್ಯಗಳೂ ಮಧ್ಯಪ್ರದೇಶದ ಹಾದಿಯನ್ನೇ ಹಿಡಿಯುವ ಸಾಧ್ಯತೆಗಳಿವೆ.
ಪರಿಣಾಮವೇನು
ಹೀಗೆ ಉತ್ತರ ಭಾರತದ ರಾಜ್ಯಗಳಲ್ಲಿ ಗುಟ್ಕಾ ನಿಷೇಧಗೊಂಡಲ್ಲಿ, ಅಡಿಕೆ ಬೆಳೆ ಪ್ರಪಾತಕ್ಕೆ ಕುಸಿಯುವುದಂತೂ ಗ್ಯಾರಂಟಿ. ಏಕೆಂದರೆ ಈಗ ಅಡಿಕೆಯನ್ನು ಮುಖ್ಯವಾಗಿ ಬಳಸುತ್ತಿರುವುದು ಗುಟ್ಕಾ ಮತ್ತು ಪಾನ್‌ ಮಸಾಲ ತಯಾರಿಸಲು ಮಾತ್ರ. ಒಂದು ಅಂದಾಜಿನ ಪ್ರಕಾರ ಶೇ. 80ಕ್ಕೂ ಹೆಚ್ಚು ಪ್ರಮಾಣದ ಅಡಿಕೆ ಗುಟ್ಕಾ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಗುಟ್ಕಾದಿಂದಾಗಿಯೇ ಅಡಿಕೆಗೆ ಬಂಗಾರದ ಬೆಲೆ ಬಂದಿದ್ದು.
ಮತ್ತೆ ಗುಟ್ಕಾ ನಿಷೇಧಕ್ಕೊಳಗಾಗಿ ಅಡಿಕೆ ಬೆಲೆ ಕುಸಿಯುತ್ತದೆ ಎಂದು ನಂಬಲೂ ಅಡಿಕೆ ಬೆಳೆಗಾರರು ಸಿದ್ಧರಿಲ್ಲ. ಏಕೆಂದರೆ ಈ ನಿಷೇಧದ ವಿಷಯ `ಹುಲಿ ಬಂತು ಹುಲಿ' ಎಂಬ ಕತೆಯಂತಾಗಿದೆ. ಮಧ್ಯಪ್ರದೇಶದಲ್ಲಿನ ಗುಟ್ಕಾ ನಿಷೇಧಕ್ಕೆ ಬೆಳೆಗಾರರು, ಪ್ರಾತಿನಿಧಿಕ ಸಂಘಟನೆಗಳು ತಣ್ಣಗೆ ಪ್ರತಿಕ್ರಿಯಿಸಿರುತ್ತಿರುವುದೇ ಇದಕ್ಕೆ ಸಾಕ್ಷಿ.
`ಮಧ್ಯಪ್ರದೇಶ ಸರ್ಕಾರದ ಈ ಕ್ರಮದಿಂದ ಚಾಲಿ ಅಡಿಕೆ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಗೋಟಡಕೆ ಗುಟ್ಕಾ ತಯಾರಿಕೆಯಲ್ಲಿ ಯಾವತ್ತೂ ಬಳಕೆಯಾಗಿಲ್ಲ' ಎನ್ನುತ್ತಾರೆ ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ. ಆದರೆ ಅವರು ಗುಟ್ಕಾ ನಿಷೇಧದ ಪರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ ಎಂದೂ ಹೇಳುತ್ತಾರೆ.
ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಕೇಸು ಈಗ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಿರುವಾಗ ಮಧ್ಯಪ್ರದೇಶ ಸರ್ಕಾರದ ಕ್ರಮ ಆಶ್ಚರ್ಯ ತಂದಿದ್ದು, ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎನ್ನುತ್ತಾರೆ ಶಿವಮೊಗ್ಗ ಮ್ಯಾಮ್‌ಕೋಸ್‌ನ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್‌.
`ರಾಜ್ಯ ಸರ್ಕಾರಕ್ಕೆ ಗುಟ್ಕಾ ನಿಷೇಧಿಸುವ ಅಧಿಕಾರವಿಲ್ಲ ಎಂದುಕೊಂಡಿದ್ದೆವು. ಹೊಸ ಕಾನೂನು ಜಾರಿಗೆ ಬಂದ ಬಗ್ಗೆ ಮಾಹಿತಿಯಿರಲಿಲ್ಲ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸದೇ ಬೇರೆ ದಾರಿ ಇಲ್ಲ' ಎಂದು ವಿವರಿಸುತ್ತಾರೆ.
ಕಳೆದ ವರ್ಷ ಗುಟ್ಕಾವನ್ನು ಪ್ಲಾಸ್ಟಿಕ್‌ ಸ್ಯಾಚೆಟ್‌ಗಳಲ್ಲಿ ಮಾರುವುದನ್ನು ನಿಷೇಧಿಸಿರುವ ಸುಪ್ರೀಂಕೋರ್ಟ್‌, ಗುಟ್ಕಾವನ್ನೇ ಏಕೆ ನಿಷೇಧಿಸಬಾರದು ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು. ಈ ಬಗ್ಗೆ ಸ್ವತಂತ್ರ ತಜ್ಞರ ತಂಡದಿಂದ ವರದಿಯನ್ನೂ ಪಡೆದುಕೊಂಡಿದೆ. ಗುಟ್ಕಾವನ್ನು ಸಂಪೂರ್ಣ ನಿಷೇಧಿಸಬೇಕೇ ಅಥವಾ ಸಿಗರೇಟಿನ ಪ್ಯಾಕೇಟ್‌ ಮೇಲೆ ಅಪಾಯವನ್ನು ಸೂಚಿಸುವ ಚಿತ್ರವನ್ನು ಪ್ರಕಟಿಸಿದಂತೆ ಗುಟ್ಕಾದ ಪ್ಯಾಕೇಟ್‌ಗಳ ಮೇಲೂ ಚಿತ್ರ ಹಾಕುವಂತೆ ಸೂಚಿಸಿದರೆ ಸಾಕೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ. ಕೋರ್ಟ್‌ ನೀಡಿದ ಗಡುವು ಮುಗಿದಿದ್ದರೂ ಆರೋಗ್ಯ ಸಚಿವರು ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಒಟ್ಟಾರೆ ಸುಪ್ರೀಂಕೋರ್ಟ್‌ನ ನಿಷೇಧದ ಕತ್ತಿ ತೂಗುತ್ತಿರುವಾಗಲೇ ಈಗ ಮತ್ತೊಂದು ಬಲೆ ಗುಟ್ಕಾ ಉದ್ಯಮದ ಮೇಲೆ ಬಿದ್ದಿದೆ. 3ಸಾವಿರ ಕೋಟಿ ವಹಿವಾಟು ನಡೆಸುವ ಈ ಉದ್ಯಮದ ಅಳಿವು-ಉಳಿವಿನ ಮೇಲೆ ರಾಜ್ಯದ ಅಡಿಕೆ ಬೆಳೆಗಾರರ ಭವಿಷ್ಯ ನಿಂತಿದೆ.

ಅಡಿಕೆಯೂ ಹಾನಿಕಾರವೇ
ಗುಟ್ಕಾದಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಎಂದು ಹೇಳಿ ಅದನ್ನು ನಿಷೇಧಿಸುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅಡಿಕೆಯೂ ಹಾನಿಕಾರಕ ಎಂದು ಬಿಂಬಿಸುತ್ತಿರುವುದನ್ನು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆ ಈಗ ಅಡಿಕೆ ಬೆಳೆಗಾರರ ಮುಂದಿದೆ.
1954ರ ಕೇಂದ್ರ ಆಹಾರ ಕಲಬೆರಿಕೆ ನಿಷೇಧ ಕಾಯ್ದೆಯಲ್ಲಿ ಅಡಿಕೆ ಹಾನಿಕಾರಕವಾದದು ಎಂದೇನೂ ಹೇಳಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ 1993ರಲ್ಲಿ ಕೇಂದ್ರ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತಂದು ಅಡಿಕೆಯನ್ನೂ ಹಾನಿಕಾರಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿಬಿಟ್ಟಿತ್ತು. ಇದರಿಂದಾಗಿ ಈಗಲೂ ಯಾವುದೇ ಶುದ್ಧ ಅಡಿಕೆ ಪುಡಿ ಪೊಟ್ಟಣಗಳ ಮೇಲೂ ಶಾಸನ ವಿಧಿಸಿದ ಎಚ್ಚರಿಕೆಯನ್ನು ಹಾಕಬೇಕಾಗಿದೆ. ಶತಶತಮಾನಗಳಿಂದ ಸಾಂಪ್ರದಾಯಿಕವಾಗಿ ಬಳಸಲ್ಪಡುತ್ತಿರುವ ಅಡಿಕೆ ಹೀಗೆ ಇದ್ದಕ್ಕಿದ್ದಂತೆ ಹಾನಿಕಾರಕವಾದದು ಹೇಗೆ ಎಂದು ಅಡಿಕೆ ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ.
ಗುಟ್ಕಾ ಬಂದ ನಂತರವಂತೂ ಅಡಿಕೆಯನ್ನು ಹಾನಿಕಾರಕ ಎಂದು ಪರಿಗಣಿಸುವ ಪರಿಪಾಠ ಹೆಚ್ಚಾಗಿದೆ. ವ್ಯಾಪಾರಿ ಮನೋಭಾವದಿಂದ ಗುಟ್ಕಾ ತಯಾರಿಸುವಾಗ ಅಡಿಕೆಯೊಂದಿಗೆ ತಂಬಾಕು, ಜರ್ದಾ ಮತ್ತು ವಿವಿಧ ರಾಸಾಯನಿಕಗಳನ್ನು ಸೇರಿಸಿದ್ದೇ ಇದಕ್ಕೆ ಕಾರಣ.
ಅಡಿಕೆಯು ಸೊಕ್ಕು ಗುಣವನ್ನು ಹೊಂದಿದ್ದು, ಇದು ನರಗಳನ್ನು ಉದ್ವೇಗಗೊಳಿಸುತ್ತದೆ. ಅಡಿಕೆಯಲ್ಲಿರುವ ಚೊಗರು ಪಿತ್ತಕಾರಿ ಇದನ್ನು ಆಯುರ್ವೇದದಲ್ಲಿ ಸ್ಪಷ್ಟವಾಗಿಯೇ ಹೇಳಲಾಗಿದೆ. ಅಡಿಕೆಯಲ್ಲಿ ಉದ್ವೇಗ ಗುಣ (ಸೊಕ್ಕು) ಅಧಿಕವಿರುವುದರಿಂದ ಯಾರ್ಯಾರು ತಾಂಬೂಲವನ್ನು ಬಳಸಬಾರದು ಎಂದೂ ಆಯುರ್ವೇದ ಹೇಳುತ್ತದೆ.
ಅಡಿಕೆಯೊಂದನ್ನೇ ತಿನ್ನುವುದು ಹಾನಿಕಾರಕ ಎಂಬುದನ್ನು ಹಿಂದಿನವರೂ ಹೇಳಿದ್ದಾರೆ. ಹೀಗಾಗಿಯೇ ಅಡಿಕೆಯನ್ನು ಮಾತ್ರ ತಿನ್ನದಂತೆ ಸೂಚಿಸುತ್ತಲೇ ಬರಲಾಗಿದೆ. ಉದಾಹರಣೆಗೆ ರಾಜ ನಿಘಂಟಿನಲ್ಲಿ ` ಅನಿಧಾಯಮುಖೇಪರ್ಣಂ ಪೂಗಂ ಖಾದತಿ ಯೋ ನರಃ ಮತಿಭ್ರಂಶೋ ದರಿದ್ರೀ ಸ್ಯಾದಂತೇ ಸ್ಮರತಿನೋ ಹರಿಮ್‌'ಎಂದು ಹೇಳಿದೆ. ಇದರ ಅರ್ಥ ವೀಳ್ಯದೆಲೆಯನ್ನು ಬಾಯಲ್ಲಿಟ್ಟುಕೊಳ್ಳದೇ ಅಡಿಕೆ ಮೆಲ್ಲುವಾತನು ಮತಿಭ್ರಾಂತನೂ ದರಿದ್ರನೂ ಆಗಿ ಅಂತ್ಯಕಾಲದಲ್ಲಿ ಹರಿಸ್ಮರಣೆಯನ್ನೂ ಮಾಡಲಾರನು ಎಂದು. ಇದು ಅಡಿಕೆ ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ.
ಹಳೆಯ ಮಾತೇಕೆ, ಕಳೆದ ಜನವರಿಯಲ್ಲಿ ಕೇವಲ ಅಡಿಕೆ ತಿನ್ನುವವರನ್ನು ಅಧ್ಯಯನಕ್ಕೊಳಪಡಿಸಿದ ಭೋಪಾಲ್‌ನ `ಪೀಪಲ್ಸ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸ್‌ ಅ್ಯಂಡ್‌ ರೀಸರ್ಚ್‌ ಸೆಂಟರ್‌'ನ ತಜ್ಞರು ಯಾವುದೇ ವಿಧದಲ್ಲಿ ಕೇವಲ ಅಡಿಕೆ ತಿನ್ನುವುದು ಅಪಾಯಕಾರಿ, ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಸಾರಿದ್ದಾರೆ.
ಅಡಿಕೆ ಮತ್ತು ವೀಳ್ಯದೆಲೆ ಸೇರಿಸಿದ ತಾಂಬೂಲವನ್ನು ಮಿತವಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಯಾರೂ ವಿಶ್ಲೇಷಣೆಗೊಳಪಡಿಸುತ್ತಿಲ್ಲ. ನಮ್ಮ ಮತ್ತು ಪಾಶ್ಚಿಮಾತ್ಯ ವಿಜ್ಞಾನಿಗಳು ಅಡಿಕೆಯನ್ನಷ್ಟೇ ಪ್ರಯೋಗಕ್ಕೊಳಪಡಿಸಿ, ಹಾನಿಕಾರಕ ಎಂದು ಸಾರುತ್ತಿದ್ದಾರೆ. ಹೀಗಾಗಿ ಶತಶತಮಾನಗಳಿಂದ ಬಳಕೆಯಲ್ಲಿರುವ ಅಡಿಕೆ ನಿಷೇಧಕೊಳಪಡಬೇಕಾದ ವಸ್ತುವಾಗಿದೆ.

ಗುಟ್ಕಾ ಸೈಲೆಂಟ್‌ ಕಿಲ್ಲರ್
ಪ್ರತಿ ವರ್ಷ ವಿಶ್ವದಲ್ಲಿ 80 ಸಾವಿರಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್‌ಗೆ ಒಳಗಾಗಿರುವ ಹೊಸ ರೋಗಿಗಳನ್ನು ಗುರುತಿಸಲಾಗುತ್ತಿದ್ದು, ಇವರಲ್ಲಿ ಹೆಚ್ಚಿನವರು ಭಾರತೀಯರು. ಇದಕ್ಕೆ ಕಾರಣ ಗುಟ್ಕಾ!
ಹೌದು, ಗುಟ್ಕಾ ಸೈಲೆಂಟ್‌ ಕಿಲ್ಲರ್ ! ತಣ್ಣಗೆ ವಿಷದಂತೆ ಕೆಲಸ ಮಾಡುತ್ತಿದೆ. ಟಾಟಾ ಮೆಮೊರಿಯಲ್‌ ಸೆಂಟರ್‌ನ ಅಧ್ಯಯನದ ಪ್ರಕಾರ ಪ್ರತಿ ವರ್ಷ 45,800 ಮಂದಿ ಬಾಯಿ, ತುಟಿ ಮತ್ತು ಗಂಟಲು ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ತಂಬಾಕಿನಿಂದ ಬರುತ್ತಿರುವ ಕ್ಯಾನ್ಸರ್‌ ಪ್ರಕರಣಗಳಲ್ಲಿ ಶೇ. 80ರಷ್ಟು ಪ್ರಕರಣಗಳು ಗುಟ್ಕಾ ಮತ್ತಿತರ ತಿನ್ನುವ ತಂಬಾಕಿನಿಂದ ಬರುವಂತಹವು. ಒಂದು ರೀತಿಯಲ್ಲಿ ಗುಟ್ಕಾ ಸಿಗರೇಟಿಗಿಂತಲೂ ಅಪಾಯಕಾರಿ.
ಗುಟ್ಕಾವನ್ನು ನಿರಂತರವಾಗಿ ಅಗಿದರೆ ಕ್ಯಾನ್ಸರ್‌ ಗ್ಯಾರಂಟಿ. ಇದು ಬಾಯಿ, ಒಸಡನ್ನು ಹಾಳು ಮಾಡುತ್ತದೆ. ಇದರಲ್ಲಿರುವ ರಾಸಾಯನಿಕಗಳು ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ಗುಟ್ಕಾವನ್ನು ನಿರಂತರವಾಗಿ ಸೇವಿಸುತ್ತಿದ್ದರೆ `ಸಬ್‌ ಮ್ಯೂಕಸ್‌ ಫೈಬ್ರೊಸಿಸ್‌'(ಬಾಯಿ ಬಿಗಿತ) ಉಂಟಾಗುತ್ತದೆ. ಇದರಿಂದ ಬಾಯೊಳಗಿನ ಒಳಪೊರೆ ಗಡಸಾಗುತ್ತದೆ. ಇದನ್ನು ಗುಣಪಡಿಸಲು ಸಾಧ್ಯವೇ ಇಲ್ಲ. ಇದು ಕ್ಯಾನ್ಸರ್‌ನ ಮುನ್ಸೂಚನೆ ನೀಡುವ ಮಹತ್ವದ ಲಕ್ಷಣ.
ಗುಟ್ಕಾ ಸೇವನೆಯಿಂದ ಕ್ಯಾನ್ಸರ್‌ ಬರುವುದಲ್ಲದೇ, ಇದರಲ್ಲಿನ ವಿಷಕಾರಿ ಅಂಶಗಳು ಅನ್ನಾ ನಾಳಕ್ಕೆ ಸೇರುತ್ತವೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು, ಏಡಿಗಂತಿಕೆ, ಪಾರ್ಕಿನ್‌ಸನ್‌ ರೋಗ ಕೂಡ ಬರುತ್ತವೆ.
1997ರಲ್ಲಿ ಗುಟ್ಕಾದ ಅಪಾಯದ ಕುರಿತು ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ನೇಮಿಸಿದ್ದ ಡಾ.ಎಚ್‌. ನರಸಿಂಹಯ್ಯ ನೇತೃತ್ವದ ಸದನ ಸಮಿತಿ ಕೂಡ ಗುಟ್ಕಾವನ್ನು ಕೂಡಲೇ ನಿಷೇಧಿಸಬೇಕೆಂದು ಶಿಫಾರಸು ಮಾಡಿತ್ತು.
ಗುಟ್ಕಾ ಅಡಿಕೆಗೆ ಬಂಗಾರದ ಬೆಲೆ ತಂದುಕೊಟ್ಟಿದೆ ಎಂಬ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳಬೇಕೇ, ಬೇಡವೇ ಎಂಬ ಕುರಿತು ಬೆಳೆಗಾರರಲ್ಲಿ ಗೊಂದಲವಿದೆ. ಗುಟ್ಕಾ ನಿಷೇಧಿಸುವುದಾದರೆ ಆರೋಗ್ಯಕ್ಕೆ ಹಾನಿಕರವಾದ ತಂಬಾಕು ನಿಷೇಧಿಸಲಿ, ಮದ್ಯಪಾನ ನಿಷೇಧಿಸಲಿ ಎಂದು ಹೇಳುವವರೇ ಹೆಚ್ಚು.
ಖ್ಯಾತ ರಂಗ ಕರ್ಮಿ, ಚಿಂತಕ ದಿವಂಗತ ಕೆ.ವಿ. ಸುಬ್ಬಣ್ಣ ಕೂಡ ಅಡಿಕೆ ಬೆಳೆಗಾರರಾಗಿದ್ದರು. ಅವರು ಈ ಬೆಳವಣಿಗೆ ಕುರಿತು ಬರೆಯುತ್ತಾ ` ಅಡಿಕೆಯನ್ನು ದೇವ ಸಂಬಂಧದ ಕಲ್ಪನೆಯಲ್ಲಿ ಪರಿಗಣಿಸುವುದಿರಲಿ, ಮನುಷ್ಯ ಸಂಬಂಧಗಳ ಕಲ್ಪನೆಯಲ್ಲೂ ಪರಿಗಣಿಸದೆ, ಹಣದ ಸಂಬಂಧದಲ್ಲಿ ಮಾತ್ರವೇ ಪರಿಗಣಿಸಿದ್ದೇವೆ. ಇದರಿಂದಾಗಿ ಅಡಿಕೆ ಮಾನವನ್ನೂ ಕಳೆದಿದ್ದೇವೆ' ಎಂದು ನೋವು ತೋಡಿಕೊಂಡಿದ್ದರು.
`ನಾನು ಗುಟ್ಕಾದ ಪರವಾಗಿಯೂ ಇಲ್ಲ , ವಿರೋಧವಾಗಿಯೂ ಇಲ್ಲ. ಅಡಿಕೆಗೆ ಯಾವುದೇ ಹಾನಿಕಾರಕವಾದ ವಿಷ ವಸ್ತುಗಳನ್ನು ಸೇರಿಸಿ ಅದನ್ನು ಜನರಿಗೆ ಚಟ, ಹವ್ಯಾಸವನ್ನಾಗಿ ಉಣಿಸುವುದು ಖಂಡಿತಾ ತಪ್ಪು. ಆದರೆ ಗುಟ್ಕಾವನ್ನು ಒಮ್ಮೆಲೆ ನಿಷೇಧಿಸುವುದರಿಂದ ಮತ್ತಷ್ಟು ಸಮಸ್ಯೆ ತಲೆದೊರುತ್ತದೆ. ಗುಟ್ಕಾದ ಹಾನಿಕಾರಕ ಅಂಶಗಳನ್ನು ನಿಯಂತ್ರಿಸುವ ಕೆಲಸವಾಗಬೇಕಿದೆಯೇ ವಿನಃ ಗುಟ್ಕಾ ನಿಷೇಧವಲ್ಲ. ಯಾವುದೋ ಗೊಂದಲ ಇದಕ್ಕೆಲ್ಲ ಕಾರಣವಾಗಿದೆ. ಅಡಿಕೆಯನ್ನೇ ನಾಶ ಪಡಿಸುವ ಯತ್ನಗಳು ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಈ ಬಗ್ಗೆ ನಾವು ಸೂಕ್ಷ್ಮವಾಗಿ ಯೋಚಿಸಬೇಕಾಗಿದೆ' ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಇದು ಬಹುಶಃ ಎಲ್ಲ ಅಡಿಕೆ ಬೆಳೆಗಾರರ ಅಭಿಪ್ರಾಯ ಕೂಡ.
(ವಿಜಯnext ನಲ್ಲಿ ಪ್ರಕಟಿತ ಲೇಖನ)