Saturday, August 4, 2012

ಮಂಗನ ಬ್ಯಾಟೆ


ಇದು ಕಲ್ಕುಳಿ ವಿಠಲ್ ಹೆಗ್ಡೆ ಬರೆದಿರುವ 'ಮಂಗನ ಬ್ಯಾಟೆ' ಬೃಹತ್ ಕಾದಂಬರಿಯ ಒಂದು ಭಾಗ. ಇದರ ಪ್ರೂಫ್ ನೋಡುತ್ತಿದ್ದೇನೆ. ಲಂಕೇಶ್ ಪ್ರಕಾಶನ ಪುಸ್ತಕವನ್ನು ಹೊರ ತರುತ್ತಿದೆ. ಗೌರಿ ಮೇಡಂಗೆ ಹೇಳ್ದೇ ಇದನ್ನು ಇಲ್ಲಿ ಪೋಸ್ಟ್ ಮಾಡುತಿದ್ದೇನೆ. ಓದಿದರೆ ನೀವೂ ಹೇಳ್ಬೇಡಿ ಪ್ಲೀಸ್...


 ಶಿಕಾರಿ ಅನ್ನೋದು ಅದೃಷ್ಟ. ಅದು ಯಾರ ವಿರುದ್ಧ ಯುದ್ಧ ಅಲ್ಲ. ಎದುರಾಳಿ ಸಿಕ್ಕೇ ಸಿಕ್ಕುತ್ತಾನೆ ಅನ್ನೋ ಗ್ಯಾರಂಟಿ ಇಲ್ಲ. ಶಿಕಾರಿಗೆ ಪರಿಣಿತಿ, ಧೈರ್ಯ, ಚಾಕಚಕ್ಯತೆ ಮುಂತಾದ ಎಲ್ಲಾ ಸಾಹಸಿಗುಣಗಳು ಇರ್ಬೇಕು. ಅವತ್ತೇನೋ ಅವರ ಗ್ರಹಚಾರ ನೆಟ್ಟಗಿರ್ಲಿಲ್ಲ ಅನ್ಸುತ್ತೆ, ಗೋವಿಂದ -ಸಿದ್ದ ರಾತ್ರಿ ಇಡೀ ಕಾಡ್ ಸುತ್ತಿದ್ರೂ ಸರಿಯಾದ್ದು ಒಂದೇ ಒಂದು ಪ್ರಾಣಿ ಕಣ್ಣಿಗೆ ಬಿದ್ದಿರ್ಲಿಲ್ಲ. ಆದ್ರೆ ಮನೆ ಹತ್ರಾನೇ `ಅಳುಗೂಸ'ಗಳು ಕಂಡಿದ್ದವು. ದಾರಿ ಪಕ್ಕದಲ್ಲೇ ದೊಡ್ಡ ದೊಡ್ಡ ಕಣ್ ಬಿಟ್ಕಂಡು ಕೂತ್ತಿದ್ದ ಅವುಗಳ ಕಣ್ಣು ನೋಡ್ದೊರೇ ಕಬ್ಬೆಕ್ಕೇ ಇರ್ಬೇಕು ಅಂದ್ಕೊಂಡ್ರು.  ಕೊನೆಗೆ ನೋಡಿದ್ರೆ ಶನಿ ಹಿಡಿದವು, ಅಳುಗೂಸಗಳು. ಅಳುಗೂಸಗಳನ್ನ ಯಾರೂ ತಿನ್ನೋದಿಲ್ಲ. ಅಳುಗೂಸಗಳು (ಕಾಡು ಪಾಪ) ಕೂಗೋದೇ ಒಂತರಾ ರಚ್ಚೆ ಹಿಡಿದ ಮಕ್ಕಳ ತರ. ಒಮ್ಮೆ ಅಳಕ್ಕೆ ಶುರು ಮಾಡಿದ್ರೆ ಎಷ್ಟೋತ್ತಿಗೂ ಒಂದೇ ಸಮ ಅಳ್ತಾನೇ ಇರ್ತವೆ. ಹಿಂಗೇ ಅಳೋ ಮಕ್ಕಳಿಗೆಲ್ಲಾ ಅಳುಗೂಸ ಅಂತಾರೆ. ಸಿದ್ದ- ಗೋವಿಂದ ಕಾಲ್ದಾರಿಯಿಂದ ಗಾಡಿರಸ್ತೆಗೆ ದಾಟಬೇಕು. ಅಷ್ಟ್ರಲ್ಲೇ ಒಂದು ಪ್ರಾಣಿ ಕಣ್ ತೋರ್ಸಿ ಮಾಯ ಆಯ್ತು. ಗೋವಿಂದ 'ಥೂ ಶನಿ' ಅಂತ ಬೈದು 'ಸಿದ್ದಾ ಇವತ್ತೇನೋ ಗ್ರಹಚಾರ ಸರಿ ಇಲ್ಲ ಕಣೋ. ಹಡಬೆಗೆ ಹುಟ್ಟಿದ್ದು ನರಿ ಕುಂಡಿ ತೋರಿಸಿ ಹೋಯ್ತಲ್ಲಾ ಅದರ ಮನೆ ಹಾಳಾಗಾ...' ಅಂತ ಬೈದ.
'ನರಿ ಮುಖ ನೋಡ್ದೋನು' ಅಂತ ಒಂದು ಮಾತಿದೆ. ನರಿ ಮುಖ ತೋರಿಸಿದ್ರೆ ಅದೃಷ್ಟ ಅಂತ. ಆದ್ರೆ ನರಿಗಳಿಗೆ ಅದೇನು ಕೆಟ್ಟ ಬುದ್ಧಿಯೋ ಗೊತ್ತಿಲ್ಲ. ಹಗ್ಲಲ್ಲಾಗ್ಲಿ ರಾತ್ರಿಯಲ್ಲಾಗ್ಲಿ ಮನುಷ್ಯರನ್ನ ಕಂಡ್ರೆ ಮುಖ ತೋರಿಸಿದ ಮರು ಕ್ಷಣದಲ್ಲೇ ಕುಂಡಿ ತೋರಿಸಿಕೊಂಡು ನಿಂತಿರ್ತಾವೆ. ಅವುಕ್ಕೂ ಗಾದೆ ಗೊತ್ತೋ ಏನೋ...! ಹಾಳು ಮನುಷ್ಯರಿಗೆ ಮುಖ ತೋರಿಸಬಾರದು ಅಂತ ಮೊದಲೇ ಅವು ಒಪ್ಪಂದ ಮಾಡಿಕೊಂಡಿದ್ದಾವೋ ಏನೋ!. ನರಿ ಮುಖ ಅದೃಷ್ಟದ ಸಂಕೇತ ಆದ್ರೆ ಅದರ ಕುಂಡಿ ನೋಡಿದ್ರೆ ಹೋದ್ ಕೆಲ್ಸ ಆಗಲ್ಲ ಅಂತ ನಂಬಿಕೆ. ಗೋವಿಂದ ನರಿ ಸುದ್ದಿ ಹೇಳ್ತಿದಂಗೆ ಹಡಬೆಗೆ ಹುಟ್ಟಿದ ನರಿಗಳು ಯಾಕಾರು ಕಾಣ್ತವೋ ಅಂಥ ಸಿದ್ದ ನರಿಗಳಿಗೆ ಶಾಪ ಹಾಕ್ತ ಹೆಜ್ಜೆ ಹಾಕಿದ. ಎಲ್ಲಾದ್ರೂ ಇದನ್ನೇ ನೆವ ಮಾಡಿಕೊಂಡು ಗೋವಿಂದ ಶಿಕಾರಿ ಆಗಲ್ಲ ಮನೆಗೆ ವಾಪಾಸ್ ಹೋಗೋನಾ ಅಂತ ಅಂದ್ರೆ ಏನ್ ಗತಿ ಅಂತ ಅದ್ಕೊಂಡ. ಅಷ್ಟರಲ್ಲೇ ಗೋವಿಂದ 'ನರಿ ಕುಂಡೆ ನೋಡಿದ್ ಮೇಲೆ ಮುಂದಕ್ಕೆ ಹೋಗುವುದು ದಂಡ ವಾಪಾಸ್ ಹೊಗೋನಾ' ಅಂತ ಅಂದೇ ಬಿಟ್ಟ. ಅದಕ್ಕೆ ಸಿದ್ದ 'ಹ್ಯಾಂಗೂ ಬಂದಿದ್ದೇವಲ್ಲ, ಇದೊಂದ್ ಕಾಡ್ ನೋಡೇ ಹೋಗೋನಾ' ಅಂತ ಒಪ್ಪಿಸಿದ.
ರಾತ್ರಿಯೆಲ್ಲಾ ಕಾಡು ಸುತ್ತಿ ಸುತ್ತಿ ಸುಸ್ತಾದರೂ ಶಿಕಾರಿ ಆಗ್ಲಿಲ್ಲ. ಗೋವಿಂದ ಸಿದ್ದನಿಗೆ 'ನಿನ್ನ ಬಾಯಿ ಚಟ ತೀರಿಸೋಕೆ ಯಾರು ಹುಟ್ಟಿಲ್ಲ ಬಿಡು, ಬ್ಯಾಡ ಕಣೋ ಮಾರಾಯ ನರಿ ಮುಕುಳಿ ತೋರ್ಸದೆ,ವಾಪಾಸ್ ಹೋಗನಾ ಅಂದ್ರೆ ಕೇಳಿದ್ಯಾ, ಕಾಡೆಲ್ಲಾ ಸುತ್ತಿಸಿ ಅತ್ಲಾಗೆ ಕಾಲ್ ಶನಿ ಬಿಡಿಸಿದ್ದಿ, ಇತ್ಲಾಗೆ ಬ್ಯಾಟ್ರಿ ಸೆಲ್ ಉಳೀಲಿಲ್ಲ. ಮನೇಲಿ ಮಲ್ಗಕ್ಕೇನು ಹಾಸಿಗೇಲಿ ಇರಿವೆ ಎದ್ದಿದ್ವಾ? ಇಲ್ಲಿ ಬಂದು ಕಾಡಲ್ಲಿ ತಂದು ಮಲಿಗಿಸಿದ್ಯಲ್ಲ' ಅಂತ ಸಿದ್ದಂಗೆ ಬೈದು, ಫಾರೆಸ್ಟ್ ಇಲಾಖೆಯವರು ಕಾಡು ಕಡಿಯಕ್ಕೆ ಮಾಡಿದ ಲಾರಿ ರಸ್ತೇಲಿ ಮಟ್ಟವಾಗಿದ್ದ ಜಾಗ ಹುಡ್ಕೊಂಡು ಸೂಡ್ಕೊಂಡಿದ್ದ ಕಂಬ್ಳೀನ ಬಿಚ್ಚಿ ಒಳ ಮಗ್ಗಲು ಹಾಕ್ಕೊಂಡು ಮಲಿಗಿದ. ಒಳಮಗ್ಗಲು ಅಂದ್ರೆ ಕಂಬಳಿಯನ್ನು ಸೂಡುವಾಗ ಎರಡು ಮಡಿಕೆ ಮಾಡಿ ಸೂಡಿ ಕೊಳ್ಳುತ್ತಾರೆ. ಅದೇ ಕಂಬ್ಳಿಯನ್ನ ಹಾಸಲು ಹೊದೆಯಲು ಎರಡಕ್ಕೂ ಬಳಸುವಾಗ ಅದರ ಒಂದು ಎಳೆ ಬಿಚ್ಚಿ ಹಾಸ್ಕೊಂಡು, ಇನ್ನೊಂದು ಎಳೆಯನ್ನ ಹೊದ್ದುಕೊಳ್ತಾರೆ. ಇದಕ್ಕೆ ಒಳಮಗ್ಗಲು ಕಂಬ್ಳಿ ಅಂತಾರೆ. ಗೋವಿಂದ ಮಲಗಿದ ಮೇಲೆ ಸಿದ್ದನೂ ಒಂದ್ ಎಲೆಅಡಿಕೆ ಹಾಕಿ, ಉಗಿದು ಅಲ್ಲೇ ಮಲ್ಕೊಂಡ.
ಇನ್ನೇನು ಬೆಳಕು ಬಿಡಬೇಕು, ಇಬ್ಬನಿ ಮರದ ಎಲೆಯಿಂದ ತಟ - ಪಟ ಅಂಥ ಮಳೆ ಹನಿತರ ಸುರಿತ್ತಿತ್ತು. ಸಿದ್ದ ಕರಡಿ ಮರಿತರ ಕಂಬ್ಳಿ ಒಳಮಗ್ಗಲು ಹಾಕ್ಕೊಂಡು ಮುದರಿಕೊಂಡು ಮಲಗಿದ್ದ. ಗೋವಿಂದ ಚಳೀಲಿ ಎದ್ದು ಕೂತ. 'ಇವನ ದೆಸೆಯಿಂದ ಸುಖ ಇಲ್ಲಾ' ಅಂತ ಸಿದ್ದಂಗೆ ಬೈದು, ಅವನಿನ್ನೂ ಮಲಗಿರೋದನ್ನ ನೋಡಿ, 'ಇದೆಂತದಾ ಇನ್ನೂ ಮಲ್ಕೊಂಡಿದ್ಯಾ... ಇಲ್ಲೇ ಇರಾನ ಅಂತ ಮಾಡ್ಕೊಂಡಿದ್ಯನೋ...' ಅಂತ ಸಿದ್ದನ ಎಬ್ಬಿಸಿದ. ಇಷ್ಟಕ್ಕೇನು ಸಿದ್ದ ಎಚ್ಚರವಾಗ್ಲಿಲ್ಲ. ಗೋವಿಂದ ಚಳೀಲಿ ನಡುಗ್ತಾ ಬ್ಯಾಟೆಗೆ ಬಂದ ತನಗೆ ತಾನೇ ಬೈದುಕೊಂಡ. ' ಸಿದ್ದ ನನಗೆ ಏನ್ ಮಂಕು ಮಾಡಿಯಾನೋ ಗೊತ್ತಿಲ್ಲ. ನನ್ನ ಬುದ್ಧಿಗೆ ಏನಾಗಿದೆ. ಇವ ಶಿಕಾರಿಗೆ ಕರೆದ್ರೆ ಆಗೋಲ್ಲ ಅಂತ ಹೇಳೋಕೆ ಬಾಯಿ ಬರಲ್ಲ ನಂಗೆ. ಅಮ್ಮೋರು ಶಿಕಾರಿ ಹುಚ್ಚು ಬಿಡು ಅಂತ ಎಷ್ಟು ಬೈದ್ರು  ಮಾನ ಮಯರ್ಾದೆ ಇಲ್ಲ. ಇವನ ಗೊಟ್ಗೆ ಬಿಡೋದೆಂಗೆ... ಇದೊಂತರಾ ಪೀಡೆ ಆಗಿದೆಯಲ್ಲಾ...' ಅಂತ ಯೋಚಿಸಿದ.
ಚಳಿ ತಾಳಲಾರದೆ ದಗರ್ೆಲ್ಲಾ (ಒಣಗಿದ ಎಲೆಗಳ ರಾಶಿ) ಒಟ್ಟು ಮಾಡಿ ಬೆಂಕಿ ಹಚ್ಚಿ ಚಳಿ ಕಾಯಿಸಿದ. ಸಿದ್ದನ್ನ ಕರೆದರೆ ಏಳಲಿಲ್ಲ. ಓಡುಹುಳದ ಥರ ಸುರಳಿ ಹೊಡ್ಕೊಂಡು ಮಲಗಿದ್ದ. ಬೆಳಕ್ ಬಿಡ್ತು ಅನ್ನುತ್ತಿದ್ದಂಗೇ ಸಿದ್ದ ಎದ್ದು ಕಂಬ್ಳಿ ಕೊಡ್ಕಿ ಗಳಿಗಿ ಮಾಡಿ ಸೂಡ್ಕೊಂಡು. ಅಂಗೈಯನ್ನ ಬೆಂಕಿಗೆ ಒಡ್ಡಿ ಚಳಿ ಕಾಸ್ತಾ  ಎಲಡ್ಕೆ ಚೀಲ ತೆಗೆದ. ಗೋವಿಂದಂಗೆ ಶಿಕಾರಿದೊಂದು ಚಟ ಬಿಟ್ರೆ ಕಣ್ಣಿಗೆ ಕಾಣುವಂತ್ತದ್ದು ಇನ್ಯಾವ ಚಟ ಇರ್ಲಿಲ್ಲ. ಹೀಗೆ ಸಿದ್ದ ನಿಧಾನವಾಗಿ ಎದ್ದಿದ್ದನ್ನು ನೋಡಿದ ಗೋವಿಂದ ಅವನಿಗೆ ಒಂದಿಷ್ಟು ಬೈತಾ ಎದ್ದು ಹೊರಟ. ಸಿದ್ದ ಗೋವಿಂದ ಹಾಕಿದ ಬೆಂಕಿಗೆ ಎಲಡ್ಕೆ ಉಗಿದು. ಅದನ್ನೆಲ್ಲಾ ಚೆದುರಿಸಿ ಬೆಂಕಿ ನಂದ್ಸಿದ. ಕಾಡಲ್ಲಿ ಬೆಂಕಿ ಹಾಕಿದವರು ಅದನ್ನು ಪೂತರ್ಿಯಾಗಿ ನಂದಿಸಿಯೇ ಹೋಗಬೇಕೆಂಬುದು ನಡ್ಕೊಂಡು ಬಂದ ನಿಯಮ. ಕಾಡಲ್ಲಿ ಬೆಂಕಿ ಹಾಕಿ ಹಾಗೇ ಬಂದ್ರೆ ಕಾನ್ದೇವರು ಶಾಪ ಕೊಡ್ತಾಳಂತೆ. ಆಮೇಲೆ  ಶಿಕಾರಿ ಮನೆ ಹಾಳಾಗ್ಲಿ ಕುಲಾನೇ ನಾಶ ಆಗ್ತದಂತ ನಂಬಿಕೆ. ಕಾಡಿಗೆ ಬೆಂಕಿ ಬಿದ್ರೆ ಕುಡಿಯೋ ಬಾವಿ ನೀರೆಲ್ಲ ಆರ್ತದೆ ಅಂತನೂ ಒಂದ್ ಮಾತಿದೆ. ಇದೆಲ್ಲಾ ಕಾಡಿನೊಂದಿಗೆ ಬದುಕಿ ಬಾಳುವವರ ಅನುಭವದ ಗಾದೆ. ಆದರೂ ಜೇನು ಕೀಳಕ್ಕೆ ಹೋದವರು, ದನಗಳಿಗೆ ಚಿಗುರುಹುಲ್ಲು ಬರಲಿ ಅನ್ನೋ ಆಸೇಲಿ ದನಕಾಯೋ ಹುಡುಗ್ರು ಬೆಂಕಿ ಹಾಕಿ ಹಾಗೇ ಬಿಟ್ಟು ಕಾಡೆಲ್ಲಾ ಉರಿದುಹೋದ ಪ್ರಕರಣಗಳು ಇವೆ.
ಬೆಂಕಿ ನಂದಿಸಿಯಾದ ಮೇಲೆ, 'ನಡೀರಿ ಹೋಗನಾ' ಅಂತ ಸಿದ್ದ ಗೋವಿಂದನ್ನ ಎಬ್ಬಿಸಿಕೊಂಡು ಹೊರಟ. ಗೋವಿಂದ ಬ್ಯಾಟ್ರಿ, ಹೆಡ್ಲೈಟನ್ನೆಲ್ಲಾ ಬಗಲ ಚೀಲಕ್ಕೆ ಹಾಕ್ಕೊಂಡು ಕೋವಿ ಹಿಡ್ಕೊಂಡು ಸಿದ್ದನ ಹಿಂದೆ ಹೋದ. ಸುಮಾರು ದೂರ ಗಡೀ ಗುಡ್ಡೆ ಕಾಡಿಂದ ಇಳಿದು, ಕೊಚ್ಚೊಳ್ಳಿ ಹೊಳೆ ಹತ್ರ ಸಂಕದ ಬೈಲು ಅಂತ ಕರೆಯೋ ಬೈಲಿಗೆ ದಾಟಿದ್ರು. ಕಾಡ್ಕೋಳಿ ಉದ್ದಕ್ಕೂ ಕೂಗ್ತಾ ಇರೋದು ಕೇಳ್ತಾ ಇತ್ತು. ಇವರು ಇನ್ನೇನು ಬೈಲಿಗೆ ದಾಟ ಬೇಕು. ಇವ್ರು ಬರೋ ದಾರಿಗೆ ಎದುರಾಗಿ ಒಂದು ಪ್ರಾಣಿ ಬಂತು!
ಅದೊಂತರ ವಿಚಿತ್ರ ಪ್ರಾಣಿ. ಉಡನೂ ಅಲ್ಲ, ಮೊಸಳೇನೂ ಅಲ್ಲ. ಮೊಸಳೇ ತರ ಬಾಲ, ಬೆನ್ನು ಗುಗ್ಗುರಿಸಿ ಕೊಂಡಿದೆ. ಅದರೆ ಅದರ ಹಿಂದೆ ಯಾವುದು ಮುಂದೆ ಯಾವುದು ಅಂಥ ಗೊತ್ತಾಗ್ತಿಲ್ಲ. ಹತ್ತಿರ ನೋಡಿದ್ರೆ ತಲೆಗಿಂತ ಬಾಲನೇ ದೊಡ್ದದು. ಬೆನ್ನು ಎತ್ತರ ಮಾಡಿಕೊಂಡು ನವಿಲಿನ ತರ ನಿಧಾನಕ್ಕೆ ಒಂದೊಂದೇ ಹೆಜ್ಜೆ ಎತ್ತಿಡುತ್ತಿದೆ. ಕವಣ(ಮಂಜು) ದಟ್ಟವಾಗಿದ್ರ್ರೂ ಸ್ಪಷ್ಟವಾಗಿ ಪ್ರಾಣಿ ಕಾಣ್ತಾ ಇದೆ. ಸಿದ್ದ ಅಂಥ ಪ್ರಾಣಿನೇ ನೋಡಿರಲಿಲ್ಲ. ಅದು ಕಂಡ ಕೂಡ್ಲೇ ಗಕ್ ಅಂಥ ನಿಂತ. ಗೋವಿಂದನಿಗೆ, 'ಅದೆಂತದ್ರೋ ಅದು..' ಅಂತ ಪಿಸುಗುಟ್ಟಿದ. ಗೋವಿಂದ 'ತಡಿ... ತಡೀ..' ಎಂದು ರಾತ್ರಿ ಶಿಕಾರಿಗೆ ಹಾಕಿದ್ದ ಈಡು ಹಂಗೆ ಇತ್ತಲ್ಲಾ 'ಢಂ' ಅಂತ ಹೊಡ್ದೇ ಬಿಟ್ಟ. ಅಷ್ಟುದ್ದದ ಪ್ರಾಣಿ ಓಡುಹುಳದ ಥರ ಮುದ್ದೆಯಾಗಿ ಚೆಂಡಿನಂತೆ ಉರುಳುರುಳಿ ಹೋಗಿ ಉಡಿ ಒಳಗೆ ಬಿತ್ತು.
ಈಡುಗಾರ ಹೊಡೆದ ತಕ್ಷಣ ಅಷ್ಟೇ ವೇಗವಾಗಿ ಹೋಗಿ ಶಿಕಾರಿಯಾದ ಪ್ರಾಣಿಯ ಕಾಲುಕಡಿಯುವುದು ಸಹಚರನ ಆದ್ಯ ಕರ್ತವ್ಯ. ಸಿದ್ದ ಅದರಲ್ಲಿ ಎತ್ತಿದ ಕೈ. ಗೋವಿಂದ ಹೊಡೆದ ಕಡು, ಕಾಡಂದಿ ಎಂತೆಥವನ್ನೆಲ್ಲಾ ಕಾಲು ಕಡಿದಿದ್ದಾನೆ. ಎಷ್ಟು ಚುರುಕಾಗಿ ನಿಪುಣನಾದ ಸಿದ್ದ ಕೆಲಸ ಮಾಡಿದ್ರು ಉದಾಸೀನ ಮಾಡ್ದಿ ಅಂತ ಗೋವಿಂದನ ಕೈಲಿ ಬೈಸಿಕೊಳ್ಳೋದು ಸಹಜವಾಗೇ ಇತ್ತು. ಗೋವಿಂದ ಕೋವಿ ಬಿಲ್ಲಿಗೆ ಕೈಯಿಟ್ಟ ಅಂದ್ ಕೂಡ್ಲೇ ಸಿದ್ದ ಸೊಂಟದಿಂದ ಕತ್ತಿ ತೆಕ್ಕೊಂಡು ತಯಾರಾಗಿರುತ್ತಿದ್ದ. ಅವರಿಬ್ಬರಿಗೆ ಇದ್ದ ಶಿಕಾರಿ ಹೊಂದಾಣಿಕೆ ಊರಲ್ಲಿ ಮತ್ಯಾರಿಗೂ ಇರಲಿಲ್ಲ. ಅವರಿಬ್ಬರು ಬೇರೆ ಬೇರೆ ಶಿಕಾರಿಯವರ ಜೊತೆ ಹೋಗಿಯೂ ನೋಡಿದ್ದಾರೆ. ಇನ್ಯಾರೊಂದಿಗೂ ಇಬ್ಬರಿಗೂ ಸರಿಯಾಗ್ತಿರಲಿಲ್ಲ. ಇವರಿಬ್ಬರ ನಡುವೆ ಅಂಥಾ ಹೊಂದಾಣಿಕೆಯಿತ್ತು.
ರಾತ್ರ್ರಿ ಶಿಕಾರಿ ಆಗದಿದ್ದರೆ ಏನಂತೆ, ಬೆಳಗ್ಗೆಯೇ ಪ್ರಾಣಿ ಸಿಕ್ಕಿದೆ. ಗೋವಿಂದ ಹೊಡೆದಿದ್ದಾನೆ, ಪ್ರಾಣಿ ಬಿದ್ದಿದೆ. ಕಾಲು ಕಡೀಬೇಕು ಅಂತ ಸಿದ್ದ ಓಡಿ ಹೋಗಿ ನೋಡಿದ್ರೆ, ಕಾಲೇ ಕಾಣ್ತಿಲ್ಲ. ಕೈಯು ಕಾಣ್ತಿಲ್ಲ! ಅಭ್ಯಾಸ ಬಲದಿಂದ ಸಿದ್ದ ಓಡಿ ಹೋದವನೇ ಎತ್ತಿದ ಕತ್ತಿಯಿಂದ ಒಂದು ಪೆಟ್ಟು ಹಾಕೇ ಬಿಟ್ಟಿದ್ದ. ಇವ ಕಡ್ದ ಹೊಡತಕ್ಕೆ ಕತ್ತಿ ತೆವುಂಟಿ ಹಾರಿ ಕತ್ತಿ ಬಾಯಿ ಹೊಯ್ತು. ಕಲ್ಲು ಕಡಿದಂಗೆ ಶಬ್ದ ಬಂತು. ತಾನು ಕಡದದ್ದು ಪ್ರಾಣಿನಾ ಅಥವಾ ಕಲ್ಲೋ ಒಂದೂ ಗೊತ್ತಾಗ್ಲಿಲ್ಲ ಸಿದ್ದಂಗೆ. ಅಷ್ಟೊತ್ತಿಗೆ ಗೋವಿಂದ ಕೆಲಸ ಕೆಡ್ತು ಅಂತ ಓಡಿ ಬಂದು ನೋಡ್ತಾನೆ ಚಿಪ್ಪಿನ ಹಂದಿ. ಅವ ಕೂಡಾ ಚಿಪ್ಪಿನ ಹಂದಿ ಬಗ್ಗೆ ಕೇಳಿದ್ನೆ ಹೊರತು ನೋಡಿದ್ದು, ಶಿಕಾರಿ ಮಾಡಿದ್ದು ಇದೇ ಮೊದಲು.
ಚಿಪ್ಪಿನ ಹಂದಿ ನೆಲದ ಮೇಲಿನ ಮೊಸಳೆ. ಇದರ ಮೈಯಲ್ಲೆಲ್ಲಾ ಹರಿತವಾದ ಚಿಪ್ಪು ವಿಶೇಷವಾದ ರೀತಿಯಲ್ಲಿ ಜೋಡಿಸಿಟ್ಟಂತೆ ಇರುತ್ತದೆ. ಮೊಸಳೆಯಂಥ ಬಾಲ, ಗಿಡ್ಡವೂ ದಪ್ಪವೂ ಆದಂಥ ಉಡದಂತ ಕೈ ಕಾಲು. ಅದರ ಮೂತಿ ಚೂಪು. ಹಂದಿಯ ಮೂತಿಯಂತಿದ್ದರೂ ಅದಕ್ಕಿಂತ ಉದ್ದ. ಚಿಪ್ಪಿನ ಹಂದಿಗೆ ಅಪಾಯ ಬಂದಾಗಲೆಲ್ಲಾ ಅದರ ಎದುರು ಕಾಲಿನ ಒಳಗೆ ಮುಖ ತೂರಿಸಿ ಇಡೀ ದೇಹವನ್ನೇ ಚಂಡಿನಂತೆ ಮಾಡಿಕೊಂಡು ಎಲ್ಲಾ ಚಿಪ್ಪುಗಳನ್ನು ಕೆದರಿಸಿಕೊಂಡಿರುತ್ತದೆ. ಅದರ ದೇಹದ ಯಾವ ಭಾಗವನ್ನು ಮುಟ್ಟಿದರೂ ಚಿಪ್ಪಿನಲ್ಲೇ ಕತ್ತರಿಸಿ ಬಿಡುತ್ತದೆ. ಅವುಗಳನ್ನು ಹುಲಿಕೂಡ ಹಿಡಿಯಲಾಗುವುದಿಲ್ಲ. ಹುಲಿ ಕಂಡ ಕೂಡಲೇ ಮಂಡೆ ಒಳ ಹಾಕಿದರೆ ಹುಲಿ ಬೆಳಗಿಂದ ಸಂಜೆವರೆಗೂ ಅದರ ದೇಹವನ್ನು ಉರುಳಾಡಿಸಿದರೂ ಅದರ ಮೂತಿಯನ್ನಂತೂ ಹೊರಗೆ ತೆಗೆಯುವುದಿಲ್ಲ. ಹುಲಿಯೇ ಬೇಸರಗೊಂಡು ಚಂಡಾಡುವುದು ಬಿಟ್ಟು ಹೋಗಬೇಕು. ಚಿಪ್ಪಿನ ಹಂದಿ ಮೂತಿಯೊಂದು ಬಿಟ್ಟು ಇನ್ನಾವ ಭಾಗವು ಹಂದಿಯಂತಿಲ್ಲ. ಅದಕ್ಕೆ ಹಂದಿಯಂತ ಯಾರು ಯಾಕೆ ಹೆಸರಿಟ್ಟರೋ ಗೊತ್ತಿಲ್ಲ. ನೆಲದ ಮೇಲೆ ಓಡಾಡುತ್ತೆ. ಮೂತಿ ಹಂದಿ ತರನೇ ಇದೇ ಅಂಥ ಹಂದಿ ಅಂತ ಕರೆದಿರಬೇಕು. ಅಥವಾ ಮಾಂಸದ ರುಚಿ ಸವಿದು ಹಂದಿ ಅಂತ ಕರೆದರೊ ಗೊತ್ತಿಲ್ಲ.
ಮಲೆನಾಡಿನ ಅಪರೂಪದ ಪ್ರಾಣಿಗಳಲ್ಲಿಯೇ ಅಪರೂಪವಾದದ್ದು ಚಿಪ್ಪಿನ ಹಂದಿ. ಇದು ಕೀಟಾಹಾರಿ. ಇರುವೆ, ಗೆದ್ದಲು ಗೂಡುಗಳಿರುವ ಹುತ್ತಗಳನ್ನು ಅಥವಾ ಮರದ ಪೊಟರೆಗಳನ್ನು ತನ್ನ ಬಲವಾದ ಉಗುರುಗಳಿಂದ ಕಿತ್ತು, ತನ್ನ ಚೂಪು ಮೂತಿ ಒಳಹೋಗುವಂತೆ ತೂತು ಮಾಡುತ್ತದೆ.  ಆಮೇಲೆ ತನ್ನ ಉದ್ದ ಮೂತಿಯನ್ನು ಹಾಕಿ, ಸ್ಟ್ರಾ ತರ ಬಳಸಿ ಉಸಿರಿನಲ್ಲೇ ಕೀಟಗಳನ್ನು ಎಳೆದು ಬಾಯಿತುಂಬಿಸಿಕೊಳ್ಳುತ್ತದೆ.
ಊಟಕ್ಕೆ ಸಂಬಂಧ ಪಟ್ಟಂತೆ ಬ್ರಾಹ್ಮಣರಲ್ಲಿ ಮಾತೊಂದಿದೆ. ಅದು 'ಸುರಿದು ಊಟ ಮಾಡಬೇಕು, ಗೊರೆದು ನಿದ್ದೆ ಮಾಡಬೇಕು' ಅಂಥ. ಪಾಯಸ ಪರಮಾನ್ನ ಇಂತಹ ರಸ ಸಹಿತ ಪದಾರ್ಥವನ್ನು ಉಣ್ಣುವಾಗ ಬೆರಳುಗಳನ್ನು ಅದ್ದಿ ಶಬ್ದ ಮಾಡುತ್ತಾ  ಉಸಿರಿನಲ್ಲೇ ಎಳೆದು ಕೊಂಡು ತಿಂತಾರೆ. ರೀತಿ ಉಣ್ಣುವುದನ್ನು ಸುರಿಯುವುದು ಅಂತಾರೆ. ಬಾಳೆ ಎಲೆಯಲ್ಲಿನ ಕೊನೆಯ ಹನಿಯನ್ನೂ ತಮ್ಮ ಎರಡೇ ಬೆರಳುಗಳಲ್ಲೆ ಒಟ್ಟು ಮಾಡಿ ಉಸಿರಿನಲ್ಲಿ ವಿಚಿತ್ರ ಶಬ್ದದೊಂದಿಗೆ ಚೀಪುತ್ತಾರೆ. ಅದೇ ರೀತಿ ಚಿಪ್ಪಿನ ಹಂದಿ ಮೂತಿಗೆ ಸಿಕ್ಕಿದ ಗೂಡಿನ ಮೊಟ್ಟೆ ಮರಿ ಸಹಿತವಾಗಿ ಎಲ್ಲವನ್ನೂ ಸ್ಟ್ರಾದಲ್ಲಿ ಎಳೆದಂತೆ, ಉಸಿರಿನಲ್ಲಿ ಎಳೆದು ಗೂಡು ಖಾಲಿ ಮಾಡ್ತದೆ. ಇರುವೆ ಗೆದ್ದಲುಗಳು ಚಿಪ್ಪಿನ ಹಂದಿಯಿಂದ ರಕ್ಷಿಸಿಕೊಳ್ಳಲು ಸಮೂಹ ದಾಳಿ ಮಾಡಿ, ಅದರ ಮುಖ ಮೈಯನ್ನೆಲ್ಲಾ ಮುತ್ತುತ್ತವೆ. ಚಿಪ್ಪಿನ ಹಂದಿ ಮೈತುಂಬಾ ಮುತ್ತಿದ ಗೆದ್ದಲು, ಇರುವೆ, ಕಡದ್ಲಿ ಎಲ್ಲವನ್ನು ಚಿಪ್ಪಿನ ಇಕ್ಕಳದಲ್ಲಿ ಅರಚಿ, ನುರಿದು ಮೈಕೊಡವಿ ಎಲ್ಲವನ್ನು 'ಸ್ವಾಹಾ' ಮಾಡುತ್ತದೆ. ಚಿಪ್ಪಿನ ಹಂದಿಗೆ ಕಡದ್ಲಿಯ ಗೂಡು ಸಿಕ್ಕಿದರೆ ಹಬ್ಬ. ಅದನ್ನೆಲ್ಲಾ ಹರಿದು ಮೊಟ್ಟೆ ಮರಿ ಸಹಿತ ಎಲ್ಲವನ್ನು ನುಂಗುತ್ತದೆ. ಒಬ್ಬ ಮನುಷ್ಯನನ್ನು ಸಾಯಿಸಲು 10-20 ಕಡದ್ಲಿ ಹುಳಗಳು ಸಾಕು. ಆದ್ರೆ ಚಿಪ್ಪಿನ ಹಂದಿಯ ಮುಂದೆ ಅವುಗಳ ಆಟ ನಡೆಯುವುದಿಲ್ಲ. ಅದರಲ್ಲಿ ಹುಲಿ ಕಡದ್ಲಿ ಅಂತಿರುತ್ತವೆ. ಅವು ಹರಿವೆಯಷ್ಟು ದೊಡ್ಡ ಗೂಡು ಕಟ್ಟುತ್ತವೆ. ಗೂಡಿನ ಬಣ್ಣ ನೋಡಿದ್ರೆನೇ ತಲೆತಿರುಗುತ್ತದೆ. ಅಷ್ಟು ಭಯಂಕರವಾಗಿರುತ್ತದೆ.
ಓಡಿ ಬಂದ ಗೋವಿಂದ ಶಿಕಾರಿಯಾದ ಹುಮ್ಮಸ್ಸಲ್ಲಿ ಅಟ್ಟೆ ಬೀಳ್ ಉಕ್ಕೋಂಡು ಬಾ ಅಂತ ಸಿದ್ದನ್ ಕೂಗಿದ. ಅಟ್ಟೆ ಬೀಳು  ಗಟ್ಟಿಯಾದ ನಾರಿನ ಬೀಳು. ಅದನ್ನು ಉಡಿದಷ್ಟು ಗಟ್ಟಿ. (ತಿರುವಿದಷ್ಟು) ಅದಕ್ಕೆ ಅದನ್ನ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವ ಜಾಬಕ್ಕೆ, ಮರುಗುಣಿ ಕಟ್ಟಲಿಕ್ಕೆ ಅಥವಾ ಹಗ್ಗದಂತೆ  ಇತರ ಕೆಲಸಗಳಿಗೆ ಬಳಸುತ್ತಾರೆ. ಹಂಗೆ ಉದ್ದ ಬಡಿಗೆಯನ್ನೂ ಕಡ್ಕೊಂಡು ಬಾ ಅಂತ ಬೇರೆ ಹೇಳ್ದ. ಸಿದ್ದಂಗೆ ಗೋವಿಂದನ ನಡವಳಿಕೆ ಬಗ್ಗೆ ಅಸಮಧಾನವೇ ಆಯ್ತು. ಒಟ್ಟಿಗೆ ಶಿಕಾರಿಗೆ ಬಂದ್ ಮೇಲೆ ಇಬ್ಬರು ಸೇರಿಯೇ ಎಲ್ಲಾ ಕೆಲ್ಸ ಮಾಡಬೇಕಿತ್ತು. ಗೋವಿಂದನ್ನ ನೋಡಿದ್ರೆ ಮಕ್ಕಳು ಆಡೋತರ ಚಿಪ್ಪಿನ ಹಂದಿಯನ್ನ ಡೋಲು ಬಡಿದಂಗೆ ಬಡಿಯುತ್ತಿದ್ದಾನೆ. ಅಲ್ದೆ ಅದನ್ ತಾಂಬ, ಇದನ್ ತಾಂಬ ಅಂತ ಓಡಾಡಿಸುತ್ತಿದ್ದಾನೆ. ಆದ್ರೆ ಮಾತಾಡುವಂಗಿಲ್ಲ. ಮುಕ್ಳಿಮುಚ್ಚಿಕೊಂಡು ಗೋವಿಂದ ಹೇಳ್ದಂಗೆ, ಅಟ್ಟೆಬೀಳು ಉಗಿಯಲು ಹೋದ. ಒಳ್ಳೆ ಕಲ್ಲುಸಂಪಿಗೆ ಬಡಿಗೆಯನ್ನು ಕಡ್ಕೊಂಡು ಬಂದ.
ಅಟ್ಟೆ ಬೀಳಿನಲ್ಲಿ ಗೋವಿಂದ ಒಂದು ಒಳ್ಳೆ ಸಿಕ್ಕ ಮಾಡಿದ ಸಿಕ್ಕ ಅಂದರೆ, ವಸ್ತುವನ್ನು ಸಿಕ್ಕಿಸಿ ಮೇಲೆ ನೇತುಹಾಕುವುದು. ಮನೆಯಲ್ಲಿ ಹಾಲು ಮೊಸರು ಮಾಂಸ ಇತ್ಯಾದಿ ಪದಾರ್ಥಗಳನ್ನು ಬೆಕ್ಕಿಗೆ ಸಿಕ್ಕದಂತೆ ಇಡಲು ಸಿಕ್ಕದಲ್ಲಿ ಮೇಲೆ ಇಡುತ್ತಾರೆ. ಗೋವಿಂದನ ಸಿಕ್ಕದಲ್ಲಿ ಪ್ರಾಣಿಯ ಉಂಡೆಯಂತ ದೇಹವನ್ನು ನಗಾರಿತರ ಸಿಕ್ಕಿಸಿ, ಬಡಿಗೆಯನ್ನು ಒಂದು ಕಡೆ ಗೋವಿಂದ ಮತ್ತೊಂದು ಕಡೆ ಸಿದ್ದ ಹೊತ್ತರು. ಗೋವಿಂದ ತನ್ನ ಕಂಬ್ಳಿಯನ್ನು ಸಿದ್ದನಿಗೆ ಕೊಟ್ಟು, ಅವನು ಒಂದು ಹೆಗಲಲ್ಲಿ ಕೋವಿ, ಇನ್ನೊಂದು ಹೆಗಲಲ್ಲಿ ಬಡಿಗೆಯನ್ನು ಹೊತ್ತಿದ್ದ. ಸಿದ್ದನಿಗೆ, 'ಸಿದ್ದಾ ನಾವು ಇದನ್ನ  ಹೊತ್ಕೊಂಡು ಹೋಗಿ ಹಸಿಗೆ ಮಾಡುವರೆಗೂ ನೀನು ಹೀಗೇ ಇದನ್ನು ಬಡಿಯುತ್ತಲೇ ಇರಬೇಕು. ಬಡಿಯೋದು ನಿಲ್ಲಿಸಿದರೆ, ನನ್ನ ದೂರ್ಕೊಬ್ಯಾಡ. ನಿನ್ನ ತಲೆಗೇ ಬಾಯಿ ಕೊಟ್ರು ಕೊಡ್ತು. ಅದರಲ್ಲೇನ್ ಆಶ್ಚರ್ಯ ಇಲ್ಲಾ' ಅಂತ ಅಂದ. ಸಿದ್ದ ಬೆಳಿಗ್ಗೆ ಏಳುತ್ತಿದ್ದಂಗೆ ಗೋವಿಂದನ ಶಾಪ ಕೇಳಿ ಇವತ್ತು ಇವನ್ಯಾಕೋ ಸರಿಯಿಲ್ಲ, ಎಂತೆಂತದೋ ಮಾತಾಡ್ತಾನೆ, ಅದರೆ ಕೇಳದೇ ಬಗೆ ಇಲ್ಲ ಅಂದುಕೊಂಡು ಗೋವಿಂದ ಹೇಳಿದ್ದಕ್ಕೆಲ್ಲಾ 'ಹುಂ... ಹುಂ..' ಅಂದ.
ಗೋವಿಂದ ಯಾವತ್ತೂ ಹಿಂಗೆ ಹೇಳಿದ್ದು, ವಿಚಿತ್ರವಾಗಿ ನಡ್ಕೊಂಡಿದ್ದು ಇಲ್ಲ. ಹಿಂಗಾಗಿ ಇದು ಸಿದ್ದ ತಲೇಲಿ ಚಿಂತೆ ಮೂಡ್ಸಿತ್ತು. ಸಿದ್ದ ಬುದ್ಧಿವಂತ ಬೇರೆಯವರು ಹೇಳಿದ್ದನ್ನಷ್ಟೆ ಕೇಳ್ಕೊಂಡು ಇರುವವನಲ್ಲ. ಯಾವುದೇ ಕೆಲಸದಲ್ಲಿ ತನ್ನ ಕೈಚಳಕ ತೋರಿಸದಿದ್ದರೆ ಅವ ಸಿದ್ದನೇ ಅಲ್ಲ. ಅಷ್ಟಕ್ಕೂ ರಾತ್ರಿ ನಿದ್ದೆ ಗೆಟ್ಟಿದ್ದ ಗೋವಿಂದ ಶಿಕಾರಿ ಹೆಮ್ಮೆಗೆ ಸುಮ್ ಸುಮ್ಮನೆ ಬೈತನೇ ಅನ್ನೋದು ಅವನ ನಂಬಿಕೆಯಾಗಿತ್ತು. ಗೋವಿಂದ ಬಡಿಗೆಯನ್ನು ಹೊತ್ತುಕೊಂಡು ಮುಂದೆ ಹೋಗುತ್ತಿದ್ದ. ಸಿದ್ದ ಅವಹೇಳಿದಂತೆ ಒಂದಷ್ಟು ದೂರ ಕತ್ತಿಯಿಂದ ಚಿಪ್ಪುಹಂದಿಯನ್ನ ಬಡಿಯುತ್ತ ಹಿಂದಿನಿಂದ ಹೋಗುತ್ತಿದ್ದ. ಗೋವಿಂದ ತನ್ನನ್ನು ಗೋಳು ಬರಿಸಬೇಕು ಅಂಥ ಅಪಹಾಸ್ಯ ಮಾಡಲು ಅದನ್ನು ಬಡಿತಾ ಇರಬೇಕು ಅಂತ ಹೇಳಿದ್ದಾನೆ ಅದ್ಕೊಂಡ.
'ಸುಮ್ನೆ ಹೆಣ ಹೊತ್ಗೊಂಡು ಹೋದಂಗೆ ಎಂಥಾ ಹೋಗದು. ಇದೆಂಥಾ ಕಟ್ಟೆ ಹಂದಿನೇಂಡ್ರೋ, ಬಡಿದ್ರೂ ಕೂಗೋದಿಲ್ಲ, ಬೈದ್ರೂ ಕೂಗೋದಿಲ್ಲ, ಇದರ ಕತೆಯೆಂತಾ' ಅಂತ ಸಿದ್ದ ಕೇಳಿಯೇ ಬಿಟ್ಟ. ಅದಕ್ಕೆ ಗೋವಿಂದ ಸರಿಯಾಗಿ ಉತ್ತರ ಕೊಡ್ಲಿಲ್ಲ. ಏನೋ ಬಹಳ ಯೋಚ್ನೆ ಮಾಡ್ತಾ ಇರೋಹಾಗೆ ತಲೆಯಾಡಿಸಿದ ಅಷ್ಟೇ. ಕಟ್ಟೆ ಹಂದಿ ಎಂದರೆ ಬತ್ತದ ಪೈರಿಗೆ ರೋಗ ಬಂದಾಗ ಅಥವಾ ರೋಗ ಬರಬಾರದು ಅಂತ ಗದ್ದೆ ಕೊಗಿನಲ್ಲೆಲ್ಲ ಹಂದಿಯೊಂದನ್ನು ಕಾಲಿಗೆ ಬಡಿಗೆ ಕಟ್ಟಿ ಬಡಿಯುತ್ತ ಕೂಗಿಸುತ್ತ ಹೊತ್ತುಕೊಂಡು ಹೋಗುವ ಪರಿಪಾಠವಿದೆ.
ಗೋವಿಂದ ಸಿದ್ದನಿಗಿಂತ ಎತ್ತರದವ. ಹೊತ್ತುಕೊಂಡ ಬಾರ ಎಲ್ಲಾ ನನಗೆ ಬಿಳುತ್ತಿದೆ ಎಂಬುದು ಅವನಿಗನ್ನಿಸುತ್ತಿತ್ತು. ಶಿಕಾರಿ ಮಾಡಿ ಯಾರ್ಯರೋ ಬಾಯಿ ಚಪಲ ತಿರಿಸುವುದು ಬಿಟ್ಟರೆ ನನಗೇನು ಲಾಭ? ಶಿಕಾರಿ ಮಾಡಿದ ತಪ್ಪಿಗೆ ಹೊರ್ಬೇಕು, ಇದು ನನ್ನ ಕರ್ಮ ಅಂತ ಹೊತ್ತುಕೊಂಡು, ಸಿದ್ದನಿಗೆ ಎಚ್ಚರಿಕೆ ಕೊಡುತ್ತಲೇ ಹೋಗ್ತಿದ್ದ. ಚಿಪ್ಪಂದಿಗೆ ಬಡಿತಾ ಬಡಿತಾ ಕೈ ಸೋತು, ಕತ್ತಿಲ್ಲೆಂತಾ ಬಡಿಯುವುದು  ಅಂತ ಕೈಯಲ್ಲಿ ಬಡಿಯಕ್ಕೆ ಶುರು ಮಾಡ್ದ ಸಿದ್ದ. ಗೋವಿಂದ ಏನೇ ಹೇಳಿದ್ರೂ ಹಂದಿ ಸುಮ್ಮನಿದ್ದುದ್ದರಿಂದ ಕೈಯಲ್ಲಿ ಬಡಿತಾ ಬಡಿತಾ ಬಡಿಯುವುದನ್ನೂ ಬಿಟ್ಟು ಅದರ ಚಿಪ್ಪನ್ನು ಸವರಕ್ಕೆ ಶುರುಮಾಡ್ದ. ಸ್ವಲ್ಪ ಹೊತ್ತಾದ ಮೇಲೆ ಒಂದೇ ಕ್ಷಣದಲ್ಲಿ ಸಿದ್ದ 'ಅಯ್ಯಯ್ಯೊ ನನ್ನ ಕೈಯ್ ಹೋತು'  ಅಂತ ಕೂಗುತ್ತಾ, ಬಡಿಗೆ ಹೊತ್ತಾಕಿ ಬಲಗೈಯನ್ನು ಎಡಗೈಯಲ್ಲಿ ತೊಡೆ ಸಂದಿ ಒತ್ತಿ ಹಿಡಿದ.
ಸಿದ್ದ ಒಂದೇ ಸಾರಿ ಹೊತ್ತ ಹೊರೆಯನ್ನ ಬಿಸಾಡಿದ್ರಿಂದ ಗೋವಿಂದನ ಹೆಗಲು ಸುಲ್ದ್ ಹೋಗಿತ್ತು. ಗೋವಿಂದನಿಗೆ ಸಿಟ್ಟು ಬಂದು ಸಿದ್ದನಿಗೆ ಕಪಾಳಕ್ಕೆ ಎರಡು ತಟ್ಟೇ ಬಿಡಬೇಕು ಅನ್ನಿಸ್ತು. 'ನೀನೇನ್ ನನ್ನ ತೆಗೆಯಬೇಕು ಅಂತಿದ್ದಿಯಾ...ನಿನ್ನ ಜೊತೆ ಬರೋಕೆ ನಂಗೇನು ಗ್ರಹಚಾರ ಅಂದ್ಕೊಂಡಿದ್ಯಾ. ನಿಂಗೆ ನನ್ನ ಮೇಲೆ ಸಿಟ್ಟಿದ್ರೆ ಹೇಳು ನಿನ್ನ ಸವಾಸಕ್ಕೆ ಬರಲ್ಲ...'  ಅವ ನೋವಿನಲ್ಲಿ ಅದೇನೇನ್ ಬೈದನೋ ಗೊತ್ತಿಲ್ಲ. ಸಿದ್ದ ಕೈ ಒತ್ತಿ ಹಿಡಿದುಕೊಂಡು ಬೊಬ್ಬೆಹೊಡೆಯುತ್ತಲೇ ಇದ್ದಾನೆ. ಅವನ ಬಟ್ಟೆ ಬರೆ ಎಲ್ಲ ರಕ್ತಮಯ. ಇತ್ಲಗೆ ಗೋವಿಂದ ವಾಚಮಗೋಚರ ಬೈಯುತ್ತಲೇ ಇದ್ದಾನೆ, ಸಿದ್ದಂಗೆ ಕೈ ಉರಿ, ಗೋವಿಂದನ ಸಿಟ್ಟಿನ ಉರಿ ಎರಡೂ ನೆತ್ತಿಗೆ ಏರಿತ್ತು. ಗೋವಿಂದನ ಮಾತನ್ನು ನಿರ್ಲಕ್ಷ್ಯ ಮಾಡಿ ಸಿದ್ದ ತನ್ನ ಹೆಬ್ಬೆರಳನ್ನ ಕಳೆದು ಕೊಳ್ಳುವುದರಲ್ಲಿದ್ದ. ಅವನ ಹೆಂಡತಿ ಪುಣ್ಯ, ಚಿಪ್ಪಿನ ಹಂದಿ ಸಿದ್ದನ ಹೆಬ್ಬೆರಳಿನ ಬುಡಕ್ಕೆ ಗಾಯ ಮಾಡಿತ್ತು. ಸಿದ್ದ ಬೊಬ್ಬೆ ಹೊಡಿಯುತ್ತಿದರೆ, ಗೋವಿಂದ ತನ್ನ ಸಿಟ್ಟಿನಲ್ಲಿ ಸಿದ್ದನ ನೋವನ್ನು ಮರೆಸಲು ಪ್ರಯತ್ನಿಸುತ್ತಿದ್ದ.
'ಮನೆಹಾಳ... ಬಿಕಾನಾಷಿ... ನಿಂಗೆ ಯಾರದರು ಹೊಡೆದು ಕೊಟ್ಟರೆ ಕೊಳಗ ತಿನ್ನಕ್ಕೆ ಬೇಕು. ಕತ್ತಿಲಿ ತಟ್ಟಿ ಸಾಯೋ ಅಂದ್ರೆ ಕೈಯಲ್ಲಿ ಆಟಾಡೋಕ್ಕೆ ಹೋಗಿದ್ಯಾ... ಅದು ಸತ್ ಹೊಗಿಲ್ಲ, ಸತ್ತಂಗೆ ಮಾಡ್ತದೆ ಕಣಾ... ಅದಕ್ಕೆ ಗುಂಡು ಬಡಿಯಾದಿಲ್ಲ ಅಂದ್ರೆ... ನಿಂಗೆ ಅರ್ಥ ಅಗಲ್ಲ. ನೀನೇನು ಅದಕ್ಕೆ ಉಪಚಾರ ಮಾಡ್ತಿಯ... ಈಗ ಕೈ ಹೋತು ಅಂತ  ಬೊಬ್ಬೆ ಹೊಡಿತೀಯ... ಇನ್ ಯಾವತ್ತಾದರು ಶಿಕಾರಿ ಸುದ್ದಿ ಎತ್ತಿದರೆ ಹುಷಾರ್, ಬೆವಸರ್ಿ... ನಿನ್ನ ಅಲ್ಲೆ ಹುಗದಾಕಿ ಬಿಡ್ತೀನಿ...' ಅಂತ ಎಡವಿ ಬಿದ್ದ ಮಕ್ಕಳಿಗೆ ನೋವು ಮರೆಸಲು ತಾಯಂದಿರು ಹೊಡೆಯುವಂತೆ ಏಟಿಗೆ ಏಟಲ್ಲಿ ಸಮಾಧಾನ ಮಾಡ್ತಿದ್ದ. 'ನಿನ್ನ ತುಂಡಿನ ಚಟದಿಂದ ನಾನು ಊರೆಲ್ಲ ಅನ್ಸ್ಕೋಬೇಕು' ಅಂತಲೂ ಬೈದ.  ಸಿದ್ದ -ಗೋವಿಂದನ ಜೋಡಿಯನ್ನ 'ಚೋರ ಗುರು ಚಾಂಡಲ ಶಿಷ್ಯ' ಅಂತ ಕೆಲವರು, ಇನ್ನು ಕೆಲವರು ಬೇರೆ ರೀತಿಯೂ ಹಂಗಿಸುತ್ತಿದ್ದರು!. ಸಿದ್ದಂಗೆ ಚಿಪ್ಪಂದಿ ತನ್ನ ಚಿಪ್ಪಲ್ಲಿ  ಕೈ ಅರಚಿದ ಉರಿಯಲ್ಲಿ ಗೋವಿಂದ ಬೈದಿದ್ದು ಒಂದೂ ಅರ್ಥ ಆಗ್ಲಿಲ್ಲ. ಸತ್ತು ಹೋದಂಗೆ ಇರುವ ಪ್ರಾಣಿ ಮುಟ್ಟಿದಲ್ಲೆಲ್ಲಾ ಕಚ್ತದೆ ಅಂತ ಅವ ಕನಸು ಮನಸಲ್ಲೂ ಯೊಚ್ನೆ ಮಾಡಿರಲಿಲ್ಲ.
ಶಿಕಾರಿ ಮಾಡಿದವನ ಸಾಹಸ, ಕೋವಿಯ ಬಗ್ಗೆ ಹೊಗಳುವುದು ಶಿಕಾರಿ ಸಂಸ್ಕೃತಿ. ಸಿದ್ದ ತನ್ನ ಕೈ ಉರಿ ಮಧ್ಯೆ 'ನೀವು ಹೊಡೆದ ಗುಂಡು ಅದಕ್ ತಾಗಿಲ್ಲ. ಅದು ನಿಮ್ಮ ಕೋವಿಲಿ ಸಾಯಲ್ಲ ಅಂದ್ರೆ ಎಂತದ್ರೋ, ನೀವ್ ಎಂಥಾ ಹೊಡೆದದ್ದು, ಇದರ ಮೈಲಿ ಒಂದು ಗುಂಡು ಹೊಕ್ಕಿದ ಗುತರ್ಿಲ್ಲ. ನಿಂತ್ ಪ್ರಾಣಿಗೆ ನೀವ್ ಹೊಡೆದ ಗುಂಡ್ ಬಿದ್ದಿಲ್ಲ ಅಂದ್ರೆ...' ಅಂತ ಏನೇನೋ ಹೇಳಕ್ಕೆ ಹೊರಟ. ಅದಕ್ಕೆ ಗೋವಿಂದ, 'ನಿಂಗೆ ಅದಕ್ಕೇ ತಲೆಹರಟೆ ಅಂಥ ಹೇಳೋದು. ನಾನು ನಿಂಗೆ ಆಗ್ಲೆ ಹೇಳಿಲ್ವಾ, ಇದಕ್ಕೆ ಗುಂಡು ತಾಗಲ್ಲ ಅಂಥ. ಅದು ಸುಮ್ನೆ ಹೆದರಿಕೊಂಡು ಓಡುಳತರ ಕಳ್ಳ ನಿದ್ದೆ ಮಾಡ್ತಿದೆ. ಈಗ ಅದನ್ನ ಬಿಟ್ರೆ ಆಮೇಲೆ ಹಿಡಿಯಕ್ಕಾಗುತ್ತದಾ ನೋಡು' ಅಂತ ಗೋವಿಂದ ಚಿಪ್ಪು ಹಂದಿಯ ಬಗ್ಗೆ ತನಗೆ ಗೊತ್ತಿರುವುದನ್ನ ಸ್ವಾರಸ್ಯವಾಗಿ ಹೇಳ್ದ. ಸಿದ್ದ ಅದಕ್ಕೆ ಹೂಂಗುಟ್ಟುತ್ತಾ ಕುಳಿತ. ಕೊನೆಗೆ ಗೋವಿಂದ ಸಿದ್ದನ ಕೈಗೆ ಟವಲ್ ಹರಿದು ಕಟ್ಟಿ, ಅದೇ ಕೈಯಲ್ಲಿ ಹೋರಿಸಿಕೊಂಡು, ಅಂತೂ ಸಿದ್ದನ ಕೇರಿಗೆ ಬ್ಯಾಟೆನ ತಂದ.
ಕೇರಿಯಲ್ಲಿ ಎಲ್ಲರನ್ನೂ ಕರೆದ ಗೋವಿಂದ, ಚಿಪ್ಪಂದಿಯನ್ನು ತೋರಿಸಿ, ಅಪರೂಪದ ಬ್ಯಾಟೆ ತಂದೀನಿ ಎಂದ. ' ನಿಮಿಷಕ್ಕೆ ಒಂದು ಸಾರಿ ಅದನ್ನು ಬಡಿತಾನೇ ಇರಬೇಕು. ಇಲ್ಲ ಅಂದ್ರೆ ಅಪಾಯ ಆಗುತ್ತೆ' ಅಂತ ಎಚ್ಚರಿಸಿ ಅಲ್ಲಿಂದ ಹೊರಟ. ಸಿದ್ದನ ಕೇರಿಯವರೆಲ್ಲಾ ಅಪರೂಪದ ಬಾಡಿನ ಆಸೆಯಿಂದ ಎಲ್ಲ ಕೆಲಸವನ್ನ ಚಕಾಚಕ್ ಅಂತ ಮಾಡಿದ್ರು. ಒಳ್ಳೊಳ್ಳೇ ಕುಂಠೆಗಳನ್ನು ತಂದು ಬೆಂಕಿ ಮಾಡಿದ್ರು. ಬೆಂಕಿ ದೊಡ್ಡ ಉರಿ ಎದ್ದ ಮೇಲೆ ಅದಕ್ಕೆ ಉಂಡೆಗಟ್ಟಿಕೊಂಡಿದ್ದ ಚಿಪ್ಪಿನ ಹಂದಿಯನ್ನು ಹಾಕಿದ್ರು. ಬೆಂಕಿ ಉರಿತಾಗುತ್ತಿದ್ದ ಹಾಗೇ ಹಂದಿಯು ಚಿಪ್ಪೆಲ್ಲಾ ಬಿಟ್ಟುಕೊಂಡು ನೆಟ್ಟಗಾಗಿತ್ತು. ಮೈಸುಟ್ಟಿದ್ದರಿಂದ ಅಷ್ಟರಲ್ಲಿ ಅದರ ಪ್ರಾಣ ಹೋಗಿತ್ತು. ಚನ್ನಾಗಿ ಸುಟ್ಟನಂತರ ಕತ್ತೀಯ ಹಿಂದಿನಿಂದ  ಹೊಡೆದು ಚಿಪ್ಪು ಉದುರಿಸಿ ಹಸಿಗೆ ಮಾಡಿದ್ರು. 'ಹಂದಿ ಮಾಂಸಕ್ಕಿಂತ ರುಚಿಯಾಗಿತ್ತು' ಅಂತ ಆಮೇಲೆ ಅದನ್ನು ತಿಂದವರೆಲ್ಲಾ ಹೇಳಿದ್ರು. ಆದ್ರೂ ಸಿದ್ದನ ಕೈಗೊಂದು ಖಾಯಂ ಊನ ಆಗಿತ್ತು. ಅದು ಗುಣ ಆಗಬೇಕಾದ್ರೆ ಸೀತು ಆರು ತಿಂಗಳು ಮೆಣಸಿನ ಎಣ್ಣೆ ಹಚ್ಚಿ ಉಪಚಾರ ಮಾಡಬೇಕಾಯ್ತು.