Showing posts with label ಮಲೆನಾಡು. Show all posts
Showing posts with label ಮಲೆನಾಡು. Show all posts

Sunday, February 23, 2014

ಮಂಗನ ಕಾಯಿಲೆ - ಒಂದು ಬಯಲಾಜಿಕಲ್ ವೆಪನ್ !


ಮಂಗನ ಕಾಯಿಲೆ ಮತ್ತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಕನ್ನಂಗಿ ಸುತ್ತಮುತ್ತಲ ಗ್ರಾಮಗಳಲ್ಲಿ  ಕೆಲವರಿಗೆ ಈ ಕಾಯಿಲೆ ಬಂದಿದ್ದು, ಒಬ್ಬರು ಮೃತಪಟ್ಟಿರುವುದಾಗಿಯೂ ವರದಿಯಾಗಿದೆ. ಪ್ರತಿ ಬೇಸಿಗೆಯಲ್ಲಿಯೂ ಮಲೆನಾಡಿನ ಒಂದಲ್ಲಾ ಒಂದು ಕಡೆ ಕಾಣಿಸಿಕೊಂಡು ಕನಿಷ್ಠ ಒಂದಿಬ್ಬರ ಬಲಿ ತೆಗೆದುಕೊಳ್ಳುತ್ತಿರುವ ಈ ಕಾಯಿಲೆ ಆರು ದಶಕಗಳ ಹಿಂದೆ ಮುಂದುವರೆದ ದೇಶಗಳು ನಡೆಸಿದ ‘ಜೈವಿಕ ಅಸ್ತ್ರ’ಗಳ ಪ್ರಯೋಗದ ಫಲ. ಇದರ ಪರಿಣಾಮ ಮಲೆನಾಡಿಗರು ಈಗಲೂ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ.
  `ಕ್ಯಾಸನೂರು ಕಾಡಿನ ಕಾಯಿಲೆ' ಎಂದೇ ಹೆಸರು ಮಾಡಿರುವ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಜೈವಿಕ ಅಸ್ತ್ರವಾಗಿ (biological weapon) ಬಳಸಲಾಗುತ್ತಿದೆ ಎಂಬ ಎಚ್ಚರಿಕೆ ನೀಡಿದ್ದರೂ, ಸರಕಾರಗಳ ಬಳಿ ಈ ಬಗ್ಗೆ ಮಾಹಿತಿಯೇ ಇಲ್ಲ.ಈ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದರಿಂದಲೇನೋ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರೋಗ ಬಾರದಂತೆ ತಡೆಯುವ ಲಸಿಕೆ ತಯಾರಿಸಲು ಶಿವಮೊಗ್ಗದಲ್ಲಿದ್ದ ಪ್ರಯೋಗಾಲಯ ದಶಕಗಳ ಹಿಂದೆಯೇ ಬಾಗಿಲು ಮುಚ್ಚಿಕೊಂಡಿದೆ.
  ಇತ್ತೀಚೆಗೆ ಇದ್ದಕ್ಕಿದ್ದ ಹಾಗೇ ಉಲ್ಭಣಗೊಳ್ಳುವ ಈ ರೋಗಾಣು ಬಗ್ಗೆ ಹೆದರಿರುವ ಪಾಶ್ಚಿಮಾತ್ಯರಾಷ್ಟ್ರಗಳು ಇದು ತಮ್ಮ ದೇಶಗಳಿಗೆ ಪ್ರವೇಶಿಸದಂತೆ ಎಚ್ಚರಿಕೆ ಕ್ರಮ ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯ  ಡ್ರಗ್ಸ್ ಮತ್ತು ಕ್ರೈಂ ವಿಭಾಗ ಈ ರೋಗಾಣುವನ್ನು ಜೈವಿಕ ಅಸ್ತ್ರವಾಗಿ ಬಳಸಲ್ಪಡುವ ಏಜೆಂಡ್ (Biological Warfare Agent) ಎಂದು ಹೆಸರಿಸಿ ಅಲರ್ಟ್ ಘೋಷಿಸಿದೆ. ವಿಶ್ವಸಂಸ್ಥೆ 2009ರಲ್ಲಿ ಬಿಡುಗಡೆ ಮಾಡಿರುವ ಸಾಗಾಣಿಕೆ ಕೈಪಿಡಿಯಲ್ಲಿಯೂ ಇದರ ಬಗ್ಗೆ ಎಚ್ಚರಿಕೆಯ ಸೂಚನೆಗಳಿವೆ. ಅಮೆರಿಕ ತನ್ನ ಬಯೊಸೇಫ್ಟಿ ಲೆವೆಲ್4 (ಬಿಎಸ್ಎಲ್-4)ರ ಅಡಿಯಲ್ಲಿ ಈ ರೋಗಾಣುವನ್ನು ಗುರುತಿಸಿದೆ.
ಆದರೆ ನಮ್ಮ ರಾಜ್ಯದಲ್ಲಿ ಈ ರೋಗಾಣು ಹರಡದಂತೆ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೋಗ ಪ್ರತಿ ವರ್ಷ ಮರುಕಳಿಸುತ್ತಲೇ ಇದೆ.  2005ರ ಮಾರ್ಚ್ ನಲ್ಲಿ  ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.ನಾನು ಈ ಬಗ್ಗೆ ಬರೆದಿದ್ದ ವರದಿಯನ್ನು ಉಲ್ಲೇಖಿಸಿ ಆಗ ತೀರ್ಥಹಳ್ಳಿಯ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಈ ಕುರಿತು ಗಮನ ಸೆಳೆದಿದ್ದರು. ಈ ರೋಗಾಣು ಜೈವಿಕ ಅಸ್ತ್ರವಾಗಿ ಬಳಸಲ್ಪಟ್ಟಿತ್ತೇ ಎಂಬುದರ ಕುರಿತು ತನಿಖೆ ನಡೆಸುವುದಾಗಿ ಸರಕಾರ ಭರವಸೆ ಕೂಡ ನೀಡಿತ್ತು. ನಂತರ `ಈ ಬಗ್ಗೆ ಮಾಹಿತಿ ಇಲ್ಲ' ಎಂದು ಷರಾ ಬರೆದು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಈ ರೋಗ ಮಾತ್ರ ಪ್ರತಿವರ್ಷ ಮಲೆನಾಡಿನ ಜನರನ್ನು ಕಾಡುತ್ತಲೇ ಇದೆ.

 ಕಾಯಿಲೆ ಬಂದಿದ್ದು ಹೇಗೆ?

ಮಂಗನ ಕಾಯಿಲೆ ಎಂದೇ ಕರೆಯಲ್ಪಡುತ್ತಿರುವ ಈ ಕಾಯಿಲೆಯನ್ನು `ಅಂಥ್ರ್ಯಕ್ಸ್' ನಂತೆ ಜೈವಿಕ ಅಸ್ತ್ರವಾಗಿ ಬಳಸಲಾಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ. ಶೀತಲ ಸಮರದ ಸಂದರ್ಭದಲ್ಲಿ ವೈರಿ ದೇಶಗಳನ್ನು ಮಣಿಸಲು ಜೈವಿಕ ಅಸ್ತ್ರಗಳನ್ನು ಸಿದ್ಧಪಡಿಸಿದ ಅಮೆರಿಕ ಅವುಗಳ ಪ್ರಯೋಗವನ್ನು ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ನಡೆಸಿತ್ತು. ವಲಸೆ ಹೋಗುವ ಹಕ್ಕಿಗಳ ಮೂಲಕ ವಿಷಾಣುಗಳನ್ನು ಶತ್ರುದೇಶಗಳಿಗೆ ತಲುಪಿಸುವ ತಂತ್ರ ರೂಪಿಸಿತ್ತು. ಇದಕ್ಕಾಗಿ ಹಕ್ಕಿಗಳ ಸಮೀಕ್ಷೆ ಕೂಡ ನಡೆಸಲಾಗಿತ್ತು.
ಕ್ಯಾಸನೂರಿನ ಹಳೆಯ ಚಿತ್ರ
  ಈ ರೋಗ 1957ರಲ್ಲಿ ಮೊದಲು ಕಾಣಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ. ಇಲ್ಲಿಯೇ ಇರುವ ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುತ್ತವೆ. ಈ ಹಕ್ಕಿಗಳ ಮೂಲಕ ಕ್ಯಾಸನೂರು ಕಾಡಿನ ಕಾಯಿಲೆಗೆ ಕಾರಣವಾಗುವ ವಿಷಾಣುಗಳನ್ನು ಕಳುಹಿಸಲಾಗಿತ್ತು. ಇದು ಪುಣೆಯ ವಿಷಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ನ್ಯೂಯಾರ್ಕ್ನ ರಾಕ್ಫೆಲರ್ ಸಂಶೋಧನಾಲಯದ ನೆರವಿನಿಂದ  ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.
  ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುವುದನ್ನು ತಿಳಿದೇ ಈ ಪ್ರಯೋಗ ನಡೆಸಲಾಗಿತ್ತು. (ಯಾವಾಗಲೂ ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ಕಡಿಮೆ ಜನಸಂಖ್ಯೆ ಯಿರುವ ಮಲೆನಾಡಿನಂತಹ ಪ್ರದೇಶವನ್ನೇ ಆಯ್ಕೆಮಾಡಿಕೊಳ್ಳಲಾಗುತ್ತದೆ) ವಲಸೆ ಹಕ್ಕಿಗಳಿಂದ ಮಂಗಗಳಿಗೆ ಮಂಗನಿಂದ ಉಣ್ಣೆಗಳ ಮೂಲಕ ಮನುಷ್ಯನಿಗೆ ಈ ರೋಗಾಣು ಹರಡಿ ಮನುಷ್ಯನ ಬಲಿ ಪಡೆದಿದ್ದವು. ಅಂದಿನಿಂದಲೂ ಸಾಯದ ಈ ವೈರಾಣುಗಳು ಈಗ ಮಲೆನಾಡಿನಾದ್ಯಂತ ಹರಡಿವೆ. ಈ ರೀತಿ ನಮ್ಮ ಮಲೆನಾಡಿಗೆ ವೈರಾಣು ಕಳಿಸಿದವರು ನಂತರ ಪುಣೆಯ ವಿಜ್ಞಾನಿಗಳನ್ನೂ ಇಲ್ಲಿಗೆ ಕಳುಹಿಸಿ, ಇದು ಹೇಗೆ ಕೆಲಸಮಾಡಿದೆ ಎಂಬುದರ ಬಗ್ಗೆ ವರದಿಯನ್ನೂ ತರಸಿಕೊಂಡರು. ವಿಜ್ಞಾನಿಗಳ ತಂಡದಲ್ಲಿದ್ದ ಸದಸ್ಯರ ಭಿನ್ನಾಭಿಪ್ರಾಯದಿಂದಾಗಿ ಈ ವಿಷಯ ಬಹಿರಂಗಗೊಂಡಿತ್ತು. ಇದ್ಯಾವುದರ ಬಗ್ಗೆಯೂ ಅರಿವಿರದ ನಾವು, ವಿಜ್ಞಾನಿಗಳು ನಮ್ಮ ನೆರವಿಗೆ ಬಂದಿದ್ದರು, ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲಿದ್ದಾರೆ ಎಂದೇ ನಂಬಿಕೊಂಡು ಬಂದಿದ್ದೆವು.
ಕಾಯಿಲೆಗೆ ಕಾರಣವಾಗುವ ಮಂಗಗಳಲ್ಲಿ ಇದ್ದ ವಿಷಾಣುಗಳು ರಷ್ಯಾದ ‘ವಸಂತ ಗ್ರೀಷ್ಮ ಮಸ್ತಿಷ್ಕ ರೋಗ’ (Russian Spring Summer Encephalitis) ವಿಷಾಣುವಿಗೆ ಅತಿ ಸಮೀಪದ ವಿಶಿಷ್ಟ ವಿಷಾಣುವೆಂದು ಗುರುತಿಸಲ್ಪಟ್ಟು, ‘ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್’ ಎಂದು ಹೆಸರಿಸಲ್ಪಟ್ಟಿತ್ತು. ಮೊದಲ ಕೆಲ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ರೋಗ ಮುಂದೆ ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೂ ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು. ಈಗಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.


70ರ ದಶಕದಲ್ಲಿ ಅಮೆರಿಕ ಈ ಪ್ರಯೋಗ ನಡೆಸಿದ್ದನ್ನು  ಮಾಧ್ಯಮಗಳು ಬೆಳಕಿಗೆ ತಂದಾಗ (ಮುಖ್ಯವಾಗಿ ಅಮೆರಿಕದ ಎನ್ ಬಿಸಿ ಟಿವಿ) ಅಮೆರಿಕ ಸೇನೆಯ ಪರವಾಗಿ ಕೆಲಸಮಾಡುವ ಸ್ಮಿತ್ ಸೊನಿಯನ್ ಸಂಸ್ಥೆಯ ಸಹ ಕಾರ್ಯದರ್ಶಿಯೊಬ್ಬರು ಹಕ್ಕಿಗಳ ಮೂಲಕ ವಿಷಾಣುಗಳನ್ನು ಕಳುಹಿಸುವುದರಿಂದ ಶೇ. 97ರಷ್ಟು  ಖಚಿತವಾಗಿ ಗುರಿ ತಲುಪಬಹುದು ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದರು.
  ಮಲೆನಾಡಿನಲ್ಲಿ ಮಂಗನ ಕಾಯಿಲೆ ತೀವ್ರಗೊಂಡು ಜನ ಸಾಯುತ್ತಿದ್ದಂತೆಯೇ ಕೂಡಲೇ ಎಚ್ಚೆತ್ತ ಬ್ರಿಟನ್ ಸೇನೆ ಈ ರೋಗಾಣುವನ್ನು `ಜೈವಿಕ ಅಸ್ತ್ರ' ಎಂದು ಮೊದಲು ಘೋಷಿಸಿತು. ಪಿಟ್ಸ್ ಬರ್ಗ್ ವಿಶ್ವ ವಿದ್ಯಾಲಯದ ವೈದ್ಯಕೀಯ ವಿಭಾಗ, ವಾಷಿಂಗ್ಟನ್  ಸ್ಟೇಟ್ ವಿವಿಯ ಮೈಕ್ರೋಬಯಲಾಜಿ, ಅಮೆರಿಕ ಮೆಡಿಕಲ್ ಅಸೋಸಿಯೇಷನ್, ವಿಜ್ಞಾನಿಗಳ ಒಕ್ಕೂಟ ಈ ಬಗ್ಗೆ ಅಧ್ಯಯನ ನಡೆಸಿ, ಇದೊಂದು ಜೈವಿಕ ಅಸ್ತ್ರ ಎಂದು ಸಾರಿವೆ. ಈಗಲೂ ಈ ಕಾಯಿಲೆ ಬಗ್ಗೆ ಮಾಹಿತಿ ತರಿಸಿಕೊಂಡು, ಪರಿಣಾಮಗಳನ್ನು ವಿಶ್ಲೇಷಿಸುತ್ತಿವೆ. ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ತನ್ನ ಜರ್ನಲ್ ನಲ್ಲಿ ನಮ್ಮ ಮಂಗನ ಕಾಯಿಲೆ ಬಗ್ಗೆ ವಿವವರವಾದ ಲೇಖನ ಬರೆದಿದೆ!
  ಭಾರತ ಸಕಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಗಾಗ ಬರುವ ಸಾಮಾನ್ಯ ಕಾಯಿಲೆಯಂತೆ ಮಂಗನ ಕಾಯಿಲೆಯನ್ನೂ ಪರಿಗಣಿಸಿರುವ  ಆರೋಗ್ಯ ಇಲಾಖೆ ಈ ರೋಗ ಬಾರದಂತೆ ತಡೆಯಲು ಇರುವ ಲಸಿಕೆಯನ್ನು ನೀಡುವುದೇ ತನ್ನ ಜವಾಬ್ದಾರಿ ಎಂದು ಕೊಂಡಿದೆ. ಯಾವುದೋ ದೇಶ ಕಳುಹಿಸಿದ ರೋಗಾಣುಗಳಿಗೆ ಮಲೆನಾಡಿಗರು ಬಲಿಯಾಗುತ್ತಲೇ ಇದ್ದಾರೆ.

Thursday, December 19, 2013

ಅಡಿಕೆಯೂ ಹಾನಿಕಾರಕವೇ?

ಈ ದಾಖಲೆ ಸಾಕಲ್ಲವೇ...?
ಕಾಂಗ್ರೆಸ್ ನಾಯಕರು ಏನೇ ಹೇಳಲಿ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಂತೂ ‘ಅಡಿಕೆಯು ಆರೋಗ್ಯಕ್ಕೆ ಹಾನಿಕರ' ಎಂದು ಪರಿಗಣಿಸಿತ್ತು ಮತ್ತು ಅದರ ಬಳಕೆ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತ್ತು. ಇದಕ್ಕೆ ಈಗಾಗಲೇ ಬಹಿರಂಗಗೊಂಡಿರುವ ಇಲಾಖೆಯ ಅಧಿಕಾರಿಗಳ ಪತ್ರವ್ಯವಹಾರಗಳೇ ಸಾಕ್ಷಿ.
ಈ ರೀತಿಯ ಕ್ರಮ ಆರೋಗ್ಯ ಇಲಾಖೆಗೆ ಅನಿವಾರ್ಯವಾಗಿತ್ತು ಕೂಡ. ಏಕೆಂದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ಗುಟ್ಕಾದ ಜತೆಗೆ ಅಡಿಕೆಯೂ 'ಆರೋಗ್ಯಕ್ಕೆ ಹಾನಿಕರ' ಎಂದು ವ್ಯವಸ್ಥಿತವಾಗಿ ಬಿಂಬಿಸಿಕೊಂಡೇ ಬಂದಿದ್ದರು. ಅಡಿಕೆಯೊಂದನ್ನೇ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಅದರಲ್ಲಿ ಕ್ಯಾನ್ಸರ್ ಗೆ ಕಾರಣವಾಗು ರಾಸಾಯನಿಕ(ಆಲ್ಕಲಾಯಿಡ್- ಶೇಕಡ 0.15ರಷ್ಟಿದೆ) ಇರುವುದು ಕಂಡು ಬರುತ್ತದೆ. ಇದನ್ನೇ ಮುಂದಿಟ್ಟುಕೊಂಡು ಅಡಿಕೆಯನ್ನು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 'ಅಡಿಕೆ ತಿನ್ನುವುದು ಆರೋಗ್ಯಕ್ಕೆ ಹಾನಿಕರ' ಎಂದು ಶಾಸನ ವಿಧಿಸಿದ ಎಚ್ಚರಿಕೆ ಹಾಕುವುದನ್ನು ಕಡ್ಡಾಯಗೊಳಿಸುವುದರಲ್ಲಿ ಯಶಸ್ವಿಯಾಗಿದ್ದರು.
ಇದಾದ ಮೇಲೆ ನಿಷೇಧ ಜಾರಿಗೆತರುವತ್ತ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದರು. ಇದರ ಪರಿಣಾಮವೇ ಆರೋಗ್ಯ ಇಲಾಖೆಯ ಈ ತೀರ್ಮಾನ. ಇಷ್ಟೆಲ್ಲಾ ನಡೆಯುವಾಗ ಮಲಗಿ ನಿದ್ರಿಸುತ್ತಿದ್ದ ಅಡಿಕೆ ಬೆಳೆಗಾರರು, ಪರವಾದ ಸಂಘಟನೆಗಳು ಮತ್ತು ರಾಜಕಾರಣಿಗಳು ಈಗ ಎಚ್ಚೆತ್ತು ಅಡಿಕೆ ನಿಷೇಧಿಸಬೇಡಿ ಎಂದು ಕೂಗಾಡುತ್ತಿದ್ದಾರೆ.
ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತಿರುವವರ ದೃಷ್ಟಿಯಲ್ಲಿ 'ವಿಲನ್' ಆಗಿರುವ ಅಡಿಕೆ ನಿಜವಾಗಿಯೂ ಹಾನಿಕರವೇ? ಇಲ್ಲ ಎಂದರೆ ತಪ್ಪಾಗುತ್ತದೆ, ಅಡಿಕೆಯೊಂದನ್ನೇ ಜಗಿಯುವುದರಿಂದ ಅಡ್ಡ ಪರಿಣಾಮಗಳಾಗುವುದು ಅಡಿಕೆ ಬೆಳೆಗಾರರಿಗೂ ಗೊತ್ತಿರುವ ಸಂಗತಿಯೇ. ಆದರೆ ಅಡಿಕೆಯೊಂದನ್ನೇ ಬಳಸಿ ಎಂದು ಯಾರೂ ಎಲ್ಲಿಯೂ ಹೇಳಿಲ್ಲ. ಅಡಿಕೆಯಲ್ಲಿನ ಔಷಧಿ ಗುಣಗಳನ್ನು ಪರಿಗಣಿಸಬೇಕು ಮತ್ತು ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ತಿನ್ನುವ 'ತಾಂಬೂಲ' ಪದ್ಧತಿಯನ್ನು ಪರಿಗಣಿಸಬೇಕು ಎಂದು ಹಿಂದಿನಿಂದಲೂ ಹೇಳುತ್ತಿದ್ದಾರೆ. ಕೇಳಿಸಿಕೊಳ್ಳಬೇಕಾದ ಸರಕಾರಕ್ಕೆ, ನ್ಯಾಯಾಲಯಗಳಿಗೆ 'ಕಿವಿ' ಇದ್ದಂತೆ ಕಾಣಿಸುತ್ತಿಲ್ಲ.
ಅಡಿಕೆ ಎಂಬ ಔಷಧಿ
ಋಗ್ವೇದದ ಹತ್ತನೇ ಮಂಡಲದ 145ನೇ ಸೂಕ್ತದ 6 ಋಕೆಗಳಲ್ಲಿನ ಕೆಲ ಶ್ಲೋಕಗಳು 'ಎಲೈ ಅಡಿಕೆ ಎಂಬ ಔಷಧಿಯೇ...' ಎಂದೇ ಆರಂಭಗೊಳ್ಳುತ್ತವೆ. ಇದು ಅಡಿಕೆಗಿರುವ ಔಷಧಿ ಗುಣವನ್ನು ವಿವರಿಸುವ ಮೊತ್ತ ಮೊದಲ ದಾಖಲೆಯಾಗಿದೆ. ಆಯುರ್ವೇದ ಗ್ರಂಥವಾದ ಚರಕ ಸಂಹಿತೆಯಿಂದ ಹಿಡಿದು, 18ನೇ ಶತಮಾನದಲ್ಲಿ ರಚಿಸಲ್ಪಟ್ಟ 'ತಾಂಬೂಲ ಮಂಜರಿ'ಯ ವರೆಗೆ ಅಡಿಕೆಯ ಔಷಧಿ ಗುಣಗಳನ್ನು ದಾಖಲಿಸುವ ನೂರಾರು ಶ್ಲೋಕಗಳು, ಸೂತ್ರಗಳು ಕಾಣಸಿಗುತ್ತವೆ.
ಅಡಿಕೆಯ ಔಷಧೀಯ ಗುಣಗಳ ಬಗ್ಗೆ ನಳಪಾಕದಲ್ಲಿ, ಅಂತೆಯೇ ಆಯುರ್ವೇದ ವೈದ್ಯ ನಿಘಂಟುಗಳಲ್ಲಿಯೇ ಅತೀ ಪುರಾತನವಾದ ಧನ್ವಂತರಿ ನಿಘಂಟಿನಲ್ಲಿ ಉಲ್ಲೇಖವಿದೆ. ಧನ್ವಂತರಿ ನಿಘಂಟಿನಲ್ಲಿಯಂತೂ ನಮ್ಮ ಅಡಿಕೆಯನ್ನು 'ಪೂಗಫಲಂ' ಅಂದು ಕರೆಯಲಾಗಿದೆ. ರಾಜನಿಘಂಟಿನಲ್ಲಿ ಅಡಿಕೆಯನ್ನು ಚಂದನಾಧಿ ವರ್ಗದಲ್ಲಿ ಸೇರಿಸಲಾಗಿದೆ. ಭಾವ ಮಿಶ್ರನು ತನ್ನ 'ಭಾವ ಪ್ರಕಾಶ' ವೆಂಬ ಗ್ರಂಥದಲ್ಲಿ ಅಡಿಕೆಯನ್ನು ಫಲವರ್ಗದಲ್ಲಿ ಸೇರಿಸಿದ್ದಾನೆ. ಆಯುರ್ವೇದದ ಮತ್ತೊಂದು ಅಮೂಲ್ಯ ಗ್ರಂಥವಾದ 'ಹಾರೀತ ಸಂಹಿತೆ'ಯ ಅಧ್ಯಾಯ 21ರಲ್ಲಿ 'ವಾತವ್ಯಾಧಿ'ಯ ಬಗ್ಗೆ ಹೇಳುತ್ತಾ ಅಡಿಕೆಯನ್ನು ಸೇವಿಸುವ ಮೂಲಕ ಹೇಗೆ ವಾತವ್ಯಾಧಿಗಳನ್ನು ನಿವಾರಿಸಿಕೊಳ್ಳಬಹುದು ಎಂದು ವಿವರಿಸಲಾಗಿದೆ. ಚರಕ ಸಂಹಿತೆಯ ಚಿಕಿತ್ಸಾಸ್ಥಾನ ಅಧ್ಯಾಯ 4 ಶ್ಲೋಕ 32, 73, 74ರಲ್ಲಿ ಅಡಿಕೆಯನ್ನು ಬೇರೆ, ಬೇರೆ ಕೆಲವು ದ್ರವ್ಯಗಳೊಂದಿಗೆ ಸೇವಿಸಿ ಯಾವ ಯಾವ ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿಸಲಾಗಿದೆ.
 ಯೋಗ ರತ್ನಾಕರದಲ್ಲಿ ಅಡಿಕೆಯಿಂದ ತಯಾರಿಸುವ 'ಷೂಗಪಾಕ' ಲೇಹದ ಕುರಿತು, 'ಷೂಗಾದಿಲೇಪ' ಎಂಬ ಒಂದು ಮಾತ್ರೆಯ ಕುರಿತು ವಿವರಣೆಯಿದೆ. ರತ್ನಮಾಲದ ಒಂದು ಶ್ಲೋಕ ಅಡಿಕೆಯು ಸುಗಂಧಪೂರಿತವಾದದು, ಶ್ಲೇಷ್ಮಹರ, ದೀಪನ, ಪಾಚನ, ಬಲಪುಷ್ಟಿಕಾರಕ, ಮಧುರವಾದದು ಎಂದು ವರ್ಣಿಸಲಾಗಿದೆ. ಹೀಗೆ ವಿವರಿಸುತ್ತಾ ಹೋದರೆ ಅಡಿಕೆಯ ಔಷಧಿ ಗುಣಗಳನ್ನು ಹೇಳುವ ನೂರಾರು ಉಲ್ಲೇಖಗಳು ಸಿಗುತ್ತವೆ.
ಇತ್ತೀಚೆಗೆ ಮೈಸೂರಿನಲ್ಲಿರುವ  ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಇದರ ಔಷಧೀಯ ಗುಣಗಳನ್ನು ಪಟ್ಟಿ ಮಾಡಿದೆ. ಚೀನಾದ ಮೆಡಿಕಲ್ ಜರ್ನಲ್, ಕರೆಂಟ್ ಸೈನ್ಸ್ ಪತ್ರಿಕೆ ಅಡಿಕೆಯ ಔಷಧಿ ಗುಣಗಳನ್ನು ವಿವರಿಸುವ ಲೇಖನಗಳನ್ನು ಪ್ರಕಟಿಸಿವೆ.
ನಮ್ಮ ಸರ್ವಜ್ಞ
 'ಉಂಡು ವೀಳ್ಯವ ಮೆಂದು, ಅಂಡು ಮೇಲಾಗಿ
 ಮಲಗಿದವನು ವೈದ್ಯಂಗು ಮೇಲು ಕೇಳು ಸರ್ವಜ್ಞ' 
 ಎಂದು ಅಡಿಕೆಯ ಉಪಯುಕ್ತತೆಯನ್ನು ಸರಳವಾಗಿ, ಅಷ್ಟೇ ಪ್ರಬಲವಾಗಿ ಹೇಳಿದ್ದಾನೆ. ಆದರೆ ಅಡಿಕೆ ಸೇವನೆಗೂ ಕ್ರಮವಿದೆ. ಅದೊಂದನ್ನೇ ತಿನ್ನುವುದು ಆರೋಗ್ಯಕ್ಕೆ ಹಾನಿಕರವೇ. ಇದನ್ನು ಈಗಿನ ವೈಜ್ಞಾನಿಕ ವರದಿಗಳು ಹೇಳುತ್ತಿವೆ. ನಮ್ಮ ಆಯುರ್ವೇದ ಗ್ರಂಥಗಳೂ ಹೇಳಿವೆ. ರಾಜನಿಘಂಟಿನಲ್ಲಿಯೇ
'ಅನಿಧಾಯಮುಖೇಪರ್ಣಂ ಪೂಗಂ ಖಾದತಿ ಯೋ  ನರಃ
ಮತಿಭ್ರಂಶೋ  ದರಿದ್ರೀ  ಸ್ಯಾದಂತೇ  ಸ್ಮರತಿನೋ ಹರಿಮ್'
ಎಂದು ಹೇಳಲಾಗಿದೆ. ಹೀಗೆಂದರೆ ವೀಳ್ಯದೆಲೆಯನ್ನು ಬಾಯಲಿಟ್ಟುಕೊಳ್ಳದೇ ಅಡಿಕೆ ಮೆಲ್ಲುವಾತನು ಮತಿಭ್ರಾಂತನೂ ದರಿದ್ರನೂ ಅಂತ್ಯಕಾಲದಲ್ಲಿ ಹರಿಸ್ಮರನೆಯನ್ನು ಮಾಡಲಾರನು ಎಂದು.
ಇನ್ನು ಚರಕ ಸಂಹಿತೆಯ 5ನೇ ಅಧ್ಯಾಯದಲ್ಲಿ ಬೆಳಿಗ್ಗೆ ಹಲ್ಲುಜ್ಜಿದ ಕೂಡಲೇ ತಾಂಬೂಲ ಸೇವನೆ ಮಾಡುವಂತೆಯೂ, ತಾಂಬೂಲ ತಿಂದ ಕೂಡಲೇ ಮೊದಲು ಬರುವ ರಸವನ್ನು ಉಗಿಯಬೇಕೆಂದೂ, ಏಕೆಂದರೆ ಅದು ಪಿತ್ತಕರವಾಗಿರುತ್ತದೆ ಎಂದೂ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ, ಬ್ರಹ್ಮಚಾರಿಗಳು, ವಿಧವೆಯರು, ರೋಗಿಗಳು ಅಡಿಕೆ ತಿನ್ನಲೇಬಾರದೆಂಬ ವಿಧಿ ನಿಷೇಧವಿದೆ.
ಈ ಹಿಂದೆ ಹೇಳಿದಂತೆ ಅಡಿಕೆಯ ಸೊಕ್ಕಿನ ಗುಣವನ್ನು ಹೇಗೆ ದೇಹದ ಜಡತೆ ತೊಡೆದು ಹಾಕಲು, ಕಾಮೋತ್ತೇಜನಗೊಳಿಸಲು, ವಿವಿಧ ರೋಗಗಳನ್ನು ನಿವಾರಿಸಿಕೊಳ್ಳಲು ಬಳಸಿಕೊಳ್ಳಬಹುದು ಎಂದು
ಆಯುರ್ವೇದ ಗ್ರಂಥಗಳು ವಿವರಿಸಿವೆ. ಅಲ್ಲದೆ ಅದರ ಸುಗಂಧ ಗುಣವನ್ನು ಸೌಂದರ್ಯ ವೃದ್ಧಿಗೂ ಬಳಸಿಕೊಳ್ಳುವ ಬಗೆ ವಿವರಿಸಲಾಗಿದೆ. ಆದರೆ ಎಲ್ಲೂ ಅಡಿಕೆಯೊಂದನ್ನೇ ತಿನ್ನಿ ಎಂದು ಹೇಳಿಲ್ಲ. ಬದಲಾಗಿ ವೀಳ್ಯದೆಲೆಯೊಂದಿಗೆ ಅಡಿಕೆ ತಿನ್ನುವ 'ತಾಂಬೂಲ' ಪದ್ಧತಿಯ ಬಗ್ಗೆಯೇ ಹೆಚ್ಚು ಉಲ್ಲೇಖವಿದೆ.
ಅಡಿಕೆ ವೀಳ್ಯದೆಲೆಯ ಸಂಬಂಧ ಗಂಡ-ಹೆಂಡಿರ ಸಂಬಂಧದಂತೆ, ಒಂದಕ್ಕೊಂದು ಪೂರಕ ಗುಣಗಳು ಇವೆರಡರಲ್ಲೂ ಇದೆ. ಅಡಿಕೆ ಉದ್ವೇಗ, ಮದ, ಸೊಕ್ಕು, ಅಕ್ರಮಣಕಾರೀ ಗುಣಗಳನ್ನು ಹೊಂದಿದ್ದರೆ, ವೀಳ್ಯದೆಲೆ ಶುದ್ಧೀಕರಣ, ಸಂಮೋಹನಕಾರಿ, ಶಾಂತಿಕಾರಕ, ಉಷ್ಣಜನಕತ್ವ ಗುಣಗಳನ್ನು ಹೊಂದಿದೆ. ಇದರಿಂದಾಗಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಯಾವ ಅಪಾಯವೂ ಇಲ್ಲ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತಿವೆ. ಆದರೆ ಅಡಿಕೆ ಬಳಕೆಯ ಈ ಹಿನ್ನಲೆ, ಕ್ರಮಗಳನ್ನೆಲ್ಲಾ ಬದಿಗಿಟ್ಟು, ಈಗ ಅಡಿಕೆಯೊಂದನ್ನೇ ವಿಶ್ಲೇಷಣೆಗೊಳಪಡಿಸಿ ನಿಷೇಧದ ಮಾತು ಆಡಲಾಗುತ್ತಿದೆ. ಇದು ಎಷ್ಟು ಸರಿ?