Friday, July 1, 2011

ಆ್ಯಕ್ಷಂನ್…ಕಟ್… ಪ್ಯಾಕ್ಅಪ್


ಸಿನಿಮಾಗಳ ಬಗ್ಗೆ ನಾನೆಂದೂ ಬರೆದಿರಲಿಲ್ಲ. ಆದರೆ ಎಲ್ಲರಂತೆ ನನಗೂ ಈ ಕ್ಷೇತ್ರದ ಬಗ್ಗೆ ಕುತೂಹಲವಿತ್ತು. ಹೀಗಾಗಿ ನನ್ನ ಕಣ್ಣಿಗೆ ಕಂಡಷ್ಟು ಸತ್ಯಗಳನ್ನು ಇಲ್ಲಿ ಬರೆದಿದ್ದೇನೆ. ಇದು ಈ ವಾರದ vijayaNextನಲ್ಲಿ ಪ್ರಕಟಗೊಂಡಿದೆ.

*********

ನ್ನಡ ಚಿತ್ರರಂಗ ದಿನದಿಂದ ದಿನಕ್ಕೆ ಸೊರಗುತ್ತಲೇ ಇದೆ. ಈ ಸ್ಥಿತಿಗೆ ಕಾರಣವೇನು, ಕೇಳಿದರೆ ಚಿತ್ರರಂಗದ ಮಂದಿ ಉದ್ದನೆಯ ಪಟ್ಟಿ ಮುಂದಿಡುತ್ತಾರೆ. ಜನ ಟಾಕೀಸ್‌ಗೆ ಬಂದು ಸಿನಿಮಾ ನೋಡುತ್ತಿಲ್ಲ ಎಂಬುದರಿಂದ ಹಿಡಿದು, ನಮ್ಮ ಮಾರ್ಕೆಟ್‌ ದೊಡ್ಡದಿಲ್ಲ ನೋಡಿ ಎಂಬ ಕೂಪಮಂಡೂಕತನ ದೊಂದಿಗೆ ಈ ಪಟ್ಟಿ ಕೊನೆಗೊಳ್ಳುತ್ತದೆ.

ಪ್ರತಿ ತಿಂಗಳೂ ಹತ್ತು-ಹನ್ನೆರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಒಂದೆರಡು ಸಿನಿಮಾಗಳು ಚೆನ್ನಾಗಿದ್ದರೂ ಜನರು ಮಾತ್ರ ಟಾಕೀಸ್‌ ಕಡೆ ಮುಖ ಹಾಕುತ್ತಿಲ್ಲ. `ಅಯ್ಯೋ ಕನ್ನಡ ಸಿನಿಮಾ ನೋಡೋದಾ' ಎಂದು ಮೂಗು ಮುರಿಯುವ ಮೂಲಕವೇ ಕನ್ನಡ ಚಿತ್ರಗಳಿಗೆಲ್ಲಾ `ಸರ್ಟಿಫಿಕೇಟ್‌' ಕೊಡುತ್ತಿದ್ದಾರೆ. ಸಿನಿಮಾ ನೋಡದೇ ಈ ಅಭಿಪ್ರಾಯಕ್ಕೆ ಏಕೆ ಬರುತ್ತಿದ್ದಾರೆ, ಈ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿಲ್ಲ. ಹೀಗಾಗಿ ಒಂದರ ಹಿಂದೊಂದರಂತೆ ಚಿತ್ರಗಳು ಸೋಲುತ್ತಿವೆ. ಇವುಗಳ ನಡುವೆ ಒಳ್ಳೆಯ ಸಿನಿಮಾಗಳು ಓಡಿದರೂ ಗಳಿಕೆ ಬೆನ್ನು ತಟ್ಟಿಕೊಳ್ಳುವಂತಿಲ್ಲ. ಆದಾಯವಿಲ್ಲವೆಂದ ಮೇಲೆ ದುಡ್ಡು ಸುರಿದು ಒಳ್ಳೆ ಸಿನಿಮಾ ಮಾಡುವುದಾದರೂ ಹೇಗೆ ಎಂದು ಚಿತ್ರರಂಗದ ಮಂದಿ ಮಿಲಿಯನ್‌ ಡಾಲರ್‌ ಪ್ರಶ್ನೆ ಮುಂದಿಟ್ಟುಕೊಂಡು ದಿನ ದೂಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಬಗ್ಗೆ ಅತೀ ಕಾಳಜಿಯಿಂದ ಮಾತನಾಡುವವರೆಲ್ಲಾ ಈ ವಿಷಯಗಳ ಚರ್ಚೆಯಲ್ಲಿ ತೊಡಗಿ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಚಿತ್ರರಂಗ ಈ ಇಮೇಜ್‌ನಿಂದ ಹೊರಬರುವುದು ಹೇಗೆಂಬ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗ ಇಂದಿನ ಸ್ಥಿತಿ ಬೇರೆ ಪ್ರಾದೇಶಿಕ ಭಾಷೆಯ ಚಿತ್ರರಂಗಕ್ಕೆ ಹೋಲಿಸಿದಲ್ಲಿ ಹೀನಾಯವಾಗಿದೆ.

ಏಕೆ ಹೀಗಾಯ್ತೋ...?

ಕನ್ನಡ ಚಿತ್ರರಂಗದ ಇತಿಹಾಸವನ್ನು ರಿವೈಂಡ್‌ ಮಾಡಿದರೆ ಕಣ್ಣಿಗೆ ರಾಚುವುದು ಪರಾವಲಂಬನೆ. ಮೊದಲಿಗೆ ಮದ್ರಾಸು ಮತ್ತು ಬಾಂಬೆಯಲ್ಲಿಯೇ ಕನ್ನಡ ಚಿತ್ರರಂಗದ ಚಟುವಟಿಕೆ ನಡೆಯುತ್ತಿದ್ದವು. ಅಲ್ಲಿಯ ಚಿತ್ರರಂಗವನ್ನು ದೂರ ನಿಂತು ನೋಡಿ, ತನ್ನ ಕಾಲಮೇಲೆ ನಿಂತುಕೊಳ್ಳುವ ಪ್ರಯತ್ನವನ್ನು ಕನ್ನಡ ಚಿತ್ರರಂಗ ಮಾಡಿತಾದರೂ ಪರಾವಲಂಬನೆ ಮನೋಭಾವದಿಂದ ಪೂರ್ಣವಾಗಿ ಹೊರಬರಲೇ ಇಲ್ಲ. ಬೆಂಗಳೂರಿಗೆ ಚಟುವಟಿಕೆ ಶಿಫ್ಟ್‌ ಆದರೂ ಎಲ್ಲರ ಕಣ್ಣೂ ಮದ್ರಾಸಿನತ್ತಲೇ ನೆಟ್ಟಿರುತ್ತಿತ್ತು.

ಇದು ಹೀಗೆಯೇ ಮುಂದುವರೆದು ರಿಮೇಕ್‌ ಸಂಸ್ಕೃತಿಗೆ ನಾಂದಿ ಹಾಡಿತು. ಜಾಗತೀಕರಣಕ್ಕೆ ದೇಶ ಮೈಯೊಡ್ಡಿದ ಸಂದರ್ಭದಲ್ಲಿ (90ನೇ ದಶಕದಲ್ಲಿ) ತಮಿಳು ಚಿತ್ರರಂಗ ಹೊಸ ಮಾರುಕಟ್ಟೆಯ ಅನ್ವೇಷಣೆಯಲ್ಲಿ ತೊಡಗಿದ್ದರೆ, ಕನ್ನಡದ ಮಂದಿ ಬೇರೆ ಭಾಷೆಯ ಚಿತ್ರಗಳನ್ನು ರಿಮೇಕ್‌ ಮಾಡುವುದೇ ದೊಡ್ಡ ಸಾಹಸ ಎಂದು ಬೀಗುತ್ತಿದ್ದರು. (`ಪ್ರೇಮಲೋಕ' ಮಾಡಿದ ರವಿಚಂದ್ರನ್‌ ಕೂಡಲೇ `ರಣಧೀರ' ಎಂಬ ರಿಮೇಕ್‌ ಚಿತ್ರ ಮಾಡಿದ್ದನ್ನು ನೆನಪಿಸಿಕೊಳ್ಳಿ) ಮುಂದೆ ತಮಿಳು ಅಥವಾ ತೆಲುಗು ಚಿತ್ರಗಳಿಗೆ ಪ್ಯಾರಲಲ್‌ ಆಗಿ ಸಿನಿಮಾ ಮಾಡಲಷ್ಟೇ ಕನ್ನಡ ಚಿತ್ರರಂಗ ಪ್ರಯತ್ನ ಪಟ್ಟಿತು. ಈಗ ಮಾಡುತ್ತಿರುವುದೂ ಅದನ್ನೇ. ಜೊತೆಗೆ `ನಮ್ಮ ಮಾರುಕಟ್ಟೆ ಇಷ್ಟೇ' ಎಂದು ಅಂಗೈ ತೋರಿಸಿ, ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಯೋಗರಾಜ್‌ ಭಟ್‌ ನಿರ್ದೇಶನದ `ಮುಂಗಾರು ಮಳೆ' ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಜಗತ್ತನ್ನೇ ಪರಿಚಯಿಸಿತ್ತು. ಈ ಸುಸಂದರ್ಭವನ್ನು ಬಳಸಿಕೊಂಡು ಈ ಜಗತ್ತಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವ ಪ್ರಯತ್ನವನ್ನು ಕನ್ನಡ ಚಿತ್ರರಂಗ ಮಾಡಬೇಕಿತ್ತು. ಜೊತೆಗೆ ಇದೇ ರೀತಿಯ ಹುಡುಕಾಟವನ್ನು ಮುಂದುವರೆಸಬೇಕಿತ್ತು. ಆದರೆ ಮಂಗಾರು ಮಳೆಯ ರೀತಿಯೇ ಮತ್ತಷ್ಟು ಮಳೆ ಸುರಿಸಲು ಹೋಗಿ ಚಿತ್ರರಂಗ ಜಾರಿ ಬಿದ್ದಿತು! ಮತ್ತೆ ಮೇಲೇಳಲೇ ಇಲ್ಲ.

ಧರ್ತಿಯಲ್ಲಿದೆ ಸ್ಫೂರ್ತಿ

`ಧರ್ತಿ'- ಇದು ಕಳೆದ ಏಪ್ರಿಲ್‌ನಲ್ಲಿ ತೆರೆಕಂಡ ಪಂಜಾಬಿ ಸಿನಿಮಾ. ಒಂದು ಕೋಟಿಗೂ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಆ ರಾಜ್ಯದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಹಿಟ್‌ ಆಗಿದೆ. ಆಸ್ಟ್ರೇಲಿಯಾದಲ್ಲಿ ರೂ. 1.19 ಕೋಟಿ (ಅಭಿಷೇಕ್‌ ಬಚ್ಚನ್‌ ಅಭಿನಯದ `ಧಮ್‌ ಮಾರೊ ಧಮ್‌'ಗಿಂತ ಹೆಚ್ಚು), ಬ್ರಿಟನ್‌ನಲ್ಲಿ ರೂ. 13.13 ಲಕ್ಷ, ಅಮೆರಿಕದಲ್ಲಿ ರೂ. 72.18 ಲಕ್ಷ ಗಳಿಸಿದೆ. ಈ ಯಶಸ್ಸು ಹೇಗೆ ಸಾಧ್ಯವಾಯಿತು, ಉತ್ತರ ಹುಡುಕುತ್ತಾ ಹೊರಟರೆ ಕನ್ನಡ ಚಿತ್ರರಂಗಕ್ಕೆ ಹೊಸ ದಾರಿ ಗೋಚರಿಸಬಹುದು.

ಕರ್ನಾಟಕ ಜನಸಂಖ್ಯೆ 6.11 ಕೋಟಿಯಾದರೆ, ಪಂಜಾಬ್‌ ಜನಸಂಖ್ಯೆ 2.77 ಕೋಟಿ. ಹೀಗಾಗಿ ಪಂಜಾಬಿ ಸಿನಿಮಾದ ಮಾರುಕಟ್ಟೆ ಬಹಳ ಚಿಕ್ಕದು. ಇದನ್ನು ಗಮನದಲ್ಲಿಟ್ಟುಕೊಂಡೇ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ತೆಗೆಯುತ್ತಿರುವ ಅಲ್ಲಿಯ ಉದ್ಯಮದ ಮಂದಿ, ಈಗ ವಿದೇಶಿ ಮಾರುಕಟ್ಟೆಯ ಮೇಲೆ ಕಣ್ಣಿಡಲಾರಂಭಿಸಿದ್ದಾರೆ. ಇಂಗ್ಲಿಷ್‌ ಸಬ್‌-ಟೈಟಲ್‌ನೊಂದಿಗೆ ವ್ಯವಸ್ಥಿತ ಪ್ರಚಾರ ನಡೆಸಿ ವಿವಿಧ ದೇಶಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಇಂಡಿಯಾದ ರಾಜಕೀಯ ಕತೆ ಇದ್ದರೂ `ಧರ್ತಿ'ವಿದೇಶಿ ನೆಲದಲ್ಲೂ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಇದಕ್ಕೆ ಸಿನಿಮಾ ನಿರ್ಮಾಣ ಹಂತದಲ್ಲಿ ತಂಡ ತೋರಿದ ಪ್ರೊಫೆಷನಲಿಸಮ್ಮು ಮತ್ತು ಪ್ರಚಾರ ವೈಖರಿ ಮುಖ್ಯ ಕಾರಣ ಹೊರತು, ಬಜೆಟ್‌ ಅಲ್ಲ. ಪ್ರತಿ ದೇಶದಲ್ಲಿಯೂ ಈ ಸಿನಿಮಾದ ಬಗ್ಗೆ ಚಿತ್ರರಸಿಕರಿಗೆ ಗೊತ್ತಾಗುವಂತೆ ಮಾಡಿ, ಅವರನ್ನು ಟಾಕೀಸ್‌ಗಳಿಗೆ ಆಕರ್ಷಿಸಿದ ತಂತ್ರಗಾರಿಕೆ ಇದೆಯಲ್ಲಾ, ಅದು ನಿಜವಾಗಿಯೂ ಬಿಸ್ನೆಸ್‌! ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವುದು ಈ ಬಿಸ್ನೆಸ್‌ ಸೆನ್ಸ್‌.

ಈ ವರ್ಷ ಕೇವಲ `ಧರ್ತಿ' ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ರೀತಿ ಹಣ ಮಾಡಿಲ್ಲ. ತೆಲುಗು ಚಿತ್ರ `ಮಿ. ಫರ್‌ಫೆಕ್ಟ್‌' ಅಮೆರಿಕದಲ್ಲಿ ರೂ.1.1 ಕೋಟಿ ಗಳಿಸಿದೆ. ತಮಿಳು ಚಿತ್ರಗಳಾದ `ಮನ್ಮಧನ್‌ ಅಂಬು' ಬ್ರಿಟನ್‌ನಲ್ಲಿ ರೂ. 92.56 ಲಕ್ಷ, `ಎಂಧಿರನ್‌' ಒಟ್ಟಾರೆ ರೂ. 70 ಕೋಟಿ, `ಕೋ' ತಮಿಳು ಸಿನಿಮಾ ಬ್ರಿಟನ್‌ನಲ್ಲಿ ರೂ.40 ಲಕ್ಷ ಗಳಿಸಿದೆ. ಹೀಗಾಗಿ ಯಾವುದೋ ಒಂದು ಪ್ರಾದೇಶಿಕ ಸಿನಿಮಾ ಮಾತ್ರ ಹೀಗೆ ವಿದೇಶಿ ನೆಲದಲ್ಲಿ ಹಣ ಮಾಡುತ್ತದೆ ಎಂದು ವಾದ ಮಾಡಲಾಗದು. ಇತರೆ ಭಾಷೆಯ ಚಿತ್ರರಂಗಗಳು ಹೊಸ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಾ ಬೆಳೆಯುತ್ತಿವೆ.

ಬದಲಾಗಬೇಕು ಪ್ರಚಾರತಂತ್ರ

ಕನ್ನಡ ಚಿತ್ರರಂಗ ಹೊಸ ಮಾರುಕಟ್ಟೆಯ ಅನ್ವೇಷಣೆಯಲ್ಲಿ ಸೋಲುತ್ತಲೇ ಬಂದಿದೆ. ಮಾರುಕಟ್ಟೆ ಶೋಧಿಸುವುದು ಎಂದರೆ ಹೇಗೆ, ಇದಕ್ಕೇನು ಮಾಡಬೇಕು ಎಂಬುದರ ಬಗ್ಗೆಯೇ ಇಲ್ಲಿ ಸ್ಪಷ್ಟತೆ ಇಲ್ಲ. ಬೇರೆ ಚಿತ್ರರಂಗವನ್ನು ನೋಡಿ ಕಲಿಯುವ ಮನಸ್ಥಿತಿಯೂ ಇಲ್ಲ. ನಾವು ದುಡ್ಡು ಸುರಿದು ಸಿನಿಮಾ ತೆಗೆಯುತ್ತೇವೆ, ಕನ್ನಡಿಗರು ಹಿಂದೆ-ಮುಂದೆ ನೋಡದೆ ಟಾಕೀಸ್‌ಗೆ ಬಂದು ಸರತಿಯ ಸಾಲಿನಲ್ಲಿ ನಿಂತು ಟಿಕೆಟ್‌ ಕೊಂಡು ಕನ್ನಡ ಚಿತ್ರಗಳನ್ನಷ್ಟೇ ನೋಡಬೇಕು ಎಂಬ ಮನೋಭಾವ ಇಲ್ಲಿನ ಚಿತ್ರರಂಗದ ಮಂದಿಯದ್ದು. ಏಕೆ ನೋಡಬೇಕು ಎಂದರೆ ಕನ್ನಡ ಚಿತ್ರರಂಗ ಉದ್ಧಾರವಾಗಬೇಕೆಂಬ ಸಿದ್ಧ ಉತ್ತರ. ಈ ರೀತಿ `ಭಿಕ್ಷೆ' ಬೇಡದೆ, ಬದುಕುವ ದಾರಿ ಕಂಡುಕೊಳ್ಳುವುದು, ಎಂದರೆ ಒಳ್ಳೆಯ ಸಿನಿಮಾ ಮಾಡುವುದಷ್ಟೇ ಅಲ್ಲದೇ ಅವುಗಳ ಬಗ್ಗೆ ಚಿತ್ರರಸಿಕರ ಗಮನ ಸೆಳೆಯುವುದೂ ಬಹಳ ಮುಖ್ಯ. ಈ ಪ್ರಕ್ರಿಯೆಯಲ್ಲಿಯೇ ಹೊಸ ಮಾರುಕಟ್ಟೆ ಅನ್ವೇಷಣೆ ಕೂಡ ಅಡಕವಾಗಿರುತ್ತದೆ. ನೀವು ಗೂಗಲ್‌ ಸರ್ಚ್‌ಗೆ ಹೋಗಿ `ಧರ್ತಿ ಪಂಜಾಬಿ ಮೂವಿ' ಎಂದು ಟೈಪಿಸಿ ಸರ್ಚ್‌ ಮಾಡಿ. 0.09 ಸೆಕೆಂಡ್‌ನಲ್ಲಿ 530,000 ರಿಸಲ್ಟ್‌ ನಿಮ್ಮ ಮುಂದಿರುತ್ತದೆ. ಅಂತೆಯೇ ಇತ್ತೀಚೆಗೆ ಯಶಸ್ಸುಗಳಿಸಿದ ಕನ್ನಡ ಸಿನಿಮಾ `ಸಂಜು ವೆಡ್ಸ್‌ ಗೀತಾ ಕನ್ನಡ ಮೂವಿ' ಎಂದು ಟೈಪಿಸಿ ಸರ್ಚ್‌ ಮಾಡಿ, 0.09 ಸೆಕೆಂಡ್‌ಗಳಲ್ಲಿ ಕೇವಲ 88,000 ರಿಸಲ್ಟ್‌ ಮಾತ್ರ ದೊರೆಯುತ್ತದೆ. ಕನ್ನಡ ಚಿತ್ರಗಳ ಸೋಲು ಇರುವುದು ಇಲ್ಲಿಯೇ. ಒಂದು ಒಳ್ಳೆಯ ಸಿನಿಮಾ ಮಾಡಿದರೂ ಅದನ್ನು ಸರಿಯಾಗಿ ಜನರಿಗೆ ತಲುಪಿಸಲಾಗುತ್ತಿಲ್ಲ. ಹೈಟೆಕ್‌ ಸಂಪರ್ಕ ಮಾಧ್ಯಮಗಳನ್ನು ಮೈಮುರಿಯೆ ದುಡಿಸಿಕೊಳ್ಳುವಲ್ಲಿನ ಸೋಲು ಕನ್ನಡ ಚಿತ್ರರಂಗದ ಮಾರುಕಟ್ಟೆಯ ವಿಸ್ತಾರದ ಮೇಲೆ ಕೂಡ ಸದ್ದಿಲ್ಲದೆ ಪರಿಣಾಮ ಬೀರುತ್ತಿದೆ.

ಬಹುತೇಕ ನಿರ್ಮಾಪಕರು ಸಿನಿಮಾ ಹೆಸರಿನ ವೆಬ್‌ಸೈಟ್‌ ಮಾಡಿರುವುದಿಲ್ಲ, ಮಾಡಿದ್ದರೂ ಅದು ನೆಟ್ಟಿಗರಿಗೆ ಗೊತ್ತಾಗುವಂತೆ ಪ್ರಚಾರದ ತಂತ್ರಗಾರಿಕೆ ಬಳಸುವುಸುವುದಿಲ್ಲ. ಫೇಸ್‌ಬುಕ್‌, ಟ್ವೀಟರ್‌, ಯುಟ್ಯೂಬ್‌ನಂತಹ ಸೋಷಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಬಿಡುಗಡೆಗೆ ಸಿದ್ಧವಾಗಿರುವ ಹೃತಿಕ್‌ ರೋಷನ್‌ ಅಭಿನಯದ ಹಿಂದಿ ಚಿತ್ರ `ಜಿಂದಗಿ ನಾ ಮಿಲೇಗಿ ದೊಬಾರ'ಕ್ಕೆ ಪ್ರಚಾರ ನಡೆಸುತ್ತಿರುವುದು ಟಿವಿಯಲ್ಲಿ ಅಲ್ಲ, ಬರೀ ಇಂಟರ್‌ನೆಟ್‌ ಮತ್ತು ಮೊಬೈಲ್‌ ಫೋನ್‌ನಲ್ಲಿ.

ಕನ್ನಡ ಚಿತ್ರರಂಗದ ವಿದ್ಯಮಾನಗಳನ್ನು ಬಿತ್ತರಿಸುವ `ಬೆಳ್ಳಿತೆರೆ' ಎಂಬ ವೆಬ್‌ಸೈಟ್‌ಗೆ ವಾರಾಂತ್ಯದ ದಿನವೊಂದರಲ್ಲಿ 800ರಿಂದ ಸಾವಿರ ಜನರು ಈಗ ಭೇಟಿ ನೀಡುತ್ತಿದ್ದಾರೆ. ವೆಬ್‌ನ ನಿರ್ವಾಹಕ ಚಂದ್ರು ಪ್ರಕಾರ ಈ ವಿಸಿಟರ್ಸ್‌ ಒಟ್ಟಾರೆ 3 ಸಾವಿರ ಪೇಜುಗಳನ್ನು ವೀಕ್ಷಿಸುತ್ತಿದ್ದಾರೆ. ಭರ್ಜರಿ ಪ್ರಚಾರದಲ್ಲಿರುವ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ವೆಬ್‌ನ ಹಿಟ್‌ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಅಂದರೆ ವಿದೇಶದಲ್ಲಿರುವ ಕನ್ನಡಿಗರಿಗೆ ಕನ್ನಡ ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ತೀವ್ರ ಕುತೂಹಲವಿದೆ ಎಂದಾಯಿತು. ಆದರೆ ಇದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲಾಗುತ್ತಿಲ್ಲ.

ವಿದೇಶದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಬೆಂಗಳೂರು ಮೂಲದ `ಬೆವಿನ್‌ ಎಕ್ಸ್‌ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌'ನ ಆಡಳಿತ ನಿರ್ದೇಶಕ ಜೊಯೆಲ್‌ ಸುಮಂತ್‌ ರಾಜ್‌, ಕನ್ನಡ ಚಿತ್ರ ನಿರ್ಮಾಪಕರಿಗೆ ವಿದೇಶಿ ಮಾರುಕಟ್ಟೆಯ ಬಗ್ಗೆ ಸರಿಯಾದ ತಿಳಿವಳಿಕೆಯೇ ಇಲ್ಲ ಎನ್ನುತ್ತಾರೆ. ಚಿತ್ರರಂಗದ ಮಂದಿ ಮಾಡಬೇಕಾದ ಕೆಲಸವನ್ನು ನಮ್ಮ ಕಂಪನಿಯೇ ಮಾಡುತ್ತಿದೆ. ಚಿತ್ರಗಳ ವೆಬ್‌ಸೈಟ್‌ ನಿರ್ಮಾಣದಿಂದ ಹಿಡಿದು, ಕನ್ನಡ ಕೂಟಗಳನ್ನು ಸಂಪರ್ಕಿಸಿ, ಚಿತ್ರದ ಬಗ್ಗೆ ಪ್ರಚಾರ ಮಾಡಿ ವೀಕ್ಷಕರ ಗಮನ ಸೆಳೆಯಲಾಗುತ್ತಿದೆ. ಆದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಕನ್ನಡ ಚಿತ್ರರಂಗದ ಮಂದಿ ವರ್ತಿಸುತ್ತಿದ್ದಾರೆ. ಕೆಲ ನಿರ್ಮಾಪಕರಂತೂ ನಮ್ಮಿಂದ ರಾಯಲ್ಟಿ ಪಡೆದ ಮೇಲೆ, ನಾವು ಚಿತ್ರ ಪ್ರದರ್ಶಿಸಿದೆವಾ, ಇಲ್ಲವಾ ಎಂದು ಕೇಳುವುದೂ ಇಲ್ಲ. ಅವರಿಗೆ ಈ ಫೀಡ್‌ಬ್ಯಾಕೇ ಬೇಡ. ಹೀಗಾದರೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಈ ವಿಷಯವನ್ನು ಕೆಲ ನಿರ್ಮಾಪಕರೊಂದಿಗೆ ಪ್ರಸ್ತಾಪಿಸಿದಾಗ `ಹೀಗೆ ಇಂಟರ್‌ನೆಟ್‌ನಲ್ಲಿ ಪ್ರಚಾರ ಮಾಡಿದರೆ ಸಿನಿಮಾ ಮಂದಿರಕ್ಕೆ ಜನ ಬರುತ್ತಾರೆಯೇ, ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವವರು ಕನ್ನಡ ಸಿನಿಮಾ ನೋಡುವುದೇ ಇಲ್ಲ' ಎಂದೆಲ್ಲಾ ವಾದ ಶುರುವಿಟ್ಟು ಕೊಂಡರು. ಇವರಿಗೆ ಸಿನಿಮಾಕ್ಕೆ ಭಾಷೆಯ ಮಿತಿ ಇಲ್ಲ ಎಂಬ ಜ್ಞಾನವೇ ಇಲ್ಲವೆಂಬುದಂತೂ ಖಚಿತವಾಗಿತ್ತು. ಅಲ್ಲದೆ, ಕನ್ನಡ ಸಿನಿಮಾ ಭಾಷೆಯ ಮಿತಿಯನ್ನು ಮೀರಿ ಬೆಳೆಯಬೇಕಾದ ಅನಿವಾರ್ಯತೆಯನ್ನು ಅವರಿನ್ನೂ ಅರ್ಥಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಬಹುತೇಕ ಕನ್ನಡ ಸಿನಿಮಾಗಳ ಪ್ರಚಾರವನ್ನು ಕರ್ನಾಟಕದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡ ದೇಶದ ಬೇರೆ ನಗರಗಳಲ್ಲಿ ಕೂಡ ಸರಿಯಾಗಿ ಮಾಡಲಾಗುತ್ತಿಲ್ಲ. ತೆಲುಗು ಚಿತ್ರರಂಗದವರು ಬೆಂಗಳೂರಿನಲ್ಲಿ ಏನೆಲ್ಲಾ ಮಾಡುತ್ತಿದ್ದಾರೋ ಅಷ್ಟು ಮಾಡಿದರೆ ಸಾಕು. ಕನ್ನಡ ಚಿತ್ರಗಳ ಮಾರುಕಟ್ಟೆ ಒಂದಿಷ್ಟಾದರೂ ವಿಸ್ತಾರಗೊಳ್ಳುತ್ತಾ ಹೋಗುತ್ತದೆ.

ನಿಮಗೆ ಗೊತ್ತೇ, ಜೂನಿಯರ್‌ ಎನ್‌ಟಿಆರ್‌ ಅಭಿನಯದ ತೆಲುಗು ಸಿನಿಮಾ `ಬೃಂದಾವನಮ್‌' ರಾಜ್ಯದಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿಯೇ ರೂ. 1.2 ಕೋಟಿ ಗಳಿಸಿತ್ತು. ಇದು ಗೊತ್ತಾದದ್ದೇ ತಡ ಅಲ್ಲು ಅರ್ಜುನ್‌ ತಮ್ಮ ಹೊಸ ಸಿನಿಮಾ`ಬದ್ರಿನಾಥ್‌'ನ ಪ್ರಚಾರಕ್ಕಾಗಿ ನಗರದತ್ತ ಪ್ರಯಾಣ ಬೆಳೆಸಿದರು. ಹೀಗೆ ಬೇರೆ ನಗರಗಳಿಗೆ ಹೋಗಿ ನಮ್ಮ ಕನ್ನಡದ ಹೀರೋ-ಹೀರೋಯಿನ್ಸ್‌ ಏಕೆ ಪ್ರಚಾರ ಮಾಡುವುದಿಲ್ಲವೆಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ. ಅದು ಹೋಗಲಿ, ಬೆಂಗಳೂರು ಬಿಟ್ಟು ರಾಜ್ಯದ ಇತರ ನಗರಗಳಿಗೆ ಸಿನಿಮಾ ನಟ-ನಟಿಯರ ದಂಡು ಹೋಗುವುದು ಕೂಡ ಬಹಳ ಅಪರೂಪ. ಕೆಲ ನಾಯಕ-ನಾಯಕಿಯರು ಬೆಂಗಳೂರಿನಲ್ಲಿ ನಡೆಯುವ ಪತ್ರಿಕಾಗೋಷ್ಠಿಗೂ ಸಲ್ಲದ ಕಾರಣ ನೀಡಿ ಗೈರು ಹಾಜರಾಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ!

ಮಾರ್ಕೆಟ್‌ ಮಂತ್ರದಂಡ

ಕನ್ನಡದ ಬಹಳಷ್ಟು ಚಿತ್ರ ನಿರ್ಮಾಪಕರಿಗೆ ಮಾರುಕಟ್ಟೆಯ ಬಗ್ಗೆ ಸ್ಪಷ್ಟತೆಯೇ ಇರುವುದಿಲ್ಲ. ಒಟ್ಟಾರೆ ದುಡ್ಡು ಮಾಡಬೇಕೆಂದು ಸಿನಿಮಾ ಮಾಡುತ್ತಿದ್ದಾರೆ. ಇದು ಖಂಡಿತಾ ತಪ್ಪಲ್ಲ, ಆದರೆ ಮಾರುಕಟ್ಟೆ ಬಗ್ಗೆ ಬೇಸಿಕ್‌ ಮಾಹಿತಿ ಇದ್ದರೆ ಮುಂದೆ ನಿರಾಶರಾಗಿ, ಕೊರಗುವುದು ತಪ್ಪುತ್ತದೆ. ತಮಿಳು ಚಿತ್ರರಂಗದ ಬೆಳವಣಿಗೆಯನ್ನೊಮ್ಮೆ ನೋಡಿ, ಅಲ್ಲಿ ಮೂರು ರೀತಿಯ ಮಾರುಕಟ್ಟೆಗಳನ್ನು ಗುರುತಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಒಂದು ರಜನಿಕಾಂತ್‌ ಮತ್ತಿತರರ ಅಭಿನಯದ ಬಿಗ್‌ ಬಜೆಟ್‌ ಮೂವಿಗಳಾದರೆ, ಇನ್ನೊಂದು ಮೀಡಿಯಂ ಮಾರುಕಟ್ಟೆಯ ಸಿನಿಮಾಗಳು (ಉದಾ: ವಿಜಯಕಾಂತ್‌ ಅಭಿನಯದ ಸಿನಿಮಾಗಳು) ಮತ್ತೊಂದು ಚಿಕ್ಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಕಡಿಮೆ ಬಜೆಟ್‌ ಸಿನಿಮಾಗಳು. ಉದಾಹರಣೆಗೆ: ನಾಡೋಡಿಗಳ್‌. ಅಲ್ಲಿಯ ನಿರ್ಮಾಪಕರಿಗೆ ತಮ್ಮ ಸಿನಿಮಾ ಯಾವ ಮಾರುಕಟ್ಟೆಯಲ್ಲಿ ಎಷ್ಟು ಗಳಿಸಬಹುದು ಎಂಬ ಕಲ್ಪನೆ ಇರುತ್ತದೆ. ಸಿನಿಮಾ ಯಶಸ್ವಿಯಾದರೆ ಲಾಭ, ಇಲ್ಲದಿದ್ದಲ್ಲಿ ಹೂಡಿದ ಹಣಕ್ಕೆ ಮೋಸವಿಲ್ಲ ಎಂಬ ಲೆಕ್ಕಚಾರದಲ್ಲಿಯೇ ಸಿನಿಮಾ ಮಾಡುತ್ತಾರೆ. ಯಾವ ಮಾರುಕಟ್ಟೆ ಆಕರ್ಷಿಸಲು ಏನೆಲ್ಲಾ ಪ್ರಚಾರ ಬೇಕೋ ಅದನ್ನಷ್ಟೇ ಮಾಡುತ್ತಾರೆ. ಬೆಂಗಳೂರಿನಲ್ಲಿರುವ ನಮಗೆ ತಮಿಳಿನಲ್ಲಿ ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣವಾಗುತ್ತಿದ್ದರೆ ಮಾತ್ರ ಗೊತ್ತಾಗುತ್ತದೆ, ಕಡಿಮೆ ಬಜೆಟ್‌ ಸಿನಿಮಾ ಹಿಟ್‌ ಆದ ಮೇಲೆಯೇ ಗೊತ್ತಾಗುವುದು. ಹೀಗಾಗಲು ವ್ಯವಸ್ಥಿತ ಪ್ರಚಾರ ತಂತ್ರದಿಂದ ಮಾತ್ರ ಸಾಧ್ಯ.

ಈ ತಂತ್ರಗಾರಿಕೆಯನ್ನು ಕನ್ನಡ ಸಿನಿಮಾ ಅಳವಡಿಸಿಕೊಂಡಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ ಚಿತ್ರರಂಗ ಒಗ್ಗೂಡಿ, ಈ ಮಾರುಕಟ್ಟೆಯ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ಒಮ್ಮೆ ಮಾರುಕಟ್ಟೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ರೂಪಿಸಿದರೆ ಮತ್ತೆಲ್ಲವೂ ಅದಾಗಿಯೇ ನಡೆದುಕೊಂಡು ಹೋಗುತ್ತದೆ. ಈ ಕೆಲಸವನ್ನು ಮಾಡಬೇಕಾಗಿದ್ದ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿ ಸಣ್ಣಪುಟ್ಟ ವಿವಾದಗಳನ್ನು ಬಗೆಹರಿಸುವಲ್ಲಿಯೇ ಬಿಝಿಯಾಗಿದೆ.


ಧರಣಿ ಮಂಡಲ ಮಧ್ಯದೊಳಗಿದ್ದರೂ...

ಭಾರತದ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ವಿದೇಶಗಳಲ್ಲಿ ವ್ಯವಸ್ಥಿತವಾಗಿ ಬಿಡುಗಡೆ ಮಾಡಿ ಕೆಲ ಕಂಪನಿಗಳು ದುಡ್ಡು ಮಾಡಿಕೊಳ್ಳುತ್ತಿವೆ. ಉದಾಹರಣೆಗೆ ಯುರೋಸ್‌ ಇಂಟರ್‌ನ್ಯಾಷನಲ್‌ ಎಂಬ ಡಿಸ್ಟ್ರಿಬ್ಯುಷನ್‌ ಕಂಪನಿ ತನ್ನ ಶೇ. 15 ಬಜೆಟ್‌ನ್ನು ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ತೆಗೆದಿರಿಸಿದೆ. ಭಾರತೀಯ ಭಾಷೆಗಳ ವಿದೇಶಿ ಸಿನಿಮಾ ಮಾರುಕಟ್ಟೆ ಶೇ. 20-25 ವಿಸ್ತರಣೆಗೊಂಡಿದೆಯೆಂದು ಅಂದಾಜಿಸಲಾಗಿದೆ. ಹೀಗಾಗಿ ಸಿನಿಮಾದ ಒಟ್ಟಾರೆ ಆದಾಯದಲ್ಲಿ ಶೇ. 15-20 ರಷ್ಟು ಹಣವನ್ನು ವಿದೇಶದಿಂದ ತಂದುಕೊಡುವ ಭರವಸೆಯನ್ನು ಈ ಕಂಪೆನಿ ನೀಡುತ್ತಿದೆ. ಸರಿಸುಮಾರು 50-100 ಪ್ರಿಂಟ್‌ಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ. ಒಳ್ಳೆಯ ಸಿನಿಮಾಗಳು ನಿರೀಕ್ಷೆಗೂ ಮೀರಿ ಲಾಭ ಗಳಿಸುತ್ತವೆ.

ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ, ಭೋಜ್‌ಪುರಿ ಸಿನಿಮಾಗಳು ಈ ವರ್ಷ ವಿದೇಶದಲ್ಲಿ ಹಣ ಮಾಡಿದ ಭಾರತೀಯ ಭಾಷಾ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಯುಟಿವಿ ಕಂಪನಿಯೊಂದೇ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಒಟ್ಟು ಎಂಟು ಚಿತ್ರಗಳನ್ನು ಅಮೆರಿಕ, ಬ್ರಿಟನ್‌, ಗಲ್ಫ್‌ ದೇಶಗಳಲ್ಲಿ ಮತ್ತು ಸಿಂಗಾಪುರ ಹಾಗೂ ಮಲೇಷ್ಯಾದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ವಿದೇಶಿ ಟಿವಿಗಳಲ್ಲಿ ಪ್ರಸಾರ ಮಾಡಲು ಕೆಲ ಒಪ್ಪಂದವನ್ನೂ ಮಾಡಿಕೊಂಡಿದೆ. ಅಮೆರಿಕ ಮೂಲದ ವಿತರಕ ಸಂಸ್ಥೆ `ಡೇಟಾಬಜಾರ್‌ ವೆಂಚರ್ಸ್‌' ಬಂಗಾಳಿ ಸಿನಿಮಾ ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಮೆರಿಕದಲ್ಲಿ ಬಂಗಾಳಿ ಸಿನಿಮಾಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಈ ರೀತಿಯ ದೊಡ್ಡ ಕಂಪನಿಗಳು ವಿದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವುದರ ಜೊತೆಗೆ ವ್ಯವಸ್ಥಿತ ಪ್ರಚಾರವನ್ನೂ ನಡೆಸುತ್ತವೆ. ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಮೂಡಿಸಿ, ಅವರನ್ನು ಸಿನಿಮಾ ಥಿಯೇಟರ್‌ಗಳಿಗೆ ಎಳೆದು ತರುತ್ತಿವೆ.

ಆದರೆ ರೀತಿಯ ಕಂಪನಿಗಳು ಕನ್ನಡದ ಸಿನಿಮಾಗಳನ್ನು ಮೂಸಿಯೂ ನೋಡುತ್ತಿಲ್ಲ. ಏಕೆ ಎಂಬ ಪ್ರಶ್ನೆಯನ್ನು ಕನ್ನಡ ಚಿತ್ರರಂಗದ ಮಂದಿ ಎಂದೂ ಗಂಭೀರವಾಗಿ ಕೇಳಿಕೊಂಡೇ ಇಲ್ಲ. ನಮ್ಮ ದೇಶದಲ್ಲಿಯೇ ನೆಲೆ ಹೊಂದಿರುವ ಈ ಕಂಪನಿಗಳಿಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿಯೇ ಇಲ್ಲ. ಗೊತ್ತಿದ್ದರೆ ಒಬ್ಬಿಬ್ಬರು ನಟರ ಬಗ್ಗೆ ಅಷ್ಟೇ. ಕನ್ನಡ ಸಿನಿಮಾ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಿ, ಅದರ ಗಾತ್ರ ಮತ್ತು ಸಾಮರ್ಥ್ಯವನ್ನು ಈ ಕಂಪನಿಗಳ ಮುಂದಿಟ್ಟು, ನಮ್ಮ ಸಿನಿಮಾಗಳಿಗೂ ಡಿಮಾಂಡ್‌ ಇದೆ ಎಂಬುದನ್ನು ತೋರಿಸಿಕೊಡುವ ಕೆಲಸ ಆಗಬೇಕಿದೆ.

ಸದ್ಯ ಬೆಂಗಳೂರಿನ ಬೆವಿನ್‌ ಎಕ್ಸ್‌ಪೋರ್ಟ್ಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಮಾತ್ರ ಕನ್ನಡ ಚಿತ್ರಗಳನ್ನು ಹೊರದೇಶಗಳಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಆಹಾರ ಉತ್ಪನ್ನಗಳ ರಫ್ತು ಮತ್ತು ಆಮದು ಮಾಡುವ ಈ ಕಂಪನಿ ಕನ್ನಡ ಚಿತ್ರಗಳನ್ನು ಮಾತ್ರ ವಿತರಿಸುತ್ತಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿಯೇ ಕಾರಣ ಎನ್ನುತ್ತಾರೆ ಕಂಪನಿಯ ಆಡಳಿತ ನಿರ್ದೇಶಕ ಜೊಯೆಲ್‌ ಸುಮಂತ್‌ ರಾಜ್‌. ಕನ್ನಡ ಚಿತ್ರಗಳ ಗುಣಮಟ್ಟದಲ್ಲಿ ಸ್ಥಿರತೆಯಿಲ್ಲ. ಹೀಗಾಗಿ ವಿದೇಶಗಳಿಗೆ ಚಿತ್ರಗಳನ್ನು ತೆಗೆದುಕೊಂಡು ಹೋಗುವುದು ಒಂದು ರೀತಿಯಲ್ಲಿ ಸಾಹಸವೇ ಆಗುತ್ತಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಯಾವ ಚಿತ್ರದ ಮೇಲೂ ಭರವಸೆ ಇಡುವಂತಿಲ್ಲವಾಗಿದೆ. ಇದರಿಂದಾಗಿ ಕಳೆದ ಆರು ತಿಂಗಳಿನಿಂದ ಒಂದು ಚಿತ್ರವನ್ನೂ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗಿಲ್ಲ ಎಂದು ಕನ್ನಡ ಚಿತ್ರಗಳ ಓವರ್‌ಸೀಸ್‌ ಮಾರುಕಟ್ಟೆ ಬಗ್ಗೆ ವಿವರಿಸುತ್ತಾರೆ. ನಮ್ಮ ಕಂಪನಿ ಒಟ್ಟು ಒಂಬತ್ತು ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತದೆ. ಏಕಕಾಲದಲ್ಲಿ ವಿದೇಶದಲ್ಲಿಯೂ ಬಿಡುಗಡೆ ಸಾಧ್ಯವಾಗದೇ ಇರುವುದರಿಂದ ಇಲ್ಲಿ ಚೆನ್ನಾಗಿ ಓಡಿದ, ಒಳ್ಳೆಯ ವಿಮರ್ಶೆಗೆ ಪಾತ್ರವಾದ ಚಿತ್ರಗಳಷ್ಟನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಅವರು. ವಿದೇಶಿ ವೀಕ್ಷಕರೊಂದಿಗೆ ಸತತ ಸಂಪರ್ಕದಲ್ಲಿದ್ದರೆ ಮುಂದೊಮ್ಮೆ ಮಾರುಕಟ್ಟೆ ವಿಸ್ತರಣೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಚಿತ್ರಗಳಿಗೂ ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಈ ಕಂಪನಿಯಲ್ಲದೆ, ಕೆಲವರು ವೈಯುಕ್ತಿಕವಾಗಿ ವಿದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆಯಾದರೂ, ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಇದಕ್ಕೆ ಕನ್ನಡ ಚಿತ್ರರಂಗವೇ ಹೊಣೆಯೆನ್ನದೆ ವಿಧಿಯಿಲ್ಲ.

ಕಲಾತ್ಮಕ ಚಿತ್ರಗಳಿಗೆ ಮಾತ್ರ ಸಬ್‌ ಟೈಟಲ್‌!

ವಿದೇಶದಲ್ಲಿ ಚಿತ್ರಗಳು ಯಶಸ್ವಿಯಾಗಬೇಕೆಂದರೆ ಇಂಗ್ಲಿಷ್‌ನಲ್ಲಿ ಸಬ್‌ಟೈಟಲ್‌ ಇರಬೇಕು. ನಮ್ಮಲ್ಲಿ ಸಬ್‌-ಟೈಟಲ್‌ ಕೊಡುವುದು ಕಲಾತ್ಮಕ ಚಿತ್ರಗಳಿಗೆ ಮಾತ್ರ ಎಂಬ ತಪ್ಪು ತಿಳಿವಳಿಕೆ ಇದೆ. ಹೀಗಾಗಿ ಈ ಬಗ್ಗೆ ಯಾರೂ ಗಮನವನ್ನೇ ನೀಡುತ್ತಿಲ್ಲ. ನಮ್ಮ ಚಿತ್ರರಂಗದ ಮಂದಿಗೆ ಮೊದಲೇ ಇಂಗ್ಲಿಷ್‌ ಎಂದರೆ ಅಲರ್ಜಿ. ಪ್ರಚಾರಕ್ಕೆ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವಾಗಲೂ ತಪ್ಪುತಪ್ಪು ಇಂಗ್ಲಿಷ್‌ನಲ್ಲಿ ಮಾತನಾಡುವಂತೆಯೇ ತಪ್ಪುತಪ್ಪಾಗಿ ಬರೆಯಲಾಗಿರುತ್ತದೆ. ಇದನ್ನು ಓದಿದ ಕನ್ನಡಿಗರಿಗೂ ಸಿನಿಮಾದ ಬಗ್ಗೆ ಆಸಕ್ತಿ ಮೂಡಲು ಸಾಧ್ಯವಿಲ್ಲ. ಇನ್ನು ವಿತರಕ ಸಂಸ್ಥೆಗಳು ಏಕೆ ಗಮನಹರಿಸಿಯಾವು?

ಕಮರ್ಷಿಯಲ್‌ ಸಿನಿಮಾಗಳಿಗೆ ಸಬ್‌-ಟೈಟಲ್‌ ಕೊಡುವ ಬಗ್ಗೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಯೋಚಿಸಿಯೇ ಇರುವುದಿಲ್ಲ. ಅನಿವಾರ್ಯತೆ ಉಂಟಾದಾಗ ಅರ್ಜೆಂಟಿನಲ್ಲಿ ಸಿದ್ಧಪಡಿಸಲಾಗುತ್ತದೆ. ತಪ್ಪುಗಳ ಬಗ್ಗೆ ಗಮನ ನೀಡಿರುವುದಿಲ್ಲ. ಕನ್ನಡ ಬಾರದೇ ಇರುವವರು ಸಿನಿಮಾ ನೋಡಿದರೆ ಏನೂ ಅರ್ಥವಾಗದೆ ಕಕ್ಕಾಬಿಕ್ಕಿಯಾಗಬೇಕಾದ ಪರಿಸ್ಥತಿ ಇದೆ. ಈಗಾಗಲೇ ಒಂದೆರಡು ಬಾರಿ ಹೀಗಾದದ್ದೂ ಇದೆ. ಇದರಿಂದಾಗಿ ಕನ್ನಡ ಸಿನಿಮಾಗಳ ಇಮೇಜೇ ಹಾಳಾಗುತ್ತಿದೆಯಾದರೂ ಚಿತ್ರರಂಗದ ಮಂದಿಗೆ ಸಬ್‌-ಟೈಟಲ್‌ ನೀಡುವ ಕೆಲಸದ ಬಗ್ಗೆ ಪ್ರೀತಿ ಹುಟ್ಟಿಲ್ಲ. ಸಮುದ್ರ ದಾಟುವ ಕನಸು ಕಾಣದೇ ಇರುವವರಿಂದ ಇದನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆಯೇನೋ?

No comments:

Post a Comment