Sunday, March 20, 2011

ಇಂಡಿಯಾದ ಮಿಲಟರಿ ಸಾಧನೆ!


ನಾವ್ಯಾರೂ ಚರ್ಚೆ ಮಾಡದ ಬೆಳವಣಿಗೆಯೊಂದು ನನ್ನಲ್ಲಿ ಆತಂಕ ಸೃಷ್ಟಿಸುತ್ತಿದೆ. ಸಾರ್ವಜನಿಕವಾಗಿ ಈ ವಿಷಯವೆತ್ತಿದರೆ ದೇಶದ್ರೋಹಿಗಳಾಗಬೇಕಾಗುತ್ತದೆ ಎಂದು ಬಹುತೇಕರು ಸುಮ್ಮನಿರಬಹುದು. ವಿಷಯವೆಂದರೆ ನಮ್ಮ ದೇಶದ ಮಿಲಟರಿ ಬಜೆಟ್ ಹೆಚ್ಚಳ. ಬೇರೆ ಯಾವ ಯೋಜನೆಯ ಬಜೆಟ್ಟೂ ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಈ ವರ್ಷ ಕೂಡ ಕಳೆದ ಬಜೆಟ್ ಗಿಂತ ಶೇ.11 ರಷ್ಟು ಹೆಚ್ಚು ಮಾಡಿ, ಮಿಲಟರಿ ಬಜೆಟ್ ನ ಮೊತ್ತವನ್ನು 1,64,415 ಕೋಟಿ ರೂ.ಗೆ ತಲುಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಬಜೆಟ್ ನ್ನು ಶೇ. 40 ರಷ್ಟು ಹೆಚ್ಚಿಸಲಾಗಿದೆ. ಏಕೆ, ನಮ್ಮ ದೇಶಕ್ಕೆ ಯುದ್ಧ ಭೀತಿ ಇದೆಯೇ… ನನಗಂತೂ ಅಂತಹ ಪರಿಸ್ಥಿತಿ ಕಾಣಿಸುತ್ತಿಲ್ಲ.

ಈ ಬಜೆಟ್ ಹೆಚ್ಚಳದಿಂದಾಗಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶ ಎಂಬ ಖ್ಯಾತಿಗೆ ಇಂಡಿಯಾ ಪಾತ್ರವಾಗಿದೆ. ನೆರೆಯ ಚೀನಾವನ್ನು ಹಿಂದಿಕ್ಕಿ ಇಂಡಿಯಾ ಈ `ಸಾಧನೆ' ಮಾಡಿದೆ. 2006ರಿಂದ 2010ರ ನಡುವೆ ಯಾವ ದೇಶ ಎಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ ಎಂದು ಲೆಕ್ಕಹಾಕಿದ ಸ್ವೀಡನ್‌ನ ಚಿಂತಕರ ಚಾವಡಿ ಇಂಡಿಯಾಕ್ಕೆ ಈ ಪಟ್ಟ ನೀಡಿದ್ದು, ಈ ಅವಧಿಯಲ್ಲಿ ಒಟ್ಟಾರೆ ಜಾಗತಿಕವಾಗಿ ಆಮದಾದ ಶಸ್ತ್ರಾಸ್ತ್ರಗಳಲ್ಲಿ ಇಂಡಿಯಾ ಪಡೆದುಕೊಂಡಿದ್ದು ಶೇ.9ರಷ್ಟು ಎಂದಿದೆ. ಚೀನಾ ಶೇ.6 ಆಮದು ಮಾಡಿಕೊಂಡು ಸೆಕೆಂಡ್‌ ಪ್ಲೇಸ್‌ ಪಡೆದಿದೆ.

ಕಾರ್ಗಿಲ್‌ ಯುದ್ಧದ ನಂತರ ನಮ್ಮ ಸರ್ಕಾರ ಹಿಂದೆ-ಮುಂದೆ ನೋಡದೆ ಶಸ್ತ್ರಾಸ್ತ್ರ ಕೊಳ್ಳಲು ಹಣ ಸುರಿಯುತ್ತಿದೆ. 50 ಶತಕೋಟಿ ಡಾಲರ್‌ ಗಳ ಅಂದರೆ 2,25000 ಕೋಟಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಮಾಡಿಕೊಂಡಿದೆ. ಅಲ್ಲದೆ, 10.4 ಶತಕೋಟಿ ಡಾಲರ್‌ ನೀಡಿ 126 ಬಹು ಉಪಯೋಗಿ ಯುದ್ಧ ವಿಮಾನ ಖರೀದಿಸಲು ಮತ್ತು 35 ಶತಕೋಟಿ ವಿನಿಯೋಗಿಸಿ, ರಷ್ಯಾ ಜೊತೆ ಸೇರಿಕೊಂಡು ಸುಖೋಯಿ ಟಿ-50 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮುಖ್ಯವಾಗಿ ರಷ್ಯಾ, ಇಸ್ರೇಲ್‌, ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಸಲಾಗತ್ತಿದೆ. ಇತ್ತೀಚೆಗಂತೂ ಅಮೆರಿಕದೊಂದಿಗಿನ ವ್ಯವಹಾರ ಹೆಚ್ಚುತ್ತಲೇ ಇದೆ.

ಇದೆಲ್ಲಾ ಹೋಗಲಿ, ಮಿಲಟರಿಗೆ ಇಷ್ಟೊಂದು ದುಡ್ಡು ಎತ್ತಿಡುತ್ತಿರುವ ಸರ್ಕಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣ ಸುರಿಯುವುದಕ್ಕೆ ಬದಲಾಗಿ ನಮ್ಮ ದೇಶದಲ್ಲಿಯೇ ಇವುಗಳನ್ನು ತಯಾರಿಸಬಾರದೇ ಎಂದು ನೀವು ಯೋಚಿಸುತ್ತಿರಬಹುದು. ಹೌದು, ಈ ಕೆಲಸ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದೆ. ಇದಕ್ಕೆ ಸಹಕಾರ ನೀಡಲು ಎಂಟು ಸಾರ್ವಜನಿಕ ಉದ್ದಿಮೆಗಳಿವೆ. 39 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳಿವೆ. ಆದರೆ ಇವೆಲ್ಲಾ ಇದ್ದೂ ಇಲ್ಲದಂತಾಗಿದೆ. ನಿಮಗೆ ಗೊತ್ತೇ, ನಮ್ಮ ಸೇನೆ ಬಳಸುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಶೇ. 70 ರಷ್ಟು ವಿದೇಶದಿಂದ ಆಮದು ಮಾಡಿಕೊಂಡವು.

ಈ ವಿಷಯದಲ್ಲಿ ಚೀನಾ ಎಚ್ಚೆತ್ತಿದ್ದು, ಕಳೆದ ಎರಡು ದಶಕಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇಟ್ಟಿದೆ. ಹೀಗಾಗಿ ಆ ದೇಶದ ಆಮದು ಪ್ರಮಾಣ ಕಡಿಮೆಯಾಗಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ನಡೆಸಿಲ್ಲ, ನಡೆಸಲು ಮುಂದಾದರೂ ಮುಂದುವರೆದ ದೇಶಗಳು ಬಿಡುತ್ತಿಲ್ಲ!

ಹಿಂದೆ ಇಂಡಿಯಾ ಹೆಚ್ಚಾಗಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿತ್ತು. ಈಗ ಅಮೆರಿಕಕ್ಕೆ ಹೆದರಿ ಅದು, ಹೇಳಿದಂತೆ ಕೇಳುತ್ತಿದೆ. ಹೀಗಾಗಿಯೇ ಶಸ್ತ್ರಾಸ್ತ್ರ ರಫ್ತಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ನಿಂತಿದೆ. ಮೊತ್ತೊಂದು ವಿಷಯವೆಂದರೆ ಅಮೆರಿಕದಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವಲ್ಲಿ ಏಷ್ಯಾ ರಾಷ್ಟ್ರಗಳದ್ದೇ ಮೇಲುಗೈ!

ನೆರೆಯ ಚೀನಾ ಕೂಡ ಇಂಡಿಯಾದಂತೆ ಮಿಲಟರಿ ಬಜೆಟ್ ಹೆಚ್ಚಿಸುತ್ತಲೇ ಇದೆ. ಈ ವರ್ಷ ಅದು ಶೇ.12.7 ಹೆಚ್ಚು ಹಣ ತೆಗೆದಿರಿಸಿದೆ. ಚೀನಾದ ಮಿಲಟರಿ ಬಜೆಟ್ ಮೊತ್ತ ಅಧಿಕೃತವಾಗಿ ಅದು ಪ್ರಕಟಿಸಿದಂತೆ 91.5 ಶತಕೋಟಿ ಡಾಲರ್. ಇಂಡಿಯಾಕ್ಕಿಂತ ಮೂರು ಪಟ್ಟು ಹೆಚ್ಚು! ಹೀಗಾಗಿ ಇಂಡಿಯಾ ಮಾಡುತ್ತಿರುವುದೇ ಸರಿ ಎಂದು ವಾದ ಮಂಡಿಸುವವರೂ ಇದ್ದಾರೆ. ಇಂಡಿಯಾದ ರಕ್ಷಣಾ ವೆಚ್ಚ ಜಿಡಿಪಿಯ ಶೇ. 1.83 ರಷ್ಟು. ಚೀನಾ ಮಾಡುತ್ತಿರುವ ರಕ್ಷಣಾ ವೆಚ್ಚ ಅಲ್ಲಿಯ ಜಿಡಿಪಿಯ ಶೇ. 1.4 ರಷ್ಟು. ಜಿಡಿಪಿಯ ಆಧಾರದ ಮೇಲೆ ಹೇಳುವುದಾದರೆ ಇಂಡಿಯಾ ಚೀನಾಕ್ಕಿಂತ ಹೆಚ್ಚೇ ಹಣವನ್ನು ಮಿಲಟರಿಗೆ ಸುರಿಯುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಸುವ ಕೆಲಸ ಹೀಗೇ ಸಾಗುತ್ತಲೇ ಇದೆ, ನಾವೆಲ್ಲರೂ ಸುಮ್ಮನಿರಲೇ ಬೇಕಿದೆ. ಏಕೆಂದರೆ ದೇಶಪ್ರೇಮಿಗಳಲ್ಲವೇ…?

No comments:

Post a Comment