Saturday, November 19, 2011

ಬಲು ಅಪರೂಪ ನಮ್ ಜೋಡಿ


ಶಿವಮೊಗ್ಗದ ಈ ಇಬ್ಬರು ವಕೀಲರು ಒಬ್ಬರನ್ನು ಬಿಟ್ಟು ಮತ್ತೊಬ್ಬರಿರರು. ನ್ಯಾಯಾಲಯವಿರಲಿ, ಸಾಹಿತ್ಯದ ಕಾರ್ಯಕ್ರಮವಾಗಿರಲಿ, ಪ್ರಗತಿಪರ ಹೋರಾಟದ ಸಭೆಯಿರಲಿ, ಕೊನೆಗೆ ಮೀನಾಕ್ಷಿ ಭವನದ ಕಾಫಿ ಕುಡಿಯುವಾಗ ಕೂಡ ಒಟ್ಟಿಗೇ ಇರುತ್ತಾರೆ. ಈಗ ಬೆಂಗಳೂರು-ಶಿವಮೊಗ್ಗ ಓಡಾಟ ಕೂಡ ಒಟ್ಟಿಗೇ. ಹೀಗೆ ಇಬ್ಬರೂ ಒಟ್ಟಿಗೇ ಇರುವುದು ನಿನ್ನೆ ಮೊನ್ನೆಯಿಂದಲ್ಲ, 1982 ರಿಂದ, ಅಂದರೆ ಕಳೆದ 29 ವರ್ಷಗಳಿಂದ.

ಈಗ ಇವರೇ ಸುದ್ದಿಯ ಕೇಂದ್ರ. ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲು ಕಂಬಿ ಎಣಿಸುವಂತೆ ಮಾಡಿದ್ದು ಈ ಜೋಡಿ. ಇವರ ಹೆಸರು: ಸಿರಾಜಿನ್‌ ಬಾಷಾ ಮತ್ತು ಕೆ.ಎನ್‌. ಬಾಲರಾಜ್‌.

ಸಿರಾಜಿನ್‌ ಬಾಷಾ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರಾದರೆ, ಕೆ.ಎನ್‌. ಬಾಲರಾಜ್‌ ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲೂಕಿನ ಕೋಣಕೆರೆಯವರು. ಇಬ್ಬರೂ ಒಂದಾದದ್ದು ಶಿವಮೊಗ್ಗದಲ್ಲಿ ಲಾ ಓದುವಾಗ. ತೀರ್ಥಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಬಾಷಾ ಶಿವಮೊಗ್ಗದ ಡಿವಿಎಸ್‌ ಕಾಲೇಜಿನಲ್ಲಿ ಪದವಿ ಪಡೆದು ಲಾ ಕಾಲೇಜು ಸೇರಿದ್ದರೆ, ಬಾಲರಾಜ್‌ ತಮ್ಮೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗ ಸೇರಿದವರು. ಬಾಲರಾಜ್‌ ರೈತ ಸಂಘದ ಕಚೇರಿಯಲ್ಲಿಯೇ ಇದ್ದು, ಹೋರಾಟದ ಕೆಲಸ ಮಾಡುತ್ತಲೇ ಓದಿದವರು. ಈಗ ಇಬ್ಬರೂ ಶಿವಮೊಗ್ಗವನ್ನೇ ಊರಾಗಿಸಿಕೊಂಡಿದ್ದಾರೆ. ಈಗ ಸ್ವಂತ ಮನೆ ಹೊಂದಿದ್ದಾರೆ. ಇಬ್ಬರೂ ಕೃಷಿಕರ ಕುಟುಂಬದಿಂದ ಬಂದವರು ಎಂಬುದು ವಿಶೇಷ.

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಹೋರಾಟಕ್ಕೆ ವೇದಿಕೆಯಾಗಿತ್ತು, ನಂತರ ರೈತ ಮತ್ತು ದಲಿತ ಚಳುವಳಿಗಳಿಗೆ ಬೀಜ ಬಿತ್ತಿತ್ತು. ಈ ವಾತಾವರಣದಲ್ಲಿಯೇ ಬೆಳೆದ ಬಾಷಾ ಮತ್ತು ಬಾಲರಾಜ್‌ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾದವರು. ವಿದ್ಯಾರ್ಥಿಯಾಗಿದ್ದಾಗಲೇ ಪ್ರಗತಿಪರ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಜೊತೆಗೆ ಸಾಹಿತ್ಯದ ಹುಚ್ಚು ಬೇರೆ. ಲೋಯಿಯಾರಿಂದ ಪ್ರಭಾವಿತರಾಗಿ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡವರು.

ರೈತ ಚಳವಳಿಯಲ್ಲಂತೂ ಸಕ್ರೀಯವಾಗಿ ಭಾಗವಹಿಸುತ್ತಾ, ರೈತರ ವಿರುದ್ಧದ ಮೊಕದ್ದಮ್ಮೆಗಳ ಪರವಾಗಿ ವಾದ ಮಂಡಿಸುವುದೇ ಇವರ ವೃತ್ತಿಯಾಗಿತ್ತು. ಚಿಕ್ಕದಾದ ಮತ್ತು ಸರಳವಾದ ಕಚೇರಿಯಲ್ಲಿ ಇಬ್ಬರೂ ಒಟ್ಟಿಗೇ ವೃತ್ತಿ ನಡೆಸುತ್ತಿದ್ದರು. ಪ್ರಗತಿಪರ ಹೋರಾಟಗಾರರ, ದಲಿತರ ಪ್ರಕರಣಗಳೆಂದರೆ ಇವರಿಗೆಂದೂ ದುಡ್ಡು ಮುಖ್ಯವಾಗುತ್ತಿರಲಿಲ್ಲ. ಹೀಗಾಗಿಯೇ ಶಿವಮೊಗ್ಗದ ಪ್ರಗತಿಪರರ ವಲಯದಲ್ಲಿ ಇವರಿಬ್ಬರಿಗೆ ಮಹತ್ವದ ಸ್ಥಾನವಿದೆ. ಮುಳುಗಡೆ, ಬಗರ್‌ಹುಕುಂ ರೈತರಪರವಾದ ನೂರಾರು ಕೇಸುಗಳನ್ನು ಈಗಿವರು ನಡೆಸುತ್ತಿದ್ದಾರೆ.

ಬಾಷಾ ಮತ್ತು ಬಾಲರಾಜ್‌ ಜೂನಿಯರ್‌ ಆಗಿ ಹತ್ತಾರು ಮಂದಿ ಕೆಲಸ ಮಾಡಿದ್ದಾರೆ. `ಇವರಿಬ್ಬರು ಕೇವಲ ವಕೀಲರಾಗಿಯಲ್ಲ, ಸಾಹಿತಿಕವಾಗಿ ಮತ್ತು ವೈಚಾರಿಕವಾಗಿ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಾವು ಏನನ್ನು ಓದಬೇಕು ಎಂಬುದರಿಂದ ಹಿಡಿದು, ನಾವು ಯಾವುದಕ್ಕಾಗಿ ಹೋರಾಟ ನಡೆಸಬೇಕು ಎಂಬುದನ್ನೂ ಅವರು ಹೇಳಿಕೊಡುತ್ತಿದ್ದಾರೆ. ಶೋಷಿತರ ಬಗ್ಗೆ ಅವರಿಗಿರುವ ಕಾಳಜಿ ನಮಗೆಲ್ಲರಿಗೂ ಆದರ್ಶ' ಎನ್ನುತ್ತಾರೆ ಶಿವಮೊಗ್ಗದಲ್ಲಿ ಇವರ ಜೂನಿಯರ್‌ ಆಗಿದ್ದ ಕೆ.ಪಿ. ಶ್ರೀಪಾಲ್‌.

`ಸಾಮಾಜಿಕ ನ್ಯಾಯದ ಬಗ್ಗೆ ಇವರಿಬ್ಬರೂ ಹೊಂದಿರುವ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತೆಯೇ ಇಲ್ಲ. ಇದಕ್ಕಾಗಿ ಅವರು ನಡೆಸುತ್ತಿರುವ ಹೋರಾಟ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ರೈತರ ವಿರುದ್ಧ ಸರ್ಕಾರ ಮೊಕದ್ದಮ್ಮೆ ಹೂಡಿದಾಗಲೆಲ್ಲಾ ನಮ್ಮ ಜೊತೆ ನಿಂತು ಕಾನೂನು ಹೋರಾಟ ನಡೆಸುತ್ತಿದ್ದಾರೆ' ಎನ್ನುತ್ತಾರೆ ರಾಜ್ಯ ರೈತ ಸಂಘದ ನಾಯಕ ಕೆ.ಟಿ.ಗಂಗಾಧರ್‌.

ಹೋರಾಟಗಾರರು ಜೈಲು ಸೇರಿದಾಗ ಲೋಹಿಯಾರ ಮಾತುಗಳನ್ನು ನೆನಪಿಸಿ, ಅವರಲ್ಲಿ ಹೋರಾಟದ ಹುಮ್ಮಸ್ಸು ಬತ್ತದಂತೆ ಮಾಡುತ್ತಲೇ ಕಾನೂನು ಬೆಂಬಲ ನೀಡುತ್ತಾರೆ. ಹೀಗಾಗಿ ರೈತ ಹೋರಾಟಕ್ಕೆ ಇವರ ಕೊಡುಗೆ ಅಪಾರ ಎಂದೇ ಹೇಳಬಹುದು ಎನ್ನುತ್ತಾರೆ ಅವರು.

ಹೆಚ್ಚು ಮಾತಾಡದ, ವೈಚಾರಿಕ ತಿಳುವಳಿಕೆ ಹೊಂದಿರುವ ಸಿರಾಜಿನ್‌ ರಂಗಪ್ರೇಮಿಯೂ ಹೌದು. `ಸಮುದಾಯ' ಸಾಂಸ್ಕೃತಿಕ ಸಂಘಟನೆಯಲ್ಲಿ ತೊಂಡಗಿಸಿಕೊಂಡವರು. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ `ಮುಂಗಾರು' ಪತ್ರಿಕೆಯ ಪ್ರಸರಣ ವಿಭಾಗದಲ್ಲಿಯೂ ಕೆಲ ಕಾಲ ದುಡಿದವರು. ಲೋಹಿಯಾ ವಿಚಾರಧಾರೆಯ ಬಾಲರಾಜ್‌ ಸಾಹಿತ್ಯ ಪ್ರೇಮಿ. ಕುವೆಂಪುರ ವೈಚಾರಿಕ ಸಾಹಿತ್ಯದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯ ಹೊಂದಿದವರು. ರಾಜ್ಯ ರೈತ ಸಂಘದ ಎನ್‌.ಆರ್‌.ಪುರ ತಾಲೂಕ ಘಟಕದ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಮಿತಿಯ ಪದಾಧಿಕಾರಿಯಾಗ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು.

ಸದಾ ಒಟ್ಟಿಗೇ ಇರುವ ಇಬ್ಬರ ಸ್ನೇಹದ ಬಗ್ಗೆ ಅವರ ಗೆಳೆಯರ ಬಳಗ ಸದಾ ಕರಬುತ್ತಲೇ ಇರುತ್ತದೆ. ಮನೆಗೆ ಹೋದ ಮೇಲೂ ಇಬ್ಬರೂ ಪೋನ್‌ನಲ್ಲಿ ಮಾತನಾಡುತ್ತಲೇ ಇರುತ್ತಾರೆ ಎನ್ನುತ್ತಾರೆ ಕೆ.ಪಿ. ಶ್ರೀಪಾಲ್‌. ಇಬ್ಬರಿಗೆ ಇಬ್ಬರು ಮಕ್ಕಳು. ಇನ್ನೂ ಓದುತ್ತಿದ್ದಾರೆ. ನಿಮ್ಮ ಸ್ನೇಹದ ಗುಟ್ಟೇನು ಕೇಳಿದರೆ, ಸೈದ್ಧಾಂತಿಕ ನೆಲೆಗಟ್ಟು ಮತ್ತು ಸಮಾನ ಮನಸ್ಥಿತಿ ಎನ್ನುತ್ತಾರೆ. ಅಂದಾಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ಇವರ ನಡುವೆ ಕಾಣಿಸಿಕೊಳ್ಳುವುದುಂಟಂತೆ. ಮುಕ್ತ ಮನಸ್ಸಿನವರಾಗಿ ಚರ್ಚಿಸಿ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಬಾಲರಾಜ್‌.

ಬಾಷಾ ಮತ್ತು ಬಾಲರಾಜ್‌ ಇದುವರೆಗೂ ಯಾವುದೇ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಂಡವರಲ್ಲ. ಹಣದ ಹಿಂದೆ ಬಿದ್ದು ಕೋರ್ಟ್‌ ಮೆಟ್ಟಿಲೇರಿದವರೂ ಅಲ್ಲ. `ಯಡಿಯೂರಪ್ಪ ವಿರುದ್ಧ ಪ್ರಕರಣ ಹೂಡಲು ನಾವು ನಂಬಿದ ಸಿದ್ಧಾಂತವೇ ಕಾರಣ. ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿತ್ತು, ಸಹಿಸಲು ಸಾಧ್ಯವೇ ಇಲ್ಲವೆನಿಸಿದಾಗ ಕಾನೂನಿನ ಲಭ್ಯ ಅವಕಾಶಗಳನ್ನು ಬಳಸಿಕೊಂಡು ಈ ಹೋರಾಟ ಕೈಗೆತ್ತಿಕೊಂಡಿದ್ದೇವೆ. ಇದನ್ನು ಸಮಾಜದ ಎಲ್ಲ ವರ್ಗದ ಜನತೆಯೂ ಬೆಂಬಲಿಸಿದ್ದಾರೆ' ಎನ್ನುತ್ತಾರೆ ಬಾಲರಾಜ್‌.

`ಮುಖ್ಯವಾಗಿ ರೈತ ನಾಯಕ ದಿವಂಗತ ನಂಜುಂಡಸ್ವಾಮಿ ಹೇಳುತ್ತಿದ್ದ ಮಾತೊಂದು ನಮಗೆ ಈ ಮೊಕದ್ದಮೆ ಹೂಡಲು ಪ್ರೇರಣೆ ನೀಡಿದ್ದು. ಯಾವುದರ ವಿರುದ್ಧ ಹೋರಾಟವನ್ನಾದರೂ ನ್ಯಾಯಾಲಯದ ಒಳಗೆ ಮತ್ತು ಹೊರಗೆ ನಡೆಸಬೇಕೆಂದು ಅವರು ಹೇಳುತ್ತಲೇ ಇದ್ದರು. ಅವರ ಮಾತಿನಂತೆಯೇ ನಾವು ನ್ಯಾಯಾಲಯಕ್ಕೆ ದೂರು ನೀಡುವುದರ ಮೂಲಕ ಚಳುವಳಿ ಆರಂಭಿಸಿದ್ದೇವೆ. ಈ ಹೋರಾಟ ನ್ಯಾಯಲಯದ ಹೊರಗೂ ನಡೆಯಬೇಕಿತ್ತು. ವಿರೋಧಪಕ್ಷಗಳ ನಾಯಕರು ನಮ್ಮ ಬೆನ್ನಹಿಂದಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುವುದು ನಮ್ಮ ಕಿವಿಗೂ ಬಿದ್ದಿದೆ. ರಾಜಕೀಯ ಕಾರಣಕ್ಕೆ ಅಥವಾ ಹಣಕ್ಕಾಗಿ ನಾವು ಈ ದೂರು ನೀಡಿಲ್ಲ. ನಮ್ಮದು ನ್ಯಾಯದ ಪರ ರಾಜಿರಹಿತ ಹೋರಾಟವಷ್ಟೇ' ಎನ್ನುತ್ತಾರೆ.

ಕಳೆದ ಎರಡು ವರ್ಷಗಳಿಂದ ಬೆಂಗಳೂರು ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ನಡೆಸುತ್ತಿರುವ 54 ಹರೆಯದ ಈ ವಕೀಲರು ಶಿವಮೊಗ್ಗದ ನಂಟನ್ನು ಬಿಟ್ಟಿಲ್ಲ. ಇಬ್ಬರಿಗೂ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಆದರ್ಶ ವ್ಯಕ್ತಿಯಂತೆ. ಯಡಿಯೂರಪ್ಪ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಈ ಬಗ್ಗೆ ಏನನ್ನೂ ಹೇಳಲಿಚ್ಛಿಸುವುದಿಲ್ಲ ಎನ್ನುವ ಇವರು, ನ್ಯಾಯ ಗೆಲ್ಲಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

No comments:

Post a Comment