ಗಣಿಗಾರಿಕೆ- ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಸಿಲುಕಿದ ಶಬ್ದ. ನಮ್ಮ ಪ್ರಾಕೃತಿಕ ಸಂಪನ್ಮೂಲವನ್ನು ಬಗೆದು ತೆಗೆಯುವ ಈ ಉದ್ಯಮ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಗಿಂತ ಪರಿಸರ ಮತ್ತು ಜನಜೀವನದ ಮೇಲೆ ಬೀರುತ್ತಿರುವ ಪರಿಣಾಮ, ಅಕ್ರಮ, ಲೂಟಿ ಮತ್ತಿತರ ಕಾರಣಗಳಿಗೆ ಚರ್ಚೆಗೊಳಪಟ್ಟಿದ್ದೇ ಹೆಚ್ಚು. ದುರಂತವೆಂದರೆ, ದೇಶದ ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾಗಿರುವಷ್ಟೇ ಖನಿಜ ಸಂಪನ್ನು ತೆಗೆಯಬೇಕೇ ಅಥವಾ ಬೇಕಾಬಿಟ್ಟಿಯಾಗಿ ತೆಗೆದು, ರಫ್ತು ಮಾಡುವುದು ಅಭಿವೃದ್ಧಿಯೇ ಎಂಬ ಪ್ರಶ್ನೆಗೆ ನಮಗಿನ್ನೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರದ ನೀತಿ, ಆಡಳಿತಗಾರರ ಜ್ಞಾನ ಈ ಮೂಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರತ್ತ ಗಮನವನ್ನೇ ನೀಡುತ್ತಿಲ್ಲ.
ಗಣಿಗಾರಿಕೆ ಸುತ್ತ ಹುಟ್ಟಿಕೊಳ್ಳುತ್ತಿರುವ ವಿವಾದಗಳು ಇತೀಚೆಗೆ ಸರ್ಕಾರವನ್ನು ಪದೇ ಪದೇ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನು ರೂಪಿಸಿದೆ. ಸುಮಾರು 2 ವರ್ಷಗಳ ಕಾಲ ಅಳೆದು-ತೂಗಿ ರೂಪಿಸಲಾದ ಈ `ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಮಸೂದೆ-2011'ಗೆ ಕಳೆದ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ಓಕೆ ಎಂದಿದೆ. ಇನ್ನೂ ಸಂಸತ್ತಿನಲ್ಲಿ ಮಂಡನೆಯಾಗಿ ಅಂಗೀಕಾರ ಪಡೆಯಬೇಕಾಗಿದೆ.
ಗಣಿಗಾರಿಕೆಯ ಲಾಭದ ಕೆಲ ಅಂಶವನ್ನು ಸಂತ್ರಸ್ತರ ಕಲ್ಯಾಣಕ್ಕಾಗಿ ಮೀಸಲಿಡುವ ಪ್ರಮುಖ ಪ್ರಸ್ತಾಪ ಈ ಮಸೂದೆಯಲ್ಲಿರುವುದರಿಂದ ಇದರ ಕುರಿತು ದೇಶಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಗಣಿ ಉದ್ಯಮವಂತೂ ಪೆಟ್ಟು ತಿಂದ ಹಾವಿನಂತೆ ತಿರುಗಿ ಬಿದ್ದಿದೆ. ಹೀಗಾಗಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯುತ್ತದೆಯೇ ಅಥವಾ ಗಣಿ ಧೂಳಿನಲ್ಲಿ ಹೂತು ಹೋಗುತ್ತದೆಯೇ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಗಣಿಗಾರಿಕೆಗೆ ಅವಕಾಶ ನೀಡಿದ ಪ್ರಪಂಚದ ಬಹುತೇಕ ರಾಷ್ಟ್ರಗಳು ಗಣಿ ಸಂತ್ರಸ್ತರಿಗೆ ಅದರಲ್ಲೂ ಗಿರಿಜನರಿಗೆ ಗಣಿಗಾರಿಕೆಯ ಲಾಭದೊರೆಯುವಂತೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಇದು ಕನಸಿನ ಮಾತಂತಾಗಿತ್ತು. ಗಣಿಗಾರಿಕೆಗೆಗಾಗಿ ಎಲ್ಲವನ್ನೂ ತ್ಯಾಗಮಾಡಿದ್ದ ಮುಗ್ದ ಬುಡಕಟ್ಟು ಜನರಿಗೆ ಲಾಭ ಬೇಡ, ಸರಿಯಾಗಿ ಪರಿಹಾರ ನೀಡಲಾಗುತ್ತಿರಲಿಲ್ಲ. ಇದಕ್ಕಾಗಿ ಒತ್ತಾಯಿಸಿದರೆ, ಪ್ರತಿಭಟಿಸಿದರೆ ಗುಂಡಿಕ್ಕಿ ಕೊಲ್ಲಲೂ ಕೂಡ ಸರ್ಕಾರ ಹೇಸುತ್ತಿರಲಿಲ್ಲ. ಹೀಗಾಗಿ ಈಗ ಸರ್ಕಾರವೇ ಲಾಭ ಹಂಚಿಕೆಯ ಮಾತನಾಡಿರುವುದು ಹೊಸ ಭರವಸೆ ಮೂಡಿಸಿದೆ.
ಸಂತ್ರಸ್ತರಿಗೆ ಲಾಭ ಹಂಚುವ ಮಾತು ಹೊಸದೇನೂ ಅಲ್ಲ. 1997ರಲ್ಲಿಯೇ ಸುಪ್ರೀಂ ಕೋರ್ಟ್ ಹೇಳಿತ್ತು. ಆಂಧ್ರಪ್ರದೇಶದ ನಿಮ್ಮಲಪೇಡು ಹಳ್ಳಿಯ ಗಿರಿಜನರಿಗೆ ಸೇರಿದ ಜಾಗದಲ್ಲಿ ಬಿರ್ಲಾ ಕಂಪನಿ ಗಣಿಗಾರಿಕೆ ನಡೆಸಲು ಉದ್ದೇಶಿಸಿತ್ತು. ಇದನ್ನು ಸಮತಾ ಎಂಬ ಸಂಘಟನೆ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಗಿರಿಜನರಿಗೆ ಸೇರಿದ ಜಾಗದಲ್ಲಿ ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಎಂದು ತೀರ್ಪಿತ್ತಿತ್ತು. ಈ ಮಹತ್ವದ ತೀರ್ಪನ್ನು `ಸಮತಾ ತೀರ್ಪು' ಎಂದೇ ಕರೆಯಲಾಗುತ್ತಿದೆ. ಆ ನಂತರ ನ್ಯಾಯಾಲಯವೇ ಬಿರ್ಲಾ ಕಂಪನಿಗೆ ಗಣಿಗಾರಿಕೆ ನಡೆಸಲು ಒಪ್ಪಿಗೆ ನೀಡಿತಾದರೂ ಗಣಿಗಾರಿಕೆಯಿಂದ ಬರುವ ಲಾಭದಲ್ಲಿ ಶೇ. 20ರಷ್ಟನ್ನು ಸಂತ್ರಸ್ತ ಸಮುದಾಯದ ಶಾಶ್ವತ ಬಳಕೆಗೆ ಮೀಸಲಿಡಬೇಕೆಂದು ಸೂಚಿಸಿತ್ತು. ಆದರೆ ಈ ತೀರ್ಪು ಜಾರಿಗೆ ಬಂದಿರಲೇ ಇಲ್ಲ. ಕೊನೆಗೆ ಈ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು.
2006ರಲ್ಲಿ ಕೇಂದ್ರ ಸರ್ಕಾರ ಗಣಿ ನೀತಿಯಲ್ಲಿ ಬದಲಾವಣೆ ತರಲು ಉದ್ದೇಶಿಸಿ ಯೋಜನಾ ಆಯೋಗದ ಸದಸ್ಯರಾಗಿದ್ದ ಅನ್ವರುಲ್ ಹೂಡಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ಪರವಾಗಿ ಶಿಫಾರಸು ಮಾಡಿತೇ ಹೊರತು ಲಾಭ ಹಂಚಿಕೆಯ ಪ್ರಸ್ತಾಪದ ಕಡೆ ಕಣ್ಣೆತ್ತಿಯೂ ನೋಡಿರಲಿಲ್ಲ.
2009ರಲ್ಲಿ ಗಣಿ ಖಾತೆ ವಹಿಸಿಕೊಂಡ ಭಾರತಜ್ಞ ಬಿ.ಕೆ. ಹಂಡಿಕ್ `ಹೂಡಾ ಸಮಿತಿ'ಯ ಶಿಫಾರಸ್ಸುಗಳನ್ನು ಮೂಲೆಗೆ ತಳ್ಳಿ 1957ರ ಗಣಿ ಮತ್ತು ಖನಿಜ ಕಾಯ್ದೆಗೆ ಅಮೂಲಾಗ್ರ ತಿದ್ದುಪಡಿ ತರಲು ಹೊಸ ಕಾಯ್ದೆ ರೂಪಿಸಲು ಪ್ರಾರಂಭಿಸಿದರು. ಗಣಿಗಾರಿಕೆಯ ಲಾಭದಲ್ಲಿ ಶೇ. 26 ಅನ್ನು ಸಂತ್ರಸ್ತರಿಗೆ ಹಂಚಬೇಕೆಂಬ ಕ್ರಾಂತಿಕಾರಕ ಪ್ರಸ್ತಾಪವನ್ನು ನೂತನ ಮಸೂದೆಯಲ್ಲಿ ಸೇರಿಸಿದರು. ಇದರಿಂದಾಗಿ ಗಣಿ ಉದ್ಯಮದ ಮಂದಿಯ ಆಕ್ರೋಶಕ್ಕೆ ತುತ್ತಾದ ಅವರು 2011ರ ಜನವರಿಯಲ್ಲಿ ಗಣಿಖಾತೆಯನ್ನು ಕಳೆದುಕೊಳ್ಳಬೇಕಾಯಿತು.
ಆದರೆ ನೂತನ ಗಣಿ ಮಸೂದೆಯಲ್ಲಿ ಈ ಪ್ರಸ್ತಾಪ ಸೇರಿಸಲಾಗಿದೆ ಎಂಬ ಮಾಹಿತಿ ಆಗಲೇ ಬಹಿರಂಗಗೊಂಡಿತ್ತು. ಇದರಿಂದ ಮುಂದಿನವರಿಗೆ ಇದನ್ನು ಕೈ ಬಿಡುವುದು ಸಾಧ್ಯವಾಗಲಿಲ್ಲ. `ಮಸೂದೆಯಲ್ಲಿ ಹೇಳಿರುವ ರೀತಿ ಏನೂ ಗೊತ್ತಿಲ್ಲದ ಬುಡಕಟ್ಟು ಜನರಿಗೆ ಲಾಭ ಹಂಚಿದರೆ ಅವರು ಕುಡಿದು ಹೆಂಡತಿಯರನ್ನು ಹೊಡೆಯುತ್ತಾರಷ್ಟೇ' ಎಂಬ ಬಾಲಿಶ ಹೇಳಿಕೆ ಮೂಲಕ ಗಣಿ ಉದ್ಯಮ ಈ ಪ್ರಸ್ತಾಪವನ್ನು ವಿರೋಧಿಸುತ್ತಲೇ ಬಂದಿತ್ತು.
ಉದ್ಯಮದ ವಿರೋಧದ ನಡುವೆಯೇ ಗಣಿ ಸಚಿವಾಲಯ ಈ ಮಸೂದೆಯನ್ನು 2011ರ ಜೂನ್ನಲ್ಲಿ ಪರಿಶೀಲನೆಗಾಗಿ `ಸಚಿವರ ಗುಂಪಿಗೆ' ರವಾನಿಸಿತು. ಆಗ ಗಣಿ ಉದ್ಯಮ ಸಚಿವರ ಗುಂಪಿನ ಮೇಲೆ ಒತ್ತಡ ಹೇರಲಾರಂಭಿಸಿತು. ಈಗಾಗಲೇ ಸರ್ಕಾರ ವಿಧಿಸುತ್ತಿರುವ ರಾಯಲ್ಟಿ ಸಂತ್ರಸ್ತರ ಕಲ್ಯಾಣ ಯೋಜನೆಗೆ ಸಾಕಾಗುವಷ್ಟಿದ್ದು, ಮತ್ತೆ ನೇರ ಕರ ಸಂಗ್ರಹದ ಅಗತ್ಯವಿಲ್ಲ ಎಂಬ ವಾದವನ್ನು ಈ ಗುಂಪಿನ ಮುಂದಿಡಲಾಗಿತ್ತು. ಗಣಿ ಲಾಭಿ ಸಂಸ್ಥೆಗಳು ತಮ್ಮ ಪರವಾಗಿ ಮಸೂದೆ ಇರಬೇಕೆಂದು ಬೆದರಿಕೆ ಕೂಡ ಒಡ್ಡಿದ್ದವು.
ಉದ್ಯಮದ ಒತ್ತಡಕ್ಕೆ ಮಣಿದ ಸಚಿವರ ಗುಂಪು ಹೆಚ್ಚುವರಿ ಕರ ವಿಧಿಸುವ ಬಗ್ಗೆ ತೀರ್ಮಾನಿಸದೇ ಇದ್ದರೂ ಲಾಭ ಹಂಚಿಕೆಯನ್ನು ಕೈ ಬಿಡಲು ಒಪ್ಪಲಿಲ್ಲ. ಸಚಿವರ ಗುಂಪಿನಿಂದ ಗ್ರೀನ್ ಸಿಗ್ನಲ್ ಪಡೆದ ಮಸೂದೆಗೆ ಸೆಪ್ಟೆಂಬರ್ 30ರಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಚಳಿಗಾಲದ ಅಧಿವೇಶನದಲ್ಲಿಯೇ ಇದು ಮಂಡನೆಯಾಗುವ ನಿರೀಕ್ಷೆ ಇದೆ.
ಹೊಸ ಮಸೂದೆ ಪ್ರಕಾರ ಕಲ್ಲಿದ್ದಲು ಗಣಿಗಾರಿಕೆ ನಡೆಸುವ ಕಂಪನಿಗಳು ತೆರಿಗೆಯ ಮುನ್ನದ ಲಾಭದಲ್ಲಿ ಶೇ. 26ರಷ್ಟನ್ನು ಸಂತ್ರಸ್ತ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಉಳಿದ ಗಣಿ ಕಂಪನಿಗಳು ತಾವು ಈಗಾಗಲೇ ಕಟ್ಟುತ್ತಿರುವ ರಾಯಲ್ಟಿಯನ್ನು ಡಬ್ಬಲ್ ನೀಡಬೇಕಾಗುತ್ತದೆ. ಅಂದರೆ ರಾಯಲ್ಟಿಯಷ್ಟೇ ಹಣವನ್ನು ಆಯಾ ಜಿಲ್ಲೆಯಲ್ಲಿ ರಚಿಸಲಾಗುವ ಜಿಲ್ಲಾ ಖನಿಜ ಸಂಸ್ಥೆಗೆ ನೀಡಬೇಕು. ಇದನ್ನು ಸಂತ್ರಸ್ತರ ಕಲ್ಯಾಣ ಯೋಜನೆಗಳಿಗಾಗಿ ಮುಂದೆ ಜಿಲ್ಲಾಡಳಿತ ಬಳಸಿಕೊಳ್ಳಲಿದೆ. ಅಲ್ಲದೆ, ಅತ್ಯಂತ ಹೆಚ್ಚು ಗಣಿಗಾರಿಕೆ ನಡೆಯುತ್ತಿರುವ ದೇಶದ 60 ಜಿಲ್ಲೆಗಳಲ್ಲಿ ರಾಷ್ಟ್ರೀಯ ಗಣಿ ನಿಯಂತ್ರಣ ಪ್ರಾಧಿಕಾರ ಮತ್ತು ನ್ಯಾಯಾಧೀಕರಣ ಕೂಡ ರಚನೆಗೊಳ್ಳಲಿದೆ. ಇದರಿಂದ ಸ್ಥಳೀಯವಾಗಿಯೇ ದೂರುಗಳು ಇತ್ಯರ್ಥಕ್ಕೆ ವೇದಿಕೆ ಸಿಕ್ಕಂತಾಗಲಿದೆ.
ಈ ಮೂಸೂದೆ ಜಾರಿಗೆ ಬಂದಲ್ಲಿ ಉದ್ಯಮಕ್ಕೆ ಹತ್ತು ಸಾವಿರ ಕೋಟಿ ನಷ್ಟವಾಗಲಿದೆ. ಪ್ರಪಂಚದಲ್ಲಿಯೇ ಗಣಿಗಾರಿಕೆಗೆ ಅತ್ಯಂತ ಹೆಚ್ಚು ತೆರಿಗೆಯನ್ನು ನಮ್ಮ ದೇಶದಲ್ಲಿ ವಿಧಿಸಿದಂತಾಗಲಿದೆ. ಇದು ಅನ್ಯಾಯ ಎಂದು ಉದ್ಯಮದ ಪ್ರತಿನಿಧಿಗಳು ಅವಲತ್ತುಕೊಂಡಿದ್ದಾರೆ. ಉದ್ಯಮದ ಪ್ರಕಾರ ಒಟಾರೆಯಾಗಿ ಇನ್ನು ಮುಂದೆ ಕಲ್ಲಿದ್ದಿನ ಮೇಲೆ ಶೇ. 61 ಮತ್ತು ಕಬ್ಬಿಣದ ಅದಿರಿನ ಮೇಲೆ ಶೇ. 55 ತೆರಿಗೆಯ ಹೊರೆ ಬೀಳಲಿದೆ.
2011ರ ಭಾರತೀಯ ಗಣಿ ವರದಿ ಪ್ರಕಾರ 2010ರಲ್ಲಿ ಗಣಿ ಉದ್ಯಮ 1,56,600 ಕೋಟಿ ರೂ. ವ್ಯವಹಾರ ನಡೆಸಿತ್ತು. (2015ರ ವೇಳೆಗೆ 3,82,500 ಕೋಟಿ ರೂ. ವ್ಯವಹಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ) ವ್ಯವಹಾರದ ಮೊತ್ತದಲ್ಲಿ ಶೇ. 45ರಷ್ಟು ಲಾಭವಿದ್ದು, ಉದ್ಯಮ ಏನಿಲ್ಲವೆಂದರೂ 70ಸಾವಿರ ಕೋಟಿ ಲಾಭಗಳಿಸಿದೆ. ಹೀಗಿರುವಾಗ ಹತ್ತು ಸಾವಿರ ಕೋಟಿಯ ಬಗ್ಗೆ ಉದ್ಯಮ ಗುಲ್ಲೆಬ್ಬಿಸುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ.
ಗಣಿಗಾರಿಕೆಯ ರಾಯಲ್ಟಿಯಿಂದ ಒಟ್ಟಾರೆ ಸಂಗ್ರಹವಾಗುತ್ತಿರುವುದು ಕೇವಲ 2ರಿಂದ 3 ಸಾವಿರ ಕೋಟಿ ಮಾತ್ರ. ಅತ್ಯಂತ ಬೆಲೆಬಾಳು ಖನಿಜ ಸಂಪತ್ತನ್ನು ಇಷ್ಟು ಕಡಿಮೆ ರಾಯಲ್ಟಿಗೆ ಮಾರುತ್ತಿರುವ ಸರ್ಕಾರದ ಕ್ರಮ ಹೆಚ್ಚು ಚರ್ಚೆಗೊಳಗಾಗಬೇಕಾಗಿತ್ತು. ನಿವ್ವಳ ಲಾಭದಲ್ಲಿ ಇಂತಿಷ್ಟನ್ನು ರಾಯಲ್ಟಿಯಾಗಿ ನೀಡಲೇಬೇಕೆಂದು ಮಸೂದೆ ಹೇಳಬೇಕಾಗಿತ್ತು. ಆದರೆ ಈ ಬಗ್ಗೆ ಪ್ರಸ್ತಾಪವಿಲ್ಲದಿದ್ದರೂ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಹೆದುರತ್ತಲೇ ಇಟ್ಟ ಈ ಹೆಜ್ಜೆ ಗಟ್ಟಿಯಾಗುಳಿವುದೇ ಕಾದು ನೋಡಬೇಕು.
ಲಾಭ ಹಂಚಿಕೆ ಎಲ್ಲಾ ಕಡೆ ಇದೆ
ಗಣಿಕಾರಿಕೆಯಿಂದ ಬರುವ ಲಾಭದಲ್ಲಿ ಒಂದಿಷ್ಟನ್ನು ಸಂತ್ರಸ್ತರಿಗೆ ನೀಡುವ ತೀರ್ಮಾನ ನಮ್ಮ ದೇಶದ ಮಟ್ಟಿಗೆ ಹೊಸ ವಿಷಯ. ಆದರೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಈ ಕುರಿತು ಕಾನೂನು ಹೊಂದಿವೆ. ದ್ವೀಪರಾಷ್ಟ್ರ ಪಪ್ಪುವ ನ್ಯೂ ಗಿನಿಯಾದ ಮಾದರಿ ಪ್ರಪಂಚದಲ್ಲಿಯೇ ಅತ್ಯುತ್ತಮವಾದದು ಎಂದು ಹೆಸರು ಮಾಡಿದೆ. ಇಲ್ಲಿಯ ವ್ಯವಸ್ಥೆಯಲ್ಲಿ ಸರ್ಕಾರ, ಕಂಪನಿ ಮತ್ತು ಸಮುದಾಯದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ಲಾಭ ಹಂಚಿಕೆಯ ಕೆಲಸ ಮಾಡುತ್ತದೆ. ಪ್ರತಿಯೊಂದು ಒಪ್ಪಂದದಂತೆ ಕಾನೂನು ಪ್ರಕಾರವೇ ನಡೆಯುವುದರಿಂದ ಇಲ್ಲ ಗಣಿಗಾರಿಕೆ ವಿವಾದಕ್ಕೊಳಗಾಗುತ್ತಲೇ ಇಲ್ಲ.
ಕೆನಡಾದ ಪ್ರಾಂತ್ಯವೊಂದ ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಯಲ್ಟಿ ನೇರವಾಗಿ ಸಂತ್ರಸ್ತರಿಗೆ ಸಿಗುವಂತೆ ಮಾಡಿದೆ. ತಾಂಜೇನಿಯಾ ಕೂಡ ಇದೇ ರೀತಿಯ ಕಾನೂನು ಹೊಂದಿದ್ದರೂ, ಇಲ್ಲಿ ರಾಯಲ್ಟಿಯಿಂದ ಸಂಗ್ರಹವಾದ ಹಣ ಸರ್ಕಾರದ ಮೂಲಕ ಹಂಚಿಕೆಯಾಗಲಿದೆ. ಘಾನಾ ಮತ್ತು ನಮಿಬಿಯಾ `ಖನಿಜ ಅಭಿವೃದ್ಧಿ ನಿಧಿ'ಯನ್ನು ಸ್ಥಾಪಿಸಿ, ಸಂತ್ರಸ್ತರ ನೆರವಿಗೆ ವ್ಯವಸ್ಥೆ ಮಾಡಿದೆ. ದಕ್ಷಿಣ ಆಫ್ರಿಕಾ ಕೂಡ ` ಖನಿಜ ಮತ್ತು ಪೆಟ್ರೋಲಿಯಂ ಸಂಪನ್ಮೂಲ ಅಭಿವೃದ್ಧಿ ಕಾಯ್ದೆ' ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದು ಸಂತ್ರಸ್ತರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತಿದೆ. ಗಣಿ ನಡೆಸುವ ಕಂಪನಿಗಳು ನೇರವಾಗಿ ಸಂತ್ರಸ್ತ ಸಮುದಾದಯಕ್ಕೆ ನೆರವಾಗಲೂ ಈ ಕಾನೂನು ಅವಕಾಶ ನೀಡಿದೆ. ನಮ್ಮ ನೆರೆಯ ಚೀನಾ ಎರಡು ರೀತಿಯಲ್ಲಿ ರಾಯಲ್ಟಿ ಸಂಗ್ರಹಿಸುತ್ತಿದ್ದು, ಸ್ಥಳೀಯ ಆಡಳಿತಕ್ಕೆ ಒಂದು ಪಾಲು ದೊರೆಯಲಿದೆ. ಮತ್ತೊಂದು ಪಾಲು ರಾಷ್ಟ್ರೀಯ ನಿಧಿಗೆ ಸಲ್ಲಿಕೆಯಾಗುತ್ತದೆ. ಆಸ್ಟ್ರೇಲಿಯಾ ಇತ್ತೀಚೆಗೆ ಗಣಿಗಾರಿಕೆ ನಡೆದ ಪ್ರದೇಶದ ಅಭಿವೃದ್ಧಿಗಾಗಿ ಶೇ. 30 ರಷ್ಟು ಬಾಡಿಗೆ ತೆರಿಗೆ ವಿಧಿಸುವುದಾಗಿ ಹೇಳಿದೆ. ಬ್ರೆಜಿಲ್ ಗಣಿಗಾರಿಕೆಯಿಂದ ಬರುವ ಆದಾಯವನ್ನು ಸ್ಥಳೀಯ ಆಡಳಿತದೊಂದಿಗೆ ಹಂಚಿಕೊಳ್ಳುತ್ತದೆ. ಪೇರು ಕೂಡ 2004ರಲ್ಲಿಯೇ ಈ ಮಾದರಿಯನ್ನು ಜಾರಿಗೆ ತಂದಿದೆ. ನಮ್ಮ ದೇಶ ಮಾತ್ರ ಎಚ್ಚೆತ್ತುಕೊಂಡಿರುವುದು ಈಗ.
ಸಂಪತ್ತಿಗೆ ಕೊರತೆಯಿಲ್ಲ
ಲೋಕಾಯುಕ್ತ ವರದಿ ರಾಜ್ಯದಲ್ಲಿ ಅದಿರೆಷ್ಟು ಲೂಟಿಯಾಗಿದೆ ಎಂಬುದರತ್ತ ಬೊಟ್ಟು ಮಾಡಿದೆ. ಇಷ್ಟೆಲ್ಲಾ ಅದಿರು ಲೂಟಿಯಾಗಿರಬೇಕಾದರೆ ನಮ್ಮ ರಾಜ್ಯದಲ್ಲಿ ಖನಿಜ ಸಂಪತ್ತು ಎಷ್ಟಿರಬಹುದು?
ದೇಶದಲ್ಲಿರುವ ಕಬ್ಬಿಣದ ಅದಿರಿನ ಪೈಕಿ ಶೇ. 40ಕ್ಕಿಂತಲೂ ಹೆಚ್ಚು ನಮ್ಮ ರಾಜ್ಯದಲ್ಲಿ ಸಂಗ್ರಹವಾಗಿದೆ. ಇಂಡಿಯನ್ ಬ್ಯುರೋ ಆಫ್ ಮೈನ್ಸ್ ಪ್ರಕಾರವೇ ರಾಜ್ಯದಲ್ಲಿ 1,148.32 ಮಿಲಿಯನ್ ಟನ್ ಹೆಮಟೈಟ್, 7,883.85 ಮಿಲಿಯನ್ ಮ್ಯಾಗ್ನಟೈಟ್ ಇದೆ. ದೇಶ ಹೊಂದಿರುವ ಒಟ್ಟಾರೆ ಅದಿರಿನ ಪ್ರಮಾಣಕ್ಕೆ ಹೋಲಿಸಿದಲ್ಲಿ ರಾಜ್ಯದಲ್ಲಿ ರುವ ಹೆಮಟೈಟ್ನ ಪ್ರಮಾಣ ಶೇ. 10.1 ಆದರೆ, ಮ್ಯಾಗ್ನಟೈಟ್ ಅದಿರಿನ ಪ್ರಮಾಣ ಶೇ.73.8.ರಷ್ಟು ! ಹೀಗಾಗಿಯೇ ಸ್ಟೀಲ್ ಕಂಪನಿಗಳ ಕಣ್ಣು ಸದಾ ರಾಜ್ಯದತ್ತ.
ಐರನ್ ಒರ್ ಬಿಟ್ಟರೆ ರಾಜ್ಯದಲ್ಲಿ ಅತಿಯಾಗಿ ದೊರೆಯುವುದೆಂದರೆ ಸುಣ್ಣ (ಲೈಮ್ಸ್ಟೋನ್). ಮುಖ್ಯವಾಗಿ ಸಿಮೆಂಟ್ ತಯಾರಿಕೆಯಲ್ಲಿ ಬಳಸಲ್ಪಡುವ ಸುಣ್ಣದ ಒಟ್ಟು ಸಂಪನ್ಮೂಲದಲ್ಲಿ ಶೇ. 30.5ರಷ್ಟು ನಮ್ಮ ರಾಜ್ಯದಲ್ಲಿದೆ. ಇತ್ತೀಚೆಗೆ ಅತಿ ಬೇಡಿಕೆಯಲ್ಲಿರುವ ತಾಮ್ರಕ್ಕೆ ಕೂಡ ಬರವಿಲ್ಲ. 34.30 ಮಿಲಿಯನ್ ಟನ್ ನಮ್ಮ ರಾಜ್ಯದಲ್ಲಿದೆ. ಅಂದ ಹಾಗೆ ನಮ್ಮ ದೇಶದಲ್ಲಿ ಇದುವರೆಗೆ ಪತ್ತೆಯಾಗಿರುವ ಖನಿಜ ನಿಕ್ಷೇಪಗಳ ಸಂಖ್ಯೆ ಎಷ್ಟು ಗೊತ್ತೇ, 20 ಸಾವಿರ !
ಮಸೂದೆಯ ಇತರ ಪ್ರಮುಖ ಅಂಶಗಳು
* ಲಾಭ ಹಂಚಿಕೆಯ ಪ್ರಮಾಣವನ್ನು ಯಾವಾಗ ಬೇಕಾದರೂ ಪರಿಷ್ಕರಿಸಬಹುದು.
*ರಾಜ್ಯ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ಹರಾಜು ವ್ಯವಸ್ಥೆಯನ್ನು ಜಾರಿಗೆ ತರಬೇಕು. (ಇದುವರೆಗೆ ಮೊದಲು ಬಂದವರಿಗೆ ಆಧ್ಯತೆ ನೀಡಲಾಗುತ್ತಿತ್ತು)
* ಸಮೀಕ್ಷೆಯ ಸಂದರ್ಭದಲ್ಲಿಯೇ ಹರಾಜು ನಡೆಸಲು ಅವಕಾಶ.
* ಅದಿರು ಮಾರಾಟದ ಬೆಲೆಯಲ್ಲಿ ಶೇ. 10 ರಷ್ಟನ್ನು ರಾಯಲ್ಟಿಯಾಗಿ ಸಂಗ್ರಹಿಸಬೇಕೆಂಬ ಸ್ಪಷ್ಟ ತೀರ್ಮಾನ. ಇದುವರೆಗೆ ರಾಯಲ್ಟಿಯ ಬಗ್ಗೆ ಸ್ಪಷ್ಟತೆ ಇರಲಿಲ್ಲ.
* ರಾಷ್ಟ್ರೀಯ ಗಣಿ ನಿಯಂತ್ರಣ ಪ್ರಾಧಿಕಾರ ಮತ್ತು ರಾಷ್ಟ್ರೀಯ ಗಣಿ ನ್ಯಾಯಾಧೀಕರ ರಚಿಸಬೇಕು. ರಾಜ್ಯ ಮಟ್ಟದಲ್ಲಿಯೂ ಈ ಪ್ರಾಧಿಕಾರ ಮತ್ತು ನ್ಯಾಯಾಧೀಕರಣ ಸ್ಥಾಪನೆಗೆ ಕ್ರಮತೆಗೆದುಕೊಳ್ಳಬೇಕು. ಗಣಿಗಾರಿಕೆ ಕುರಿತ ದೂರು-ದುಮ್ಮಾನಗಳನ್ನು ಇಲ್ಲಿಯೇ ಬಗೆಹರಿಸಬೇಕು.
* ಕಡಿಮೆ ಪ್ರಮಾಣದಲ್ಲಿ ಖನಿಜ ಸಂಪತ್ತಿದ್ದರೂ ಗಣಿಗಾರಿಕೆ ನಡೆಸಲು ಅವಕಾಶ.
* ಸ್ವಲ್ಪ ಪ್ರಮಾಣದಲ್ಲಿ ಖನಿಜ ಸಂಪತ್ತಿದ್ದಲ್ಲಿ, ಗಿರಿಜನರ ಸಹಕಾರ ಸಂಘಟನೆಗಳು ಗಣಿಗಾರಿಕೆ ನಡೆಸಲು ಮುಂದಾದಲ್ಲಿ ಇವುಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು.
* ಕೇಂದ್ರ ಮತ್ತು ರಾಜ್ಯ ವಿಧಿಸುವ ಕರ ಕಟ್ಟದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ.
* ಗಣಿ ಕಾಯ್ದೆ ಉಲ್ಲಂಘಿಸಿದಲ್ಲಿ ದಂಢ ಹಾಕಲು ಅವಕಾಶ.
* ಅಕ್ರಮ ಗಣಿಗಾರಿಕೆ ತಡೆಗೆ ಒತ್ತು.
* ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಾಗ ಗ್ರಾಮಸಭಾ ಅಥವಾ ಜಿಲ್ಲಾ ಮಂಡಳಿಯ ಅಭಿಪ್ರಾಯಗಳಿಗೆ ಮನ್ನಣೆ. ಆದರೆ ಗಣಿಗಾರಿಕೆಯನ್ನು ನಿಲ್ಲಿಸುವ ಅಧಿಕಾರ ಇವುಗಳಿಗೆ ಇಲ್ಲ.
*ಗಣಿಗಾರಿಕೆ ನಡೆಸಲು ನೀಡುವ ಗರಿಷ್ಠ ಅವಧಿ ಆರು ವರ್ಷಕ್ಕೆ ಏರಿಕೆ.
* ಸಂತ್ರಸ್ತರು ಯಾರ್ಯಾರು ಎಂಬುದರ ಬಗ್ಗೆ ಸ್ಪಷ್ಟತೆ. ಕೇವಲ ಭೂ ಮಾಲೀಕರದಲ್ಲದೆ, ಅದನ್ನು ಅವಲಂಬಿಸಿದವರೂ, ಸಾಂಪ್ರದಾಯಕವಾಗಿ ಅದನ್ನು ಬಳಸುತ್ತಿರುವವರೂ ಸೇರ್ಪಡೆ.
* ಗಣಿಗಾರಿಕೆ ನಡೆಸುವ ಕಂಪನಿಗಳು ಪಾರದರ್ಶಕ ವ್ಯವಹಾರ ನಡೆಸಬೇಕು. ಗಣಿಗಾರಿಕೆ ನಡೆಸಲು ಪಡೆದ ಪರವಾನಿಗೆ, ಅವಧಿ, ನಡೆಸುವ ರೀತಿ, ಪರಿಸರ ರಕ್ಷಣೆಗೆ ತೆಗೆದುಕೊಂಡ ಕ್ರಮ ಮತ್ತಿತರ ಮಾಹಿತಿಯನ್ನು ವೆಬ್ನಲ್ಲಿ ಪ್ರಕಟಿಸಬೇಕು.
* ಇಂಡಿಯನ್ ಬ್ಯೂರೋ ಆಫ್ ಮೈನ್ಸ್ನ ಸಬಲೀಕರಣಕ್ಕೆ ಸೀಮಾ ಮತ್ತು ಅಬಕಾರಿ ಸುಂಕದ ಮೇಲೆ ಶೇ. 2.5 ತೆರಿಗೆ ವಿಧಿಸಲು ಅವಕಾಶ.
ಲಾಭ ಹಂಚಿಕೆ ಹೇಗೆ
ಈ ಮಸೂದೆ ಜಾರಿಗೆ ಬಂದಲ್ಲಿ ಪ್ರತಿ ವರ್ಷ ದೊಡ್ಡ ಗಣಿಗಳಿಂದಲೇ ಒಟ್ಟಾರೆ 10,500 ಕೋಟಿ ರೂ (ಈಗಿನ ಅಂದಾಜಿನ ಪ್ರಕಾರ) ಸಂತ್ರಸ್ತರಿಗೆ ದೊರೆಯಲಿದೆ. ಉದ್ಯಮದ ಪ್ರಕಾರ ಕಲ್ಲಿದ್ದಲು ಗಣಿಗಳಿಂದ 2,800 ಕೋಟಿ ಹಾಗೂ ಇತರ ಗಣಿಗಳಿಂದ 12,200 ಕೋಟಿ ರೂ. ಸಂಗ್ರಹವಾಗಲಿದೆ. ಇದು ಕೇಂದ್ರ ಬುಡಕಟ್ಟು ಕಲ್ಯಾಣ ಖಾತೆಯ ಈ ಸಾಲಿನ ಬಜೆಟ್ಗಿಂತ ಸುಮಾರು ಏಳು ಪಟ್ಟು ಹೆಚ್ಚು. ಇದರಲ್ಲಿ ಶೇ. 86 ರಷ್ಟು ಹಣ ಹೆಚ್ಚು ಗಣಿಗಾರಿಕೆ ನಡೆಯುತ್ತಿರುವ 50 ಜಿಲ್ಲೆಗಳ ಪಾಲಾಗಲಿದೆ. 25 ಲಕ್ಷ ಜನರಿಗೆ ಇದರ ಲಾಭ ದೊರೆಯಲಿದ್ದು, ಹಂಚಿದಲ್ಲಿ ಪ್ರತಿ ವ್ಯಕ್ತಿಗೆ 38 ಸಾವಿರ ದೊರೆಯಲಿದೆ. ಈ ಆದಾಯ ಗ್ರಾಮೀಣ ಭಾರತದಲ್ಲಿನ ಬಡವರ ವಾರ್ಷಿಕ ಆದಾಯಕ್ಕೆ ಹೋಲಿಸಿದಲ್ಲಿ ಒಂಬತ್ತು ಪಟ್ಟು ಹೆಚ್ಚು.
ಜಿಲ್ಲಾ ಖನಿಜ ನಿಧಿಗೆ ಈ `ಆದಾಯ' ಸಲ್ಲಿಕೆಯಾಗಲಿದ್ದು, ಅದನ್ನು ಸಂತ್ರಸ್ತರಿಗೆ ಹೇಗೆ ಹಂಚಬೇಕೆಂದು ಮಸೂದೆಯಲ್ಲಿ ಹೇಳಲಾಗಿಲ್ಲ. ಜಿಲ್ಲಾಧಿಕಾರಿಗಳು ಈ ನಿಧಿಯ ಮುಖ್ಯಸ್ಥರಾಗಿದ್ದು, ಅವರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲ್ಲಿದ್ದಾರೆ. ಸಂತ್ರಸ್ತರ ಪ್ರತಿನಿಧಿಗಳು ಈ ನಿಧಿ ಬಳಕೆ ಮಂಡಳಿಯಲ್ಲಿರುತ್ತಾರೆ.
ಬಳ್ಳಾರಿ ಚಿತ್ರಣ ಬದಲಾಗಲಿದೆ
ಈ ಹೊಸ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಲ್ಲಿ ಬಳ್ಳಾರಿಯ ಜನತೆಗೆ ಹೆಚ್ಚು ಲಾಭವಾಗಲಿದೆ. ಏಕೆಂದರೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಗಣಿಗಾರಿಕೆ ನಡೆಯುತ್ತಿರುವುದು ಈ ಜಿಲ್ಲೆಯಲ್ಲಿ. ಇಲ್ಲಿ ಗಣಿಗಾರಿಕೆ ನಿಷೇಧಿಸುವುದಕ್ಕಿಂತ ಮೊದಲು, ಪ್ರತಿವರ್ಷ ಹೆಚ್ಚುಕಡಿಮೆ 100-120 ದಶಲಕ್ಷ ಟನ್ ಅದಿರು ಅಗೆಯಲಾಗುತ್ತಿತ್ತು. ಇನ್ನೂ ಜಿಲ್ಲೆಯಲ್ಲಿ 1000 ದಶಲಕ್ಷ ಟನ್ ಅದಿರು ಇರಬಹುದೆಂದು ಅಂದಾಜಿಸಲಾಗಿದೆ. ಒಂದು ಟನ್ಗೆ ಏಳು ಸಾವಿರ ಎಂದು ಲೆಕ್ಕ ಹಾಕಿದರೂ ಈ ಅದಿರನ್ನು ಮಾರಾಟ ಮಾಡಿದಲ್ಲಿ ಕೋಟ್ಯಂತರ ರೂ. ಸಂಗ್ರಹವಾಗಲಿದೆ. ಇದರಲ್ಲಿ ಶೇ. 10ರಷ್ಟನ್ನು ರಾಯಲ್ಟಿಯಾಗಿ ಸಂಗ್ರಹಿಸಿ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟರೆ ಈ ಜಿಲ್ಲೆ ಹೇಗೆ ಬದಲಾಗಬಹುದೆಂದು ನೀವೇ ಊಹಿಸಿ.
ಲೋಕಾಯುಕ್ತ ವರದಿ ಪ್ರಕಾರ, ಅಕ್ರಮ ಗಣಿಗಾರಿಕೆಯಿಂದ 2006ರ ಏಪ್ರಿಲ್ನಿಂದ 2010ರ ಜುಲೈವರೆಗೆ 16,085 ಕೋಟಿ ನಷ್ಟವಾಗಿದೆ. ಇದನ್ನು ತಪ್ಪಿಸಿ, ಶೇ. 10ರಷ್ಟು ರಾಯಲ್ಟಿ ಸಂಗ್ರಹಿಸಿದ್ದರೂ ಬಳ್ಳಾರಿಯ ಚಿತ್ರಣವೇ ಇಷ್ಟೊತ್ತಿಗೆ ಬದಲಾಗಿರುತ್ತಿತ್ತು. ಈಗ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಯೋಚನೆ ಮಾಡಿದಂತಾಗಿದೆ. ಜಿಲ್ಲೆಯ ಜನ ಧೂಳು ತಿನ್ನುತ್ತಾ ನರಳುತ್ತಿದ್ದಾರೆ.
ಬಳ್ಳಾರಿಯಲ್ಲಿ ಅಧಿಕೃತವಾಗಿ 124 ಕಂಪನಿಗಳು ಗಣಿಗಾರಿಕೆ ನಡೆಸುತ್ತಿವೆ. ಮಸೂದೆ ಜಾರಿಗೆ ಬಂದಲ್ಲಿ ಈ ಎಲ್ಲ ಕಂಪನಿಗಳು ಪಾರದರ್ಶಕವಾಗಿ ಗಣಿಗಾರಿಕೆ ನಡೆಸಬೇಕಾಗುತ್ತದೆ. ಸರ್ಕಾರಕ್ಕೆ ಸಲ್ಲಿಸುವ ರಾಯಲ್ಟಿಯಷ್ಟೇ ಹಣವನ್ನು ಜಿಲ್ಲಾ ಖನಿಜ ನಿಧಿಗೂ ಕಟ್ಟಬೇಕಾಗುತ್ತದೆ. ಹೀಗಾಗಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾಡಳಿತ ಅತ್ಯಂತ `ಶ್ರೀಮಂತ'ವಾಗಲಿದೆ. ಗಣಿಗಾರಿಕೆ ಗಣಿಧಣಿಗಳಿಗೆ ಮಾತ್ರ ಲಾಭ ತಂದುಕೊಡಲಿದೆ ಎಂಬ ಚಿತ್ರಣ ಈ ಮಸೂದೆಯಿಂದ ಬದಲಾಗಬಹುದು. ಜಿಲ್ಲೆಯ ಪ್ರತಿಯೋರ್ವ ನಾಗರಿಕನ ತಲಾ ಆದಾಯವು ನಿರೀಕ್ಷೆಗೂ ಮೀರಿ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಯಾವುದಕ್ಕೂ ಮಸೂದೆ ಕಾಯ್ದೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಲ್ಲ.
ಬಳ್ಳಾರಿ ಬಿಟ್ಟರೆ ಅತಿಹೆಚ್ಚು ಗಣಿಗಾರಿಕೆ ನಡೆಯುತ್ತಿರುವುದು ಚಿತ್ರದುರ್ಗದಲ್ಲಿ. ಇಲ್ಲಿ 51 ಗಣಿ ಕಂಪನಿಗಳು, 102 ಕ್ವಾರಿಗಳು ಇವೆ. ನಂತರದ ಸ್ಥಾನಗಳಲ್ಲಿ ಬಾಗಲಕೋಟೆ, ತುಮಕೂರು, ಉತ್ತರ ಕನ್ನಡ, ಗುಲ್ಬರ್ಗ ಜಿಲ್ಲೆಗಳು ಬರುತ್ತವೆ.
ಈ ಕಾಯ್ದೆ ಹೆಚ್ಚೇನು ಬೇಡ ಒಂದು ದಶಕದ ಹಿಂದೆ ಜಾರಿಗೆ ಬಂದಿದ್ದರೂ, ಗಣಿಗಾರಿಕೆಯಿಂದ ರಾಜ್ಯಕ್ಕಾದ ನಷ್ಟ ಸ್ವಲ್ಪವಾದರೂ ಕಡಿಮೆಯಾಗಿರುತ್ತಿತ್ತು ಅಲ್ಲವೇ?
ವಿಜಯNextನಲ್ಲಿ ಪ್ರಕಟಿತ ಲೇಖನ
No comments:
Post a Comment