ಪಾಸ್‌ಪೋರ್ಟ್ ನೀಡುವಾಗ ನಡೆಸುವ ಪೊಲೀಸ್ ವೆರಿಫಿಕೇಷನ್‌ಗೆ ಏಳು ದಿನ, ಪೋಸ್ಟ್‌ಮಾರ್ಟಂ ರಿಪೋರ್ಟ್‌ಗೆ ಮೂರು ದಿನ, ಜಾತಿ ಪ್ರಮಾಣ ಪತ್ರ ನೀಡಲು ಹದಿನೈದು ದಿನ, ಮನೆಯ ವಿದ್ಯುತ್ ಸಂಪರ್ಕದಲ್ಲಿ ತೊಂದರೆ ಕಾಣಿಸಿಕೊಂಡರೆ ಕೇವಲ ನಾಲ್ಕು ಗಂಟೆಯೊಳಗೆ ರಿಪೇರಿ... ಅರರೆ, ಇದೆಲ್ಲಾ ಯಾವ ದೇಶದಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಎಂದು ಯೋಚಿಸುತ್ತಿದ್ದೀರಾ, ಇದು ನಮ್ಮ ದೇಶದಲ್ಲಿಯೇ, ಹಿಂದೆ `ಜಂಗಲ್ ರಾಜ್' ಎಂದು ಕರೆಸಿಕೊಳ್ಳುತ್ತಿದ್ದ ಬಿಹಾರದಲ್ಲಿ ಜಾರಿಯಾಗುತ್ತಿರುವ ಕ್ರಮ. ಆಶ್ಚರ್ಯ ಪಡಬೇಡಿ, ಬಿಹಾರದಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗೂ ಸಮಯದ ಮಿತಿ ನಿಗದಿಪಡಿಸುವ `ಸರ್ಕಾರಿ ಸೇವಾ ಕಾಯ್ದೆ' ಈಗ ಅನುಮೋದನೆಗೊಂಡಿದ್ದು, ಇದೇ ಏಪ್ರಿಲ್ ಒಂದರಿಂದ ಜಾರಿಗೆ ಬರುತ್ತಿದೆ.
ಇನ್ನು ಮುಂದೆ ಅಲ್ಲಿಯ ಸರ್ಕಾರಿ ನೌಕರರು ನಿಗದಿತ ಸಮಯದಲ್ಲಿಯೇ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಿದಲ್ಲಿ ದಿನಕ್ಕೆ ಇಂತಿಷ್ಟು ಎಂದು ಫೈನ್ ಕಟ್ಟಬೇಕಾಗುತ್ತದೆ. ಈಗಾಗಲೇ ಕೆಲಸ ಮಾಡಿಕೊಡದ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಲು `ಕಿಯೋಸ್ಕ್' ವ್ಯವಸ್ಥೆ ಜಾರಿಗೆ ತಂದು ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಂದು ಹೆಜ್ಜೆ ಮುಂದಿಟ್ಟು ಈ ಕ್ರಮ ತೆಗೆದುಕೊಂಡಿದ್ದಾರೆ. ಇದರಿಂದ ಭ್ರಷ್ಟಾಚಾರವನ್ನು ಬೇರು
ಮಟ್ಟದಿಂದ ದೂರ ಮಾಡಿ, ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಸಾಧ್ಯ ಎಂಬುದು ಅವರ ಚಿಂತನೆ.
ಒಟ್ಟು 30 ಸರ್ಕಾರಿ ಸೇವೆಗಳು ಈ ಕಾಯ್ದೆಯಡಿ ಬರಲಿವೆ. ಟೈಮಿಗೆ ಕೆಲಸ ಮಾಡಿಕೊಡದ ಅಧಿಕಾರಿಗಳು 250ರಿಂದ 5 ಸಾವಿರದವರೆಗೆ ಫೈನ್ ಕಟ್ಟಬೇಕಾಗುತ್ತದೆ.
ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕ ಸೇವಾ ಜಾರಿ ಆಯೋಗ ರಚಿಸುವುದಾಗಿಯೂ ನಿತೀಶ್ ಕುಮಾರ್ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಒಂದಲ್ಲಾ ಒಂದು ಕ್ರಮ ತೆಗೆದುಕೊಳ್ಳುತ್ತಲೇ ಬಂದಿರುವ ಅವರು, ಸರ್ಕಾರಿ ಅಧಿಕಾರಿಗಳೆಲ್ಲರೂ ತಾವೇ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳುವಂತೆ ಮಾಡಿದ್ದರು. ಬಾಲಕಿಯರಿಗೆ ಸೈಕಲ್ ನೀಡುವಾಗ,
ಸೀಮೇ ಎಣ್ಣೆ ಕೂಪನ್ ವಿತರಿಸುವಾಗ ನೇರವಾಗಿ ಫಲಾನುಭವಿಗಳಿಗೇ ಹಣ ದೊರಕುವಂತೆ ಮಾಡಿ, ದುರುಪಯೋಗಕ್ಕೆ ಬ್ರೇಕ್ ಹಾಕಿದ್ದಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಒಮ್ಮೆ ಹೀಗೆ ಸೈಕಲ್ ಹಣವನ್ನು ನೇರವಾಗಿ ವಿದ್ಯಾರ್ಥಿಗಳಿಗೇ ನೀಡುವ
ಮಾತನಾಡಿದ್ದರು. ಆಮೇಲೆ ಏನಾಯಿತೋ ಏನೋ, ಪ್ಲೇಟ್ ಚೇಂಜ್ ಮಾಡಿ,
ಹಳೇ ಕ್ರಮಕ್ಕೆ ಓಕೆ ಎಂದರು. ಮುಖ್ಯಮಂತ್ರಿಗಳು ಆಗಾಗ ನಮ್ಮದು ಗುಜರಾತ್ ಮಾದರಿ ಆಡಳಿತ ಎನ್ನುತ್ತಿರುತ್ತಾರೆ, ಒಂದಿಷ್ಟು ಬಿಹಾರದ ಕಡೆಯು ನೋಡಿ ಎನ್ನೋಣವೆಂದರೆ ಮಕ್ಕಳ ಕಡೆ ನೋಡುತ್ತಿರುವ ಅವರಿಗೆ ಪುರಸೊತ್ತೇ ಇಲ್ಲ!
No comments:
Post a Comment