ಗುಟ್ಕಾ ನಿಷೇಧದ 'ಗುಮ್ಮ' ಮರೆಯಾಗುತ್ತಿದ್ದಂತೆಯೇ
ಈಗ ಅಡಿಕೆ ನಿಷೇಧವೆಂಬ ಹೊಸ ಗುಮ್ಮವೊಂದು ಹುಟ್ಟಿಕೊಂಡು ಅಡಿಕೆ ಬೆಳೆಗಾರರನ್ನು ಇನ್ನಿಲ್ಲದಂತೆ
ಕಾಡುತ್ತಿದೆ. ರಾಜ್ಯದ
12ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ನಿಷೇಧಗೊಂಡರೆ ಬೆಳೆಗಾರರ ಗತಿಯೇನು ಎಂಬ ಆತಂಕ
ಕಾಡುತ್ತಿದ್ದು,
ಈ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ರಾಜಕಾರಣಿಗಳು ಎಂದಿನಂತೆ ತಮ್ಮ ಬೇಳೆ
ಬೇಯಿಸಿಕೊಳ್ಳುತ್ತಿದ್ದಾರೆ.
ವಾಸ್ತವವಾಗಿ ಅಡಿಕೆಯನ್ನೂ
ನಿಷೇಧಿಸಬಹುದೆಂಬ ಭಯ ಹೊಸದೇನೂ ಅಲ್ಲ. ಅದನ್ನು ನಿರ್ಬಂಧಿತ ಆಹಾರ ವಸ್ತುಗಳ ಪಟ್ಟಿಯಲ್ಲಿ
ಸೇರಿಸಿದಾಗಿನಿಂದಲೇ ಈ ಬಗ್ಗೆ ಆತಂಕ ಶುರುವಾಗಿತ್ತು. ನಿರೀಕ್ಷೆಯಂತೆಯೇ
ಕೇಂದ್ರ ಈ ಪ್ರಕ್ರಿಯೆ ಆರಂಭಿಸಿದೆ. 'ಹಾನಿಕರವಾದ' ಅಡಿಕೆಯನ್ನು ಬೇರೆ ಆಹಾರ ಪದಾರ್ಥಗಳಲ್ಲಿ
ಬಳಸುವುದನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಅಲ್ಲದೆ, ಗುಟ್ಕಾ ನಿಷೇಧಕ್ಕೆ
ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಮುಂದುವರೆದ ವಿಚಾರಣೆ
ಸಂದರ್ಭದಲ್ಲಿ,
ವಿವಿಧ ವೈಜ್ಞಾನಿಕ ವರದಿಗಳನ್ನು ಉಲ್ಲೇಖಿಸಿ 'ಅಡಿಕೆ ಕೂಡ ಆರೋಗ್ಯಕ್ಕೆ ಹಾನಿಕರ' ಎಂಬ ಸ್ಪಷ್ಟ
ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮುಂದಿನ ತೀರ್ಮಾನವನ್ನು ನ್ಯಾಯಾಲಯಕ್ಕೇ
ಬಿಡಲಾಗಿದ್ದು,
ಜನವರಿ ಮೊದಲ
ವಾರದಲ್ಲಿ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.
ಈ ಸುದ್ದಿ
ಬಹಿರಂಗವಾಗುತ್ತಿದ್ದಂತೆಯೇ 'ಅಡಿಕೆ ನಿಷೇಧ'ದ ಸುದ್ದಿ
ರೆಕ್ಕೆಪುಕ್ಕಗಳನ್ನು
ಪಡೆದು ಮಲೆನಾಡು,
ಕರಾವಳಿ ಜಿಲ್ಲೆಗಳಲ್ಲಿ ಹಾರಾಡುತ್ತಿದೆ. ಗುಟ್ಕಾದಂತೆ ಅಡಿಕೆಯೂ ಹಾನಿಕರ ಎಂಬುದನ್ನು
ಕೇಂದ್ರ ಸರಕಾರ ಒಪ್ಪಿಕೊಂಡಿರುವುದರಿಂದ ಸುಪ್ರೀಂ ಕೋರ್ಟ್ ಇದನ್ನು ನಿಷೇಧಿಸುವ
ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಡಿಕೆಯ ಬಗ್ಗೆ ಪೂರ್ವಾಗ್ರಹ ಹೊಂದಿರುವ ಸರಕಾರೇತರ
ಸ್ವಯಂ ಸೇವಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಶತ ಪ್ರಯತ್ನ ನಡೆಸುತ್ತಿರುವುದರಿಂದ
ನಿಷೇಧ ಜಾರಿಗೆ ಬಂದರೆ ಆಶ್ಚರ್ಯ ಕೂಡ ಇಲ್ಲ.
ಆರಂಭ ಎಲ್ಲಿಂದ?
1993ರಲ್ಲಿ ಇದ್ದಕಿದ್ದ ಹಾಗೆ ಕೇಂದ್ರ ಸರಕಾರ, 1954ರ ಆಹಾರ ಮತ್ತು
ಕಲಬೆರಕೆ ಕಾಯ್ದೆಗೆ
ತಿದ್ದುಪಡಿ ತಂದು (ಪರಿಚ್ಛೇದ 45) ಅಡಿಕೆಯನ್ನು ಆರೋಗ್ಯಕ್ಕೆ ಹಾನಿಯುಂಟುಮಾಡುವ ವಸ್ತುಗಳ ಪಟ್ಟಿಗೆ
ಸೇರಿಸಿತ್ತು. ಗುಟ್ಕಾ ನಿಷೇಧಕ್ಕೆ ಬಹಳವಾಗಿ ಒತ್ತಡ ಕೇಳಿ ಬಂದ ದಿನದಲ್ಲಿಯೇ
ಅಡಿಕೆಯನ್ನು ಈ ಪಟ್ಟಿಯಿಂದ ಹೊರಗಿರಿಸಬೇಕೆಂಬ ಒತ್ತಾಯವನ್ನು ಅಡಿಕೆ ಬೆಳೆಗಾರರು
ಮಾಡಿದರಾದರೂ ಯಾವ ಕೇಂದ್ರ ಸರಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಈ ನಡುವೆ 2004ಲ್ಲಿ ವಿಶ್ವ ಆರೋಗ್ಯ
ಸಂಸ್ಥೆಯ ಕ್ಯಾನ್ಸರ್ ಸಂಶೋಧನೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಘಟನೆ
(ಐಎಆರ್ಸಿ) ಅಡಿಕೆಯನ್ನು ಸಂಶೋಧನೆಗೊಳಪಡಿಸಿ, ಇದರಲ್ಲಿ ಕ್ಯಾನ್ಸರ್ಕಾರಕ ಅಂಶಗಳಿವೆ ಎಂದು
ವರದಿ ನೀಡಿತು. ಅಡಿಕೆಯನ್ನು ಮಾತ್ರ ತಿನ್ನುವುದು ಕೂಡ ಹಾನಿಕಾರಕ ಎಂದು ಅದು
ಸ್ಪಷ್ಟವಾಗಿ ಹೇಳಿತು. ಈ ಹಿನ್ನಲೆಯಲ್ಲಿ ಜಾರಿಗೆ ತರಲಾದ 2006ರ ಆಹಾರ ಸುರಕ್ಷತೆ ಮತ್ತು
ಗುಣಮಟ್ಟ ಕಾಯ್ದೆ ಅಡಿಕೆಗೂ 'ಅಡಿಕೆ ಅಗಿಯುವುದು
ಆರೋಗ್ಯಕ್ಕೆ
ಹಾನಿಕಾರಕ'
ಎಂಬ ಟ್ಯಾಗ್ ಹಾಕಿತು.
ಅಲ್ಲಿಂದ ಗುಟ್ಕಾದ ಜತೆ ಅಡಿಕೆಯೂ
ನಿಷೇಧಕ್ಕೊಳಗಾಗುವ ಭೀತಿ ಎದುರಿಸುವಂತಾಯಿತು. ನಮ್ಮ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ
ಅಡಿಕೆ ಹಾನಿಕಾರಕವಲ್ಲ,
ಅದನ್ನು ನಿರ್ಬಂಧಿಸುವುದು ಸರಿಯಲ್ಲ ಎಂಬ ಬೆಳೆಗಾರರ ಕೂಗಿಗೆ ಬೆಲೆ ಸಿಗಲಿಲ್ಲ. ಕೊನೆಗೆ
ಶಿವಮೊಗ್ಗದ ಸಹಕಾರಿ ಸಂಸ್ಥೆ ಮ್ಯಾಮ್ಕೋಸ್ ಕೇಂದ್ರ ಸರಕಾರದ ಈ ತೀರ್ಮಾನದ ವಿರುದ್ಧ
ಈ ಸಂದರ್ಭದಲ್ಲಿ ಗುಟ್ಕಾ
ನಿಷೇಧಕ್ಕೆ ಒತ್ತಾಯಿಸುತ್ತಿದ್ದ ಎನ್ಜಿಒಗಳು ನ್ಯಾಯಾಲಯದಲ್ಲಿ ಹೋರಾಟವನ್ನು
ತೀವ್ರಗೊಳಿಸಿದ್ದಲ್ಲದೇ ಕೇಂದ್ರ ಸರಕಾರದ ಮೇಲೂ ವಿವಿಧ ರೀತಿಯಲ್ಲಿ ಒತ್ತಡ ಹೇರಿದವು. ಪರಿಣಾಮ, ಆಹಾರ ಮತ್ತು ಗುಣಮಟ್ಟ
(ಮಾರಾಟದ ಮೇಲೆ ನಿಷೇಧ ಮತ್ತು ನಿರ್ಬಂಧ) ನಿಯಂತ್ರಣ ಕಾಯ್ದೆ -2011 ಜಾರಿಗೆ ಬಂತು. ಇದರ
ಅಡಿಯಲ್ಲಿ ದೇಶಾದ್ಯಂತ ಗುಟ್ಕಾ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತು. ಈಗ ದೇಶದಾದ್ಯಂತ
ಗುಟ್ಕಾ ನಿಷೇಧ ಜಾರಿಗೆ ಬಂದಿದೆ. ಅಡಿಕೆಯನ್ನು ಆಹಾರ ಪದಾರ್ಥ ಎಂದು ಸುಪ್ರೀಂ ಕೋರ್ಟ್ ಈ
ಹಿಂದೆಯೇ
ಪರಿಗಣಿಸಿರುವುದರಿಂದ
ಅಡಿಕೆಯ ಉತ್ಪನ್ನವಾದ ಗುಟ್ಕಾವನ್ನು ಈ ಕಾಯ್ದೆಯಡಿ ತರಲು ಸಾಧ್ಯವಾಗಿತ್ತು.
ಹೈಕೋರ್ಟ್ ಮೆಟ್ಟಿಲೇರಿತು. ಆಡಿಕೆ
ಹಾನಿಕಾರವಲ್ಲ ಎಂದು ಸಾಬೀತುಪಡಿಸಲು ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ
ಸಂಸ್ಥೆ ನೀಡಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ
ನ್ಯಾಯಮೂರ್ತಿ ಎಚ್.ವಿ.ಜಿ. ರಮೇಶ್ 'ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ' ಎಂದು ತೀರ್ಪು
ನೀಡಿದರು. ಅಲ್ಲದೆ,
ಅಡಿಕೆ ಜತೆ ಶಾಸನ ವಿಧಿಸಿದ ಎಚ್ಚರಿಕೆ ಹಾಕಬೇಕಾಗಿಲ್ಲ ಎಂದರು. ಆದರೆ ಇದನ್ನು ಕೇಂದ್ರ
ಸರಕಾರ ಪ್ರಶ್ನಿಸಿ ಸುಪ್ರೀಂ ಅಂಗಳಕ್ಕೆ ವಿವಾದವನ್ನು ತೆಗೆದುಕೊಂಡು ಹೋಗಲಿಲ್ಲ. ವಿಷಯ ಅಲ್ಲಿಗೇ
ತಣ್ಣಗಾಗಿತ್ತು.
ಅಡಿಕೆಯ ವಿರುದ್ಧ ವರದಿ
ಗುಟ್ಕಾ ನಿಷೇಧಕ್ಕೆ
ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಸಿ.
ಸಿಂಗ್ವಿ ಮತ್ತು ಎ.ಕೆ. ಗಂಗೂಲಿಯವರನ್ನೊಳಗೊಂಡ ಪೀಠ ಗುಟ್ಕಾ, ಪಾನ್ ಮಸಾಲ ಸೇವನೆಯ
ದುಷ್ಪರಿಣಾಮಗಳ ಬಗ್ಗೆ ಸ್ವತಂತ್ರ ತಜ್ಞರ ತಂಡದಿಂದ ಪರಿಶೀಲನೆ ನಡೆಸಿ ವರದಿ
ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿತ್ತು. ಆಗ ಇಲಾಖೆ 'ರಾಷ್ಟ್ರೀಯ ಆರೋಗ್ಯ
ಸಂಸ್ಥೆ' ನೇತೃತ್ವದಲ್ಲಿ ತಜ್ಞರ
ಸಮಿತಿಯೊಂದನ್ನು
ರಚಿಸಿತ್ತು. ಈ ತಂಡದಲ್ಲಿ ಒಟ್ಟು 12 ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಇದ್ದರು. (ಇವರಲ್ಲಿ ಗುಟ್ಕಾ
ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದವರೂ ಸೇರಿದ್ದರು) ಈ ತಂಡ ಘಾಜಿಯಾಬಾದ್ನ
ಸರಕಾರಿ ಪ್ರಯೋಗಾಲಯದಲ್ಲಿ ಅಡಿಕೆಯನ್ನು ವಿಶ್ಲೇಷಣೆಗೊಳಪಡಿಸಿತ್ತು. ಈ ಸಮಿತಿ ಗುಟ್ಕಾ
ನಿಷೇಧಿಸುವಂತೆ ವರದಿ ನೀಡಿತ್ತಲ್ಲದೆ, ಅಡಿಕೆಯೂ ಹಾನಿಕಾರಕ ಎಂದು ಬೃಹತ್ತಾದ ವರದಿಯನ್ನು 2011ರ ಮಾರ್ಚಿನಲ್ಲಿ
ಸಲ್ಲಿಸಿತ್ತು.
ಈ ವರದಿಯಲ್ಲಿ ದೋಷಗಳಿವೆ, ಅಡಿಕೆಯಲ್ಲಿ ವೈದ್ಯಕೀಯ
ಗುಣಗಳನ್ನು ಸರಿಯಾಗಿ ಪರಿಗಣಿಸಿಲ್ಲ, ಅಡಿಕೆಯ ಕುರಿತು ಜಗತ್ತಿನ ಬೇರೆಡೆ ನಡೆದ ಸಂಶೋಧನೆಗಳನ್ನು ಗಣನೆಗೆ
ತೆಗೆದುಕೊಂಡಿಲ್ಲ
ಎಂದು ರಾಜ್ಯದ ವಿಜ್ಞಾನಿಗಳು, ಕೃಷಿ ತಜ್ಞರು ಗಮನ ಸೆಳೆದರೂ ಸರಕಾರವಾಗಲೀ, ರಾಜಕಾರಣಿಗಳಾಗಲೀ
ತಲೆಕೆಡಿಸಿಕೊಂಡಿರಲಿಲ್ಲ.
ತಜ್ಞರ ವರದಿ ಹಿನ್ನಲೆಯಲ್ಲಿಯೇ
ಕೇಂದ್ರ ಆರೋಗ್ಯ ಇಲಾಖೆ ಈಗ ಅಡಿಕೆಯನ್ನು ಹಾನಿಕಾರಕ ಪದಾರ್ಥ ಎಂದೇ ಪರಿಗಣಿಸಿದೆ. ಈ
ಬಗ್ಗೆ ಅಭಿಪ್ರಾಯ ನೀಡುವಂತೆಯೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ
ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಈ ಬೆನ್ನಲ್ಲೇ ನ್ಯಾಯಾಲಯಕ್ಕೂ ಅಡಿಕೆಯ ಕುರಿತು ತನ್ನಲ್ಲಿರುವ
ಮಾಹಿತಿಯನ್ನು ಒದಗಿಸಿದೆ.
ಮುಂದೇನು?
ಹೀಗಾಗಿಯೇ ಈಗ ಅಡಿಕೆ ನಿಷೇಧದ
ಆತಂಕ ಎದುರಾಗಿರುವುದು. ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಯನ್ನು ಏಕಾಏಕಿ
ನಿಷೇಧಿಸಲು ಸಾಧ್ಯವಿಲ್ಲ ಎಂದೇ ತಜ್ಞರು ಹೇಳುತ್ತಿದ್ದಾರೆ. ಅದರೆ ಬಳಕೆಯ ಮೇಲೆ ನಿರ್ಬಂಧ ಹೇರಿ, ಮುಂದೆ ಅಡಿಕೆಯನ್ನು
ತಂಬಾಕಿನ
ರೀತಿಯಲ್ಲಿ ನಡೆಸಿಕೊಳ್ಳುವ ಸಾಧ್ಯತೆಗಳಿವೆ. ಈ ನಡುವೆ ಅಡಿಕೆಯನ್ನು ಮಾತ್ರ ತಿನ್ನುವುದರಿಂದ ಕ್ಯಾನ್ಸರ್
ಬರುವುದಿಲ್ಲ ಎಂದು ದೆಹಲಿಯ ಜವಹಾರ್ಲಾಲ್ ನೆಹರು ಯೂನಿರ್ವಸಿಟಿಯ ದಿ ಕ್ಯಾನ್ಸರ್
ಬಯೋಲಾಜಿ ಲ್ಯಾಬರೋಟರಿ ವರದಿ ನೀಡಿದ್ದು, ಇದನ್ನು ಅಡಿಕೆಬೆಳೆಗಾರರ ಪರವಾಗಿರುವವರು ಅಸ್ತ್ರವಾಗಿ
ಬಳಸಿಕೊಳ್ಳಬಹುದಾಗಿದೆ. ಅಡಿಕೆಗಿರುವ ಸಾಂಸ್ಕೃತಿಕಮೌಲ್ಯ, ಅದರ ಬಳಕೆಯ ಕ್ರಮ ಎಲ್ಲವನ್ನೂ
ವಿವರಿಸಿ ನ್ಯಾಯಾಲಯದಲ್ಲಿ ನಿಷೇಧದ ಉರುಳಿನಿಂದ ಬಿಡಿಸಿಕೊಳ್ಳುವ ಯತ್ನವೂ ನಡೆಯುತ್ತಿದೆ.
ರಾಜ್ಯದ ಲಕ್ಷಾಂತರ ಕುಟುಂಬಗಳ
ಬದುಕಿನ ಆಧಾರವಾಗಿರುವ ಅಡಿಕೆ ನಿಷೇಧ ನಿಜಕ್ಕೂ ಆತಂಕಕಾರಿಯಾದ ಸುದ್ದಿಯೇ. ಈ
ಪರಿಸ್ಥಿತಿಯಿಂದ ಹೊರ ಬರಲು ಬೇಕಾಗಿರುವುದು ವಿವೇಚನಾಯುಕ್ತ ನಡೆ ಹೊರತು, ಆಕ್ರೋಶ ಭರಿತ
ಪ್ರತಿಕ್ರಿಯೆಯಲ್ಲ.
No comments:
Post a Comment