Tuesday, July 31, 2012

ಯುನೆಸ್ಕೊ: ನಿರ್ಣಯದಿಂದ ಏನೂ ಆಗದು

ಶ್ಚಿಮಘಟ್ಟದ ಹತ್ತು ತಾಣಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡಿಸಿರುವುದನ್ನು ವಿರೋಧಿಸಿ ರಾಜ್ಯ ವಿಧಾನಸಭೆ ಸರ್ವಾನುಮತದಿಂದ ನಿರ್ಣಯವನ್ನೇನೋ ಅಂಗೀಕರಿಸಿದೆ. ಆದರೆ ಇದರಿಂದ ಯುನೆಸ್ಕೊ ತಾಣಗಳನ್ನು ಕೈ ಬಿಡುವ ಸಾಧ್ಯತೆಗಳಿಲ್ಲ. ಏಕೆಂದರೆ ಯುನೆಸ್ಕೊ ತಾಣಗಳನ್ನು ಪಟ್ಟಿಗೆ ಸೇರ್ಪಡಿಸುವಾಗ (ಅದರ ಗೈಡ್ ಲೈನ್ಸ್ ನಲ್ಲಿ ಹೇಳಿರುವಂತೆ) `ಸ್ಟೇಟ್' ಅಂದರೆ ಸ್ಥಳೀಯ ಆಡಳಿತ ಎಂದು ಪರಿಗಣಿಸಿರುವುದು ರಾಜ್ಯ ಸರ್ಕಾರವನಲ್ಲ, ಕೇಂದ್ರ ಸರ್ಕಾರವನ್ನ.
    ಹೀಗಾಗಿಯೇ ಇದುವರೆಗೂ ಯುನೆಸ್ಕೊ ಕುರಿತ ಯಾವ ಮಾಹಿತಿಯನ್ನೂ ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟು 39 ತಾಣಗಳನ್ನು ಒಟ್ಟಿಗೇ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ಪ್ರತ್ಯೇಕವಾಗಿ ಯಾವೊಂದು ರಾಜ್ಯ ಸರ್ಕಾರವನ್ನು ಸ್ಥಳೀಯ ಆಡಳಿತ ಎಂದು ಪರಿಗಣಿಸದೇ ನೇರವಾಗಿ ಕೇಂದ್ರ ಸರ್ಕಾರವನ್ನೇ ಸ್ಥಳೀಯ ಆಡಳಿತ ಎಂದು ಪರಿಗಣಿಸಿದೆ.
ಪಶ್ಚಿಮಘಟ್ಟ ಸೇರ್ಪಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿವಹಿಸಿ, ಯುನೆಸ್ಕೊದೊಂದಿಗೆ ವ್ಯವಹರಿಸಿದೆ. ಸಂದರ್ಭದಲ್ಲಿ ಅಪ್ಪಿತಪ್ಪಿಯೂ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿಲ್ಲ. ಮೇಲ್ನೋಟಕ್ಕೆ ಇದು ಒಕ್ಕೂಟ ವ್ಯವಸ್ಥೆಗೆ ಬಗೆದ ದ್ರೋಹ ಎನಿಸಿದರೂ, ನಮ್ಮ ಸಂವಿಧಾನ ವಿದೇಶಾಂಗ ವ್ಯವಹರದ ಅಡಿಯಲ್ಲಿ ನೀಡಿರುವ ಸೂಚನೆಗಳಿಗೆ ಇದು ಅನುಗುಣವಾಗಿಯೇ ಇದೆ.
   ರಾಜ್ಯ ಸರ್ಕಾರ ಕೇಂದ್ರದ ಮೇಲೆ ಎಷ್ಟೇ ಒತ್ತಡ ಹೇರಿದರೂ ಕೇಂದ್ರ ಸರ್ಕಾರ ಕೂಡ ಈಗ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದೆ. ಏಕೆಂದರೆ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಸಮಿತಿ ಈಗಾಗಲೇ ಬೆಲೆ ಕಟ್ಟಲಾಗದ ಜಾಗತಿಕ ಆಸ್ತಿ  ಎಂದು ಪರಿಗಣಿಸಿ ಅದನ್ನು ಪಟ್ಟಿಗೆ ಸೇರಿಸಿದೆ. ಇನ್ನು ಇದರ ಉಳಿವಿಗಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅದು ತಲೆಕೆಡಿಸಿಕೊಳ್ಳುತ್ತದೆಯೇ ಹೊರತು, ಅದನ್ನು ಪಟ್ಟಿಯಿಂದ ಹೊರಗಿಡುವ ಬಗ್ಗೆ ಅಲ್ಲ.
ಈಗಾಗಲೇ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ  ಪಶ್ಚಿಮ ಘಟ್ಟದ ತಾಣಗಳಿಗೆ, ಕಾಡು ನಾಶ, ಜನವಸತಿ, ಮಾಲಿನ್ಯ, ಗಣಿಗಾರಿಕೆ, ಕೃಷಿ, ಸಾರ್ವಜನಿಕ ಕಾಮಗಾರಿ ಮತ್ತಿತರ ಚಟುವಟಿಕೆಗಳಿಂದ ಅಪಾಯ ಉಂಟಾದಲ್ಲಿ  ವಿಶ್ವ ಪಾರಂಪರಿಕ ಸಮಿತಿಯು ಅದನ್ನು ಡೇಂಜರ್ ಲೀಸ್ಟ್ (ಅಪಾಯದ ಪಟ್ಟಿ)ಗೆ ಸೇರಿಸುತ್ತದೆ. ಸರ್ಕಾರ ಆನೆಗುಂದಿ ಸೇತುವೆ ಸೇರಿದಂತೆ ಎರಡು ಸೇತುವೆಗಳನ್ನು ನಿರ್ಮಿಸಲು ಹೊರಟಾಗ ಸಮಿತಿ ಹಂಪೆಯನ್ನು ಡೇಂಜರ್ ಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗಾಲೇ ಪ್ರಪಂಚದ ಒಟ್ಟು 38 ತಾಣಗಳು ಈಗ ಪಟ್ಟಿಯಲ್ಲಿವೆ.
   ಡೇಂಜರ್ ಪಟ್ಟಿಯಲ್ಲಿರುವ ತಾಣಗಳ ರಕ್ಷಣೆಗೆ ಸಕಲ ನೆರವನ್ನೂ (ತುರ್ತು ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಸೇರಿದಂತೆ) ಯುನೆಸ್ಕೊ ಒದಗಿಸುತ್ತದೆ. ಸ್ಥಳೀಯ ಆಡಳಿತದ ಮೇಲೆ ತಾಣದ ರಕ್ಷಣೆಗಾಗಿ ಒತ್ತಡವನ್ನೂ ಹೇರಲಾಗುತ್ತದೆ. ಕೊನೆಗೂ ರಕ್ಷಣೆ ಸಾಧ್ಯವಿಲ್ಲವೆನಿಸಿದಾಗ  ತಾಣಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.
ಇದುವರೆಗೆ ಯುನೆಸ್ಕೊ ರೀತಿ ಎರಡು ತಾಣಗಳನ್ನು ಮಾತ್ರ ಪಾರಂಪರಿಕ ಪಟ್ಟಿಯಿಂದ ಕೈ ಬಿಟ್ಟಿದೆ.  ಒಮನ್ ನಲ್ಲಿ ಅರಿಬಿಯನ್ ಆರಿಕ್ಸ್ (ನೇರವಾದ ಕೊಂಬುಳ್ಳ) ಜಿಂಕೆ ರಕ್ಷಿತಾರಣ್ಯ ಪ್ರದೇಶದ ಶೇಕಡ 90ರಷ್ಟು ಜಾಗವನ್ನು ತೈಲ ನಿಕ್ಷೇಪವೆಂದು ಗುರುತಿಸಿ, ತೈಲ ತೆಗೆಯಲಾರಂಭಿಸಿದ ಹಿನ್ನೆಲೆಯಲ್ಲಿ 2007ರಲ್ಲಿ ತಾಣವನ್ನು ಪಾರಂಪರಿಕ ಪಟ್ಟಿಯಿಂದ ಹೊರಗಿಡಲಾಯಿತು. ರೀತಿ ಪಟ್ಟಿಯಿಂದ ಹೊರಬಿದ್ದ ಮೊದಲ ತಾಣ ಇದು.
   ಇದೇ ರೀತಿಯಾಗಿ 2009ರಲ್ಲಿ ಜರ್ಮನಿಯ `ಡ್ರೆಸ್ಡೆನ್ ಎಲ್ಬೇ ವ್ಯಾಲಿ' ಎಂಬ ಸಾಂಸ್ಕೃತಿಕ ತಾಣವನ್ನೂ ಪಾರಂಪರಿಕ ಪಟ್ಟಿಯಿಂದ ಕೈಬಿಡಲಾಗಿದೆ. 18ಮತ್ತು 19ನೇ ಶತಮಾನದ ಸಾಂಸ್ಕೃತಿಕ ಮಹತ್ವ ಹೊಂದಿದ ಜಾಗದ ನಡುವೆ ಅಲ್ಲಿಯ ಸರ್ಕಾರ ನಾಲ್ಕು ಮಾರ್ಗದ ಸೇತುವೆ ನಿರ್ಮಿಸಿತು. ಬಗ್ಗೆ ಯುನೆಸ್ಕೊ ಸಾಕಷ್ಟು ಆಕ್ಷೇಪ ವೆತ್ತಿದರೂ ಸ್ಥಳೀಯ ಸರ್ಕಾರ ಕಿವಿಗೊಡಲಿಲ್ಲ. ಮೂರು ವರ್ಷ ವಾದ- ಪ್ರತಿವಾದದ ನಂತರ ಯುನೆಸ್ಕೊ ಸಮಿತಿ ಕೊನೆಗೆ ತಾಣವನ್ನೇ ಪಟ್ಟಿಯಿಂದ ಕೈ ಬಿಟ್ಟಿತ್ತು.
   ಇದೆಲ್ಲವನ್ನೂ ಗಮನಿಸಿದಾಗ ಪಶ್ಚಿಮಘಟ್ಟದ ಭವಿಷ್ಯ ಏನಾಗಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದಾಗಿದೆ. ಈಗ ರಾಜ್ಯ ಸರ್ಕಾರ ವಾಗಲೀ, ಸ್ಥಳೀಯರೇ ಆಗಲಿ ಏನೇ ಮಾಡಿದರೂ ತಾಣಗಳನ್ನು ಪಟ್ಟಿಯಿಂದ ಹೊರತರಲು ಸಾಧ್ಯವಿಲ್ಲ. ತಾಣಗಳಿಗೆ ಅಪಾಯದ ಪರಿಸ್ಥಿತಿ ಬರುತ್ತದೆ ಎನಿಸಿದಾಗ ಯುನೆಸ್ಕೊ ಕೇಂದ್ರದ ಮೇಲೆ ಪರೋಕ್ಷವಾಗಿ ಒತ್ತಡ ಹೇರಿಯೇ ಹೇರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗುತ್ತದೆ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ಯುನೆಸ್ಕೊ ನೀಡುವ ಸೂಚನೆಯನ್ನು ಪಾಲಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ. ಆಗ ಬೇರೆ ದಾರಿಯಿಲ್ಲದೇ ರಾಜ್ಯ ಸರ್ಕಾರ ಈ ತಾಣಗಳನ್ನು ‘ಸಂರಕ್ಷಿಸ’ಬೇಕಾಗುತ್ತದೆ.
   ಬೇರೇನೂ ಬೇಡ ಕೇಂದ್ರ ಈಗಾಗಲೇ ಚಾಲ್ತಿಯಲ್ಲಿರುವ ಅರಣ್ಯ ಸಂರಕ್ಷಣಾ ಕಾಯಿದೆಯನ್ನು  ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ಸೂಚನೆ ನೀಡಿದರೂ ಸಾಕು ಪಾರಂಪರಿಕ ತಾಣಗಳು ಉಳಿದುಕೊಂಡು ಬಿಡುತ್ತವೆ! ಏಕೆಂದರೆ ಈಗಿರುವ ಕಾನೂನುಗಳೇ ಅಷ್ಟು ಬಿಗಿಯಾಗಿವೆ.
   ಒಟ್ಟಾರೆ ಯುನೆಸ್ಕೊ ವಿವಾದ ಪರಿಸರ, ಸ್ಥಳೀಯರ ಬದುಕು, ಆಡಳಿತ ಮತ್ತು ಪ್ರತಿಷ್ಠೆಗಳಿಂದಾಗಿ ಹೊಸ ಹೊಸ ತಿರುವು ಪಡೆದುಕೊಳ್ಳುವ ಲಕ್ಷಣಗಳಂತೂ ಎದ್ದುಕಾಣುತ್ತಿವೆ. ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಸ್ಥಳೀಯರ ಮನ ಗೆದ್ದ ರಾಜಕಾರಣಿಗಳು ಚುನಾವಣೆ ಎದುರಿಸಲು ವಿಷಯ ಸಿಕ್ಕಿತಲ್ಲ ಎಂದು ಖುಷಿಪಟ್ಟಿದ್ದೇ ಲಾಭ!