Showing posts with label ಪಾರಂಪರಿಕ ಪಟ್ಟಿ. Show all posts
Showing posts with label ಪಾರಂಪರಿಕ ಪಟ್ಟಿ. Show all posts

Tuesday, July 31, 2012

ಯುನೆಸ್ಕೊ: ನಿರ್ಣಯದಿಂದ ಏನೂ ಆಗದು

ಪಶ್ಚಿಮಘಟ್ಟದ ಹತ್ತು ತಾಣಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡಿಸಿರುವುದನ್ನು ವಿರೋಧಿಸಿ ರಾಜ್ಯ ವಿಧಾನಸಭೆ ಸರ್ವಾನುಮತದಿಂದ ನಿರ್ಣಯವನ್ನೇನೋ ಅಂಗೀಕರಿಸಿದೆ. ಆದರೆ ಇದರಿಂದ ಯುನೆಸ್ಕೊ ಈ ತಾಣಗಳನ್ನು ಕೈ ಬಿಡುವ ಸಾಧ್ಯತೆಗಳಿಲ್ಲ. ಏಕೆಂದರೆ ಯುನೆಸ್ಕೊ ಈ ತಾಣಗಳನ್ನು ಪಟ್ಟಿಗೆ ಸೇರ್ಪಡಿಸುವಾಗ (ಅದರ ಗೈಡ್ ಲೈನ್ಸ್ ನಲ್ಲಿ ಹೇಳಿರುವಂತೆ) `ಸ್ಟೇಟ್' ಅಂದರೆ ಸ್ಥಳೀಯ ಆಡಳಿತ ಎಂದು ಪರಿಗಣಿಸಿರುವುದು ರಾಜ್ಯ ಸರ್ಕಾರವನಲ್ಲ, ಕೇಂದ್ರ ಸರ್ಕಾರವನ್ನ.
    ಹೀಗಾಗಿಯೇ ಇದುವರೆಗೂ ಯುನೆಸ್ಕೊ ಈ ಕುರಿತ ಯಾವ ಮಾಹಿತಿಯನ್ನೂ ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟು 39 ತಾಣಗಳನ್ನು ಒಟ್ಟಿಗೇ ಈ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ಪ್ರತ್ಯೇಕವಾಗಿ ಯಾವೊಂದು ರಾಜ್ಯ ಸರ್ಕಾರವನ್ನು ಸ್ಥಳೀಯ ಆಡಳಿತ ಎಂದು ಪರಿಗಣಿಸದೇ ನೇರವಾಗಿ ಕೇಂದ್ರ ಸರ್ಕಾರವನ್ನೇ ಸ್ಥಳೀಯ ಆಡಳಿತ ಎಂದು ಪರಿಗಣಿಸಿದೆ.
ಪಶ್ಚಿಮಘಟ್ಟ ಸೇರ್ಪಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿವಹಿಸಿ, ಯುನೆಸ್ಕೊದೊಂದಿಗೆ ವ್ಯವಹರಿಸಿದೆ. ಈ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿಲ್ಲ. ಮೇಲ್ನೋಟಕ್ಕೆ ಇದು ಒಕ್ಕೂಟ ವ್ಯವಸ್ಥೆಗೆ ಬಗೆದ ದ್ರೋಹ ಎನಿಸಿದರೂ, ನಮ್ಮ ಸಂವಿಧಾನ ವಿದೇಶಾಂಗ ವ್ಯವಹರದ ಅಡಿಯಲ್ಲಿ ನೀಡಿರುವ ಸೂಚನೆಗಳಿಗೆ ಇದು ಅನುಗುಣವಾಗಿಯೇ ಇದೆ.
   ರಾಜ್ಯ ಸರ್ಕಾರ ಕೇಂದ್ರದ ಮೇಲೆ ಎಷ್ಟೇ ಒತ್ತಡ ಹೇರಿದರೂ ಕೇಂದ್ರ ಸರ್ಕಾರ ಕೂಡ ಈಗ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದೆ. ಏಕೆಂದರೆ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಸಮಿತಿ ಈಗಾಗಲೇ ಬೆಲೆ ಕಟ್ಟಲಾಗದ ಜಾಗತಿಕ ಆಸ್ತಿ  ಎಂದು ಪರಿಗಣಿಸಿ ಅದನ್ನು ಪಟ್ಟಿಗೆ ಸೇರಿಸಿದೆ. ಇನ್ನು ಇದರ ಉಳಿವಿಗಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅದು ತಲೆಕೆಡಿಸಿಕೊಳ್ಳುತ್ತದೆಯೇ ಹೊರತು, ಅದನ್ನು ಪಟ್ಟಿಯಿಂದ ಹೊರಗಿಡುವ ಬಗ್ಗೆ ಅಲ್ಲ.
ಈಗಾಗಲೇ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ  ಪಶ್ಚಿಮ ಘಟ್ಟದ ತಾಣಗಳಿಗೆ, ಕಾಡು ನಾಶ, ಜನವಸತಿ, ಮಾಲಿನ್ಯ, ಗಣಿಗಾರಿಕೆ, ಕೃಷಿ, ಸಾರ್ವಜನಿಕ ಕಾಮಗಾರಿ ಮತ್ತಿತರ ಚಟುವಟಿಕೆಗಳಿಂದ ಅಪಾಯ ಉಂಟಾದಲ್ಲಿ  ವಿಶ್ವ ಪಾರಂಪರಿಕ ಸಮಿತಿಯು ಅದನ್ನು ಡೇಂಜರ್ ಲೀಸ್ಟ್ (ಅಪಾಯದ ಪಟ್ಟಿ)ಗೆ ಸೇರಿಸುತ್ತದೆ. ಸರ್ಕಾರ ಆನೆಗುಂದಿ ಸೇತುವೆ ಸೇರಿದಂತೆ ಎರಡು ಸೇತುವೆಗಳನ್ನು ನಿರ್ಮಿಸಲು ಹೊರಟಾಗ ಈ ಸಮಿತಿ ಹಂಪೆಯನ್ನು ಡೇಂಜರ್ ಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗಾಲೇ ಪ್ರಪಂಚದ ಒಟ್ಟು 38 ತಾಣಗಳು ಈಗ ಈ ಪಟ್ಟಿಯಲ್ಲಿವೆ.
   ಡೇಂಜರ್ ಪಟ್ಟಿಯಲ್ಲಿರುವ ತಾಣಗಳ ರಕ್ಷಣೆಗೆ ಸಕಲ ನೆರವನ್ನೂ (ತುರ್ತು ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಸೇರಿದಂತೆ) ಯುನೆಸ್ಕೊ ಒದಗಿಸುತ್ತದೆ. ಸ್ಥಳೀಯ ಆಡಳಿತದ ಮೇಲೆ ತಾಣದ ರಕ್ಷಣೆಗಾಗಿ ಒತ್ತಡವನ್ನೂ ಹೇರಲಾಗುತ್ತದೆ. ಕೊನೆಗೂ ರಕ್ಷಣೆ ಸಾಧ್ಯವಿಲ್ಲವೆನಿಸಿದಾಗ  ಆ ತಾಣಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.
ಇದುವರೆಗೆ ಯುನೆಸ್ಕೊ ಈ ರೀತಿ ಎರಡು ತಾಣಗಳನ್ನು ಮಾತ್ರ ಪಾರಂಪರಿಕ ಪಟ್ಟಿಯಿಂದ ಕೈ ಬಿಟ್ಟಿದೆ.  ಒಮನ್ ನಲ್ಲಿ ಅರಿಬಿಯನ್ ಆರಿಕ್ಸ್ (ನೇರವಾದ ಕೊಂಬುಳ್ಳ) ಜಿಂಕೆ ರಕ್ಷಿತಾರಣ್ಯ ಪ್ರದೇಶದ ಶೇಕಡ 90ರಷ್ಟು ಜಾಗವನ್ನು ತೈಲ ನಿಕ್ಷೇಪವೆಂದು ಗುರುತಿಸಿ, ತೈಲ ತೆಗೆಯಲಾರಂಭಿಸಿದ ಹಿನ್ನೆಲೆಯಲ್ಲಿ 2007ರಲ್ಲಿ ಈ ತಾಣವನ್ನು ಪಾರಂಪರಿಕ ಪಟ್ಟಿಯಿಂದ ಹೊರಗಿಡಲಾಯಿತು. ಈ ರೀತಿ ಪಟ್ಟಿಯಿಂದ ಹೊರಬಿದ್ದ ಮೊದಲ ತಾಣ ಇದು.
   ಇದೇ ರೀತಿಯಾಗಿ 2009ರಲ್ಲಿ ಜರ್ಮನಿಯ `ಡ್ರೆಸ್ಡೆನ್ ಎಲ್ಬೇ ವ್ಯಾಲಿ' ಎಂಬ ಸಾಂಸ್ಕೃತಿಕ ತಾಣವನ್ನೂ ಪಾರಂಪರಿಕ ಪಟ್ಟಿಯಿಂದ ಕೈಬಿಡಲಾಗಿದೆ. 18ಮತ್ತು 19ನೇ ಶತಮಾನದ ಸಾಂಸ್ಕೃತಿಕ ಮಹತ್ವ ಹೊಂದಿದ ಈ ಜಾಗದ ನಡುವೆ ಅಲ್ಲಿಯ ಸರ್ಕಾರ ನಾಲ್ಕು ಮಾರ್ಗದ ಸೇತುವೆ ನಿರ್ಮಿಸಿತು. ಈ ಬಗ್ಗೆ ಯುನೆಸ್ಕೊ ಸಾಕಷ್ಟು ಆಕ್ಷೇಪ ವೆತ್ತಿದರೂ ಸ್ಥಳೀಯ ಸರ್ಕಾರ ಕಿವಿಗೊಡಲಿಲ್ಲ. ಮೂರು ವರ್ಷ ವಾದ- ಪ್ರತಿವಾದದ ನಂತರ ಯುನೆಸ್ಕೊ ಸಮಿತಿ ಕೊನೆಗೆ ಈ ತಾಣವನ್ನೇ ಪಟ್ಟಿಯಿಂದ ಕೈ ಬಿಟ್ಟಿತ್ತು.
   ಇದೆಲ್ಲವನ್ನೂ ಗಮನಿಸಿದಾಗ ಪಶ್ಚಿಮಘಟ್ಟದ ಭವಿಷ್ಯ ಏನಾಗಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದಾಗಿದೆ. ಈಗ ರಾಜ್ಯ ಸರ್ಕಾರ ವಾಗಲೀ, ಸ್ಥಳೀಯರೇ ಆಗಲಿ ಏನೇ ಮಾಡಿದರೂ ಈ ತಾಣಗಳನ್ನು ಪಟ್ಟಿಯಿಂದ ಹೊರತರಲು ಸಾಧ್ಯವಿಲ್ಲ. ತಾಣಗಳಿಗೆ ಅಪಾಯದ ಪರಿಸ್ಥಿತಿ ಬರುತ್ತದೆ ಎನಿಸಿದಾಗ ಯುನೆಸ್ಕೊ ಕೇಂದ್ರದ ಮೇಲೆ ಪರೋಕ್ಷವಾಗಿ ಒತ್ತಡ ಹೇರಿಯೇ ಹೇರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗುತ್ತದೆ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ಯುನೆಸ್ಕೊ ನೀಡುವ ಸೂಚನೆಯನ್ನು ಪಾಲಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ. ಆಗ ಬೇರೆ ದಾರಿಯಿಲ್ಲದೇ ರಾಜ್ಯ ಸರ್ಕಾರ ಈ ತಾಣಗಳನ್ನು ‘ಸಂರಕ್ಷಿಸ’ಬೇಕಾಗುತ್ತದೆ.
   ಬೇರೇನೂ ಬೇಡ ಕೇಂದ್ರ ಈಗಾಗಲೇ ಚಾಲ್ತಿಯಲ್ಲಿರುವ ಅರಣ್ಯ ಸಂರಕ್ಷಣಾ ಕಾಯಿದೆಯನ್ನು  ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ಸೂಚನೆ ನೀಡಿದರೂ ಸಾಕು ಈ ಪಾರಂಪರಿಕ ತಾಣಗಳು ಉಳಿದುಕೊಂಡು ಬಿಡುತ್ತವೆ! ಏಕೆಂದರೆ ಈಗಿರುವ ಕಾನೂನುಗಳೇ ಅಷ್ಟು ಬಿಗಿಯಾಗಿವೆ.
   ಒಟ್ಟಾರೆ ಈ ಯುನೆಸ್ಕೊ ವಿವಾದ ಪರಿಸರ, ಸ್ಥಳೀಯರ ಬದುಕು, ಆಡಳಿತ ಮತ್ತು ಪ್ರತಿಷ್ಠೆಗಳಿಂದಾಗಿ ಹೊಸ ಹೊಸ ತಿರುವು ಪಡೆದುಕೊಳ್ಳುವ ಲಕ್ಷಣಗಳಂತೂ ಎದ್ದುಕಾಣುತ್ತಿವೆ. ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಸ್ಥಳೀಯರ ಮನ ಗೆದ್ದ ರಾಜಕಾರಣಿಗಳು ಚುನಾವಣೆ ಎದುರಿಸಲು ವಿಷಯ ಸಿಕ್ಕಿತಲ್ಲ ಎಂದು ಖುಷಿಪಟ್ಟಿದ್ದೇ ಲಾಭ!

Saturday, June 18, 2011

ಪಾರಂಪರಿಕ ಪಟ್ಟಿ: ಪರಿಸರವಾದಿಗಳ ವ್ಯರ್ಥಾಲಾಪ


ಪಶ್ಚಿಮ ಘಟ್ಟದ ಹತ್ತು ತಾಣಗಳಿಗೆ ಯುನೆಸ್ಕೊ `ವಿಶ್ವ ನೈಸರ್ಗಿಕ ಪಾರಂಪರಿಕ ತಾಣ'ವೆಂಬ ಟ್ಯಾಗ್‌ ಹಾಕುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿರುವುದು ಈಗ ವಿವಾದಿತ ವಿಷಯ. ಮುಖ್ಯವಾಗಿ ಪಶ್ಚಿಮಘಟ್ಟದ ಭಾಗದ ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಿದೇಶಿ ಹಣದ ಅಮಲಿನಲ್ಲಿ ಪರಿಸರಕ್ಕಾಗಿ ದುಡಿಯುತ್ತಿರುವವರು, ಪರಿಸರ ಉಳಿಸುವುದು ಎಂದರೆ ಒಂದಿಷ್ಟು ಭೂಭಾಗವನ್ನು ಮಾತ್ರ (ಶೋಕೇಸ್‌ನಲ್ಲಿಡುವ ಅಲಂಕಾರಿಕ ವಸ್ತುಗಳಂತೆ) ಕಾಪಾಡುವುದು ಎಂದೇ ನಂಬಿರುವ ಪರಿಸರ ಮೂಲಭೂತವಾದಿಗಳು ಸರ್ಕಾರದ ಈ ನಿಲುವುನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತಿದ್ದಾರೆ. ಯುನೆಸ್ಕೊ ಪಟ್ಟಿಯಿಂದ ಪಶ್ಚಿಮಘಟ್ಟ ಹೊರಗುಳಿದರೆ, ಪ್ರಕೃತಿ ಸಂಪತ್ತು ಸಂಪೂರ್ಣ ನಾಶವಾಗಿ, ಪ್ರಳಯವಾದೀತು ಎಂಬ ಭಯವನ್ನೂ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಪಶ್ಚಿಮಘಟ್ಟ ಸೇರ್ಪಡೆಯಾದಲ್ಲಿ ಸರ್ಕಾರ ಅದನ್ನು `ಉಳಿಸುವ' ಅನಿವಾರ್ಯತೆಗೆ ಒಳಗಾಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ `ಉಳಿಸುವುದು'ಎಂದರೆ ಹೇಗೆ, ಯುನೆಸ್ಕೊದ ಸೂಚನೆಗಳೇನು ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಆದರೆ ಜನಪ್ರತಿನಿಧಿಗಳ ಮಾತು ಈ ಸೂಚನೆಗಳು ಕಟ್ಟು-ನಿಟ್ಟಿನಿಂದ ಕೂಡಿವೆ ಎಂಬುದನ್ನಂತೂ ಪ್ರತಿಧ್ವನಿಸುತ್ತಿವೆ .(ಹಂಪಿಯಿಂದ ಪಾಠವನ್ನು ಕಲಿತಿರಲೂಬಹುದು) ಮೇಲ್ನೋಟಕ್ಕೇ ಸ್ಥಳೀಯರ ಹಿತಕ್ಕೆ ಮಾರಕವಾಗಲ್ಲ ಈ ಕ್ರಮವನ್ನು ವಿರೋಧಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿರಬಹುದು. ಸ್ಥಳೀಯರು ಎದುರಿಸಬೇಕಾಗುವ ಸಮಸ್ಯೆಗಳೇನು ಎಂಬುದರ ಬಗ್ಗೆ ಜಾಣ ಪರಿಸರವಾದಿಗಳು ಗಮನವನ್ನೇ ನೀಡದೆ, ಇದನ್ನು ವಿರೋಧಿಸುತ್ತಿರುವ ಸರ್ಕಾರ ಟಿಂಬರ್‌, ರೆಸಾರ್ಟ್‌ ಮತ್ತಿತರ ಮಾಫಿಯಾಕ್ಕೆ ಬಲಿಯಾಗುತ್ತಿದೆ ಎಂದು ಆರೋಪಿಸಿ ಚರ್ಚೆಯ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಂತೂ ಆಗಿದ್ದಾರೆ. ಯುನೆಸ್ಕೊ ಸೂಚನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರುವ ಕೊಡಗಿನ ಜನತೆ ಸ್ಥಳಕ್ಕೆ ಭೇಟಿ ನೀಡಿದ ಯುನೆಸ್ಕೊ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸುದ್ದಿಯನ್ನು ಎಲ್ಲರೂ ಮರೆಮಾಚುತ್ತಿರುವುದೇ ಇದಕ್ಕೆ ಉದಾಹರಣೆ.

ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದರೆ ಕೋಟಿ ಕೋಟಿ ಡಾಲರ್‌ ಹಣ ಹರಿದು ಬರುತ್ತದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದೆಲ್ಲಾ ಹೇಳಲಾಗುತ್ತಿದೆ. ಯುನೆಸ್ಕೊ ಎಂದರೇ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ. ಅಭಿವೃದ್ಧಿಗೆ ಹಣ ಒದಗಿಸುವ ಆರ್ಥಿಕ ಸಂಸ್ಥೆಯಲ್ಲ. ಆದರೂ ಪ್ರತಿ ವರ್ಷ ಪಟ್ಟಿಯಲ್ಲಿರುವ ಸ್ಥಳಗಳಿಗೆ 4 ಮಿಲಿಯನ್‌ ಎಂದರೆ 40ಲಕ್ಷ ಡಾಲರ್‌ ಒದಗಿಸುತ್ತದೆ. (ಹೆಚ್ಚು ಕಡಿಮೆ 20 ಕೋಟಿ ರೂಪಾಯಿ. ಪಶ್ವಿಮ ಘಟ್ಟದ 10 ಸ್ಥಳಗಳಿಗೆ ಹಂಚಿದರೆ ತಲಾ 2 ಕೋಟಿ ಸಿಗುತ್ತದೆ) ಈ ಫಂಡ್‌ ಬಿಡುಗಡೆಯಾಗಬೇಕಾದರೆ ಸ್ಥಳೀಯ ಸರ್ಕಾರ, ಖಾಸಗಿ ಧಾನಿಗಳು ಕೂಡ ಪಾಲು ಕೊಡಬೇಕು, ಇಲ್ಲದಿದ್ದರೆ ಇಲ್ಲ. ಅದೂ ಯುನೆಸ್ಕೊ ಸೂಚನೆಯಂತೆಯೇ ಎಲ್ಲ `ಅಭಿವೃದ್ಧಿ' ಕೆಸಲಗಳೂ ನಡೆಯಬೇಕು. ಸರ್ಕಾರದ್ದೇನಿದ್ದರೂ ಹೇಳಿದ್ದನ್ನು ಜಾರಿಗೆ ತರುವ ಏಜೆನ್ಸಿಯ ಕೆಲಸ!

ಈ ಪಟ್ಟಿ ಸೇರ್ಪಡೆಯಿಂದ ಪಶ್ಚಿಮ ಘಟ್ಟ ವಿಶ್ವದ ಗಮನ ಸೆಳೆಯುತ್ತದೆ. ಪ್ರವಾಸಿಗರು ದಂಡೆತ್ತಿ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಪ್ರಪಂಚದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದೆಂದು ಗುರುತಿಸಲ್ಪಟ್ಟಿರುವ ಆಗುಂಬೆಯಲ್ಲಿ ರೆಸಾರ್ಟ್‌ ನಿರ್ಮಿಸುವುದನ್ನು ವಿರೋಧಿಸಿದ್ದ, ಮ್ಯಾಗ್ಸಸ್ಸೆ ಪುರಸ್ಕೃತ ದಿ. ಕೆ.ವಿ. ಸುಬ್ಬಣ್ಣ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ. `ಪ್ರವಾಸಿ ಸಂಸ್ಕೃತಿ ವಿಲಾಸಿ ಸಂಸ್ಕೃತಿಯನ್ನು ಸೃಷ್ಟಿಸುತ್ತದೆ, ವಿಲಾಸಿ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತದೆ' ಎಂದು ಸುಬ್ಬಣ್ಣ ಹೇಳಿದ್ದರು. ಇದನ್ನು ಅರ್ಥಮಾಡಿಕೊಂಡವರ್ಯಾರೂ ಪ್ರವಾಸೋದ್ಯಮದ ಅಭಿವೃದ್ಧಿಯ ಹುಚ್ಚಿನಿಂದ ಮಾತನಾಡುವುದಿಲ್ಲ. ನಗರದ ಪರಿಸರವಾದಿಗಳು ಪ್ರವಾಸಿಗರನ್ನು ಆಕರ್ಷಿಸಿ, ಅದು ಹೇಗೆ ಪರಿಸರವನ್ನು ಕಾಪಾಡುತ್ತಾರೋ ನಿಮ್ಮ ಊಹೆಗೇ ಬಿಟ್ಟಿದ್ದು.

ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರುತ್ತಿರುವ ಭಾರತದ ಮೊದಲ ಪ್ರದೇಶವೇನಲ್ಲ. ಈಗಾಗಲೇ ನಾಲ್ಕೈದು ಉದ್ಯಾನವನಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಇದ್ದಕ್ಕಿದ್ದ ಹಾಗೆ ಈಗ ಪಶ್ಚಿಮಘಟ್ಟದ ನೆನಪಾಗಿದ್ದಾದರೂ ಏಕೆ ಎಂಬುದಕ್ಕೆ ಬದಲಾದ ಜಾಗತಿಕ ವಿದ್ಯಮಾನಗಳನ್ನು ಗಮನಿಸುವುದು ಒಳಿತೆನಿಸುತ್ತದೆ.

1980ಕ್ಕಿಂತ ಮುಂಚೆ ಜೀವ ವೈವಿಧ್ಯತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಾವಿರಾರು ಜಾತಿಯ ಗಿಡಗಳಿದ್ದರೆ ಏನು ಲಾಭ ಎಂದು ಯೋಚಿಸುತ್ತಿದ್ದರು. ಜೈವಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಜೀವ ವೈವಿಧ್ಯತೆಯ ಬೆಲೆಯೂ ಹೆಚ್ಚಿತು. ಹೀಗಾಗಿ ಮುಂದುವರೆದ ದೇಶಗಳಿಗೆ ಪಶ್ಚಿಮ ಘಟ್ಟದಂತಹ ಜೀವ ವೈವಿಧ್ಯದ ತಾಣಗಳೆಲ್ಲಾ ಸಂಪನ್ಮೂಲ ಕೇಂದ್ರಗಳಾಗಿ ಗೋಚರಿಸತೊಡಗಿದವು. ಅವುಗಳ ಮೇಲೆ ಹಕ್ಕು ಸಾಧಿಸಲು ಪೇಟೆಂಟ್‌ ಎಂಬ ಕಾನೂನು ರೂಪಿಸಿಕೊಂಡು ಲೂಟಿಗೆ ಹೊಸ ತಂತ್ರಗಳನ್ನು ಅನುಸರಿಸಲಾರಂಭಿಸಿದವು.

ಈ ರೀತಿಯ ಲೂಟಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆ ಎಂದರೆ ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳು ಇತ್ತೀಚೆಗೆ ಪೈಪೋಟಿ ಮೇಲೆ ಪ್ಲಾಂಟ್‌ ಪೇಟೆಂಟ್‌ ಪಡೆಯುತ್ತಿರುವುದು. 1996ಕ್ಕೂ ಮುಂಚೆ ಅಮೆರಿಕ ಕೇವಲ 5,399 ಗಿಡಗಳ ಮೇಲೆ ಪೇಟೆಂಟ್‌ ಪಡೆದಿತ್ತು. ಈಗ ಈ ಸಂಖ್ಯೆ 16,572ಕ್ಕೆ ಏರಿದೆ. 2009ರಲ್ಲಿಯೇ 1,009 ಪ್ಲಾಂಟ್‌ ಪೇಟೆಂಟ್‌ ಪಡೆದಿದೆ. ಅಂದ ಹಾಗೆ ಇದುವರೆಗೆ ಅಮೆರಿಕ ಪೇಟೆಂಟ್‌ ಪಡೆದಿರುವ ಗಿಡಗಳ ಪೈಕಿ 8,538 ಗಿಡಗಳು ವಿದೇಶಿ ಮೂಲದವು. ಇವುಗಳಲ್ಲಿ ಅಮೆರಿಕದ ದಾಖಲೆ ಪ್ರಕಾರವೇ 46ಗಿಡಗಳು ಭಾರತ ಮೂಲದವು.

1990ರಲ್ಲಿ ಭಾರತವನ್ನು `ಮೆಘಾ ಡೈವರ್ಸಿಟಿ' ದೇಶ ಎಂದರೆ ಅತ್ಯಂತ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ದೇಶ ಎಂದು ಗುರುತಿಸಲಾಗಿದೆ. ಪ್ರಪಂಚದಲ್ಲಿರುವ ಸಸ್ಯಗಳಲ್ಲಿ ಶೇ. 11ರಷ್ಟು ಅಂದರೆ ಸುಮಾರು 45,500 ವಿವಿಧ ಜಾತಿಯ ಸಸ್ಯಗಳು ಇಲ್ಲಿವೆ. ಇದರ ಮೇಲೆ ಈಗ ಎಲ್ಲರ ಕಣ್ಣು, ತಡೆಯಲು ಇರುವ ಜೀವ ವೈವಿಧ್ಯತಾ ಮಂಡಳಿಗೆ ಹಲ್ಲೇ ಇಲ್ಲ!

ಯುನೆಸ್ಕೊದ ಮೇಲೆ ಅಮೆರಿಕದ ಅಥವಾ ಇನ್ನಿತರ ಮುಂದುವರೆದ ದೇಶಗಳ ಪ್ರಭಾವವನ್ನು ಬಿಡಿಸಿ ಹೇಳಬೇಕಾಗಿಯೇನೂ ಇಲ್ಲ. ಸಂಶೋಧನೆ, ಆಧ್ಯಯನದ ಹೆಸರಿನಲ್ಲಿ ಇಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಯುನೆಸ್ಕೊ ಪಶ್ಚಿಮಘಟ್ಟವನ್ನು ಪರಿಗಣಿಸುತ್ತಿದೆ ಎಂದರೆ ಅನುಮಾನದಿಂದಲೇ ನಾವು ನೋಡಬೇಕಾಗುತ್ತದೆ. ಅದಂತೂ ವಿದೇಶಿ ಹಣದಿಂದಲೇ ಜೀವನ ಸಾಗಿಸುತ್ತಿರುವ ಪರಿಸರವಾದಿಗಳಿಂದ ಸಾಧ್ಯವೇ ಇಲ್ಲ.

ಹಾಗೆಂದ ಮಾತ್ರಕ್ಕೆ ಪಶ್ಚಿಮ ಘಟ್ಟ ಮತ್ತು ಅಲ್ಲಿರುವ ಸಂಪನ್ಮೂಲವನ್ನು ನಾವೇ ಭೋಗಿಸಬೇಕೆಂದೇನೂ ಅಲ್ಲ. ನಮ್ಮ ಈ ಜೀವ ವೈವಿಧ್ಯತೆಯ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು. ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸಿ, ಜನಪರವಾದ ಪರಿಸರ ಯೋಜನೆಗಳನ್ನು ಜಾರಿಗೆ ತಂದು ಈ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿ (ಈ ಕೆಲಸ ಮಾಡುತ್ತಾರೆಂಬ ನಂಬಿಕೆಯೇನೂ ಇಲ್ಲ ಬಿಡಿ)ಹೊರಬೇಕು. ಇಲ್ಲದಿದ್ದಲ್ಲಿ ಅದಿರಾದಂತೆ, ಜೀವ ವೈವಿಧ್ಯತೆ ಲೂಟಿಯಾದ ಮೇಲೆ ದಿಡ್ಡಿ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ!