Tuesday, December 24, 2013

ಅಡಿಕೆಗೆ ಮರಣಶಾಸನ ಬರೆದ ಐಎಆರ್ ಸಿ ಮಾನಗ್ರಾಫ್!


ರಾಜ್ಯದ 12 ಜಿಲ್ಲೆಗಳ ಪ್ರಮುಖ ಬೆಳೆಯಾದ ಅಡಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಹತ್ತು ವರ್ಷಗಳ ಹಿಂದೆಯೇ 'ಮರಣ ಶಾಸನ' ಬರೆದಿಟ್ಟಿದೆ!
ಇದೇ ಮರಣ ಶಾಸನ
ಹೌದು, ಅಡಿಕೆಯ ಇಂದಿನ ಸಂಕಷ್ಟಕ್ಕೆ ಕಾರಣವಾಗಿರುವುದು ಈ 'ಶಾಸನವೇ'. 'ಐಎಆರ್ ಸಿ ಮಾನಗ್ರಾಫ್' ಎಂದು ಕರೆಯಲಾಗುವ ಈ 'ಶಾಸನ' ಬಹಿರಂಗಗೊಂಡು ಹತ್ತು ವರ್ಷಗಳಾದರೂ ಅಡಿಕೆ ಬೆಳೆಗಾರರು, ಸಂಬಂಧ ಪಟ್ಟ ಸಂಘಟನೆಗಳು ಎಚ್ಚೆತ್ತುಕೊಳ್ಳದ ಪರಿಣಾಮ ಮುಂದೆ ಅಡಿಕೆಗೆ ಭವಿಷ್ಯವೇ ಇಲ್ಲವೇನೋ ಎಂಬ ಪರಿಸ್ಥಿತಿ ಈಗ ನಿರ್ಮಾವಾಗಿದೆ.
220 ಪುಟಗಳ 'ಬಿಟಲ್-ಕ್ವಿಡ್ ಆ್ಯಂಡ್ ಅರೆಕಾನಟ್ ಚೂಯಿಂಗ್' ಎಂಬ 'ಐಎಆರ್ ಸಿಯ ಈ ಮಾನಗ್ರಾಫ್ ನಲ್ಲಿ (ಮಾನಗ್ರಾಫ್ ಎಂದರೆ ಏಕ ವಿಷಯ ಮಂಡಿಸಿದ ಪ್ರಬಂಧ, ಅಧ್ಯಯನ ವರದಿ) ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಹೇಳಲಾಗಿದೆ. ಇದನ್ನು ಸಾಬೀತು ಪಡಿಸಲು ಹಲವಾರು ಸಂಶೋಧನೆ, ಅಧ್ಯಯನಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿಯೇ ಐಎಆರ್ ಸಿ ಬರೀ ಅಡಿಕೆಯನ್ನು (ತಂಬಾಕಿಲ್ಲದೆಯೇ) ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಡಂಗೂರ ಸಾರುತ್ತಿರುವುದು. ಅಲ್ಲದೆ, ತಾನು ಸಿದ್ಧಪಡಿಸಿದ ಕ್ಯಾನ್ಸರ್ ಗೆ ಕಾರಣವಾಗುವ ವಸ್ತುಗಳ ಪಟ್ಟಿಯಲ್ಲಿ ಅಡಿಕೆಯನ್ನು ಗ್ರೂಪ್-1 ರಲ್ಲಿ ಸೇರಿಸಿರುವುದು.

ಏನಿದು ಐಎಆರ್ ಸಿ?

ವಿಶ್ಚ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಅಂಗ ಸಂಸ್ಥೆಯೇ ಐಎಆರ್ ಸಿ. ಇದು ಕ್ಯಾನ್ಸರ್ ಕುರಿತ ಸಂಶೋಧನೆ ನಡೆಸುವ ಅಂತಾರಾಷ್ಟ್ರೀಯ ಸಂಘಟನೆ (ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್). ಇದರ ಕೇಂದ್ರ ಕಚೇರಿ ಇರುವುದು ಫ್ರಾನ್ಸಿನ ಲಿಯಾನ್ನಾದಲ್ಲಿ. ಕ್ಯಾನ್ಸರ್ ಕುರಿತು ಸಂಶೋಧನೆ ನಡೆಸುವುದು, ನಡೆದಿರುವ ಸಂಶೋಧನೆಗಳ ಕೋ ಆರ್ಡಿನೆಟ್ ಮಾಡುವುದು ಈ ಸಂಘಟನೆಯ ಕೆಲಸ. ಕ್ಯಾನ್ಸರ್ ಹರಡುವಿಕೆ ಕುರಿತು ಸಂಶೋಧನೆ ನಡೆಸುತ್ತಿರುವ ಈ ಸಂಘಟನೆ ಮಾನವನಿಗೆ ಕ್ಯಾನ್ಸರ್ ಬರಲು ಕಾರಣವಾಗುವ ಎಲ್ಲ ಪದಾರ್ಥ, ವಸ್ತುಗಳ ಬಗ್ಗೆ ಅಧ್ಯಯನ ನಡೆಸಿ, ಬೇರೆಡೆ ನಡೆದಿರುವ ಸಂಶೋಧನೆಗಳ ಸಾರವನ್ನು ಸಂಗ್ರಹಿಸಿ ಈ ಬಗ್ಗೆ ಅಧ್ಯಯನ ವರದಿಯಲ್ಲಿ ಚರ್ಚಿಸುತ್ತದೆ. ವಿಚಾರ ಮಂಡನೆ ಮಾಡುತ್ತದೆ. ಈ ರೀತಿಯ ಅಧ್ಯಯನ ವರದಿಗೆ 'ಮಾನಗ್ರಾಫಿ' ಎನ್ನಲಾಗುತ್ತದೆ. ಇದುವರೆಗೂ ಈ ಸಂಘಟನೆ ಸಾವಿರಕ್ಕೂ ಹೆಚ್ಚು ವಸ್ತುಗಳ ಅಧ್ಯಯನ ನಡೆಸಿ, ನೂರಹತ್ತಕ್ಕೂ ಹೆಚ್ಚು ವಾಲ್ಯುಮ್ ಗಳಲ್ಲಿ ಮಾ ನಗ್ರಾಫಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಡಿಕೆ ಕುರಿತ ಮಾನಗ್ರಾಫಿಯೂ ಒಂದು.
2003ರಲ್ಲಿಯೇ ಅಡಿಕೆ ಕುರಿತ ಮೊಟ್ಟ ಮೊದಲ ಮಾನಗ್ರಫಿ ಹೊರಗೆ ಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆಯೇ 2003ರ ಆಗಸ್ಟ್ 7ರಂದು ಜಿನಿವಾದಲ್ಲಿ ಪ್ರಕಟಣೆ ಬಿಡುಗಡೆ ಮಾಡಿ, ಐಎಆರ್ ಸಿ ಯ ಮಾನಗ್ರಾಫಿ ಪ್ರಕಾರ ಅಡಿಕೆ ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿದೆ ಎಂದು ಜಗತ್ತಿಗೆ ಸಾರಿತ್ತು. ಅಲ್ಲದೆ ಇದನ್ನು ಸಾಬೀತು ಪಡಿಸಿದ ಅಧ್ಯಯನಗಳ ವರದಿಯನ್ನು ಬಹಿರಂಗ ಪಡಿಸಿತ್ತು. ಹೀಗಾಗಿಯೇ ನಮ್ಮ ಕೇಂದ್ರ ಸರಕಾರ 2006ರಲ್ಲಿ 'ಅಡಿಕೆ ಅಗಿಯುವುದು ಹಾನಿಕರ' ಎಂಬ ಶಾಸನ ವಿಧಿಸಿದ ಎಚ್ಚರಿಕೆ ಹಾಕುವುದನ್ನು ಕಡ್ಡಾಯಗೊಳಿಸಿದ್ದು.
ಈ ಸಂದರ್ಭದಲ್ಲಿ ಅಡಿಕೆಯ ಔಷಧಿಗುಣಗಳ ಬಗ್ಗೆ ನಡೆದಿರುವ ಸಂಶೋಧನಾ ವರದಿಗಳನ್ನು, ಬಳಕೆಯ ವಿಧಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿ, ಅಡಿಕೆ ಮೇಲಿನ ಗದಾಪ್ರವಾಹವನ್ನು ತಡೆಯಬೇಕಾಗಿದ್ದ ಬೆಳೆಗಾರರು ಕಣ್ಣು ಮುಚ್ಚಿ ಕುಳಿತಿದ್ದರು. ಸರಕಾರಕ್ಕೆ ಇದು ತನ್ನ ಕೆಲಸವೇ ಅಲ್ಲ ಎನಿಸಿತು.
ಇದಾದ ನಂತರ 2009ರ ಅಕ್ಟೋಬರ್ 30ರಂದು ಪ್ರಪಂಚದ 10 ದೇಶಗಳ ಸುಮಾರು 30ಕ್ಕೂ ಹೆಚ್ಚು ವಿಜ್ಞಾನಿಗಳು ಐಎಆರ್ ಸಿಯ ನೇತೃತ್ವದಲ್ಲಿ ಸಭೆ ನಡೆಸಿ, 'ಅಡಿಕೆಯೊಂದನ್ನೇ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ವೈಜ್ಞಾನಿಕವಾಗಿ ಇದು ಸಾಬೀತಾಗಿದೆ' ಎಂದು ಮತ್ತೊಮ್ಮೆ ಜಗತ್ತಿಗೆ ಸಾರಿದರು. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಈಗ ಅಡಿಕೆಯ ಬಳಕೆಯ ಮೇಲೆ ನಿಷೇಧ ಹೇರುವ ಅನಿವಾರ್ಯತೆಗೆ ಸಿಲುಕಿದ್ದು.

ಮುಂದೇನು?

1970ರಿಂದಲೂ ಅನೇಕ ಅಂತಾರಾಷ್ಟ್ರೀಯ ಸಂಶೋಧನೆಗಳು ಅಡಿಕೆಯ ವಿರುದ್ಧ ವರದಿ ನೀಡಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಈ ವರದಿ ಎಲ್ಲಕ್ಕಿಂತೂ ಮಹತ್ವ ಪಡೆದುಕೊಂಡಿದೆ. ಅಡಿಕೆಗೆ ಬಂದಿರುವ ಈ ಸಂಕಷ್ಟ ರಾಜ್ಯ ಸರಕಾರಕ್ಕೆ ಗೊತ್ತಿಲ್ಲದ್ದೇನೂ ಅಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್ ಕಮ್ಮರಡಿ 2012ರ ಸೆಪ್ಟೆಂಬರ್ ನಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಗಮನ ಸೆಳೆದಿದ್ದರು. ಈ ಸಂಕಷ್ಟದಿಂದ ಪಾರಾಗುವ ಬಗ್ಗೆ ಕೃಷಿ ವಿಜ್ಞಾನಿಗಳು, ಸಂಶೋಧಕರು, ಶೈಕ್ಷಣಿಕ ತಜ್ಞರು, ವೈದ್ಯರು ನೀಡಿದ ಸಲಹೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಆದರೆ ಸರಕಾರ ಒಂದು ಹೆಜ್ಜೆಯೂ ಮುಂದಿಡಲಿಲ್ಲ. ಈ ಬಗ್ಗೆ ಅಂದು ಮಾತನಾಡದ ಬಿಜೆಪಿ ನಾಯಕರು ಇಂದು ಅಡಿಕೆ ನಿಷೇಧ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದು ಬೇರೆ ವಿಷಯ ಬಿಡಿ!
ವಿಜ್ಞಾನಿಗಳ, ತಜ್ಞರ ಪ್ರಕಾರ ಸಾಕಷ್ಟು ಅಧ್ಯಯನಗಳ ಆಧಾರದ ಮೇಲೆ  ಐಎಆರ್ ಸಿ ಯ ಮಾನಗ್ರಾಫಿ ಸಿದ್ಧಗೊಂಡಿದ್ದರೂ ಅದರಲ್ಲಿ ಸಾಕಷ್ಟು ಲೋಪಗಳಿವೆ.
o   ಮುಖ್ಯವಾಗಿ ಅಡಿಕೆಯಲ್ಲಿರುವ ಪೌಷ್ಟಿಕಾಂಶ ಮತ್ತು ವೈದ್ಯಕೀಯ ಗುಣಗಳ ಬಗ್ಗೆ ಈ ಸಂಶೋಧನೆ ನಡೆಸುವಾಗ ಗಮನವನ್ನೇ ನೀಡಲಾಗಿಲ್ಲ. ಅಡಿಕೆಯ ಔಷಧಿಗುಣಗಳ ಬಗ್ಗೆ ನಡೆದಿರುವ ಅಂತಾರಾಷ್ಟ್ರೀಯ ಸಂಶೋಧನೆಗಳ ವರದಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
o   ನೇರವಾಗಿ ಅಡಿಕೆ ತಿನ್ನುವವರ ಅಧ್ಯಯನ ನಡೆಸಿ ಮಾನಗ್ರಾಫಿ ಸಿದ್ಧಪಡಿಸಿಲ್ಲ. ಬದಲಾಗಿ ಪ್ರಾಣಿಗಳ ಮೇಲೆ (ಇಲಿ) ನಡೆದ ಅಧ್ಯಯನಗಳನ್ನು ಉಲ್ಲೇಖಿಸಲಾಗಿದೆ. ಬೇರೆ, ಬೇರೆ ಸಮಯದಲ್ಲಿ, ಬೇರೆ ಬೇರೆ ಉದ್ದೇಶದಿಂದ ನಡೆದ ಅಧ್ಯಯನಗಳ ವರದಿಯ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ.
o   ಅಡಿಕೆ ಮಾತ್ರ ತಿನ್ನುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿಲ್ಲ. ಅಧ್ಯಯನಗಳಲ್ಲಿ ಭಾಗಿಯಾದವರು, ಧೂಮಪಾನ, ಮಧ್ಯಪಾನ ಮತ್ತಿತರ ಹವ್ಯಾಸಗಳನ್ನು ಹೊಂದಿದ್ದರು ಎಂಬುದನ್ನು ಮುಖ್ಯವಾಗಿ ಪರಿಗಣಿಸಿಲ್ಲ.
o   ಅಡಿಕೆ ತಿನ್ನುವುದರಿಂದ ಉದರ, ಕುತ್ತಿಗೆ ಕ್ಯಾನ್ಸರ್ ಬರುತ್ತದೆ ಎಂದು ಮಾನಗ್ರಾಫಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆಯೇ ಹೊರತು, ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ.
o   ದೇಹಕ್ಕೆ ನೀಡಲಾಗುವ ಆಹಾರ ಪ್ರಮಾಣಕ್ಕೆ ಹೋಲಿಸಿದಲ್ಲಿ ಅಡಿಕೆ ತಿನ್ನುವ ಪ್ರಮಾಣ ಬಹಳ ಕಡಿಮೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಅಲ್ಪ ಪ್ರಮಾಣದ ವಿಷ ಔಷಧಿಯಂತೆ ಕೆಲಸ ಮಾಡುತ್ತದೆ. (poison in small quantity may become medicine) ಈ ವಿಷಯವನ್ನು ಅಡಿಕೆಯ ಬಗ್ಗೆ ಹೇಳುವಾಗ ನಿರ್ಲಕ್ಷಿಸಲಾಗಿದೆ.
o   ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ನೀಡಿರುವ ವರದಿಯನ್ನು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನ ವರದಿಯನ್ನು (ಇದು ಪ್ರತಿಷ್ಠಿತ 1989'ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್' ಮ್ಯಾಗಜೀನ್ ನಲ್ಲಿ ಪ್ರಕಟಗೊಂಡಿದೆ), ದೆಹಲಿಯ ಜವಹಾರ ಲಾಲ್ ನೆಹರು ಯೂನಿರ್ವಸಿಟಿಯ ದಿ ಕ್ಯಾನ್ಸರ್ ಬಯೋಲಾಜಿ ಲ್ಯಾಬರೋಟರಿ ವರದಿಯನ್ನು ಮಾನಗ್ರಾಫಿಯಲ್ಲಿ ಉಲ್ಲೇಖಿಸಿಲ್ಲ. ದುರುದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂಬ ಅನುಮಾನವಿದೆ.
o   ಅಮೆರಿಕದ ಅರಿಜೋನಾ ಯುನಿರ್ವಸಿಟಿಯ ಫ್ಯಾಮಿಲಿ ಮತ್ತು ಕಮ್ಯುನಿಟಿ ಮೆಡಿಸಿನ್ ವಿಭಾಗ ನಡೆಸಿದ ಅಧ್ಯಯನದ ಸಂಪೂರ್ಣ ವಿವರವನ್ನು ನೀಡದೆ, ಕೇವಲ ಕೆಲವೇ ವಿಷಯಗಳನ್ನು ಮಾತ್ರ ಮಾನಗ್ರಾಫಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗೆ ಮಾನಗ್ರಾಫಿಯಲ್ಲಿರುವ ಊನಗಳನ್ನು ಪಟ್ಟಿ ಮಾಡಿದ ತಜ್ಞರ ತಂಡದಲ್ಲಿ, ಮೂತ್ರಪಿಂಡಶಾಸ್ತ್ರಜ್ಞ ಡಾ. ವೆಂಕಟೇಶ್, ಡಾ.ಜಿ.ಕೆ. ವೀರೇಶ್, ಕೃಷಿ ವಿಜ್ಞಾನಿ ಡಾ.ಬಿ.ಆರ್ ಹಗ್ಡೆ, ಬೆಂಗಳೂರು
ಕೃಷಿ ವಿವಿಯ ಪ್ರಕಾಶ್ ಕಮ್ಮರಡಿ, ಹೋಮಿಯೋಪತಿ ತಜ್ಞ ಡಾ. ಎಸ್. ಹೆಗ್ಡೆ, ಬ್ರಿಟನ್ನಲ್ಲಿನ ವೈದ್ಯ ಡಾ. ಅರವಿಂದ ಶಾಸ್ತ್ರಿ, ಅಮೆರಿಕದ ಡಾ. ದೇವ್ರೇಶ್ ಕಜರಪಾನೆ, ಆಂಕಲಾಜಿಸ್ಟ್ ಡಾ. ಅಮರೇಂದ್ರ, ಕಿದ್ವಾಯಿ ಆಸ್ಪತ್ರೆಯ ಆಂಕಲಾಜಿ ವಿಭಾಗದ ನಿರ್ದೇಶಕ ಡಾ. ವಿಜಯ ಕುಮಾರ್  ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ತಜ್ಞರಿದ್ದಾರೆ.
ಇವರೆಲ್ಲಾ ಈ ಸಂಕಷ್ಟದಿಂದ ಪಾರಾಗಲು ಸಾಧ್ಯವಿರುವ ಮಾರ್ಗವನ್ನು ಹುಡುಕುತ್ತಾ, ಸರಕಾರದ ಗಮನ ಸೆಳೆಯುತ್ತಿದ್ದರೆ, ಅಡಿಕೆ ಬೆಳೆಗಾರರು ಮಾತ್ರ ರಾಜಕಾರಣಿಗಳ ಹೇಳಿಕೆ-ಪ್ರತಿಹೇಳಿಕೆಯ ಕಡೆಗೇ ಹೆಚ್ಚು ಗಮನ ನೀಡುತ್ತಾ, ಇದರ ಹಿಂದೆ ವರ್ತಕರಿದ್ದಾರೆ, ತಂಬಾಕು ಲಾಬಿ ಇದೆ ಎಂದು ಯೋಚಿಸುತ್ತಾ ದಿನ ದೂಡುತ್ತಿದ್ದಾರೆ.
ಅಡಿಕೆ ವಿರುದ್ಧ ಅಂತಾರಾಷ್ಟ್ರೀಯಮಟ್ಟದಲ್ಲಿ ಈಗಾಲೇ ಬೇರು ಬಿಟ್ಟಿರುವ ಅಭಿಪ್ರಾಯವನ್ನು ಬದಲಾಯಿಸುವುದು, ಸಾಕಷ್ಟು ಅಧ್ಯಯನಗಳ ನಂತರ ಮಂಡನೆಯಾಗಿರುವ  ಸಂಶೋಧನಾ ವರದಿಗಳನ್ನು ಅಲ್ಲಗಳೆಯುವುದು ಸುಲಭದ ಮಾತೇನೂ ಅಲ್ಲ. ಇದಕ್ಕಾಗಿ ಅಡಿಕೆಯ ಮೇಲೆ ಸಂಶೋಧನೆ ನಡೆಸುತ್ತಿರುವ ನಮ್ಮ ದೇಶದ ವಿಜ್ಞಾನಿಗಳು, ಅಡಿಕೆ ಪರವಾದ ಸಂಘಟನೆಗಳು, ಮಾಧ್ಯಮಗಳು ಸಾಕಷ್ಟು ಶ್ರಮವಹಿಸಬೇಕಿದೆ. ಇವರು ಹೀಗೆ ಮಾಡುವಂತೆ ಒತ್ತಡ ತರುವ ಕೆಲಸವನ್ನು ಅಡಿಕೆ ಬೆಳೆಗಾರರೇ ಮಾಡಬೇಕು.
ಅಡಿಕೆಗೆ ಎದುರಾಗಿರುವ ನಿಜವಾದ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದೇ, ಆಗಾಗ 'ಬೀಸೋ ಕತ್ತಿಯಿಂದ ಪಾರಾಗಿ' ನಾವು ಗೆದ್ದೆವು ಎಂದುಕೊಳ್ಳುತ್ತಲೇ ಅಡಿಕೆ ಬೆಳೆಗಾರರು ಬಂದಿದ್ದಾರೆ. ಇದು ಹೆಚ್ಚು ದಿನ ನಡೆಯದು ಎಂಬುದನ್ನು ಅಡಿಕೆ ಬೆಳೆಗಾರರು ಈಗಲಾದರೂ ಅರ್ಥಮಾಡಿಕೊಳ್ಳಬೇಕು.

5 comments:

  1. It is great shock to read this report now. Till now Arecanut farmers are inside round wall of traditional water well. Looking only straight top sky seen and felt all are quite well. One after another news now coming out to totally make wash out Arecanut cultivation in India. Showing that weaker section are beating by all. On stronger section no one even just glance on Alcohol drinks, Tobacco, cigarette and highly toxic junk foods allowed to make sick more.

    ReplyDelete
  2. ಏಷ್ಯದ ಆಗ್ನೇಯ ಹಾಗೂ ದಕ್ಷಿಣ ಭಾಗದ ದೇಶಗಳು ಮತ್ತು ಪೂರ್ವ ಆಫ್ರಿಕದ ದೇಶಗಳಲ್ಲಿ ಮಾತ್ರ ಬೆಳೆಯುವ ಅಡಿಕೆ ಕುರಿತು ದರಿದ್ರ ಯೂರೋಪಿನ "ಆರೋಗ್ಯ ಚಿಂತಕರಿಗೆ ಏನು ಗೊತ್ತಿದೆ? ಅವರಿಗೆ ಅಡಿಕೆ ಬೆಳೆಯಷ್ಟೇ ಅಲ್ಲ, ನಮ್ಮ ಪರಂಪರೆಯ ಭಾಗ ಎಂಬುದು ದೇವರಾಣೆಗೂ ಗೊತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಈ ನಿಲುವನ್ನು ಈ ಎಲ್ಲ ದೇಶಗಳೂ ಖಂಡಿಸಬೇಕು ಮಾತ್ರವಲ್ಲ ಧಿಃಕ್ಕರಿಸಬೇಕು. ಈ ಶಿಫಾರಸ್ಸನ್ನು ಅಡಿಕೆ ಸಿಪ್ಪೆ ಜೊತೆ ಗೊಬ್ಬರಕ್ಕೆ ಹಾಕಿ.

    ReplyDelete