ನಮ್ಮ ರಾಜಕಾರಣಿಗಳು, ಅಡಿಕೆ ಬೆಳೆಗಾರರ ಪರವಾದ ಸಂಘಟನೆಗಳ ಪ್ರತಿನಿಧಿಗಳು ಹೇಳುತ್ತಿರುವಂತೆ ಅಡಿಕೆ ಇಂದು ಎದುರಿಸುತ್ತಿರುವ ಸಂಕಷ್ಟಕ್ಕೆ ಸಿಗರೇಟು ಲಾಬಿ ಕಾರಣವೇ?
ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ.
ಈ ಹಿಂದೆ (ಅಂದರೆ ಆಹಾರ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ -2011 ಜಾರಿಗೆ ಬರುವ ಮೊದಲು) ಗುಟ್ಕಾ ನಿಷೇಧಗೊಂಡಾಗೆಲ್ಲಾ ಇದರ
ಹಿಂದೆ ಸಿಗರೇಟು ಕಂಪನಿಗಳ ಲಾಬಿ ಇದೆ ಎಂದೇ ಹೇಳಲಾಗುತ್ತಿತ್ತು. ಇದರಲ್ಲಿ ಸತ್ಯಕೂಡಾ ಇತ್ತು.
ಕಾನೂನು ಬದ್ಧವಾಗಿ ಗುಟ್ಕಾ ನಿಷೇಧಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಕೆಲ ರಾಜ್ಯ ಸರಕಾರಗಳು
ಇದ್ದಕ್ಕಿದ್ದಂತೆ ಗುಟ್ಕಾ ನಿಷೇಧಿಸುತ್ತಿದ್ದವು. ಇದಕ್ಕೆ ಸಿಗರೇಟು ಕಂಪನಿಗಳೇ
ಕಾರಣವಾಗಿರುತ್ತಿದ್ದವು. ಕೊನೆಗೆ ಸುಪ್ರೀಂ ಕೋರ್ಟ್ ಗೆ ಹೋಗಿ ಈ ನಿಷೇಧವನ್ನು ತೆರವುಗೊಳಿಸಬೇಕಾಗುತ್ತಿತ್ತು.
ಒಂದಿಷ್ಟು ಹಿಂದಕ್ಕೆ ಹೋಗೋಣ, ಎಂಬತ್ತರ ದಶಕದಲ್ಲಿ ಅಡಿಕೆಯಿಂದ
ತಯಾರಿಸಿದ ಗುಟ್ಕಾ ಮಾರುಕಟ್ಟೆ ಪ್ರವೇಶಿಸಿ, ತಂಬಾಕು ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿತ್ತು. ಭಾರತ
ಮತ್ತು ನೆರೆಯ ದೇಶಗಳಲ್ಲಿ ಸಿಗರೇಟಿಗೆ (ಧೂಮಪಾನಕ್ಕೆ) ಸೆಡ್ಡೆಹೊಡೆದು ದಿನದಿಂದ ದಿನಕ್ಕೆ
ಜನಪ್ರಿಯವಾಗಿತ್ತು. ಇದರಿಂದ ಸಿಗರೇಟು ಕಂಪನಿಗಳ ಬಿಸ್ನೆಸ್ ಗೆ ಹಿನ್ನಡೆಯಾಗಿತ್ತು. ಜಾಹೀರಾತಿಗೆ ಎಷ್ಟೇ ದುಡ್ಡು ಸುರಿದರೂ ಯುವಕರು ಮಾತ್ರ ಗುಟ್ಕಾ ಹಾಕಿ
ಉಗಳಲು ಆರಂಭಿಸಿದ್ದರೆ ಹೊರತೂ ಧಂ ಹೊಡೆಯುತ್ತಿರಲಿಲ್ಲ. ಭಾರತದಲ್ಲಿ 1984ರಲ್ಲಿ 90 ಶತಕೋಟಿಯಷ್ಟಿದ್ದ ಸಿಗರೇಟು ಮಾರಟ 1992ರಲ್ಲಿ 85 ಶತಕೋಟಿಗೆ ಇಳಿದಿತ್ತು!
ಏರಿಕೆಯಾಗಬೇಕಾಗಿದ್ದ ಮಾರಟ ಹೀಗೆ
ಇಳಿಕೆಯಾಗುತ್ತಿರುವುದನ್ನು ಕಂಡ ಸಿಗರೇಟು ಕಂಪನಿಗಳು ಗುಟ್ಕಾ ವಿರುದ್ಧ ಯುದ್ಧ ಆರಂಭಿಸಿದ್ದವು. ಏನೇ ಮಾಡಿದರೂ ಗುಟ್ಕಾದ ಮುಂದೆ ಸಿಗರೇಟು ಕಂಪನಿಗಳ ಆಟ ನಡೆದಿರಲಿಲ್ಲ. 90ರ ದಶಕದಲ್ಲಿ ಇವೆರಡರ ನಡುವೆ ತೀವ್ರ ಪೈಪೋಟಿ
ನಡೆದರೂ ಮಾರುಕಟ್ಟೆಯಲ್ಲಿ ಹೆಚ್ಚು
ಪಾಲು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಗುಟ್ಕಾ ಕಂಪನಿಗಳೇ. (ಹೀಗಾಗಿಯೇ ಅಡಿಕೆ ಬೆಲೆ ಎದ್ವಾತದ್ವಾ ಏರಿದ್ದು ಎಂಬುದನ್ನು ಇಲ್ಲಿ
ಬಿಡಿಸಿ ಹೇಳಬೇಕಾಗಿಲ್ಲ)
1998ರ ಹೊತ್ತಿಗೆ ಸಿಗರೇಟು ಮಾರಾಟ ಕಡಿಮೆಯಾಗಲಾರಂಭಿಸಿತು. ಎಷ್ಟೆಂದರೆ 2001-2002ನೇ ಸಾಲಿನಲ್ಲಿ ಐಟಿಸಿಯ ಸಿಗರೇಟು ಮಾರಾಟದಲ್ಲಿ ಶೇ.8.44ರಷ್ಟು ಕುಸಿತ ಉಂಟಾಗಿತ್ತು. 2000-2001ನೇ ಸಾಲಿನಲ್ಲಿ 66, 478 ಮಿಲಿಯನ್ ಸಿಗರೇಟು ಮಾರಿದ್ದ ಕಂಪನಿಗೆ 2001-2002ನೇ ಸಾಲಿನಲ್ಲಿ 60.865 ಮಿಲಿಯನ್ ಸಿಗರೇಟು ಮಾರಲು ಮಾತ್ರ ಸಾಧ್ಯವಾಗಿತ್ತು. ಕೇವಲ
ಐಟಿಸಿ ಕಂಪನಿಗೆ ಮಾತ್ರ ಈ ಹಿನ್ನಡೆಯಾಗಿದ್ದಲ್ಲ, ಭಾರತದ ಸಿಗರೇಟು ಮಾರುಕಟ್ಟೆಯಲ್ಲಿ ಆಗ ಎರಡನೇ ಸ್ಥಾನದಲ್ಲಿದ್ದ
ಗಾಡ್ ಫ್ರೆ ಫಿಲಿಪ್ಸ್ ಇಂಡಿಯಾ ಲಿಮಿಟೆಡ್
(ಜಿಪಿಐ) ಕೂಡ 2000ರಲ್ಲಿ ಸಿಗರೇಟು ಮಾರಾಟದಲ್ಲಿ ಶೇ. 5.3ರಷ್ಟು ಹಿನ್ನಡೆ ಅನುಭವಿಸಿತ್ತು. ಈ ಸಂದರ್ಭದಲ್ಲಿ
ಒಟ್ಟಾರೆಯಾಗಿ ಸಿಗರೇಟು ಮಾರಾಟದಲ್ಲಿ ಶೇ.4 ರಷ್ಟು ಕಡಿಮೆಯಾಗಿತ್ತು ಎಂದು ಆಗ ಮಾರುಕಟ್ಟೆ ತಜ್ಞರು
ವಿಶ್ಲೇಷಿಸಿದ್ದರು.
ಈ ಬೆಳವಣಿಗೆಯಿಂದ
ಕಕ್ಕಾಬಿಕ್ಕಿಯಾಗಿದ್ದ ಸಿಗರೇಟು ತಯಾರಿಕಾ ಕಂಪನಿಗಳು ಗುಟ್ಕಾ ನಿಷೇಧಕ್ಕೆ ಕಾರಣವಾಗಿದ್ದವು. (ಇದಕ್ಕೆ
ನ್ಯಾಯಾಲಯಗಳನ್ನು ಬಳಸಿಕೊಳ್ಳಲಾಗಿತ್ತೆಂಬ ಅಭಿಪ್ರಾಯವಿದೆ). 2002ರಲ್ಲಿ ಬಿಹಾರ ಸೇರಿದಂತೆ ಹದಿನಾಲ್ಕು ರಾಜ್ಯಗಳು ಗುಟ್ಕಾ
ನಿಷೇಧಿಸಿದ್ದನ್ನು, ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದನ್ನು ಇಲ್ಲಿ
ಸ್ಮರಿಸಬಹುದು.
ಆಗಲೇ ಬೆಳೆದು ನಿಂತಿದ್ದ ಗುಟ್ಕಾ
ತಯಾರಿಕ ಕಂಪನಿಗಳು ಸಿಗರೇಟು ಕಂಪನಿಗಳ ಈ ಲಾಬಿಗೆ ಹೊಡೆತ
ನೀಡಲು ತೊಡೆ ತಟ್ಟಿದವು. ಸಿಗರೇಟು, ತಂಬಾಕಿನ ಬೇರೆ ಉತ್ಪನ್ನಗಳನ್ನು ಹಾಗೂ ಆರೋಗ್ಯಕ್ಕೆ ಹಾನಿಕರವಾಗಿರುವ ಇತರ ಉತ್ಪನ್ನಗಳನ್ನು
ನಿಷೇಧಿಸದೇ ಗುಟ್ಕಾವನ್ನೇ ಮೊದಲು ನಿಷೇಧಿಸುತ್ತಿರುವುದೇಕೆ ಎಂದು ಪ್ರಶ್ನಿಸಲಾರಂಭಿಸಿದವು. 'ಗುಟ್ಕಾ ನಿಷೇಧ್ ಹುವಾ... ಸಿಗರೇಟ್ ಕ್ಯೂ ನಹೀ' ಎಂಬ ಜಾಹೀರಾತುಗಳು ಟೀವಿ ಪರದೆಗಳ ಮೇಲೆ, ಪತ್ರಿಕೆಗಳಲ್ಲಿ ರಾರಾಜಿಸತೊಡಗಿದವು. ಗುಟ್ಕಾದಿಂದ ಆಗಲೇ
ಅಡಿಕೆಗೆ ಬಂಗಾರದ ಬೆಲೆ ಕಂಡಿದ್ದ ಬೆಳೆಗಾರ, ಗುಟ್ಕಾದೊಂದಿಗೆ ಅಡಿಕೆಯ ಮಾನ ಹೋಗುತ್ತಿದ್ದರೂ
ತಲೆಕೆಡಿಸಿಕೊಳ್ಳದೆ, ಗುಟ್ಕಾ ಕಂಪನಿಗಳ ಈ ಪ್ರತಿದಾಳಿಯಲ್ಲಿ, ತಾವೂ ಮಾನಸಿಕವಾಗಿ ಭಾಗಿಗಳಾಗಿದ್ದರು. ಕೆಲವರು ಪ್ರತಿಭಟನೆ, ಬಹಿರಂಗ ಸಭೆಗಳನ್ನು ನಡೆಸಿ ಗುಟ್ಕಾ ಕಂಪನಿಗಳಿಗೆ ಬೇಷರತ್
ಬೆಂಬಲ ನೀಡಿದ್ದೂ ನಡೆಯಿತು.
ಆಗ ಗುಟ್ಕಾ ನಿಷೇಧಕ್ಕೆ ರಾಜ್ಯ
ಸರಕಾರಗಳಿಗೆ ಅಧಿಕಾರವಿರಲಿಲ್ಲ. ಕೇಂದ್ರ ಸರಕಾರಕ್ಕೂ ಹಲ್ಲಿರಲಿಲ್ಲ. ಕಾನೂನಿನ ಈ ತೊಡಕನ್ನು
ಮುಂದಿಟ್ಟುಕೊಂಡೇ ಗುಟ್ಕಾ ಕಂಪನಿಗಳು ನಿಷೇಧವನ್ನು ತೆರವುಗೊಳಿಸಿಕೊಳ್ಳುತ್ತಾ, ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಾ ಬಂದಿದ್ದವು. ಈ ಲೋಪವನ್ನು
ಸರಿಯಾಗಿ ಅರ್ಥಮಾಡಿಕೊಂಡಿದ್ದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಸರಕಾರೇತರ
ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಕಾನೂನು ರೀತಿಯಲ್ಲಿಯೇ ಗುಟ್ಕಾ ನಿಷೇಧಗೊಳ್ಳುವಂತೆ ಮಾಡಿದವು.
(ಈ ಹೋರಟ ಬಹಳ ಇಂಟರೆಸ್ಟಿಂಗ್ ಆಗಿದೆ. ಮುಂದೊಮ್ಮೆ ಬರೆಯುತ್ತೇನೆ)
ಹಿಂದೆ ಸರಿದ ಸಿಗರೇಟು ಕಂಪನಿಗಳು
ಈ ನಡುವೆ ಸಂಭವಿಸಿದ ಅಂತಾರಾಷ್ಟ್ರೀಯ
ವಿದ್ಯಮಾನವೊಂದು ಸಿಗರೇಟು ಕಂಪನಿಗಳಿಗೆ ಸರಿಯಾಗಿ ಹೊಡೆತ ನೀಡಿತು. ಹೀಗಾಗಿ ಗುಟ್ಕಾ ವಿರುದ್ಧ ಅವುಗಳ 'ಲಾಬಿ' ಕೂಡ ಕಡಿಮೆಯಾಯಿತು.
ಅದೇನೆಂದರೆ, 2003ರ ಮೇ 21ರಂದು ನಡೆದ ವಿಶ್ವ ಆರೋಗ್ಯ ಸಂಸ್ಥೆಯ 56ನೇ ಸಭೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ
ತೀರ್ಮಾನ ತೆಗೆದುಕೊಂಡು, 'ವರಡ್ ಹೆಲ್ತ್ ಆರ್ಗನಿಸೆಷನ್ ಫ್ರೆಮ್
ವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೊ
ಕಂಟ್ರೋಲ್' (ಡಬ್ಲ್ಯುಟಿಒ ಎಫ್ ಸಿಟಿಸಿ) ಎಂಬ ಒಪ್ಪಂದ (ಒಡಂಬಡಿಕೆ) ರೂಪಿಸಲಾಯಿತು. ಈ ಒಪ್ಪಂದ 2005ರ ಫೆಬ್ರವರಿ 27ರಂದು ಜಾರಿಗೆ ಕೂಡ ಬಂದಿತು. ವಿಶ್ವಸಂಸ್ಥೆಯ ಇತಿಹಾಸದಲ್ಲಿಯೇ
ಅಂತಾರಾಷ್ಟ್ರೀಯ ಒಪ್ಪಂದವೊಂದು ಇಷ್ಟೊಂದು ಬೇಗ ಜಾರಿಗೆ ಬಂದಿದ್ದು ಇದೇ ಮೊದಲು. (ಅಮೆರಿಕ
ಮೊದಲಿಗೆ ಈ ಒಪ್ಪಂದದ ಬಗ್ಗೆ ತರ್ಲೆ ತೆಗೆದು, ಕೊನೆಗೆ ತನ್ನ ಮೂಗಿನ ನೇರಕ್ಕೇ ಒಪ್ಪಂದವಿರುವಂತೆ
ನೋಡಿಕೊಂಡಿದ್ದು ಬೇರೆ ವಿಷಯ)
ತಂಬಾಕು ಬಳಕೆ ನಿಯಂತ್ರಣವನ್ನೇ
ಗುರಿಯಾಗಿಟ್ಟುಕೊಂಡಿರುವ ಈ ಒಪ್ಪಂದವು, ನಿಯಂತ್ರಣಕ್ಕೆ ಲಾಬಿ ಮಾಡುವುದು, ನಿರ್ಬಂಧ ಹೇರುವಂತೆ ಸರಕಾರಗಳನ್ನು ಒತ್ತಾಯಿಸುವುದು, ಎಲ್ಲೆಲ್ಲಿ ಧೂಮಪಾನ ಮಾಡಿದರೆ ಅನಾಹುತ ಹೆಚ್ಚು ಎಂಬುದರ
ಅಧ್ಯಯನ ನಡೆಸಿ ಅಲ್ಲೆಲ್ಲಾ ನಿಷೇಧಕ್ಕೆ ಕ್ರಮತೆಗೆದುಕೊಳ್ಳುವುದು, ತೆರಿಗೆ ಹೆಚ್ಚಳ ಮತ್ತಿತರಗಳ ಮೂಲಕ ಸಿಗರೇಟು ದೊರೆಯದಂತೆ ನೋಡಿಕೊಳ್ಳುವುದು, ಜಾಹೀರಾತುಗಳನ್ನು ನಿಷೇಧಿಸುವುದು, ಅಪ್ರಾಪ್ತರು ಈ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು, ಸಿಗರೇಟು ಪ್ಯಾಕೇಟುಗಳ ಮೇಲೆ ಅಪಾಯ ಮನದಟ್ಟು ಮಾಡಿಸುವ ಚಿತ್ರ
ಪ್ರಕಟಿಸುವುದು, ತಂಬಾಕು ಸೇವನೆಯ ಪರಿಣಾಮಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸುವುದು ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಿದೆ.
ಈ ಒಪ್ಪಂದ ಜಾರಿಯ ಕುರಿತು ಪ್ರತಿ
ವರ್ಷ ಪ್ರತಿಯೊಂದು ದೇಶದಿಂದಲೂ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯವಾದಾಗ
ಸಲಹೆ-ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಈ ಒಪ್ಪಂದ ಒಳಗೊಂಡಿದೆ.
ಹೀಗಾಗಿಯೇ ಭಾರತ ಕೂಡ ಬಜೆಟ್ ನಲ್ಲಿ ಪ್ರತಿ ವರ್ಷ ಸಿಗರೇಟಿನ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಾ ಬಂದಿರುವುದು. ಇದರ ಆಧಾರದ
ಮೇಲೆಯೇ ಸುಪ್ರೀಂ ಕೋರ್ಟ್ ಸಾರ್ವಜನಿಕ ಪ್ರದೇಶದಲ್ಲಿ
ಧೂಮಪಾನವನ್ನು ನಿಷೇಧಿಸಿರುವುದು.
ವಿಶ್ವಸಂಸ್ಥೆಯ ಈ ತಂಬಾಕು ನಿಯಂತ್ರಣ
ಒಪ್ಪಂದ ಜಾರಿಯಿಂದ ತಂಬಾಕು ಬೆಳೆಗಾರರಿಗೆ ಮಾತ್ರ ಆರ್ಥಿಕ ನಷ್ಟವಾಗಬಹುದು, ಆದರೆ ಬೇರೆ ಯಾವ ರೀತಿಯಲ್ಲೂ ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಬ್ಯಾಂಕ್ 'ಗ್ರೀನ್ ಸಿಗ್ನಲ್' ನೀಡಿದೆ. ಹೀಗಾಗಿ ಯಾವುದೇ ಅಡ್ಡಿ-ಆತಂಕಗಳಿಲ್ಲದೆ 2020ಕ್ಕೆ ತಂಬಾಕು ಉತ್ಪಾದನೆಯನ್ನು ನಿಯಂತ್ರಿಸುವ ಗುರಿಹಾಕಿಕೊಂಡು
ಈ ಒಪ್ಪಂದವನ್ನು ಭಾರತ ಸೇರಿದಂತೆ ಎಲ್ಲ ದೇಶಗಳೂ ಜಾರಿಗೆ ತರುತ್ತಿವೆ.
ಇದರಿಂದ ಸಿಗರೇಟು ಕಂಪನಿಗಳು
ಇನ್ನಿಲ್ಲದ ಸಂಕಷ್ಟಕ್ಕೆ ಗುರಿಯಾಗಿವೆ. ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದಿರಲಿ, ಇರುವ ಮಾರಕಟ್ಟೆಯನ್ನು ಉಳಿಸಿಕೊಳ್ಳುವುದೇ ಅವುಗಳಿಗೆ ಕಷ್ಟವಾಗಿದೆ. ಉದಾಹರಣೆಗೆ ಹೇಳುವುದಾದರೆ 2009-2010ನೇ ಸಾಲಿನಲ್ಲಿ ನಮ್ಮ ದೇಶದಲ್ಲಿ ಮಾರಾಟವಾದ ಸಿಗರೇಟಿನ
ಸಂಖ್ಯೆಗೆ ಹೋಲಿಸಿದಲ್ಲಿ 2010-2011ನೇ ಸಾಲಿನಲ್ಲಿ ಶೇ. 0.33ರಷ್ಟು ಕಡಿಮೆ (1,11,487 ದಶಲಕ್ಷ ಸಿಗರೇಟುಗಳು) ಸಿಗರೇಟು ಮಾರಾಟವಾಗಿದೆ. ಹೀಗಾಗಿ ಗುಟ್ಕಾಗಳ ವಿರುದ್ಧ ಲಾಬಿ ನಡೆಸುವ
ಅವುಗಳ ಹುಮ್ಮಸ್ಸು ಕೂಡ ಬತ್ತಿದೆ.
ಗುಟ್ಕಾ ನಿಷೇಧದ ನಂತರ...
ಕ್ಯಾನ್ಸರ್ ವಿರುದ್ಧ ಹೋರಾಟ
ನಡೆಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳ ಕಾನೂನು ಹೋರಾಟದ ಫಲವಾಗಿ ಗುಟ್ಕಾ ಈಗ 26ರಾಜ್ಯಗಳಿಲ್ಲಿ, ಏಳು ಕೇಂದ್ರಾಡಳಿತ ಪ್ರದೇಶದಲ್ಲಿ ನಿಷೇಧಗೊಂಡಿದೆ. ಇದರ ಲಾಭ
ಸಹಜವಾಗಿಯೇ ಸಿಗರೇಟು ಕಂಪನಿಗಳಿಗಾಗಿದೆ. ಕಳೆದ ಮಾರ್ಚ್ನಲ್ಲಿ ಸಂಸತ್ತಿಗೆ ಲಿಖಿತ ಹೇಳಿಕೆ ನೀಡಿರುವ ವಾಣಿಜ್ಯ ಖಾತೆಯ
ರಾಜ್ಯ ಸಚಿವರಾದ ಪುರಂದರೇಶ್ವರಿಯವರು 2011-2012ರಲ್ಲಿ ಸಿಗರೇಟು ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ
ಶೇಕಡಾ 4.19ರಷ್ಟು (1,16,166 ದಶಲಕ್ಷ ಸಿಗರೇಟುಗಳು) ಹೆಚ್ಚಾಗಿದೆ ಎಂದಿದ್ದಾರೆ.
ಮಾರುಕಟ್ಟೆ ಅಧ್ಯಯನ ಮತ್ತು
ಹೂಡಿಕೆದಾರರ ಸಲಹಾ ಸಂಸ್ಥೆ 'ಈಡಲ್ ವೈಸ್' (Edelweiss) ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಗುಟ್ಕಾ ನಿಷೇಧದ ನಂತರ ಶೇಕಡಾ 38ರಷ್ಟು ಗುಟ್ಕಾ ಚಟ ಹೊಂದಿದವರು ಸಿಗರೇಟಿಗೆ ವಲಸೆ
ಹೋಗಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಬೇರೆ ಚಟಗಳನ್ನು ಅಂಟಿಸಿಕೊಂಡಿದ್ದರೆ, ಕೆಲವರು ಮಾತ್ರ ತಂಬಾಕು ಸೇವನೆಯನ್ನೇ ಬಿಟ್ಟಿದ್ದಾರೆ ಎಂದು
ಕಳೆದ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಈ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
35ಸಾವಿರ ಕೋಟಿಗಳ ಸಿಗರೇಟು ಉದ್ಯಮ ಈ ಬೆಳವಣಿಗೆಯಿಂದ ಖುಷಿಯಾದಂತೆ ಕಾಣುತ್ತಿಲ್ಲ. ಗುಟ್ಕಾ
ನಿಷೇಧದಿಂದ ಸಹಜವಾಗಿಯೇ ಲಾಭವಾಗುತ್ತಿದ್ದರೂ, ತಂಬಾಕು ನಿಯಂತ್ರಣದ ಕ್ರಮದಿಂದ ಹೈರಾಣವಾಗಿರುವ ಈ ಉದ್ಯಮಕ್ಕೆ
ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಆರು ತಿಂಗಳಿನಲ್ಲಿ ಸಿಗರೇಟಿನ
ಬೆಲೆಯನ್ನು ತೆರಿಗೆ ಹೆಚ್ಚಳದ ಕಾರಣಕ್ಕಾಗಿ ಶೇಕಡಾ 30ರಷ್ಟು ಹೆಚ್ಚಿಸಬೇಕಾಗಿ ಬಂದಿದೆ. ಇದು ಮಾರಾಟದ ಮೇಲೆ
ನೇವಾಗಿಯೇ ಪರಿಣಾಮ ಬೀರಿದ್ದು, ಕಳೆದ ಆರು ತಿಂಗಳಿನಲ್ಲಿ ಸಿಗರೇಟು ವಾಲ್ಯುಮ್ ಶೇಕಡಾ 3 ರಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಮಾರಾಟವಾಗುವ ಐದು
ಸಿಗರೇಟುಗಳಲ್ಲಿ ನಾಲ್ಕು ಸಿಗರೇಟುಗಳು ಐಟಿಸಿ ಕಂಪನಿಗೆ ಸೇರಿದ್ದಾಗಿರುತ್ತವೆ. (ಐಟಿಸಿ ಎಂದರೆ
ಇಂಡಿಯನ್ ಟೊಬ್ಯಾಕೋ ಕಂಪನಿ. ಭಾರತದ ಹೆಸರನ್ನು ಹೊಂದಿರುವ ಈ ಕಂಪನಿ ಈಗ ಭಾರತೀಯ ಕಂಪನಿಯಾಗಿ
ಉಳಿದಿಲ್ಲ. ಇದರ ಬಂಡವಾಳದಲ್ಲಿ ಶೇ. 30.54 ಪಾಲನ್ನು ಬ್ರಿಟಿಷ್ ಅಮೆರಿಕನ್ ಟೊಬ್ಯಾಕೋ ಕಂಪನಿ ಹೊಂದಿದೆ. ಇನ್ನು ವಿದೇಶಿ ಸಂಸ್ಥಿಕ
ಹೂಡಿಕೆಯ ಪಾಲು ಶೇ. 19.68) ಈ ಕಂಪನಿ ಸಣ್ಣ ಸಿಗರೇಟುಗಳನ್ನು ಮಾರುಕಟ್ಟೆಗೆ ಬಿಟ್ಟು ಲಾಭ ಪಡೆಯುವ ತಂತ್ರ ಹೂಡಿದ್ದರೂ
ಹೇಳಿಕೊಳ್ಳುವ ಪ್ರಯೋಜನವಾಗುತ್ತಿಲ್ಲ. ಇದರ ಸೇಲ್ಸ್ ಶೇಕಡ 10ರಷ್ಟು ಹೆಚ್ಚಾಗಿದ್ದರೂ, ವಾಲ್ಯುಮ್ ಕಡಿಮೆಯಾಗುತ್ತಲೇ ಇದೆ. ಧೂಮಪಾನದ ಅಪಾಯದ ಬಗ್ಗೆ ಜಾಗೃತಗೊಂಡವರು ಇದರಿಂದ
ದೂರವಾಗುತ್ತಿದ್ದಾರೆ ಅಥವಾ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ
ವಿಶ್ವ ಆರೋಗ್ಯ ಸಂಸ್ಥೆಯ ಉರುಳು ಕೂಡ ಬಿಗಿಗೊಳ್ಳುತ್ತಿದ್ದು, ಈ ಉದ್ಯಮದ ಭವಿಷ್ಯದ ಬಗ್ಗೆಯೇ ಆತಂಕಗಳಿವೆ.
ಈಗ ಹೇಳಿ ಇಂತಹ ಪರಿಸ್ಥಿತಿಯಲ್ಲಿ ಅಡಿಕೆಯನ್ನು ನಿಷೇಧಿಸುವಂತೆ
ಈ ಸಿಗರೇಟು ಕಂಪನಿಗಳು ಕೋಟಿ ಕೋಟಿ ಸುರಿದು ಲಾಬಿ ನಡೆಸಿಯಾವೆಯೇ?
ಬದಲಾದ ಪರಿಸ್ಥಿತಿಯನ್ನು
ಅರ್ಥಮಾಡಿಕೊಳ್ಳದೆ, ರಾಜಕಾರಣಿಗಳು, ಅಡಿಕೆ ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳು 'ಅಡಿಕೆ ಸಂಕಷ್ಟಕ್ಕೆ ಸಿಗರೇಟು ಲಾಬಿ' ಕಾರಣ ಎಂದು ದೂಷಿಸಿಕೊಂಡು ಓಡಾಡುತ್ತಿದ್ದಾರೆ. ಇವರ ಮಾತನ್ನು
ನಂಬ ಬೇಕಾದರೆ ಈ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿ:
- 1993ರಲ್ಲಿ ಅಡಿಕೆಯನ್ನು ಆರೋಗ್ಯಕ್ಕೆ ಹಾನಿಯುಂಟುಮಾಡುವ ವಸ್ತುಗಳ ಪಟ್ಟಿಗೆ ಸೇರಿಸಿದಾಗ, ಇದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಡದೇ ಇರಲು ಸಿಗರೇಟು ಕಂಪನಿಗಳು ಯಾರಿಗೆ ದುಡ್ಡು ಕೊಟ್ಟಿದ್ದವು?
- 2007ರಲ್ಲಿ ರಾಜ್ಯ ಹೈಕೋರ್ಟ್ 'ಅಡಿಕೆ ತಿನ್ನುವುದು ಹಾನಿಕರವಲ್ಲ' ಎಂದು ತೀರ್ಪು ನೀಡಿದಾಗ, ಅದನ್ನು ಕೇಂದ್ರದ ಗಮನಕ್ಕೆ ತಂದು ಅಡಿಕೆಯ ಮಾನ ಕಾಪಡಾದಂತೆ ಸಿಗರೇಟು ಕಂಪನಿಗಳು ಯಾರಿಗೆಲ್ಲಾ, ಎಷ್ಟು ಕೋಟಿ ನೀಡಿದ್ದವು?
- ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದ ಸಂದರ್ಭದಲ್ಲಿ ಅಡಿಕೆಯ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಹೇಳಿಕೆಗಳು ಸಲ್ಲಿಸಲ್ಪಟ್ಟಾಗ, ಅಡಿಕೆಯ ಔಷಧೀಯ ಗುಣಗಳನ್ನೂ ಪರಿಗಣಿಸಿ ಎಂದು ವಾದ ಮಂಡಿಸದಂತೆ ಯಾವ ಸಿಗರೇಟು ಕಂಪನಿ ಯಾರ್ಯಾರ ಕುತ್ತಿಗೆಗಳನ್ನು ಒತ್ತಿ ಹಿಡಿದಿದ್ದವು?
- 2003ರಲ್ಲಿ ಐಎಆರ್ ಸಿಯು ಅಡಿಕೆ ಕುರಿತು ಮೊನೊಗ್ರಾಫ್ ಬಿಡುಗಡೆ ಮಾಡಿದಾಗ, ಅದರಲ್ಲಿ ಏನಿದೆ, ಇದರ ಪರಿಣಾಮವೇನಾಗಬಹುದೆಂದು ಅಧ್ಯಯನ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗದಂತೆ ನಮ್ಮೆಲ್ಲಾ ಜನಪ್ರತಿನಿಧಿಗಳಿಗೆ ಸಿಗರೇಟು ಕಂಪನಿಗಳು ಒಟ್ಟು ಎಷ್ಟು ಕೋಟಿ ಕೊಟ್ಟಿವೆ?
- ಶಿವಮೊಗ್ಗದ ಅಡಿಕೆ ವರ್ತಕರ ಸಂಘವು ಗುಟ್ಕಾ ದೊರೆ ಮಾಣಿಕ್ ಚಂದ್ರನ್ನು ಕರೆಸಿ ಸನ್ಮಾನ ಮಾಡಿದಾಗ, ಮ್ಯಾಗ್ಸಸೆ ಪುರಸ್ಕೃತ ರಂಗಕರ್ಮಿ, ಅಡಿಕೆ ಬೆಳೆಗಾರರಾಗಿದ್ದ ದಿವಂಗತ ಕೆ.ವಿ.ಸುಬ್ಬಣ್ಣ ಗುಟ್ಕಾದೊಂದಿಗೆ ಅಡಿಕೆಯನ್ನು ಸೇರಿಸಿ ಇದರ ಮಾನ ಕಳೆಯಬೇಡಿ ಎಂದು ಬೇಡಿಕೊಂಡರೂ ಕೇಳಿಸಿಕೊಳ್ಳದಿರುವಂತೆ ಕಿವಿಗೆ ಹತ್ತಿ ಇಟ್ಟುಕೊಳ್ಳಲು ಯಾವ ಸಿಗರೇಟು ಕಂಪನಿ ಹತ್ತಿ ಒದಗಿಸಿತ್ತು?
ತಮ್ಮ ಬೇಜವಾಬ್ದಾರಿತನವನ್ನು
ಮುಚ್ಚಿಕೊಳ್ಳಲು ರಾಜಕಾರಣಿಗಳು ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳು ಸಿಗರೇಟು
ಲಾಬಿ ಇದೆಯೆಂದು ಹುಯಿಲೆಬ್ಬಿಸುತ್ತಿದ್ದಾರೆ. ಇವರ ಮಾತನ್ನು ನಾವೂ ಕುರುಡಾಗಿ ನಂಬಬೇಕೆ? ಪ್ರಜ್ಞಾವಂತ ಅಡಿಕೆ ಬೆಳೆಗಾರರೇ ಈ ಬಗ್ಗೆ ತೀರ್ಮಾನಿಸಬೇಕು.
ಸಾಮಾನ್ಯರಿಗೆ ಸುಲಭವಾಗಿ ತಿಳಿಯುವಂತೆ ಬರೆದಿದ್ದೀರಿ.
ReplyDeleteನನ್ನ ಕೆಲವು ಬರಹಗಳು
http://darshantruth.home.blog/2021/06/08/%e0%b2%86%e0%b2%a7%e0%b2%be%e0%b2%b0%e0%b3%8d-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5-%e0%b2%a6%e0%b2%bf%e0%b2%82/
GST : http://darshantruth.home.blog/2021/05/07/one-nation-one-tax-threat-to-fiscal-rights-of-the-states/
ReplyDelete