Saturday, July 23, 2011

ಕುತೂಹಲ


ಜೋಜಿ ವಲ್ಲಿ ಎಂಬುವರು ಬರೆದ ಸುಮಾರು 101 ಸಣ್ಣ ನೀತಿ ಕತೆಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ. ಈ ಹಿಂದೆ ಅನುವಾದಿಸಿದ ಇವರ ಕೃತಿಯ ಆರು ಸಾವಿರ ಪ್ರತಿಗಳು ಈಗಾಗಲೇ ಮಾರಾಟವಾಗಿವೆ. ಹೆಸರು ನಿಮಗೆ ಗೊತ್ತಿರಬಹುದು ‘101 ಇವು ನಿಮ್ಮ ಜೀವನದಲ್ಲಿ ನಿಶ್ಚಿತವಾಗಿ ಪರಿವರ್ತನೆ ತರುತ್ತವೆ’.

**********

ಒಂದಾನೊಂದು ಊರಿನಲ್ಲಿ ಹೆಸರಾಂತ ಸೂಫಿ ಸಂತರೊಬ್ಬರಿದ್ದರು. ಅವರೊಂದು 'ಧರ್ಮಗ್ರಂಥ'ವೊಂದನ್ನು ಇಟ್ಟುಕೊಂಡಿದ್ದರು. ಈ ಗ್ರಂಥವನ್ನು ಸದಾ ತಾವೊಬ್ಬರೇ ಓದುತ್ತಿದ್ದರು. ಬೇರೆಯವರಿಗೆ ಓದಲಲ್ಲ, ನೋಡಲು ಕೂಡ ಕೊಡುತ್ತಿರಲಿಲ್ಲ. ರಾತ್ರಿ ಮಲಗುವಾಗ ಕೂಡ ಈ ಗ್ರಂಥವನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಿದ್ದರು. ಸುತ್ತ-ಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಷ್ಟೇ ಅವರು ಪುಸ್ತಕವನ್ನು ತೆರೆದು ಓದುತ್ತಿದ್ದರು.

ಇದು ಅವರ ಅನುಯಾಯಿಗಳಲ್ಲಿ, ಭಕ್ತವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಮಹತ್ವದ ಸಂಗತಿಯೇನೋ ಈ ಗ್ರಂಥದಲ್ಲಿ ಇರಬೇಕೆಂದು ಪ್ರತಿಯೊಬ್ಬರೂ ಊಹಿಸುತ್ತಿದ್ದರು. ಅಲ್ಲದೆ, ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಈ ವಿಷಯವಂತೂ ಸೂಫಿಯ ಅನುಯಾಯಿಗಳ ನಡುವೆ ಸದಾ ಚರ್ಚೆಯ ವಿಷಯವಾಗಿರುತ್ತಿತ್ತು.
ಹೀಗಾಗಿ ಆಗಾಗ ಯಾರಾದರೂ ಸೂಫಿಯನ್ನು ಈ ಗ್ರಂಥದ ಕುರಿತು ಕೇಳುತ್ತಲೇ ಇರುತ್ತಿದ್ದರು. 'ನೀವೇಕೆ ಈ ಗ್ರಂಥದ ಕುರಿತು ಏನನ್ನೂ ಹೇಳುವುದಿಲ್ಲ.' ಅದಕ್ಕೆ ಸೂಫಿ, 'ಈ ಗ್ರಂಥದ ಕುರಿತು ನಾನಂತೂ ಏನನ್ನೂ ಹೇಳುವುದಿಲ್ಲ. ನಾನು ಮರಣ ಹೊಂದಿದ ಮೇಲೆ ಬೇಕಾದರೆ ನೀವು ಈ ಗ್ರಂಥದಲ್ಲಿ ಏನಿದೆ ಎಂಬುದನ್ನು ನೋಡಬಹುದು. ಅಲ್ಲಿಯವರೆಗೆ ಇದರಲ್ಲಿ ಏನೆಲ್ಲಾ ವಿಷಯಗಳಿವೆ ಎಂದು ಖಂಡಿತಾ ಹೇಳುವುದಿಲ್ಲ' ಎಂದು ಕಡ್ಡಿಮುರಿದ ಹಾಗೆ ಹೇಳಿಬಿಡುತ್ತಿದ್ದರು.

ಇದರಿಂದಾಗಿ ಈ ಗ್ರಂಥದ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚಾಗುತ್ತಿತ್ತೇ ವಿನಃ ಪ್ರಶ್ನೆ ಕೇಳಿದ ಯಾರಿಗೂ ತೃಪ್ತಿ ಸಿಗುತ್ತಿರಲಿಲ್ಲ. ಕೆಲವರಂತೂ ಕುತೂಹಲ ತಡೆಯಲಾಗದೆ ಸೂಫಿಯು ಈ ಗ್ರಂಥವನ್ನು ಓದುವಾಗ ಕದ್ದು ನೋಡುವ ಪ್ರಯತ್ನ ಮಾಡಿ ವಿಫಲವಾಗಿದ್ದರು. ಕೆಲವರಂತೂ ಮಾಡಿನ ಹಂಚು ತೆಗೆದು ಮೇಲಿನಿಂದ ನೋಡುವ ಪ್ರಯತ್ನ ಕೂಡ ಮಾಡಿದ್ದರು.

ಹೀಗೆ ಬಹಳ ವರ್ಷಗಳ ಕಾಲ ಈ `ಗ್ರಂಥ ರಹಸ್ಯ' ನಿಗೂಢವಾಗಿಯೇ ಇತ್ತು. ಒಂದು ರೀತಿಯಲ್ಲಿ ಇದರಿಂದ ಸೂಫಿಯ ಕೀರ್ತಿಯೂ ಹೆಚ್ಚಾಗುತ್ತಲೇ ಇತ್ತು. ಹೀಗಿರುವಾಗೊಮ್ಮೆ ಸೂಫಿ ಸಂತರು ಮೃತಪಟ್ಟರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಆತನ ಭಕ್ತರು ಮತ್ತು ಅನುಯಾಯಿಗಳು ಆ ಅಮೂಲ್ಯ ಗ್ರಂಥ ಇರಿಸಲಾಗಿದ್ದ ಕೊಠಡಿಗೆ ಓಡಿದರು. ಸೂಫಿಯ ಸಾವಿಗಿಂತ ಗ್ರಂಥದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು ಎಲ್ಲರಿಗೂ ಮುಖ್ಯವಾಗಿಬಿಟ್ಟಿತ್ತು. ಓರ್ವ ಅನುಯಾಯಿ ಗ್ರಂಥವನ್ನು ಪತ್ತೆಹಚ್ಚಿ ಅದನ್ನು ಬಿಡಿಸಿ ನೋಡಿಯೇ ಬಿಟ್ಟ. ಆಶ್ಚರ್ಯವೆಂದರೆ ಮಹತ್ವದ ಗ್ರಂಥವೆಂದು ಎಲ್ಲರೂ ಭಾವಿಸಿದ್ದ ಪುಸ್ತಕ ಖಾಲಿ ಹಾಳೆಗಳಿಂದ ತುಂಬಿತ್ತು. ಇದನ್ನು ಯಾರೂ ನಂಬಲೇ ಸಿದ್ಧರಿರಲಿಲ್ಲ. ಏನೋ ಮಹತ್ವದ ವಿಷಯವಿರಬಹುದೆಂದು ಒದೊಂದೇ ಪುಟವನ್ನು ಪರಿಶೀಲಿಸಿದರು. ಆದರೆ ಯಾರಿಗೂ ಏನೂ ಕಾಣಿಸಲೇ ಇಲ್ಲ. ಇಲ್ಲ, ಎಲ್ಲಿಯೂ ಏನೋ ಮಹತ್ವದ ವಿಷಯ ಇರಲೇಬೇಕೆಂದು ಪುಸ್ತಕದ ಪ್ರತಿ ಹಾಳೆಯನ್ನು ಮೇಲಿನಿಂದ-ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ, ಹಿಂದೆ-ಮುಂದೆ ಎಲ್ಲ ತಿರುಗಿಸಿ ನೋಡಿದರು. ಕೆಲವರಂತೂ ಭೂತಗನ್ನಡಿ ತಂದು ಪ್ರತಿಯೊಂದು ಹಾಳೆಯಲ್ಲಿಯೂ ಹುಡುಕಿದರು. ಹೀಗೆ ಬಹಳ ಹೊತ್ತು ಹುಡುಕಿದ ಮೇಲೆ, ಒಂದು ಸಣ್ಣ ಅಕ್ಷರಗಳ ಸಾಲು ಕಾಣ್ಣಿಗೆ ಬಿದ್ದಿತ್ತು.

ಸಾವಿರಾರು ವರ್ಷಗಳ ಹಿಂದೆ ಜ್ಞಾನಿಯೊಬ್ಬರು ಬರೆದ ಸಾಲು ಅದಾಗಿತ್ತು. ಈ ಸಾಲಿದ್ದ ಪುಸ್ತಕವನ್ನು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಕೊಡುತ್ತಾ ಬಂದಿದ್ದರು. ಹೀಗಾಗಿ ಇದೊಂದು ಮಹತ್ವದ ಗ್ರಂಥದಂತೆ ತೋರುತ್ತಿತ್ತು. ಅದರಲ್ಲಿ ಬರೆದಿದ್ದೇನೆಂದರೆ, 'ಬರೆದಿರುವ ಪದಗಳನ್ನು ನೋಡಬೇಡಿ, ಖಾಲಿ ಜಾಗದಲ್ಲಿರುವುದನ್ನು ಓದಿ.'

*******

ಪಂಚೇಂದ್ರಿಯಗಳಿಂದ ನಾವೇನನ್ನು ಗ್ರಹಿಸುತ್ತೇವೆಯೋ, ಅದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊಂದಲು ನಮ್ಮ ಮನಸ್ಸು ಸದಾ ತವಕಿಸುತ್ತಲೇ ಇರುತ್ತದೆ. ತನಗೆ ಸರಿಯೆನಿಸಿದ ಉತ್ತರ ಸಿಗುವವರೆಗೂ ಮನಸ್ಸಿನ ಈ ಹುಡುಕಾಟಕ್ಕೆ ಪುಲಿಸ್ಟಾಪ್ ಇರುವುದಿಲ್ಲ. ಏನೋ ಇದೆ, ಅದನ್ನು ನಾನು ತಿಳಿದುಕೊಳ್ಳಲೇ ಬೇಕು ಎಂಬ ಕುತೂಹಲ ಹೆಚ್ಚುತ್ತಲೇ ಇರುತ್ತದೆ. ಇದೊಂದು ರೀತಿಯಲ್ಲಿ ಅಪರಿಪೂರ್ಣತೆಯಿಂದ ಪರಿಪೂರ್ಣತೆಯೆಡೆಗಿನ ನಡಿಗೆ.

ಈ ಹುಡುಕಾಟದ ಸಮಯದಲ್ಲಿ ಕುತೂಹಲ ಕೆರಳಿಸುತ್ತಿರುವ ವಿಷಯವೊಂದನ್ನು ಬಿಟ್ಟು ಬೇರ್ಯಾವ ವಿಷಯಗಳ ಬಗ್ಗೆಯೂ ಹೆಚ್ಚಿನ ಗಮನವನ್ನೇ ನೀಡುತ್ತಿರುವುದಿಲ್ಲ. ಇದರಿಂದ ಜೀವನದಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳನ್ನು ನಾವು ಕಳೆದುಕೊಳ್ಳುತ್ತಿರುತ್ತೇವೆ. ಆದರೆ ಇದರ ಪರಿಜ್ಞಾನ ಕೂಡ ನಮಗಿರುವುದಿಲ್ಲ. ಕೊನೆಗೆ ಇದೊಂದು ರೀತಿಯ ಗೀಳಿನಂತಾಗಿ, ಬೇರೆಲ್ಲವನ್ನೂ ಮರೆತುಬಿಡುತ್ತೇವೆ.

ಈ ಸೂಫಿಯ ಕತೆಯನ್ನೇ ನೋಡಿ, ಆತ ಓದುತ್ತಿದ್ದ 'ಗ್ರಂಥ'ದಲ್ಲಿ ಏನೆಲ್ಲಾ ವಿಷಯ ಅಡಗಿರಬಹುದು ಎಂಬುದನ್ನು ತಿಳಿದುಕೊಳ್ಳಬೇಕೆಂಬ ಹುಚ್ಚಿನಲ್ಲಿ ಆತನ ಅನುಯಾಯಿಗಳು, ಭಕ್ತರು ಸೂಫಿ ಏನು ಹೇಳುತ್ತಾನೆ, ಏನನ್ನು ಬೋಧಿಸುತ್ತಿದ್ದಾನೆ ಎಂಬುದನ್ನೇ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ನಾವೂ ಬಹಳಷ್ಟು ವೇಳೆ ಹೀಗೆಯೇ ವತರ್ಿಸುತ್ತಿರುತ್ತೇವೆ. ಘಟನೆಯಿಂದ ನಮಗೇನು ಲಾಭವಾಗಲಿದೆ, ನಾವು ಏನನ್ನು ತಿಳಿದುಕೊಳ್ಳಬಹುದು ಎಂಬುದಕ್ಕಿಂತ ಹೆಚ್ಚಾಗಿ, ಸಲ್ಲದ ಕುತೂಹಲ ಬೆಳೆಸಿಕೊಂಡು, ಅದನ್ನು ತಣಿಸಿಕೊಳ್ಳಲು ನಮ್ಮೆಲ್ಲಾ ಶ್ರಮವನ್ನು ವಿನಿಯೋಗಿಸುತ್ತಿರುತ್ತೇವೆ. ಹೀಗಾಗಿ ಘಟನೆಯು ನೀಡುವ ಸಂದೇಶವನ್ನು ಕೂಡ ನಮಗೆ ಗ್ರಹಿಸಲು ಸಾಧ್ಯವಾಗಿರುವುದಿಲ್ಲ. ವಿದ್ಯಾರ್ಥಿಯು ಜ್ಞಾನಾರ್ಜನೆಯತ್ತ ಗಮನ ನೀಡಬೇಕೇ ಹೊರತೂ, ಪಾಠ ಹೇಳಿಕೊಡುವ ಶಿಕ್ಷಕರ ಖಾಸಗಿ ಜೀವನದ ಬಗ್ಗೆ ಕುತೂಹಲ ಹೊಂದಿರಬಾರದು ಅಲ್ಲವೇ?

ಈ ರೀತಿ ಕುತೂಹಲ ತಣಿಸಿಕೊಳ್ಳಲು ಸಮಯ ಮತ್ತು ಶ್ರಮ ವ್ಯರ್ಥ ಮಾಡುವುದು ತಪ್ಪಬೇಕಾದರೆ, ನೇವೇಕೆ ಇಲ್ಲಿದ್ದೀರಿ, ಶಿಕ್ಷಕರ ದೋಷಗಳನ್ನು ಗುರುತಿಸಿ ಆಡಿಕೋಳ್ಳಲೇ ಅಥವಾ ಅವರು ಹೇಳಿಕೊಟ್ಟ ಪಾಠವನ್ನು ಅರ್ಥಮಾಡಿಕೊಂಡು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಆಗ ಮುಂದಿನ ಬಾರಿ ಈ ರೀತಿಯ ಸಂದರ್ಭ ಉದ್ಭವಿಸಿದಾಗ ನಿಮಗೆ ಏನು ಮಾಡಬೇಕೆಂಬುದು ಸ್ಪಷ್ಟವಾಗಿಬಿಟ್ಟಿರುತ್ತದೆ. ಹೊಸ ಬೆಳಕಿಗೆ ಕಿಟಿಕಿಯನ್ನು ತೆರೆದಿಟ್ಟಂತಾಗುತ್ತದೆ.

********

ನಿರಾಶೆಯೆಂಬುದು ಹಲವು ಬಾರಿ ಅರ್ಥವಿಲ್ಲದ ಕುತೂಹಲ ದಿಂದಲೇ ಸೃಷ್ಟಿಯಾಗಿರುತ್ತದೆ. - ಜಾರ್ಜ ಎಲಿಯಾಟ್

***

ಯಶಸ್ಸಿನ ದಾರಿಯಲ್ಲಿ ಅನೇಕ ರೀತಿಯ ಪ್ರಲೋಭವೆಂಬ ನಿಲ್ದಾಣಗಳಿರುತ್ತವೆ. ಬಲಿಯಾಗದೆ ಪಯಣ ಮುಂದುವರೆಸಿದಾತ ಗೆಲ್ಲುತ್ತಾನೆ. -ಅನಾಮಿಕ

1 comment:

  1. ಜೋಜಿವಲ್ಲಿ ನೀತಿ ಕತೆಗಳು ಇಂಟ್ರೆಸ್ಟಿಂಗ್. :-)

    ReplyDelete