Sunday, May 15, 2011

ಕ್ಲಿನಿಕಲ್‌ ಟ್ರಯಲ್‌ ಗಂಭೀರ ವಿಷಯವಲ್ಲವೇ?


ರಾಜ್ಯದಲ್ಲಿನ ತಾಳ ಮೇಳವಿಲ್ಲದ ಆಡಳಿತ ಮತ್ತೊಂದು ವಿವಾದ ಸೃಷ್ಟಿಸಿದೆ. ಆರೋಗ್ಯ ಸಚಿವರಂತೆ ವರ್ತಿಸುತ್ತಿರುವ ವೈದ್ಯ ಶಿಕ್ಷಣ ಸಚಿವ ಎಸ್‌.ಎ. ರಾಮದಾಸ್‌ ಅತ್ಯುತ್ಸಾಹದಿಂದಲೋ, ಜನಪರ ಕಾಳಜಿಯಿಂದಲೋ ಗೊತ್ತಿಲ್ಲ, ರಾಜ್ಯದಲ್ಲಿ ಹೊಸ ಔಷಧಗಳ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಪ್ರಕಟಿಸಿದ್ದಾರೆ.
`ಔಷಧ ತಯಾರಿಕಾ ಕಂಪನಿಗಳು ನೀತಿ-ನಿಯಮ ಸಮಿತಿಯ ಒಪ್ಪಿಗೆ ಪಡೆಯದೇ ವೈದ್ಯರೊಂದಿಗೆ ಡೀಲ್‌ ಮಾಡಿಕೊಂಡು ಹೊಸ ಔಷಧಗಳ ಪ್ರಯೋಗ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಅಪಾಯಕಾರಿ, ಹೀಗಾಗಿ ಈ ಬಗ್ಗೆ ಸೂಕ್ತ ಕಾನೂನು ರೂಪಿಸಲು ಇಬ್ಬರು ತಜ್ಞರ ಸಮಿತಿ ರಚಿಸಲಾಗುವುದು, ಕಾನೂನು ಜಾರಿಯಾಗುವವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ' ಎಂದು ಮಂಗಳವಾರ ಸಚಿವರು ಹೇಳಿದ್ದರು. ಈ ಹೇಳಿಕೆ ನೀಡುವ ಮುನ್ನ ನಿರ್ಬಂಧದ ಪರಿಣಾಮಗಳ ಬಗ್ಗೆ ಅವರು ಸಮಗ್ರವಾಗಿ ತಿಳಿದುಕೊಂಡಂತಿಲ್ಲ. ಸರ್ಕಾರದ ಈ ನಿರ್ಧಾರ ಔಷಧ ತಯಾರಿಕಾ ಕಂಪನಿಗಳಲ್ಲಿ, ಅವುಗಳು ನೀಡುವ ಹಣಕ್ಕಾಗಿ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಒಪ್ಪಿಕೊಳ್ಳುವ ಆಸ್ಪತ್ರೆಗಳಲ್ಲಿ ಆತಂಕ ಮೂಡಿಸಿತ್ತು.
ಈ ಹೇಳಿಕೆ ಹೊರ ಬಿದ್ದ ಮಾರನೇ ದಿನವೇ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕ್ಲಿನಿಕಲ್‌ ಟ್ರಯಲ್‌ಗಳನ್ನು ನಿರ್ಬಂಧಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಜೈವಿಕ ತಂತ್ರಜ್ಞಾನ ಮೇಳ ಉದ್ಘಾಟಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಔಷಧಗಳನ್ನು ತಯಾರಿಸುವ ಜೈವಿಕ ತಂತ್ರಜ್ಞಾನ ಕಂಪನಿಗಳ ಒತ್ತಡಕ್ಕೆ ಮಣಿದಿರುವುದು ಎದ್ದು ಕಾಣುತ್ತಿದೆ.
ಇಲ್ಲೊಂದು ಪ್ರಶ್ನೆ, ಸಚಿವರು ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಬರಲು ಸ್ಪಷ್ಟ ಕಾರಣವಿತ್ತು. ಈ ಕಾರಣವನ್ನು ಮುಖ್ಯಮಂತ್ರಿಗಳು ಒಂದೇ ದಿನದಲ್ಲಿ ಬಗೆಹರಿಸಿ, ನಿರ್ಬಂಧ ವಿಧಿಸುವ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾದರೂ ಹೇಗೆ? ರೋಗಿಗಳ ಹಿತವೇ ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಕಾರಣವೆಂದಾದರೆ, ಕ್ಲಿನಿಕಲ್‌ ಟ್ರಯಲನ್ನು ಅಪಾಯವಿಲ್ಲದಂತೆ ನಡೆಸಲು, ಕಾನೂನು ಬಾಹಿರವಾಗಿ ಪ್ರಯೋಗ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡಿದೆಯೇ?
ಇದು ಇವರಿಬ್ಬರೂ ಗ್ರಹಿಸಿರುವಂತೆ ಸರಳ ವಿಷಯವಲ್ಲ. ಕ್ಲಿನಿಕಲ್‌ ಟ್ರಯಲ್‌ನ ಬಗ್ಗೆ ಬಹುಕಾಲದಿಂದಲೂ ಗಂಭೀರ ಚರ್ಚೆ ನಡೆಯುತ್ತಲೇ ಬಂದಿದೆ. ಪ್ರಯೋಗದ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ. ನಮ್ಮ ದೇಶದಲ್ಲಿಯೇ ಕಳೆದ ವರ್ಷ ಕ್ಲಿನಿಕಲ್‌ ಟ್ರಯಲ್‌ನಿಂದಾಗಿ 671 ಮಂದಿ ಮೃತಪಟ್ಟಿದ್ದಾರೆ. ಮೂರು ಪ್ರಕರಣಗಳಲ್ಲಿ ಮಾತ್ರ ಈ ಸಾವಿಗೆ ಹೊಣೆಯಾದ ಔಷಧ ತಯಾರಿಕ ಕಂಪನಿ ಪರಿಹಾರ ನೀಡಿವೆ. ಉಳಿದವರ ಸಾವಿಗೆ ಬೆಲೆಯೇ ಇಲ್ಲ. ಇದು ಕೇಂದ್ರ ಆರೋಗ್ಯ ಸಚಿವಾಲಯವೇ ಬಹಿರಂಗ ಪಡಿಸಿರುವ ಅಧಿಕೃತ ಮಾಹಿತಿ. ಬಿಜೆಪಿ ಸಂಸದೆ ಮೇನಕಾ ಗಾಂಧಿ ನೇತೃತ್ವದ ಸಂಸದೀಯ ಸಮಿತಿ ಕೂಡ ಇದನ್ನು ಒಪ್ಪಿಕೊಂಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಔಷಧಗಳ ಪ್ರಯೋಗವನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಮಾರ್ಗರ್ಶಿ ಸೂತ್ರ ಪ್ರಕಟಿಸಿದೆ. ಆದರೆ ಬಹುತೇಕ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಈ ಸೂತ್ರ ಲೆಕ್ಕಕ್ಕೇ ಇಲ್ಲ. ನೀತಿ-ನಿಯಮಗಳ ಸಮಿತಿಯ ಒಪ್ಪಿಗೆ ಪಡೆಯದೇ ವೈದ್ಯರಿಗೆ, ಆಸ್ಪತ್ರೆಗಳ ಆಡಳಿತ ಮಂಡಿಳಿಗೆ ಹಣ ನೀಡಿ ಪ್ರಯೋಗ ನಡೆಸುತ್ತಿವೆ. ಹೀಗೆ ಅಕ್ರಮವಾಗಿ ನಡೆಯುತ್ತಿರುವ ಪ್ರಯೋಗಗಳಿಗೆ ಇನ್ನೆಷ್ಟು ಮಂದಿ ರೋಗಿಗಳು ಬಲಿಯಾಗಿದ್ದಾರೋ ಯಾರಿಗೆ ಗೊತ್ತು?
ನಮ್ಮ ದೇಶದಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸುವ ಕಂಪನಿಗಳು ಕೇವಲ ದೇಶೀಯ ಕಂಪನಿಗಳು ಮಾತ್ರವಲ್ಲ , ಇಲಿ ಲಿಲ್ಲಿ, ಜಾನ್ಸನ್‌ ಅ್ಯಂಡ್‌ ಜಾನ್ಸನ್‌ ನಂತಹ ಬೃಹತ್‌ ಅಂತಾರಾಷ್ಟ್ರೀಯ ಕಂಪನಿಗಳೂ ಸೇರಿವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ವರ್ಷವೊಂದರಲ್ಲಿಯೇ 44 ಕಂಪನಿಗಳು ಹೊಸ ಪ್ರಯೋಗ ನಡೆಸಿದ್ದು, ಪ್ರತಿವರ್ಷ ಸರಿಸುಮಾರು 1,500 ಪ್ರಯೋಗಗಳು ನಡೆಯುತ್ತವೆ. ಟೈಮ್ಸ್‌ ಆಫ್‌ ಇಂಡಿಯಾದ ವರದಿ ಮಾಡಿದಂತೆ ಸದ್ಯ ಮಣಿಪಾಲ್‌ ಆಸ್ಪತ್ರೆ 10-15, ಬೆಂಗಳೂರು ಮೆಡಿಕಲ್‌ ಕಾಲೇಜು ಆಸ್ಪತ್ರೆ 2, ಕ್ಯಾನ್ಸರ್‌ ಆಸ್ಪತ್ರೆಗಳು ಹತ್ತಾರು ಪ್ರಯೋಗ ನಡೆಸುತ್ತಿವೆ. ಇನ್ನು, ಅನಧಿಕೃತವಾಗಿ ಪ್ರಯೋಗಗಳು ನಡೆಯುತ್ತಿವೆ ಎಂಬುದನ್ನು ಸಚಿವ ರಾಮದಾಸ್‌ ಅವರೇ ಒಪ್ಪಿಕೊಂಡಿದ್ದಾರೆ.
ದೆಹಲಿಯ ಮೆಡಿಕಲ್‌ ಎಕ್ಸ್‌ಪರ್ಟ್‌ ಕಂಪನಿ ಮೆಕೆನ್ಸಿಯ ಪ್ರಕಾರ ಈ ವರ್ಷ ಕ್ಲಿನಿಕಲ್‌ ಟ್ರಯಲ್‌ 5ಸಾವಿರ ಕೋಟಿ ರೂ. ವ್ಯವಹಾರ ನಡೆಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕ್ಲಿನಿಕಲ್‌ ಟ್ರಯಲ್‌ ಮೂರು ಹಂತದಲ್ಲಿ ನಡೆಯುತ್ತದೆ. ಹೊಸದಾಗಿ ಸಂಶೋಧಿಸಿದ ಔಷಧವನ್ನು ಸಣ್ಣ ಗುಂಪಿನ (20-80 ರೋಗಿಗಳಿಗೆ) ಪ್ರಯೋಗಿಸುವುದು ಮೊದಲ ಹಂತವಾದರೆ, ಮೊದಲ ಹಂತದ ಪ್ರಯೋಗ ಪೂರೈಸಿದ ಔಷಧವನ್ನು 100ರಿಂದ 300 ರೋಗಿಗಳ ಮೇಲೆ ಪ್ರಯೋಗಿಸಿ, ಪರಿಣಾಮಗಳನ್ನು ವಿಶ್ಲೇಷಿಸುವುದು ಎರಡನೇ ಹಂತ. ಮೂರನೇ ಹಂತದಲ್ಲಿ 1000ದಿಂದ 3000 ರೋಗಿಗಳ ಮೇಲೆ ಔಷಧವನ್ನು ಪ್ರಯೋಗಿಸಿ, ಪರಿಣಾಮ, ಅಡ್ಡ ಪರಿಣಾಮ, ಈಗಾಗಲೇ ಬಳಕೆಯಲ್ಲಿರುವ ಔಷಧಕ್ಕೂ ಇದಕ್ಕೂ ಇರುವ ವ್ಯತ್ಯಾಸ ಮತ್ತಿತರ ವಿಷಯಗಳನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಓಕೆಯಾದರೆ ಔಷಧ ಬಳಕೆಗೆ ಸಿದ್ಧ.
ಈ ರೀತಿ ಪ್ರಯೋಗ ನಡೆಸುವಾಗ 2007ರಲ್ಲಿ 137 ಮಂದಿ, 2008ರಲ್ಲಿ 288 ಮತ್ತು 2009ರಲ್ಲಿ 637 ಮಂದಿ ಮೃತಪಟ್ಟಿದ್ದರು. ಯಾವ ಹಂತದ ಪ್ರಯೋಗದಲ್ಲಿ ರೋಗಿ ಸಾವಿಗೀಡಾಗಿದ್ದಾನೆ ಎಂಬುದರ ಮೇಲೆ ಪರಿಹಾರದ ಮೊತ್ತ ನಿಗದಿಯಾಗಬೇಕು. ಆದರೆ ದೊಡ್ಡ ದೊಡ್ಡ ಕಂಪನಿಗಳು ಕೂಡ ಪರಿಹಾರ ನೀಡದೇ ವೈದ್ಯರ ಕೈ ಬಿಸಿ ಮಾಡಿ, ತಾವು ತಣ್ಣಗಿವೆ.
ಪ್ರತಿ ವರ್ಷ ಪ್ರಪಂಚದಾದ್ಯಂತ ಒಂದು ಲಕ್ಷ ಕ್ಲಿನಿಕಲ್‌ ಟ್ರಯಲ್‌ ನಡೆಯುತ್ತದೆ. ಔಷಧ ಕಂಪನಿಗಳ ತವರು ಅಮೆರಿಕದಲ್ಲಿಯೇ ಸುಮಾರು ಅರ್ಧದಷ್ಟು ಪ್ರಯೋಗಗಳು ನಡೆಯುತ್ತಿವೆ. ಅಲ್ಲಿ ಅಪಾಯಕಾರಿ ಔಷಧಗಳ ಪ್ರಯೋಗಕ್ಕೆ ವಿರೋಧ ಹೆಚ್ಚುತ್ತಿದ್ದಂತೆಯೇ ಭಾರತದಂತಹ ದೇಶಗಳತ್ತ ಮುಖ ಮಾಡಲಾಗುತ್ತಿದೆ. ಏಕೆಂದರೆ ನಾವು ಎಲ್ಲವನ್ನೂ ಸ್ವಾಗತಿಸುವ ವಿಶಾಲ ಹೃದಯಿಗಳಲ್ಲವೇ?
ಮತ್ತೆ ರಾಜ್ಯದ ವಿಷಯಕ್ಕೆ ಮರಳುವುದಾರೆ, ಅತಿ ಗಂಭೀರವಾದ ಈ ವಿಷಯವನ್ನು ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜಕೀಯ ಹೇಳಿಕೆಯಂತೆ ಲಘುವಾಗಿ ಗ್ರಹಿಸಿ, ನಿರ್ದಾರ ಬದಲಾಯಿಸಿದ್ದು ಎಷ್ಟು ಸರಿ. ಇವರ ಬೇಜವಬ್ದಾರಿತನಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು?

(ವಿಕ ದಲ್ಲಿ ಪ್ರಕಟವಾದ ಲೇಖನ)

No comments:

Post a Comment