ಸರ್ಕಾರದ ಇಮೇಜ್ ಹೆಚ್ಚಿಸಿಕೊಳ್ಳುವ ಗುಂಗಿನಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನೆಲ್ಲಾ ಚೀಪ್ ಟ್ರಿಕ್ಸ್ ಮಾಡುತ್ತಾರೋ ಗೊತ್ತಿಲ್ಲ, ಆದರೆ ಅವರು ಏನೇ ಮಾಡಿದರೂ ಬೊಕ್ಕಸಕ್ಕಂತೂ ತೂತು ಗ್ಯಾರಂಟಿ. ಇತ್ತೀಚೆಗೆ ತಾಲೂಕು ಕೇಂದ್ರಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಗೋಪ್ಯವಾಗಿ ನಡೆಯುವ ಈ ಸಭೆಯನ್ನು ಎಲ್ಲಿ ನಡೆಸಿದರೂ ಒಂದೇ, ನಿರ್ಧಾರ ಜನಪರವಾಗಿದ್ದರೆ ಜನ ಮೆಚ್ಚಿಯೇ ಮೆಚ್ಚುತ್ತಾರೆ. ಇದೇನು ಅವರಿಗೆ ಗೊತ್ತಿರದ ಸಂಗತಿಯೇನೂ ಅಲ್ಲ, ಆದರೆ ಆಡಳಿತವನ್ನು ತಾಲೂಕು ಕೇಂದ್ರಕ್ಕೆ ತೆಗೆದುಕೊಂಡು ಹೋದೆವು ಎಂದು ಮುಂದೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬೇಕಲ್ಲ, ಅದಕ್ಕಾಗಿ ಈ `ಜನಪರ ನಿರ್ಧಾರ’ ಕೈಗೊಂಡಿದ್ದಾರೆ.
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗು ಗಟ್ಟಿಯಾದಾಗ ಗುಲ್ಬರ್ಗಾದಲ್ಲಿ 2008ರ ಸೆಪ್ಟೆಂಬರ್ ಮತ್ತು 2009ರ ಅಕ್ಟೋಬರ್ನಲ್ಲಿ ಇದೇ ರೀತಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಪ್ರಯೋಜನವೇನಾಯಿತೋ ಗೊತ್ತಿಲ್ಲ, ಆದರೆ ಇದಕ್ಕಾಗಿ ಖರ್ಚಾಗಿದ್ದು ಎಷ್ಟು ಗೊತ್ತೇ, 15 ಕೋಟಿಗೂ ಹೆಚ್ಚು.
ಸಚಿವ ಸಂಪುಟ ಸಭೆಯೆಂದರೆ ಸಮಾನ್ಯ ಸಭೆಯೇನಲ್ಲ. ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಭೆ ನಡೆಯಬೇಕೆಂದರೆ ಮುಖ್ಯಮಂತ್ರಿ ಕಾರ್ಯಾಲಯದ 30 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ, ಒಟ್ಟು 29 ಇಲಾಖೆಗಳ ಸಿಬ್ಬಂದಿ (ಹೆಚ್ಚು ಕಡಿಮೆ ತಲಾ 10 ಮಂದಿ ಎಂದಿಟ್ಟುಕೊಳ್ಳಿ) ಸ್ಥಳದಲ್ಲಿರಬೇಕಾಗುತ್ತದೆ. ಇವರುಗಳ ಮತ್ತು ಸಚಿವರುಗಳ ಖರ್ಚು- ವೆಚ್ಚ ಎಷ್ಟಾಗಬಹುದು ನೀವೇ ಅಂದಾಜಿಸಿ. ಹೋಗಲಿ, ಈ ರೀತಿ ಸಭೆಯಲ್ಲಿ ಭಾಗವಹಿಸುವಾಗ ಅಧಿಕಾರಿಗಳು, ಸಚಿವರು ಸರಳತೆಗೆ ಒತ್ತು ಕೊಡುತ್ತಾರೋ, ಅದೂ ಇಲ್ಲ. ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ನಡೆದಾಗ ಎಲ್ಲ ಸಚಿವರೂ, ಒಂದೇ ಬಸ್ಸಿನಲ್ಲಿ ಅಲ್ಲಿಗೆ ತೆರಳಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಲಾಗಿತ್ತು. ಆದರೆ ಯಾರೂ ಈ ಸೂಚನೆ ಪಾಲಿಸಿಲ್ಲ. ಹೀಗಾಗಿ ಪ್ರಯಾಣ ಭತ್ಯೆಗೆಂದೇ ಲಕ್ಷಾಂತರ ರೂಪಾಯಿ ಖರ್ಚಾಗುವುದು ಗ್ಯಾರಂಟಿ. ಸಚಿವ ಸಂಪುಟ ಸಭೆಯನ್ನೂ `ಜನಪ್ರಿಯ ಕಾರ್ಯಕ್ರಮ'ವಾಗಿಸಿ, ಅದರ ಮಹತ್ವವನ್ನು ಕಡಿಮೆ ಮಾಡುವ, ಅದಕ್ಕಾಗಿ ದುಂದುವೆಚ್ಚ ಮಾಡುವ ಮುಖ್ಯಮಂತ್ರಿಗಳ ಈ ತೀರ್ಮಾನ ಸರಿಯೇ, ತಪ್ಪೇ ನೀವೇ ಹೇಳಬೇಕು.
No comments:
Post a Comment