Wednesday, June 15, 2011

ಸೋತ ಕಾಂಗ್ರೆಸ್


`ರಾಜ್ಯ ಕಾಂಗ್ರೆಸ್ ಸತ್ತು ಮಲಗಿದ್ದರೆ ಮರುಜೀವ ಕೊಡುವ ಕೆಲಸ ಮಾಡಬಹುದಿತ್ತು. ಆದರೆ ಸತ್ತಂತೆ ಮಲಗಿದೆ. ಹೀಗಾಗಿ ಎಚ್ಚರಿಸುವುದು ಕಷ್ಟ' ಎಂದು ಆ ಪಕ್ಷದ ಹಿರಿಯ ನಾಯಕರೊಬ್ಬರು ಖಾಸಗಿಯಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಸಾಂಸ್ಥಿಕ ಚುನಾವಣೆ ಹಳ್ಳ ಹಿಡಿದಿರುವುದನ್ನು ನೋಡಿದರೆ ಇದು ನಿಜವೆನಿಸುತ್ತಿದೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರೇ ಆಸಕ್ತಿ ವಹಿಸಿ, ಪ್ರಚಾರಕ್ಕೆ ಬಂದು ಈ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಪಕ್ಷದ ಹಿರಿಯ ನಾಯಕರಿಗೆ ಬಿಸಿರಕ್ತದವರು ಪಕ್ಷಕ್ಕೆ ಬರುವುದು ಬೇಡ. ಹೀಗಾಗಿ ಈ ಅಭಿಯಾನ ನಡೆಯುವಾಗ ಮನೆ ಬಿಟ್ಟು ಹೊರಬರಲಿಲ್ಲ. ಪರಿಣಾಮ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡವರ ಸಂಖ್ಯೆ 6.25 ಲಕ್ಷ ಮಾತ್ರ. ಗುರಿ ಇದ್ದಿದ್ದು ಎಷ್ಟು ಗೊತ್ತೇ, 37ಲಕ್ಷ !

18ರಿಂದ 35ವರ್ಷದೊಳಗಿನ ಯುವಜನರನ್ನು ಭಾರಿ ಪ್ರಮಾಣದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು,ಹೊಸ ಶಕ್ತಿ ತುಂಬುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿತ್ತು. ನಟಿ ರಮ್ಯಾ ಮತ್ತಿತರ ಸೇರ್ಪಡೆ ಕಾಂಗ್ರೆಸ್ ಬೆಂಬಲಿಗರಲ್ಲಿ ಹುರುಪು ಮೂಡಿಸಿತ್ತು. ಈ ಎಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ ಯುವಜನತೆಯ ಪಕ್ಷವಾಗಲಿದೆಯೇ ಎಂದು ರಾಜಕೀಯ ಆಸಕ್ತರೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಕಾಂಗ್ರೆಸ್ ಚಿಗುರುವ ಲಕ್ಷಣವನ್ನೇನೂ ತೋರಲಿಲ್ಲ.

ರಾಜ್ಯದಲ್ಲಿ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸದಸ್ಯತ್ವ ಅಭಿಯಾನ ನಡೆದಿದೆ. ನೆಲೆಯನ್ನೇ ಹೊಂದಿರದ ತಮಿಳುನಾಡಿನಲ್ಲಿಯೇ 17 ಲಕ್ಷ ಯುವಜನರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 16 ಲಕ್ಷ , ಬಲವಾದ ಕಾರ್ಯಕರ್ತರ ಪಡೆ ಇದ್ದರೂ ಚಿಕ್ಕ ರಾಜ್ಯದ ಕೇರಳದಲ್ಲಿ ಕೂಡ ಐದು ಲಕ್ಷ ಯುವಜನತೆ ಪಕ್ಷದತ್ತ ಕೈ ಚಾಚಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಹೀಗೇಕಾಯಿತು? ನಾಯಕರನ್ನು ಕೇಳಿದರೆ ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ನ 47 ಸಾವಿರ ಬೂತ್ ಗಳಲ್ಲಿ ಶೇ. 70 ಬೂತ್ ಗಳಲ್ಲಿಯಾದರೂ ಯುವ ಕಾಂಗ್ರೆಸ್ ಘಟಕ ತೆರೆಯುವ ಉದ್ದೇಶವನ್ನು ಪಕ್ಷ ಹೊಂದಿತ್ತು. ಎಷ್ಟು ಕಡೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆ ನಡೆಯುತ್ತದೆಯೋ ಕಾದು ನೋಡಬೇಕು. ಈ ರಾಜಕೀಯ ಪಕ್ಷದ ಕತೆ ಇರಲಿ, ರಾಜ್ಯದ ಯುವ ಜನತೆ ರಾಜಕೀಯದಿಂದ ದೂರವಾಗುತ್ತಿರುವುದರ ಸೂಚನೆಯನ್ನು ಇದು ನೀಡುತ್ತಿದೆಯೇ?

Sunday, May 15, 2011

ಕ್ಲಿನಿಕಲ್‌ ಟ್ರಯಲ್‌ ಗಂಭೀರ ವಿಷಯವಲ್ಲವೇ?


ರಾಜ್ಯದಲ್ಲಿನ ತಾಳ ಮೇಳವಿಲ್ಲದ ಆಡಳಿತ ಮತ್ತೊಂದು ವಿವಾದ ಸೃಷ್ಟಿಸಿದೆ. ಆರೋಗ್ಯ ಸಚಿವರಂತೆ ವರ್ತಿಸುತ್ತಿರುವ ವೈದ್ಯ ಶಿಕ್ಷಣ ಸಚಿವ ಎಸ್‌.ಎ. ರಾಮದಾಸ್‌ ಅತ್ಯುತ್ಸಾಹದಿಂದಲೋ, ಜನಪರ ಕಾಳಜಿಯಿಂದಲೋ ಗೊತ್ತಿಲ್ಲ, ರಾಜ್ಯದಲ್ಲಿ ಹೊಸ ಔಷಧಗಳ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಪ್ರಕಟಿಸಿದ್ದಾರೆ.
`ಔಷಧ ತಯಾರಿಕಾ ಕಂಪನಿಗಳು ನೀತಿ-ನಿಯಮ ಸಮಿತಿಯ ಒಪ್ಪಿಗೆ ಪಡೆಯದೇ ವೈದ್ಯರೊಂದಿಗೆ ಡೀಲ್‌ ಮಾಡಿಕೊಂಡು ಹೊಸ ಔಷಧಗಳ ಪ್ರಯೋಗ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಅಪಾಯಕಾರಿ, ಹೀಗಾಗಿ ಈ ಬಗ್ಗೆ ಸೂಕ್ತ ಕಾನೂನು ರೂಪಿಸಲು ಇಬ್ಬರು ತಜ್ಞರ ಸಮಿತಿ ರಚಿಸಲಾಗುವುದು, ಕಾನೂನು ಜಾರಿಯಾಗುವವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ' ಎಂದು ಮಂಗಳವಾರ ಸಚಿವರು ಹೇಳಿದ್ದರು. ಈ ಹೇಳಿಕೆ ನೀಡುವ ಮುನ್ನ ನಿರ್ಬಂಧದ ಪರಿಣಾಮಗಳ ಬಗ್ಗೆ ಅವರು ಸಮಗ್ರವಾಗಿ ತಿಳಿದುಕೊಂಡಂತಿಲ್ಲ. ಸರ್ಕಾರದ ಈ ನಿರ್ಧಾರ ಔಷಧ ತಯಾರಿಕಾ ಕಂಪನಿಗಳಲ್ಲಿ, ಅವುಗಳು ನೀಡುವ ಹಣಕ್ಕಾಗಿ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಒಪ್ಪಿಕೊಳ್ಳುವ ಆಸ್ಪತ್ರೆಗಳಲ್ಲಿ ಆತಂಕ ಮೂಡಿಸಿತ್ತು.
ಈ ಹೇಳಿಕೆ ಹೊರ ಬಿದ್ದ ಮಾರನೇ ದಿನವೇ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕ್ಲಿನಿಕಲ್‌ ಟ್ರಯಲ್‌ಗಳನ್ನು ನಿರ್ಬಂಧಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಜೈವಿಕ ತಂತ್ರಜ್ಞಾನ ಮೇಳ ಉದ್ಘಾಟಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಔಷಧಗಳನ್ನು ತಯಾರಿಸುವ ಜೈವಿಕ ತಂತ್ರಜ್ಞಾನ ಕಂಪನಿಗಳ ಒತ್ತಡಕ್ಕೆ ಮಣಿದಿರುವುದು ಎದ್ದು ಕಾಣುತ್ತಿದೆ.
ಇಲ್ಲೊಂದು ಪ್ರಶ್ನೆ, ಸಚಿವರು ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಬರಲು ಸ್ಪಷ್ಟ ಕಾರಣವಿತ್ತು. ಈ ಕಾರಣವನ್ನು ಮುಖ್ಯಮಂತ್ರಿಗಳು ಒಂದೇ ದಿನದಲ್ಲಿ ಬಗೆಹರಿಸಿ, ನಿರ್ಬಂಧ ವಿಧಿಸುವ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾದರೂ ಹೇಗೆ? ರೋಗಿಗಳ ಹಿತವೇ ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಕಾರಣವೆಂದಾದರೆ, ಕ್ಲಿನಿಕಲ್‌ ಟ್ರಯಲನ್ನು ಅಪಾಯವಿಲ್ಲದಂತೆ ನಡೆಸಲು, ಕಾನೂನು ಬಾಹಿರವಾಗಿ ಪ್ರಯೋಗ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡಿದೆಯೇ?
ಇದು ಇವರಿಬ್ಬರೂ ಗ್ರಹಿಸಿರುವಂತೆ ಸರಳ ವಿಷಯವಲ್ಲ. ಕ್ಲಿನಿಕಲ್‌ ಟ್ರಯಲ್‌ನ ಬಗ್ಗೆ ಬಹುಕಾಲದಿಂದಲೂ ಗಂಭೀರ ಚರ್ಚೆ ನಡೆಯುತ್ತಲೇ ಬಂದಿದೆ. ಪ್ರಯೋಗದ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ. ನಮ್ಮ ದೇಶದಲ್ಲಿಯೇ ಕಳೆದ ವರ್ಷ ಕ್ಲಿನಿಕಲ್‌ ಟ್ರಯಲ್‌ನಿಂದಾಗಿ 671 ಮಂದಿ ಮೃತಪಟ್ಟಿದ್ದಾರೆ. ಮೂರು ಪ್ರಕರಣಗಳಲ್ಲಿ ಮಾತ್ರ ಈ ಸಾವಿಗೆ ಹೊಣೆಯಾದ ಔಷಧ ತಯಾರಿಕ ಕಂಪನಿ ಪರಿಹಾರ ನೀಡಿವೆ. ಉಳಿದವರ ಸಾವಿಗೆ ಬೆಲೆಯೇ ಇಲ್ಲ. ಇದು ಕೇಂದ್ರ ಆರೋಗ್ಯ ಸಚಿವಾಲಯವೇ ಬಹಿರಂಗ ಪಡಿಸಿರುವ ಅಧಿಕೃತ ಮಾಹಿತಿ. ಬಿಜೆಪಿ ಸಂಸದೆ ಮೇನಕಾ ಗಾಂಧಿ ನೇತೃತ್ವದ ಸಂಸದೀಯ ಸಮಿತಿ ಕೂಡ ಇದನ್ನು ಒಪ್ಪಿಕೊಂಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಔಷಧಗಳ ಪ್ರಯೋಗವನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಮಾರ್ಗರ್ಶಿ ಸೂತ್ರ ಪ್ರಕಟಿಸಿದೆ. ಆದರೆ ಬಹುತೇಕ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಈ ಸೂತ್ರ ಲೆಕ್ಕಕ್ಕೇ ಇಲ್ಲ. ನೀತಿ-ನಿಯಮಗಳ ಸಮಿತಿಯ ಒಪ್ಪಿಗೆ ಪಡೆಯದೇ ವೈದ್ಯರಿಗೆ, ಆಸ್ಪತ್ರೆಗಳ ಆಡಳಿತ ಮಂಡಿಳಿಗೆ ಹಣ ನೀಡಿ ಪ್ರಯೋಗ ನಡೆಸುತ್ತಿವೆ. ಹೀಗೆ ಅಕ್ರಮವಾಗಿ ನಡೆಯುತ್ತಿರುವ ಪ್ರಯೋಗಗಳಿಗೆ ಇನ್ನೆಷ್ಟು ಮಂದಿ ರೋಗಿಗಳು ಬಲಿಯಾಗಿದ್ದಾರೋ ಯಾರಿಗೆ ಗೊತ್ತು?
ನಮ್ಮ ದೇಶದಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸುವ ಕಂಪನಿಗಳು ಕೇವಲ ದೇಶೀಯ ಕಂಪನಿಗಳು ಮಾತ್ರವಲ್ಲ , ಇಲಿ ಲಿಲ್ಲಿ, ಜಾನ್ಸನ್‌ ಅ್ಯಂಡ್‌ ಜಾನ್ಸನ್‌ ನಂತಹ ಬೃಹತ್‌ ಅಂತಾರಾಷ್ಟ್ರೀಯ ಕಂಪನಿಗಳೂ ಸೇರಿವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ವರ್ಷವೊಂದರಲ್ಲಿಯೇ 44 ಕಂಪನಿಗಳು ಹೊಸ ಪ್ರಯೋಗ ನಡೆಸಿದ್ದು, ಪ್ರತಿವರ್ಷ ಸರಿಸುಮಾರು 1,500 ಪ್ರಯೋಗಗಳು ನಡೆಯುತ್ತವೆ. ಟೈಮ್ಸ್‌ ಆಫ್‌ ಇಂಡಿಯಾದ ವರದಿ ಮಾಡಿದಂತೆ ಸದ್ಯ ಮಣಿಪಾಲ್‌ ಆಸ್ಪತ್ರೆ 10-15, ಬೆಂಗಳೂರು ಮೆಡಿಕಲ್‌ ಕಾಲೇಜು ಆಸ್ಪತ್ರೆ 2, ಕ್ಯಾನ್ಸರ್‌ ಆಸ್ಪತ್ರೆಗಳು ಹತ್ತಾರು ಪ್ರಯೋಗ ನಡೆಸುತ್ತಿವೆ. ಇನ್ನು, ಅನಧಿಕೃತವಾಗಿ ಪ್ರಯೋಗಗಳು ನಡೆಯುತ್ತಿವೆ ಎಂಬುದನ್ನು ಸಚಿವ ರಾಮದಾಸ್‌ ಅವರೇ ಒಪ್ಪಿಕೊಂಡಿದ್ದಾರೆ.
ದೆಹಲಿಯ ಮೆಡಿಕಲ್‌ ಎಕ್ಸ್‌ಪರ್ಟ್‌ ಕಂಪನಿ ಮೆಕೆನ್ಸಿಯ ಪ್ರಕಾರ ಈ ವರ್ಷ ಕ್ಲಿನಿಕಲ್‌ ಟ್ರಯಲ್‌ 5ಸಾವಿರ ಕೋಟಿ ರೂ. ವ್ಯವಹಾರ ನಡೆಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕ್ಲಿನಿಕಲ್‌ ಟ್ರಯಲ್‌ ಮೂರು ಹಂತದಲ್ಲಿ ನಡೆಯುತ್ತದೆ. ಹೊಸದಾಗಿ ಸಂಶೋಧಿಸಿದ ಔಷಧವನ್ನು ಸಣ್ಣ ಗುಂಪಿನ (20-80 ರೋಗಿಗಳಿಗೆ) ಪ್ರಯೋಗಿಸುವುದು ಮೊದಲ ಹಂತವಾದರೆ, ಮೊದಲ ಹಂತದ ಪ್ರಯೋಗ ಪೂರೈಸಿದ ಔಷಧವನ್ನು 100ರಿಂದ 300 ರೋಗಿಗಳ ಮೇಲೆ ಪ್ರಯೋಗಿಸಿ, ಪರಿಣಾಮಗಳನ್ನು ವಿಶ್ಲೇಷಿಸುವುದು ಎರಡನೇ ಹಂತ. ಮೂರನೇ ಹಂತದಲ್ಲಿ 1000ದಿಂದ 3000 ರೋಗಿಗಳ ಮೇಲೆ ಔಷಧವನ್ನು ಪ್ರಯೋಗಿಸಿ, ಪರಿಣಾಮ, ಅಡ್ಡ ಪರಿಣಾಮ, ಈಗಾಗಲೇ ಬಳಕೆಯಲ್ಲಿರುವ ಔಷಧಕ್ಕೂ ಇದಕ್ಕೂ ಇರುವ ವ್ಯತ್ಯಾಸ ಮತ್ತಿತರ ವಿಷಯಗಳನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಓಕೆಯಾದರೆ ಔಷಧ ಬಳಕೆಗೆ ಸಿದ್ಧ.
ಈ ರೀತಿ ಪ್ರಯೋಗ ನಡೆಸುವಾಗ 2007ರಲ್ಲಿ 137 ಮಂದಿ, 2008ರಲ್ಲಿ 288 ಮತ್ತು 2009ರಲ್ಲಿ 637 ಮಂದಿ ಮೃತಪಟ್ಟಿದ್ದರು. ಯಾವ ಹಂತದ ಪ್ರಯೋಗದಲ್ಲಿ ರೋಗಿ ಸಾವಿಗೀಡಾಗಿದ್ದಾನೆ ಎಂಬುದರ ಮೇಲೆ ಪರಿಹಾರದ ಮೊತ್ತ ನಿಗದಿಯಾಗಬೇಕು. ಆದರೆ ದೊಡ್ಡ ದೊಡ್ಡ ಕಂಪನಿಗಳು ಕೂಡ ಪರಿಹಾರ ನೀಡದೇ ವೈದ್ಯರ ಕೈ ಬಿಸಿ ಮಾಡಿ, ತಾವು ತಣ್ಣಗಿವೆ.
ಪ್ರತಿ ವರ್ಷ ಪ್ರಪಂಚದಾದ್ಯಂತ ಒಂದು ಲಕ್ಷ ಕ್ಲಿನಿಕಲ್‌ ಟ್ರಯಲ್‌ ನಡೆಯುತ್ತದೆ. ಔಷಧ ಕಂಪನಿಗಳ ತವರು ಅಮೆರಿಕದಲ್ಲಿಯೇ ಸುಮಾರು ಅರ್ಧದಷ್ಟು ಪ್ರಯೋಗಗಳು ನಡೆಯುತ್ತಿವೆ. ಅಲ್ಲಿ ಅಪಾಯಕಾರಿ ಔಷಧಗಳ ಪ್ರಯೋಗಕ್ಕೆ ವಿರೋಧ ಹೆಚ್ಚುತ್ತಿದ್ದಂತೆಯೇ ಭಾರತದಂತಹ ದೇಶಗಳತ್ತ ಮುಖ ಮಾಡಲಾಗುತ್ತಿದೆ. ಏಕೆಂದರೆ ನಾವು ಎಲ್ಲವನ್ನೂ ಸ್ವಾಗತಿಸುವ ವಿಶಾಲ ಹೃದಯಿಗಳಲ್ಲವೇ?
ಮತ್ತೆ ರಾಜ್ಯದ ವಿಷಯಕ್ಕೆ ಮರಳುವುದಾರೆ, ಅತಿ ಗಂಭೀರವಾದ ಈ ವಿಷಯವನ್ನು ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜಕೀಯ ಹೇಳಿಕೆಯಂತೆ ಲಘುವಾಗಿ ಗ್ರಹಿಸಿ, ನಿರ್ದಾರ ಬದಲಾಯಿಸಿದ್ದು ಎಷ್ಟು ಸರಿ. ಇವರ ಬೇಜವಬ್ದಾರಿತನಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು?

(ವಿಕ ದಲ್ಲಿ ಪ್ರಕಟವಾದ ಲೇಖನ)

Sunday, March 20, 2011

ಇಂಡಿಯಾದ ಮಿಲಟರಿ ಸಾಧನೆ!


ನಾವ್ಯಾರೂ ಚರ್ಚೆ ಮಾಡದ ಬೆಳವಣಿಗೆಯೊಂದು ನನ್ನಲ್ಲಿ ಆತಂಕ ಸೃಷ್ಟಿಸುತ್ತಿದೆ. ಸಾರ್ವಜನಿಕವಾಗಿ ಈ ವಿಷಯವೆತ್ತಿದರೆ ದೇಶದ್ರೋಹಿಗಳಾಗಬೇಕಾಗುತ್ತದೆ ಎಂದು ಬಹುತೇಕರು ಸುಮ್ಮನಿರಬಹುದು. ವಿಷಯವೆಂದರೆ ನಮ್ಮ ದೇಶದ ಮಿಲಟರಿ ಬಜೆಟ್ ಹೆಚ್ಚಳ. ಬೇರೆ ಯಾವ ಯೋಜನೆಯ ಬಜೆಟ್ಟೂ ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಈ ವರ್ಷ ಕೂಡ ಕಳೆದ ಬಜೆಟ್ ಗಿಂತ ಶೇ.11 ರಷ್ಟು ಹೆಚ್ಚು ಮಾಡಿ, ಮಿಲಟರಿ ಬಜೆಟ್ ನ ಮೊತ್ತವನ್ನು 1,64,415 ಕೋಟಿ ರೂ.ಗೆ ತಲುಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಬಜೆಟ್ ನ್ನು ಶೇ. 40 ರಷ್ಟು ಹೆಚ್ಚಿಸಲಾಗಿದೆ. ಏಕೆ, ನಮ್ಮ ದೇಶಕ್ಕೆ ಯುದ್ಧ ಭೀತಿ ಇದೆಯೇ… ನನಗಂತೂ ಅಂತಹ ಪರಿಸ್ಥಿತಿ ಕಾಣಿಸುತ್ತಿಲ್ಲ.

ಈ ಬಜೆಟ್ ಹೆಚ್ಚಳದಿಂದಾಗಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶ ಎಂಬ ಖ್ಯಾತಿಗೆ ಇಂಡಿಯಾ ಪಾತ್ರವಾಗಿದೆ. ನೆರೆಯ ಚೀನಾವನ್ನು ಹಿಂದಿಕ್ಕಿ ಇಂಡಿಯಾ ಈ `ಸಾಧನೆ' ಮಾಡಿದೆ. 2006ರಿಂದ 2010ರ ನಡುವೆ ಯಾವ ದೇಶ ಎಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ ಎಂದು ಲೆಕ್ಕಹಾಕಿದ ಸ್ವೀಡನ್‌ನ ಚಿಂತಕರ ಚಾವಡಿ ಇಂಡಿಯಾಕ್ಕೆ ಈ ಪಟ್ಟ ನೀಡಿದ್ದು, ಈ ಅವಧಿಯಲ್ಲಿ ಒಟ್ಟಾರೆ ಜಾಗತಿಕವಾಗಿ ಆಮದಾದ ಶಸ್ತ್ರಾಸ್ತ್ರಗಳಲ್ಲಿ ಇಂಡಿಯಾ ಪಡೆದುಕೊಂಡಿದ್ದು ಶೇ.9ರಷ್ಟು ಎಂದಿದೆ. ಚೀನಾ ಶೇ.6 ಆಮದು ಮಾಡಿಕೊಂಡು ಸೆಕೆಂಡ್‌ ಪ್ಲೇಸ್‌ ಪಡೆದಿದೆ.

ಕಾರ್ಗಿಲ್‌ ಯುದ್ಧದ ನಂತರ ನಮ್ಮ ಸರ್ಕಾರ ಹಿಂದೆ-ಮುಂದೆ ನೋಡದೆ ಶಸ್ತ್ರಾಸ್ತ್ರ ಕೊಳ್ಳಲು ಹಣ ಸುರಿಯುತ್ತಿದೆ. 50 ಶತಕೋಟಿ ಡಾಲರ್‌ ಗಳ ಅಂದರೆ 2,25000 ಕೋಟಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಮಾಡಿಕೊಂಡಿದೆ. ಅಲ್ಲದೆ, 10.4 ಶತಕೋಟಿ ಡಾಲರ್‌ ನೀಡಿ 126 ಬಹು ಉಪಯೋಗಿ ಯುದ್ಧ ವಿಮಾನ ಖರೀದಿಸಲು ಮತ್ತು 35 ಶತಕೋಟಿ ವಿನಿಯೋಗಿಸಿ, ರಷ್ಯಾ ಜೊತೆ ಸೇರಿಕೊಂಡು ಸುಖೋಯಿ ಟಿ-50 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮುಖ್ಯವಾಗಿ ರಷ್ಯಾ, ಇಸ್ರೇಲ್‌, ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಸಲಾಗತ್ತಿದೆ. ಇತ್ತೀಚೆಗಂತೂ ಅಮೆರಿಕದೊಂದಿಗಿನ ವ್ಯವಹಾರ ಹೆಚ್ಚುತ್ತಲೇ ಇದೆ.

ಇದೆಲ್ಲಾ ಹೋಗಲಿ, ಮಿಲಟರಿಗೆ ಇಷ್ಟೊಂದು ದುಡ್ಡು ಎತ್ತಿಡುತ್ತಿರುವ ಸರ್ಕಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣ ಸುರಿಯುವುದಕ್ಕೆ ಬದಲಾಗಿ ನಮ್ಮ ದೇಶದಲ್ಲಿಯೇ ಇವುಗಳನ್ನು ತಯಾರಿಸಬಾರದೇ ಎಂದು ನೀವು ಯೋಚಿಸುತ್ತಿರಬಹುದು. ಹೌದು, ಈ ಕೆಲಸ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದೆ. ಇದಕ್ಕೆ ಸಹಕಾರ ನೀಡಲು ಎಂಟು ಸಾರ್ವಜನಿಕ ಉದ್ದಿಮೆಗಳಿವೆ. 39 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳಿವೆ. ಆದರೆ ಇವೆಲ್ಲಾ ಇದ್ದೂ ಇಲ್ಲದಂತಾಗಿದೆ. ನಿಮಗೆ ಗೊತ್ತೇ, ನಮ್ಮ ಸೇನೆ ಬಳಸುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಶೇ. 70 ರಷ್ಟು ವಿದೇಶದಿಂದ ಆಮದು ಮಾಡಿಕೊಂಡವು.

ಈ ವಿಷಯದಲ್ಲಿ ಚೀನಾ ಎಚ್ಚೆತ್ತಿದ್ದು, ಕಳೆದ ಎರಡು ದಶಕಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇಟ್ಟಿದೆ. ಹೀಗಾಗಿ ಆ ದೇಶದ ಆಮದು ಪ್ರಮಾಣ ಕಡಿಮೆಯಾಗಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ನಡೆಸಿಲ್ಲ, ನಡೆಸಲು ಮುಂದಾದರೂ ಮುಂದುವರೆದ ದೇಶಗಳು ಬಿಡುತ್ತಿಲ್ಲ!

ಹಿಂದೆ ಇಂಡಿಯಾ ಹೆಚ್ಚಾಗಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿತ್ತು. ಈಗ ಅಮೆರಿಕಕ್ಕೆ ಹೆದರಿ ಅದು, ಹೇಳಿದಂತೆ ಕೇಳುತ್ತಿದೆ. ಹೀಗಾಗಿಯೇ ಶಸ್ತ್ರಾಸ್ತ್ರ ರಫ್ತಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ನಿಂತಿದೆ. ಮೊತ್ತೊಂದು ವಿಷಯವೆಂದರೆ ಅಮೆರಿಕದಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವಲ್ಲಿ ಏಷ್ಯಾ ರಾಷ್ಟ್ರಗಳದ್ದೇ ಮೇಲುಗೈ!

ನೆರೆಯ ಚೀನಾ ಕೂಡ ಇಂಡಿಯಾದಂತೆ ಮಿಲಟರಿ ಬಜೆಟ್ ಹೆಚ್ಚಿಸುತ್ತಲೇ ಇದೆ. ಈ ವರ್ಷ ಅದು ಶೇ.12.7 ಹೆಚ್ಚು ಹಣ ತೆಗೆದಿರಿಸಿದೆ. ಚೀನಾದ ಮಿಲಟರಿ ಬಜೆಟ್ ಮೊತ್ತ ಅಧಿಕೃತವಾಗಿ ಅದು ಪ್ರಕಟಿಸಿದಂತೆ 91.5 ಶತಕೋಟಿ ಡಾಲರ್. ಇಂಡಿಯಾಕ್ಕಿಂತ ಮೂರು ಪಟ್ಟು ಹೆಚ್ಚು! ಹೀಗಾಗಿ ಇಂಡಿಯಾ ಮಾಡುತ್ತಿರುವುದೇ ಸರಿ ಎಂದು ವಾದ ಮಂಡಿಸುವವರೂ ಇದ್ದಾರೆ. ಇಂಡಿಯಾದ ರಕ್ಷಣಾ ವೆಚ್ಚ ಜಿಡಿಪಿಯ ಶೇ. 1.83 ರಷ್ಟು. ಚೀನಾ ಮಾಡುತ್ತಿರುವ ರಕ್ಷಣಾ ವೆಚ್ಚ ಅಲ್ಲಿಯ ಜಿಡಿಪಿಯ ಶೇ. 1.4 ರಷ್ಟು. ಜಿಡಿಪಿಯ ಆಧಾರದ ಮೇಲೆ ಹೇಳುವುದಾದರೆ ಇಂಡಿಯಾ ಚೀನಾಕ್ಕಿಂತ ಹೆಚ್ಚೇ ಹಣವನ್ನು ಮಿಲಟರಿಗೆ ಸುರಿಯುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಸುವ ಕೆಲಸ ಹೀಗೇ ಸಾಗುತ್ತಲೇ ಇದೆ, ನಾವೆಲ್ಲರೂ ಸುಮ್ಮನಿರಲೇ ಬೇಕಿದೆ. ಏಕೆಂದರೆ ದೇಶಪ್ರೇಮಿಗಳಲ್ಲವೇ…?

Friday, March 18, 2011

ನಿತೀಶ್ ರಾಜ್

ಪಾಸ್‌ಪೋರ್ಟ್‌ ನೀಡುವಾಗ ನಡೆಸುವ ಪೊಲೀಸ್‌ ವೆರಿಫಿಕೇಷನ್‌ಗೆ ಏಳು ದಿನ, ಪೋಸ್ಟ್‌ಮಾರ್ಟಂ ರಿಪೋರ್ಟ್‌ಗೆ ಮೂರು ದಿನ, ಜಾತಿ ಪ್ರಮಾಣ ಪತ್ರ ನೀಡಲು ಹದಿನೈದು ದಿನ, ಮನೆಯ ವಿದ್ಯುತ್‌ ಸಂಪರ್ಕದಲ್ಲಿ ತೊಂದರೆ ಕಾಣಿಸಿಕೊಂಡರೆ ಕೇವಲ ನಾಲ್ಕು ಗಂಟೆಯೊಳಗೆ ರಿಪೇರಿ... ಅರರೆ, ಇದೆಲ್ಲಾ ಯಾವ ದೇಶದಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಎಂದು ಯೋಚಿಸುತ್ತಿದ್ದೀರಾ, ಇದು ನಮ್ಮ ದೇಶದಲ್ಲಿಯೇ, ಹಿಂದೆ `ಜಂಗಲ್‌ ರಾಜ್‌' ಎಂದು ಕರೆಸಿಕೊಳ್ಳುತ್ತಿದ್ದ ಬಿಹಾರದಲ್ಲಿ ಜಾರಿಯಾಗುತ್ತಿರುವ ಕ್ರಮ. ಆಶ್ಚರ್ಯ ಪಡಬೇಡಿ, ಬಿಹಾರದಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗೂ ಸಮಯದ ಮಿತಿ ನಿಗದಿಪಡಿಸುವ `ಸರ್ಕಾರಿ ಸೇವಾ ಕಾಯ್ದೆ' ಈಗ ಅನುಮೋದನೆಗೊಂಡಿದ್ದು, ಇದೇ ಏಪ್ರಿಲ್‌ ಒಂದರಿಂದ ಜಾರಿಗೆ ಬರುತ್ತಿದೆ.

ಇನ್ನು ಮುಂದೆ ಅಲ್ಲಿಯ ಸರ್ಕಾರಿ ನೌಕರರು ನಿಗದಿತ ಸಮಯದಲ್ಲಿಯೇ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಿದಲ್ಲಿ ದಿನಕ್ಕೆ ಇಂತಿಷ್ಟು ಎಂದು ಫೈನ್‌ ಕಟ್ಟಬೇಕಾಗುತ್ತದೆ. ಈಗಾಗಲೇ ಕೆಲಸ ಮಾಡಿಕೊಡದ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಲು `ಕಿಯೋಸ್ಕ್‌' ವ್ಯವಸ್ಥೆ ಜಾರಿಗೆ ತಂದು ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತೊಂದು ಹೆಜ್ಜೆ ಮುಂದಿಟ್ಟು ಈ ಕ್ರಮ ತೆಗೆದುಕೊಂಡಿದ್ದಾರೆ. ಇದರಿಂದ ಭ್ರಷ್ಟಾಚಾರವನ್ನು ಬೇರು

ಮಟ್ಟದಿಂದ ದೂರ ಮಾಡಿ, ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಸಾಧ್ಯ ಎಂಬುದು ಅವರ ಚಿಂತನೆ.

ಒಟ್ಟು 30 ಸರ್ಕಾರಿ ಸೇವೆಗಳು ಈ ಕಾಯ್ದೆಯಡಿ ಬರಲಿವೆ. ಟೈಮಿಗೆ ಕೆಲಸ ಮಾಡಿಕೊಡದ ಅಧಿಕಾರಿಗಳು 250ರಿಂದ 5 ಸಾವಿರದವರೆಗೆ ಫೈನ್‌ ಕಟ್ಟಬೇಕಾಗುತ್ತದೆ.

ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕ ಸೇವಾ ಜಾರಿ ಆಯೋಗ ರಚಿಸುವುದಾಗಿಯೂ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಒಂದಲ್ಲಾ ಒಂದು ಕ್ರಮ ತೆಗೆದುಕೊಳ್ಳುತ್ತಲೇ ಬಂದಿರುವ ಅವರು, ಸರ್ಕಾರಿ ಅಧಿಕಾರಿಗಳೆಲ್ಲರೂ ತಾವೇ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳುವಂತೆ ಮಾಡಿದ್ದರು. ಬಾಲಕಿಯರಿಗೆ ಸೈಕಲ್‌ ನೀಡುವಾಗ,

ಸೀಮೇ ಎಣ್ಣೆ ಕೂಪನ್‌ ವಿತರಿಸುವಾಗ ನೇರವಾಗಿ ಫಲಾನುಭವಿಗಳಿಗೇ ಹಣ ದೊರಕುವಂತೆ ಮಾಡಿ, ದುರುಪಯೋಗಕ್ಕೆ ಬ್ರೇಕ್‌ ಹಾಕಿದ್ದಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಒಮ್ಮೆ ಹೀಗೆ ಸೈಕಲ್‌ ಹಣವನ್ನು ನೇರವಾಗಿ ವಿದ್ಯಾರ್ಥಿಗಳಿಗೇ ನೀಡುವ

ಮಾತನಾಡಿದ್ದರು. ಆಮೇಲೆ ಏನಾಯಿತೋ ಏನೋ, ಪ್ಲೇಟ್‌ ಚೇಂಜ್‌ ಮಾಡಿ,

ಹಳೇ ಕ್ರಮಕ್ಕೆ ಓಕೆ ಎಂದರು. ಮುಖ್ಯಮಂತ್ರಿಗಳು ಆಗಾಗ ನಮ್ಮದು ಗುಜರಾತ್‌ ಮಾದರಿ ಆಡಳಿತ ಎನ್ನುತ್ತಿರುತ್ತಾರೆ, ಒಂದಿಷ್ಟು ಬಿಹಾರದ ಕಡೆಯು ನೋಡಿ ಎನ್ನೋಣವೆಂದರೆ ಮಕ್ಕಳ ಕಡೆ ನೋಡುತ್ತಿರುವ ಅವರಿಗೆ ಪುರಸೊತ್ತೇ ಇಲ್ಲ!

ಕೋಡ್ ವರ್ಡ್ ಸಮಾಚಾರ


ಕರ್ನಾಟಕ ಬಿಜೆಪಿಯ ನಾಯಕರ್ಯಾರಾದರೂ `ಯೂನಿಯನ್‌ ಟೆರಿಟರಿ ಭೇಟಿ ಮಾಡಿ ನಂತರ ಸೌತ್‌ ಎಂಡ್‌ಗೆ ಹೋಗುತ್ತೇನೆ, ನೀವು ಅಲ್ಲಿಗೇ ಬನ್ನಿ' ಎಂದು ಫೋನ್‌ನಲ್ಲಿ ಮಾತನಾಡುತ್ತಿದ್ದರೆ ನೀವು ಬಾಯಿ ಬಿಟ್ಟುಕೊಂಡು ಕೇಳುತ್ತಾ, ಇದೇನಿದು ಅರ್ಥವೇ ಆಗುತ್ತಿಲ್ಲವಲ್ಲ ಎಂದು ತಲೆಕೆರೆದುಕೊಳ್ಳಬೇಡಿ. ಇದು ನಿಮಗೆ ಅರ್ಥವಾಗದೇ ಇರುವ ಭಾಷೆ ! ಇಲ್ಲಿ `ಯೂನಿಯನ್‌ ಟೆರಟರಿ', `ಸೌತ್‌ ಎಂಡ್‌' ಎನ್ನುವುದು ಕೋಡ್‌ ವರ್ಡ್‌ (ಸಂಕೇತ ಭಾಷೆ). ಹೌದು, ರಾಜ್ಯ ಬಿಜೆಪಿ ನಾಯಕರು ಈಗ ಈ ರೀತಿ ಕೋಡ್‌ ವರ್ಡ್‌ ಬಳಸಿ ಮಾತನಾಡಲು ಆರಂಭಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಬಿಜೆಪಿಯಲ್ಲಿ ಒಂದು ರೀತಿಯಲ್ಲಿ ಪ್ರಭಾವಶಾಲಿಗಳಾದ ರೆಡ್ಡಿ ಬ್ರದರ್ಸ್‌ಗೆ `ಯೂನಿಯನ್‌ ಟೆರಿಟರಿ' ಎಂದು, ಸಾರಿಗೆ ಸಚಿವ ಅಶೋಕ್‌ಗೆ `ಬಸ್‌ ಸ್ಟ್ಯಾಂಡ್‌' ಎಂದು, ಸಂಸದ ಅನಂತ್‌ ಕುಮಾ ಬೆಂಗಳೂರಿನ ಸೌತ್‌ನಲ್ಲಿರುವ ಬಸವನಗುಡಿಯ ನಿವಾಸಿಯಾಗಿರುವುದರಿಂದ `ಸೌತ್‌ ಎಂಡ್‌' ಎಂದು, ಮುಖ್ಯಮಂತ್ರಿ ಯಡಿಯೂರಪ್ಪರ ಮನೆ ತಾಜ್‌ ವೆಸ್ಟ್‌ ಎಂಡ್‌ ಸಮೀಪ ಇರುವುದರಿಂದ ಅವರನ್ನು `ವೆಸ್ಟ್‌ ಎಂಡ್‌' ಎಂದು ಕರೆಯಲಾಗುತ್ತಿದೆಯಂತೆ. ಇನ್ನು `ಆಪರೇಷನ್‌ ಕಮಲ'ಕ್ಕೆ ಬಲಿಯಾಗಿ ಪಕ್ಷ ಸೇರಿದವರನ್ನು `ಕಾಮೆಡ್‌-ಕೆ' ಎಂದು ಗುರುತಿಸಲಾಗುತ್ತಿದೆ. ಬಿಜೆಪಿ ವರಿಷ್ಠರು ಏನೇ ಹೇಳಿಕೊಂಡರೂ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಎರಡು-ಮೂರು ಬಣಗಳಿವೆ. ಯಾರು ಯಾರನ್ನು ಭೇಟಿಯಾಗುತ್ತಿದ್ದಾರೆ, ಎಲ್ಲಿ ಸಭೆ ಸೇರುತ್ತಿದ್ದಾರೆ ಎಂದು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಲೇ ಇದ್ದಾರೆ. ಹೀಗಾಗಿ ಈ ಕೋಡ್‌ ವರ್ಡ್‌ ಬಳಕೆ ಅನಿವಾರ್ಯವಾಗಿದೆ ಎಂದು ಶಾಸಕರೇ ಹೇಳಿಕೊಂಡಿದ್ದಾರೆ. ನ ವಿರೋಧಿ ಪ್ರಭುತ್ವ, ಸರ್ವಾಧಿಕಾರಿಗಳ ವಿರುದ್ಧ ಹೋರಾಟ ನಡೆಸುವವರು ಹೀಗೆ ಕೋಡ್‌ ವರ್ಡ್‌ಗಳನ್ನು ಬಳಸುವುದು ಸಾಮಾನ್ಯ. ಬಿಜೆಪಿಯಲ್ಲಿನ ಈ ಬೆಳವಣಿಗೆ ನೋಡಿದರೆ ಪಕ್ಷದಲ್ಲಿಯೂ ಸರ್ವಾಧಿಕಾರಿ ಹಿಡಿತವಿದ್ದಂತೆ ಕಾಣುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹಿಂದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ರಚಿಸಿದ ಸರ್ಕಾರವಿತ್ತು. ನಂತರ ನಮಗಾಗಿ ನಾವೇ ರಚಿಸಿಕೊಂಡ ಸರ್ಕಾರವಾಯಿತು. ಈಗ ನನ್ನಿಂದ ನನಗಾಗಿ

ನನ್ನ ಸರ್ಕಾರ ರಚನೆಗೊಳ್ಳಬೇಕು ಎಂದು ಹಠ ಹಿಡಿಯುವವರ ಕಾಲ ಬಂದಿದೆ ಎಂದಿದ್ದರು. ಅವರ ಮಾತಿಗೂ, ಬಿಜೆಪಿಯಲ್ಲಿನ ಬೆಳವಣಿಗೆಗೋ ಏನೋ ಸಂಬಂಧವಿದೆ ಅಲ್ಲವೇ?